ದೊಗಲೆ ಶರ್ಟ್, ಬ್ಯಾಗೀ ಜೀನ್ಸ್, ಓವರ್ ಸೈಜ್ ಕೋಟ್ ಈಗಿನ ಟ್ರೆಂಡ್ ಆಗಿದ್ದು ಆ ಬಟ್ಟೆಯಲ್ಲಿ ಜೆನ್- ಝೀಗಳು ಅತ್ಯಂತ ಮುದ್ದಾಗಿ ಕಾಣುವುದಷ್ಟೇ ಅಲ್ಲ, ಇದೊಂದು ಫ್ಯಾಶನ್ ಅಷ್ಟೇ ಅಲ್ಲ, ಕಂಫರ್ಟೆಬಲ್ ಕೂಡ ಅಶ್ವಿನಿ ಸುನಿಲ್ ಅವರು ಇಂದಿನ ಮಕ್ಕಳು ಧರಿಸುವ ಓವರ್ ಸೈಜ್ ಡ್ರೆಸ್ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಅದೊಂದು ಕಾಲವಿತ್ತು. ಯಾವುದಾದರೂ ವಿಶೇಷ ಸಂದರ್ಭವಿದ್ದಾಗಲೋ, ದೀಪಾವಳಿ-ದಸರಾಗಳಂತಹ ಹಬ್ಬಗಳಿದ್ದಾಗಲೋ ಅಷ್ಟೇ ಹೊಸ ಬಟ್ಟೆ ಖರೀದಿಸುತ್ತಿದ್ದದ್ದು. ಬಟ್ಟೆ ಖರೀದಿಸಲು ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗುವುದು ಅಪರೂಪವೇ ಆಗಿತ್ತು. ಬಟ್ಟೆ ಅಂಗಡಿಗೆ ಬಂದಿರುವ ಮಕ್ಕಳನ್ನು ತೋರಿಸಿ ಇವಳಿಗಿಂತ ಒಂದು ಸೈಜ್ ಚಿಕ್ಕದು ಕೊಡಿ ಎಂದೋ, ಅವನಿಗಿಂತ ಒಂದು ಸೈಜ್ ದೊಡ್ಡದು ಕೊಡಿ ಎಂದೋ ಹೇಳಿ, ಆ ಮಕ್ಕಳಿಗೆ ಬಟ್ಟೆಯನ್ನು ಹಿಡಿದು ನೋಡಿ ಮನೆಯಲ್ಲಿರುವ ಮಕ್ಕಳಿಗೆ ಬಟ್ಟೆ ತರುತ್ತಿದ್ದರು.
ಇನ್ನು ಬಟ್ಟೆ ಕೊಳ್ಳಲು ಮಕ್ಕಳು ಹೋದರೂ ಅವರದೇ ಅಳತೆಯ ಬಟ್ಟೆ ತೆಗೆದುಕೊಳ್ಳುತ್ತಿದ್ದದ್ದು ಕಡಿಮೆಯೇ. ಒಂದು ಸೈಜ್ ದೊಡ್ಡದೇ ಕೊಡಿ ಮುಂದಿನ ವರ್ಷಕ್ಕೂ ಆಗುತ್ತದೆ ಎನ್ನುವುದು ಎಲ್ಲಾ ಅಮ್ಮಂದಿರ ಮಂತ್ರವಾಗಿತ್ತು. ಅಣ್ಣ ಅಕ್ಕಂದಿರು ಇದ್ದರೆ ಅವರ ಬಟ್ಟೆ ಚಿಕ್ಕವರಿಗೆ ವರ್ಗಾವಣೆಯಾಗುತ್ತಿತ್ತು. ಫಿಟ್ಟಿಂಗ್ ಸರಿರಬೇಕು ಎನ್ನುವುದು ತಲೆಕೆಡಿಸಿಕೊಳ್ಳುವ ವಿಷಯವೇ ಆಗಿರಲಿಲ್ಲ. ದೊಡ್ಡದಾದರೆ ಒಂದು ಹೊಲಿಗೆ ಹಾಕಿದರೆ ಮುಗಿಯಿತು.

