ಗೀತಾಂಬುಧಿ ಪುಸ್ತಕ ಪರಿಚಯ

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳವರ ದಿವ್ಯ ಹಸ್ತದಿಂದ ಕೃಷ್ಣಾರ್ಪಣೆಗೊಂಡಿರುವ ಡಾ. ಎ. ಕೇಶವರಾಜ್ ಅವರ ಕವಿತೆಗಳ ಭಂಡಾರವೇ ‘ಗೀತಾಂಬುಧಿ’. ಈ ಕವನ ಸಂಕಲನದ ಕುರಿತು ಶಿಕ್ಷಕರಾದ ವಸುಧಾ ಸತೀಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಒಂದು ಅನರ್ಘ್ಯ ಛಂದೋಬದ್ಧ ಕಾವ್ಯ ಪುಸ್ತಕ.

ಭಾಷೆ ಉಳಿದರೆ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಸಂಸ್ಕಾರ, ಧರ್ಮ, ದೇಶ ಎಲ್ಲವೂ ಉಳಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ದೊರೆತದ್ದು ಇತ್ತೀಚೆಗೆ ನನ್ನ ಕೈಯಲ್ಲಿ ಗೀತಾಂಬುಧಿ ಎಂಬ ಒಂದು ಅಪ್ರತಿಮವಾದ ಛಂದೋಬದ್ಧ ಕಾವ್ಯ ಪುಸ್ತಕ ದೊರೆತಾಗ. ವೃತ್ತಿಯಲ್ಲಿ ವಿಜ್ಞಾನಿಯಾಗಿರುವ ಪ್ರವೃತ್ತಿಯಲ್ಲಿ ಕವಿಯಾಗಿರುವ ಡಾ. ಎ. ಕೇಶವರಾಜ್ ಅವರು ಹೊರತಂದಿರುವ ಈ ಅತ್ಯದ್ಭುತ ಪುಸ್ತಕ, ಭಗವದ್ಗೀತಾ ಪ್ರೇರಿತವಾಗಿದೆ.

ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಡಾ. ಕೇಶವರಾಜ್ ಅವರು, ಗೀತೆಯನ್ನು ಬರೆಯುತ್ತಿದ್ದಂತೆ, ಗೀತಾರ್ಥ ಚಿಂತನೆ ನಡೆಸಿ, ಅವರ ಚಿಂತನೆಯ ಹೊರಹನ್ನು ಸುಂದರವಾಗಿ ಕಾವ್ಯರೂಪವಾಗಿ ಹರಿಸಿದ್ದಾರೆ.

ಇತ್ತೀಚೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳವರ ದಿವ್ಯ ಹಸ್ತದಿಂದ ಕೃಷ್ಣಾರ್ಪಣೆಗೊಂಡಿರುವ ಇದು ಕವಿತೆಗಳ ಭಂಡಾರ. ವರ್ತಮಾನದಲ್ಲಿ ನವ್ಯ, ನೀರಸ ಕವನಗಳೇ ಬಹುತೇಕವಾಗಿ ಪ್ರಚಲಿತವಿರುವಾಗ, ಷಟ್ಪದಿ, ಚೌಪದಿ ಹಾಗೂ ರಗಳೆ ಶೈಲಿಯ ಕಾವ್ಯಗಳ ಮುಖಾಂತರ ಭಗವದ್ಗೀತಾ ಪ್ರೇರಿತ ಚಿಂತನೆಯನ್ನು ಈ ಪುಸ್ತಕದಲ್ಲಿ ಅಳವಡಿಸಿರುವ ಕಾರಣ, ಇದೊಂದು ಸಂಗ್ರಹ ಯೋಗ್ಯ ಅನರ್ಘ್ಯ ರತ್ನವೆನಿಸಿದೆ. ಆ ಮೂಲಕ ಛಂದೋಬದ್ಧ ಕಾವ್ಯಶೈಲಿಯ ರುಚಿ ಓದುಗರ ಪಾಲಿಗೆ ದೊರೆತು ಅಭಿರುಚಿ ಹೆಚ್ಚುವಂತೆ ಮಾಡಿದೆ.

