”ಜಾಲಾರದ ಹೂವನ್ನು ನೋಡಲು ಬಯಸುವವರು ಈಗಲೇ ದೇವರಾಯನದುರ್ಗ ಬೆಟ್ಟಕ್ಕೆ ಹೋಗಿ ಬನ್ನಿ. ಇನ್ನೆರಡು ದಿನ ಕಳೆದರೂ ಜಾಲಾರ ಹೂವನ್ನು ನೀವು ಮತ್ತೆ ನೋಡಲು ಒಂದು ವರ್ಷಕಾಲ ಕಾಯಬೇಕಾಗುತ್ತದೆ” – ವಡ್ಡಗೆರೆ ನಾಗರಾಜಯ್ಯ, ಮುಂದೆ ಓದಿ…
‘ಅಬೆತೋಸಂ’ನಲ್ಲಿ ಕಾಂತರಾಜು ಗುಪ್ಪಟ್ಣ ಅವರ ‘ಜಗಜಾಲಾರ ಐತಿಹ್ಯಗಳ ನೋಟ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಾಲಾರದ ಹೂವಿನ ಬಗ್ಗೆ ದೀರ್ಘವಾಗಿ ಮಾತಾಡಿದ್ದೆನು.
ಯುವ ಸಂಶೋಧಕಿ ಅನ್ನಪೂರ್ಣ ಮೋಹನ್ ಅವರು, ಹೂಕಾಯ್ದ ಜಾಲಾರದ ಮರವನ್ನು ನೋಡಬೇಕೆಂಬ ಆಸೆ ವ್ಯಕ್ತಪಡಿಸಿದರು. ಗೂಗಲ್ ನಲ್ಲಿ ಹುಡುಕಿದರೂ ಅವರಿಗೆ ಜಾಲಾರದ ಹೂವಿನ ಮಾಹಿತಿ ಸಿಗಲಿಲ್ಲವಂತೆ. ನಾನು ಈ ಹೂವನ್ನು ಕುರಿತು ಅನೇಕ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಂಡ ಬಳಿಕ, ಜಾಲಾರದ ಹೂವಿನ ಹೆಸರನ್ನು ಮೊದಲಿಗೆ ನನ್ನಿಂದಲೇ ಅವರಿಗೆ ತಿಳಿದದ್ದೆಂದು ಹೇಳಿದರು. ‘ಬನ್ನಿ, ಇಲ್ಲೇ ಹತ್ತಿರದ ದೇವರಾಯನದುರ್ಗ ಬೆಟ್ಟದಲ್ಲಿದೆ ತೋರಿಸ್ತೀನಿ. ಈ ವಾರ ಬಿಟ್ಟರೆ ಮುಂದೆ ಇನ್ನೊಂದು ವರ್ಷ ಬೇಕು ಈ ಹೂವನ್ನು ನೋಡಲು, ಹೂವಿನ ಕಾಲ ಮುಗಿಯುತ್ತಾ ಬಂದಿದೆ. ನಾಳೆ ಹೇಗೂ ಶಿವರಾತ್ರಿ ಹಬ್ಬದ ರಜೆ ಇದೆ. ಸಾಧ್ಯವಾದರೆ ಬನ್ನಿ’ ಎಂದು ಕರೆದೆ. ಅವರು ತಮ್ಮ ಗಂಡನೊಂದಿಗೆ ಈ ಬಗ್ಗೆ ಚರ್ಚಿಸಿ ನಮ್ಮದೇ ಕಾರಿನಲ್ಲಿ ಕುಟುಂಬ ಸಮೇತ ಹೋಗಿಬರೋಣ ಸರ್ ಅಂದರು. ನನ್ನ ‘ಹೆಂಡತಿ ಎಂಬ ಫ್ರೆಂಡತಿ’ ಹತ್ತಿರ ನಾನು ಪ್ರಸ್ತಾಪಿಸಿದಾಗ ಬಲು ಮುತುವರ್ಜಿಯಿಂದ ಒಪ್ಪಿದರು. ಜಾಲಾರದ ಹೂವನ್ನು ನೋಡಲು ಎಲ್ಲರೂ ನಿನ್ನೆ ಬೆಳಗ್ಗೆ ದೇವರಾಯನದುರ್ಗ ಬೆಟ್ಟಕ್ಕೆ ಹೊರಟೆವು.
ಜಾಲಾರ- ಜಾಲಾರಿ- ಜಾಲಾರಿ ಸಿರಮಲ್ಲೆ- ಜಾಲಗಿರಿ ಹೂವು ಬಯಲು ಸೀಮೆಯ ಕುರುಚಲು ಕಾಡುಗಳಲ್ಲಿ ಕಾಣಸಿಗುವ ಅಪರೂಪದ ಹೂವು. ನಮ್ಮ ತುಮಕೂರು ಸೀಮೆಯ ಕರಿಗಿರಿ- ದೇವರಾಯನದುರ್ಗದ ಬೆಟ್ಟ, ಬೆಳಧರ ಬಳಿಯಲ್ಲಿರುವ ಮಿಂಚುಕಲ್ಲು ಬೆಟ್ಟ, ಕೊರಟಗೆರೆ ಹತ್ತಿರದ ದೊಡ್ಡಪಾಲನಹಳ್ಳಿ ಬೆಟ್ಟ ಮತ್ತು ಸಿದ್ಧರಬೆಟ್ಟ, ಬಿಕ್ಕೆಗುಟ್ಟೆ ಕಾಡು, ಶಿರಾ ತಾಲ್ಲೂಕಿನ ಮಂಚಲದೊರೆಯ ರಾಮದೇವರ ಕಾಡು, ಕಿಬ್ಬನಹಳ್ಳಿ ಕ್ರಾಸ್ (K.B.Cross) ಮತ್ತು ಕೊಂಡ್ಲಿ ಕ್ರಾಸ್ ನಡುವಿರುವ ಕಾರೇಖುರ್ಚಿ ಗುಡ್ಡ, ತಿಪಟೂರು ತಾಲ್ಲೂಕಿನ ಕರಡಿಗುಡ್ಡ, ಮೇಲುಕೋಟೆ ಬೆಟ್ಟ, ಮಧುಗಿರಿ ಹತ್ತಿರದ ಕಮ್ಮನಕೋಟೆ, ದೊಡ್ಡಬಳ್ಳಾಪುರ ಸಮೀಪದ ಹುಲಕಡಿ ಬೆಟ್ಟ ಇಲ್ಲೆಲ್ಲಾ ಈಗ ಜಾಲಗಿರಿ (ಜಾಲಾರ) ಹೂವುಗಳದ್ದೇ ಹಬ್ಬ.
ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ಕರಿಗಿರಿ – ದೇವರಾಯನದುರ್ಗ ಕಾಡಿನ ಜಾಲಾರದ ಮರಗಳಲ್ಲಿ ಜಗಿಹಿಡಿದು ಅರಳಿ ಕಂಪು ಸೂಸುವ ಜಾಲಾರದ ಮರಗಳು ಈ ಕಾಡಿಗೆ ವಿಶೇಷ ಕಳೆಯನ್ನು ತಂದುಕೊಟ್ಟಿವೆ. ಇಷ್ಟೊಂದು ಕಡು ಪರಿಮಳದ ಹೂವಿನ ಮರಗಳೀಗ ಅಪರೂಪ. ಜಾಲಾರದ ಮರಗಳನ್ನು ಬೆಳೆಸುವ ಪ್ರಯೋಗ ಕೃಷಿ ಮತ್ತು ತೋಟಗಾರಿಕಾ ಇಲಾಖೆಯಿಂದ ಈವರೆಗೆ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.
ಬಯಲು ಸೀಮೆಯ ಬೆಟ್ಟಗುಡ್ಡಗಳಲ್ಲಿ ಜಾಲಾರಿ ಸಿರಿಮಲ್ಲೆ ಹೂವಿನ ಮರ ಯಾವುದೋ ನಿರ್ದಿಷ್ಟ ತಾಪಮಾನದಲ್ಲಿ ಹುಟ್ಟಬಹುದು ಅನ್ನಿಸುತ್ತಿದೆ. ಗಿರಿಯಲ್ಲಿ ಹುಟ್ಟುವುದರಿಂದ ಇದನ್ನು ಜಾಲಗಿರಿ ಎಂದೇ ಕರೆಯುವುದು ಚೆಂದವೆನ್ನಿಸುತ್ತದೆ. ಕೆಲವು ಕಡೆ ಜಾಲಾರ ಜಾಲಾರಿ ಸಿರಿಮಲ್ಲಿಗೆ ಎಂದು ಕರೆದರೆ ನಮ್ಮ ತುಮಕೂರು ಸೀಮೆಯಲ್ಲಿ ಜಾಲಗಿರಿ ಹೂವು ಎಂದೇ ಕರೆಯುತ್ತೇವೆ.
ಬಯಲು ಸೀಮೆಯ ಬೆಟ್ಟ ಗುಡ್ಡಗಳಲ್ಲಿ ಜಾಲಗಿರಿ ತಾನಾಗಿಯೇ ಹುಟ್ಟಿ ಬೆಳೆಯುವ ಪರಿ ಒಂದು ಪ್ರಕೃತಿ ವಿಸ್ಮಯವೇ ಸರಿ. ಜಾಲಗಿರಿ ಮರ ಯಾವ ದಿಕ್ಕಿಗೆ ಹೆಚ್ಚು ಹೂಕಾಯುತ್ತದೆಯೋ ಆ ದಿಕ್ಕಿನ ಕಡೆಗೆ ಮಳೆ ಬೆಳೆ ಚೆನ್ನಾಗಿ ನಡೆಯುತ್ತದೆ ಎಂಬ ನಂಬಿಕೆ ಜನಪದರಲ್ಲಿದೆ. ಸುಂದರವಾದ ಕರಿಗಿರಿ ದೇವರಾಯನದುರ್ಗ ಬೆಟ್ಟದಲ್ಲಿರುವ ಪುರಾತನ ಯೋಗಾನರಸಿಂಹ- ಭೋಗಾನರಸಿಂಹ- ಕುಂಬಿಬೆಟ್ಟದ ಗವಿಗವ್ವಾರ, ನಾಮದ ಚಿಲುಮೆ, ಜಿಂಕೆವನ ಸುತ್ತಾಡಿಕೊಂಡು ರಾತ್ರಿ ಎಂಟರ ಹೊತ್ತಿಗೆ ಅನ್ನಪೂರ್ಣ ಮೋಹನ್ ಅವರ ಮನೆಗೆ ಬಂದೆವು. ಒಂದು ರಮ್ಯ ಕಾವ್ಯವನ್ನು ಓದಿದಾಗ ಸಿಗಬಹುದಾದ ಮನೋಲ್ಲಾಸ ನನಗೆ ಆ ಸುಂದರವಾದ ಮನೆಯನ್ನು ನೋಡಿದಾಗ ಸಿಕ್ಕಿತು. ಜಾಲಾರದ ಹೂವಿನಷ್ಟೇ ಆ ಮನೆಯೂ, ಅನ್ನಪೂರ್ಣ, ಮೋಹನ್, ಪುಟಾಣಿಗಳಾದ ಪೂಜಿತಾ ಮತ್ತು ಲಲ್ಲಿ ಎಂಬುವ ಹೃದಯಗಳೂ ಸುಂದರ.
- ವಡ್ಡಗೆರೆ ನಾಗರಾಜಯ್ಯ