ಫೋಟೋ ಕೃಪೆ : ಅಂತರ್ಜಾಲ
ಕಾಲ ಬದಲಾದಂತೆ ಅಮ್ಮಂದಿರು ಬದಲಾದರು. ಅವರು ಬದಲಾಗದಿದ್ದರೂ ಮಕ್ಕಳು ಬಿಡಬೇಕೆಲ್ಲ. ತಮ್ಮ ಅಳತೆಗೆ ಸರಿಯಾದ ಬಟ್ಟೆಯನ್ನು ಆಯ್ಕೆ ಮಾಡುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ತಮ್ಮ ಸ್ನೇಹಿತರನ್ನು ನೋಡಿ, ಇಂಟರ್ನೆಟ್ ಗಳಲ್ಲಿ ನೋಡಿ ಫ್ಯಾಷನ್ ಏನೆನ್ನುವುದು ತಿಳಿದುಕೊಂಡಿದ್ದ ಮಕ್ಕಳು ಅಮ್ಮಒಂದು ಸೈಜ್ ದೊಡ್ಡದು ತೆಗೆದುಕೊಳ್ಳೋಣ ಎಂದರೆ ಕೇಳಬೇಕಲ್ಲ. ಮಕ್ಕಳು ಸ್ಕಿನ್ ಫಿಟ್ ಬಟ್ಟೆಯನ್ನು ಕೊಳ್ಳುವುದು, ಅಮ್ಮಂದಿರು, ಅಜ್ಜಿಯಂದಿರು ಗೊಣಗುವುದು ನಡೆದೇ ಇತ್ತು.
ಕಾಲದ ಜೊತೆಗೆ ಫ್ಯಾಶನ್ ಗಳು ಕೂಡ ಬದಲಾಗುತ್ತಲೇ ಹೋಗುತ್ತದೆ. ಕೆಲವೊಮ್ಮೆ ಹಳೆಯ ಫ್ಯಾಷನ್ ಮತ್ತೆ ಬರುವುದುಂಟು. ಈಗಿನ ಹದಿಹರೆಯದ ಮಕ್ಕಳ, ಓವರ್ ಸೈಜ್ ಬಟ್ಟೆ ನೋಡಿದಾಗ ನಾವು ನಮ್ಮ ಅಕ್ಕಂದಿರ ಅಣ್ಣಂದಿರ ದೊಗಲೆ ಬಟ್ಟೆ, ಧರಿಸುತ್ತಿದ್ದ ನೆನಪು ಆಗುವುದಿಲ್ಲವೇ ? ಮನೆಯಲ್ಲೇ ಆಗಲಿ, ಶಾಪಿಂಗ್ ಮಾಲ್ ನಲ್ಲೇ ಆಗಲಿ, ಪಾರ್ಟಿಗೆ ಹೋಗಲಿ ಈ ದೊಗಲೆ ಬಟ್ಟೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣುತ್ತಾರೆ ಈ ಜೆನ್- ಝೀ ಮಕ್ಕಳು. ಹೌದು, ದೊಗಲೆ ಶರ್ಟ್, ಬ್ಯಾಗೀ ಜೀನ್ಸ್ , ಓವರ್ ಸೈಜ್ ಹೂಡಿ , ಓವರ್ ಸೈಜ್ ಕೋಟ್ ಈಗಿನ ಟ್ರೆಂಡ್. ದೊಗಲೆ ಬಟ್ಟೆ ಧರಿಸುವ ಯುವ ಜನತೆಯನೊಮ್ಮೆ ಕೇಳಿ. ಅದು ಕೇವಲ ಫ್ಯಾಶನ್ ಅಷ್ಟೇ ಅಲ್ಲ, ಕಂಫರ್ಟೆಬಲ್ ಕೂಡ, ಜೊತೆಗೆ ಕಾನ್ಫಿಡೆನ್ಸ್ ಹೆಚ್ಚಿಸುತ್ತದೆ ಎನ್ನುತ್ತಾರೆ.
ಅದಕ್ಕೆ ಅಲ್ಲವೇ ಹೇಳುವುದು ಓಲ್ಡ್ ಇಸ್ ಗೋಲ್ಡ್ ಅಂತ.
- ಅಶ್ವಿನಿ ಸುನಿಲ್