ಗೀತಾಂಬುಧಿಯ ಎಲ್ಲಾ ರಚನೆಗಳಲ್ಲಿ ಹೆಚ್ಚು ಆಕರ್ಷಿಸುವುದು ಆದಿಪ್ರಾಸ. ಕನಕದಾಸರ ಕೃತಿಗಳಲ್ಲಿ ವಿಶಿಷ್ಟವಾಗಿ ಕಂಡಂತೆಯೇ ಇವರ ಕವಿತೆಗಳಲ್ಲೂ ಅಂತ್ಯಪ್ರಾಸಕ್ಕಿಂತ ಹೆಚ್ಚಾಗಿ ಆದಿಪ್ರಾಸವೇ ಮನಸೂರೆಗೊಳಿಸುತ್ತದೆ ಹಾಗೂ ಮುದ ಕೊಡುತ್ತದೆ. ಕಾವ್ಯಗಳಲ್ಲಿ ಅಳವಡಿಸಿರುವ ಪದಲಾಲಿತ್ಯ ಹಾಗೂ ಶಬ್ದ ಭಂಡಾರ ನಮ್ಮ ಭಾಷೆಯ ಹಿರಿಮೆಯನ್ನೂ ಶ್ರೀಮಂತಿಕೆಯನ್ನೂ ಸಾಕಾರಗೊಳಿಸುತ್ತದೆ.

ಗೀತಾಂಬುಧಿಯ ನಾಲ್ಕನೇ ಕಾವ್ಯ, ಶರ ಗೀತೆ ಎಂಬ ಶೀರ್ಷಿಕೆಯಲ್ಲಿ ಶರ ಷಟ್ಪದಿಯ ರೂಪದಲ್ಲಿ ಹರಿದು ಬಂದಿದೆ. ಇದರ ವೈಶಿಷ್ಟ್ಯತೆ ಏನೆಂದರೆ, ಭಗವದ್ಗೀತೆಯ 18 ಅಧ್ಯಾಯಗಳ ಸಂದೇಶದ ಸಾರವನ್ನು 54 ಚರಣಗಳಲ್ಲಿ ಜನಸಾಮಾನ್ಯರಿಗೆ ಮನದಟ್ಟಾಗುವ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಕೆಲವು ಕಾವ್ಯಗಳ ಸಂದೇಶದ ಪ್ರಸ್ತುತಿ ಮಂಕುತಿಮ್ಮನ ಕಗ್ಗಗಳನ್ನು ನೆನೆಪಿಸುತ್ತದೆ. ನಾವು ಬಾಳಬೇಕಾದ ರೀತಿ ನೀತಿಗಳನ್ನು ತಿಳಿಸುತ್ತಾ ನಮ್ಮ ಮನಸ್ಸನ್ನು ಆಧ್ಯಾತ್ಮದೆಡೆಗೆ ಸೆಳೆಯುವಂಥ ಕವಿತೆಗಳು ಈ ಪುಸ್ತಕದಲ್ಲಿದೆ. ಸೆಳೆತ ತುಡಿತ ಎಂಬುವ ಲಲಿತ ರಗಳೆಯಲ್ಲಿ ಆದಿಪ್ರಾಸ ಮತ್ತು ಅಂತ್ಯಪ್ರಾಸ ಎರಡನ್ನು ಕಾಣಬಹುದು. ‘ಹುಟ್ಟಿನ ಗುಟ್ಟು’ ಎಂಬ 21ನೇ ಕವಿತೆಯಲ್ಲಿ, ಟ್ಟ ಕಾರದ ಆದಿ ಪ್ರಾಸವು ಮೆರೆದಿದ್ದು ಎಟ್ಟದಿಹ, ಕಟ್ಟ, ನಿಟ್ಟೆ…. ಎಂಬಿತ್ಯಾದಿ ಅಪರೂಪದ ಪದಗಳನ್ನು ಬಳಸಿದ್ದಾರೆ. ‘ಉಚ್ಚ ಗುರಿ’ ಎಂಬ ೨೯ನೇ ಕಾವ್ಯದಲ್ಲಿ ಚ್ಚ ಅಕ್ಷರದ ಆದಿಪ್ರಾಸದ ಪದಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ.

