ಗೊತ್ತಾಗಲಿಲ್ಲವೆ ಹುಡುಗ
ಯುದ್ದವೆಂದರೆ ಸಾವಿನ ಮನೆಯ ಹೆಬ್ಬಾಗಿಲು
ಧಗಧಗ ರಣಾಂಗಣದಲಿ ಏಕಾಂಗಿಯಾಗಿ
ಗೆಳೆಯರ ಹಸಿವ ನೀಗಿಸ ಹೊರಟೆಯಲ್ಲ.
ಬಾಂಬು ಷೆಲ್ಗಳಿಗೆ ಯಾರ ಲೆಕ್ಕ
ನೀ ಭಾರತೀಯನೋ ಉಕ್ರೇನಿಯನ್ನನೋ
ಎಂದು ಕೇಳುವುದೇನು
ಅದಕೆ ಬರೀ ರಕ್ತದ ದಾಹ
ಕುಡಿದು ತಣಿಯಬೇಕು
ಗುಂಡು ಮಾರುವವ ಗುಂಡು ಹಾಕಿ ಕುಣಿಯಬೇಕು.
ನಡೆದಿದೆ ಇದೇ ಆಟ
ಹೆರವರ ಮಕ್ಕಳ ಭಾವಿಗೆ ತಳ್ಳುವ ಕೂಟ.
ಪುಣ್ಯಭೂಮಿಯಲ್ಲವೇ ಈ ನಾಡು
ವಿಶ್ವ ಗುರುವಾಗಲು ಮೂರೇ ಮೆಟ್ಟಿಲು
ಹೊಟ್ಟೆಗಾಗಿ ಕುಣಿಕೆ ಬಿದ್ದಿದೆ ಬಾಯಿಗೆ
ಬಯಸಿದ್ದು ಆಡಲಾಗದ ಅನ್ನ ಸಂಕಟ
ನವೀನ
ಅಕ್ಷರಗಳ ಬುಟ್ಟಿಯನು ಹೆಗಲಲ್ಲಿ ಹೊತ್ತಿದ್ದೆ
ಊರಿನಲೊಂದು ದವಾಖಾನೆಯ ಕನಸು ಕಂಡಿದ್ದೆ ಪಾಪ
ಮಾರಾಟಕ್ಕಿಟ್ಟ ಪುಸ್ತಕ ಪಾಟಿಗಳ ಕೊಳ್ಳಲು
ಇರಲಿಲ್ಲ ನಿನ್ನ ಬಳಿ ಝಣತ್ಕಾರದ ಕಣಕ
ಹಾರ್ಕೀವ್ನಲಿ ಹಾರಿತು ಜೀವಪಕ್ಷಿ
ಬಡಬಾನಲವ ಒಡಲಿಗಂಟಿಸಿಕೊಂಡಿಹ ಅಮ್ಮ
ಕನಸುಗಣ್ಣುಗಳ ಬಾನಿಗೆನೆಟ್ಟ ಅಪ್ಪ
ಏನು ಹೇಳುವರು ಪಾಪ
ಕಡೆಯ ದರ್ಶನಕಾದರೂ ಅವಕಾಶ ಕೊಡಿ
ಹುಟ್ಟಿದರೆ ಸತ್ತರೆ ಎದ್ದರೆ ಬಿದ್ದರೆ
ಈ ಪುಣ್ಯಭೂಮಿಯಲಿ ಮಾಫಿಯಾ ದರ್ಬಾರು
ರಾಜಕೀಯ ಪಿಂಡಗಳ ಕಾರುಬಾರು
ಎಲ್ಲವೂ ಮಾಫಿ ಮಾಫಿಯಾ
ಇಲ್ಲಿ ಮಾನವತೆ ಮಾರಾಟಕ್ಕಿದೆ
ಮಾತಿನಮಲ್ಲರ ಜೇಬು ತುಂಬಿದೆ
ಇದೋ ನೋಡು
ನನ್ನ ಇಜಾರದ ಜೇಬು ಹರಿದಿದೆ
ಕೂಡಿಟ್ಟ ಪೈಸೆಗಳು ಮಣ್ಣು ಹಿಡಿದಿದೆ.
ನಾಚಿಕೆ ಬಿಟ್ಟವರ ಸಾಲೀಗ
ಮಸಣದ ಮನೆಯ ಬಾಗಿಲು ತಟ್ಟಿದೆ
ಟಿವಿಗಳು ಠೀವಿಯಿಂದ ಬೊಬ್ಬಿರಿದಿವೆ
ಕೊಟ್ಟರೋ ಕೊಟ್ಟರು ಪರಿಹಾರ.
ಮಗನ ಮುಖ ಛಿದ್ರವಾಯಿತೇ
ಮೇಲಾಟದಾಟ ಲಲಾಟವ ಒಡೆದುಬಿಟ್ಟಿತೆ
ಯಾರು ಗೆಲುವವರು ಯುದ್ದದಲಿ
ಹೆಣಗಳಿಗೆ ಇಟ್ಟಿಹರಂತೆ ಲೆಕ್ಕ
ಜೀವ ಮನಸುಗಳೀಗ ಅಂಕಿಸಂಖ್ಯೆಯ ಆಟ
ಬಿಳಿಮನೆಯ ಅಟ್ಟದಲಿ
ಕೂತ ಮುದುಕ ಕಾಲರ್ ಎತ್ತುತ್ತಿದ್ದಾನೆ.
ಆಹಾ ಎಂಥ ಗೆಲುವು ಬಂದೇ ಬಂತು.
ಈ… ಇವ ಬಸ್ಕಿ ಹೊಡೆಯುತ್ತಾ ಮುಸಿಮುಸಿ ನಗುತ್ತಾನೆ.
ನಾವಿಲ್ಲಿ ಆತ್ಮಗಳಿಲ್ಲದೂರಲ್ಲಿ
ಆತ್ಮವಿಶ್ವಾಸಗಳ ನುಡಿಯಲ್ಲಿ
ಮೊಸದ ಮಾಲುಗಳು ಉಡಿಯಲ್ಲಿ
ಇಷ್ಟಕ್ಕೂ ನವೀನ ಏಕೆ ಸತ್ತ?
ಪ್ರಶ್ನೆ ಪ್ರತಿಧ್ವನಿಸುತ್ತಿದೆ
ಉತ್ತರ
ನಮ್ಮ ಬಾಯಿಗೆ ಬೀಗ ಬಿದ್ದಿದೆ
ಜಯಘೋಷಕಷ್ಟೆ ತೆರೆಯುವುದು.
ನೀವು… ನೀವು… ಹೇಳುತ್ತೀರಾ ?.
- ಬೆಂಗಳೂರು ಶ್ರೀನಿವಾಸ್ ರಾವ್ ರವೀಂದ್ರ