ಭಾಮಿನಿ ಷಟ್ಪದಿಯಲ್ಲಿ ಹರಿದು ಬಂದಿರುವ 101ನೇ ಕವಿತೆ, ‘ಬುದ್ಧಿ ಮನಸ್ಸು’ , ಬುದ್ದಿಯೋ? ಮನಸ್ಸೋ ? ಎಂಬ ಜಿಜ್ಞಾಸೆಗೆ ಉತ್ತರವೀಯುತ್ತದೆ. ‘ಜೀವನದ ಹೋರಾಟ’ ಎಂಬ 81ನೇ ಕವಿತೆಯ ಸಾಲುಗಳನ್ನು ನೋಡಿ

ಸಿಹಿಯಾಗಿರುವುದೆ ಬೆಲ್ಲದ ಧರ್ಮವೀ ಜಗದಿ
ಕಹಿಯಾಗಿರುವುದೆ ಬೇವಿನ ಧರ್ಮವು

ಲಲಿತಲಯದ ಚೌಪದಿಯಲ್ಲಿ ರಚಿತವಾಗಿರುವ ಈ ಕವಿತೆಯಲ್ಲಿ ಜೀವನದ ಕಷ್ಟ ಸುಖಗಳ ಸಹಜತೆಯನ್ನು ಹಾಗೂ ಜೀವನದ ಹಾದಿಯಲ್ಲಿ ಬರುವ ವ್ಯಕ್ತಿಗಳನ್ನು ಅವರಿದ್ದ ಹಾಗೆ ಒಪ್ಪಿಕೊಳ್ಳುವಂತೆ ಅಪ್ಪಿಕೊಳ್ಳುವಂತೆ ಪ್ರೇರೇಪಿಸುತ್ತದೆ. 82ನೇ ಕಾವ್ಯ, ಮಹಾ (ಭಾರತದ) ಪಾಠದಲ್ಲಿ , ಮಹಾಭಾರತದಿಂದ ನಾವು ಏನು ಕಲಿಯಬೇಕು ಎಂಬುದನ್ನು ತಿಳಿಸುತ್ತದೆ. ಅದರ ಕೊನೆಯ ಚರಣವಂತೂ ಮನಮುಟ್ಟುವಂತಿದೆ.

ಗೀತೆಯಾ ಸಂದೇಶ ಜಗಕೆ ಸಾರಿದ ಗೊಲ್ಲ
ಚಾತುರ್ಯವನ್ನರುಹಿದನು ಬದುಕಲು|
ಸೋತು ಗೆಲ್ಲುವ ಕಲೆಯ ಕಲಿಸಿದನು ನಮಗೆಲ್ಲ
ಜೇತರಾಗುವ ಪರಿಯ ಗುಟ್ಟು ಬಯಲು ||

ಕೊನೆಯಲ್ಲಿ ಹರಿನಾಮ ಚಿಂತನೆ ಎಂಬ ಭಕ್ತಿರಸದೊಂದಿಗೆ ಗೀತಾಂಬುಧಿಯ ಯಾನ ಅಂತ್ಯವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ಅಧ್ಯಾತ್ಮ ಸಿಂಚನ, ನಾಯಕತ್ವ ಗುಣ, ಪ್ರಕೃತಿ ಪ್ರೇಮ, ಜೀವನದ ಮೌಲ್ಯ, ದೇಶಪ್ರೇಮ, ಇತ್ಯಾದಿಗಳನ್ನು ಛಂದೋಬದ್ಧ ಶೈಲಿಯಲ್ಲಿ, ವ್ಯಾಕರಣಬದ್ಧವಾಗಿ, ಸರಳವಾಗಿ ರಚಿತವಾಗಿರುವ ಕಾವ್ಯಗಳು ಅತ್ಯದ್ಭುತವಾಗಿವೆ ಮತ್ತು ಮನೋಜ್ಞವಾಗಿವೆ. ಇಂತಹ ಪುಸ್ತಕಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಗೀತಾಂಬುಧಿಯ ಪ್ರತಿಯನ್ನು ಕೊಳ್ಳಲಿಚ್ಛಿಸುವವರು ಡಾ ಎ ಕೇಶವರಾಜ್ ಅವರನ್ನು ನೇರವಾಗಿ ಸಂಪರ್ಕಿಸಬಹುದು (9008242487).


  • ವಸುಧಾ ಸತೀಶ್ – ಆಂಗ್ಲ ಭಾಷಾ ಶಿಕ್ಷಕಿ, ಸರ್ಕಾರಿ ಪಿ. ಯು ಕಾಲೇಜು, ಗುಬ್ಬಿ.
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW