ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ…ಮಾತು ಕೆಲವೊಮ್ಮೆ ಜೀವನದಲ್ಲಿ ಮನಸ್ಸಿಗೆ ಹತ್ತಿರವಾಗುತ್ತದೆ, ಏಕೆಂದರೆ ಹಬ್ಬ ಹರಿದಿನಗಳಲ್ಲಿ ಉಳ್ಳವರ ಆಡಂಬರದ ಮುಂದೆ ಬಡವನ ನಲುಗಿ ಹೋಗುತ್ತಾನೆ. ಆದರೆ ದೇವರಿಗೆ ಬೇಕಿರುವುದು ಭಕ್ತಿಯೇ ವಿನಃ ಆಡಂಬರವಲ್ಲ ಶೋಭಾ ನಾರಾಯಣ ಹೆಗಡೆ ಅವರ ಈ ಕತೆಯನ್ನು ತಪ್ಪದೆ ಓದಿ…
ಬೆಳಿಗ್ಗೆ, ಬಾಗಿಲಿಗೆ ರಂಗವಲ್ಲಿ ಹಾಕುತ್ತಿರುವಾಗ ಎದುರುಗಡೆ ಬಿಲ್ಡಿಂಗ್ ಲಕ್ಷೀ ಆಂಟಿ ಕೂಗಿದ್ರು. ‘ವೈಶಾಲಿ.. ಹಬ್ಬಕ್ಕೆ ರೆಡೀ ಆಯ್ತಾ. ಇವತ್ತು ಗೌರಿ ಹಬ್ಬ. ಇನ್ನೂ ಮನೇನ ಸಿಂಗರಿಸಲೇ ಇಲ್ಲ. ನಮ್ಮದೆಲ್ಲ ಆಯಿತು. ಮಕ್ಕಳು, ಮೊಮ್ಮಕ್ಕಳು ತುಂಬಾ ಖುಷಿಯಿಂದ ಡೆಕೋರೇಟ್ ಮಾಡ್ತಿದ್ದಾರೆ’.
ಗೌರಿ ಕೂಡಾ ತಂದು ಕೂಡಿಸಿ ಆಯ್ತು ಅಂತ ಸಡಗರದಿಂದ ಹೇಳಿದಾಗ ನನ್ನ ಮನಸ್ಸಿಗೆ ತುಂಬಾ ಕಸಿವಿಸಿ ಆಗಿದ್ದು ಸುಳ್ಳಲ್ಲ. ಲಕ್ಷ್ಮೀ ಆಂಟಿ ಮಾತನ್ನು ಕೇಳಿಸಿಕೊಂಡ ನಮ್ಮ ಪಕ್ಕದ ಮನೆ ಲೀಲಾ ಆಂಟಿ ‘ಏನು ಲಕ್ಷ್ಮೀಯವರೆ , ಗಂಡ ಹೆಂಡತಿ ಕೆಲಸ ಇಲ್ದೇ ಮನೆಯಲ್ಲಿ ಕೂತಿದ್ದಾರೆ. ಇನ್ನೇನು ಹಬ್ಬ ಮಾಡ್ತಾರೆ’ ಅಂತ ಹೇಳಿದ್ದು, ಮರುಕದಿಂದಲೋ ಅಥವಾ ಹಂಗಿಸಿ ಆಡಿದ ಮಾತೋ ಗೊತ್ತಾಗಲಿಲ್ಲ. ಏನು ಹೇಳಬೇಕೆಂದು ಅರಿಯದೇ ಒಳ ನಡೆದೆ.
ಇವತ್ತು ಗೌರಿ ಹಬ್ಬ. ಪ್ರತಿ ವರ್ಷ ಚೆನ್ನಾಗಿ ಆಚರಣೆ ಮಾಡ್ತಿದ್ವಿ. ಆದರೆ ಕರೋನಾ ಹೆಮ್ಮಾರಿಯ ಹೊಡೆತ ಬದುಕನ್ನೇ ಬುಡಮೇಲು ಮಾಡಿಬಿಟ್ಟಿದೆ. ಕೈಯಲ್ಲಿ ಕೆಲಸ ಇಲ್ಲ. ಬ್ಯಾಂಕ್ ಅಕೌಂಟ್ ಜೀರೋ. ದಿನದ ಬದುಕೇ ದುಸ್ತರ ಆಗಿರೋವಾಗ ಹಬ್ಬ ಹೇಗೆ ಮಾಡೋದು. ಯೋಚನೆ ಮಾಡುತ್ತಿದ್ದೆ.ಅಷ್ಟರಲ್ಲಿ ಗಂಡ ವಿಜಯ್ ಕೂಗಿದ್ದು ಕೇಳಿ ವಾಸ್ತವಕೆ ಬಂದೆ ‘ವೈಶೂ ನೀ ತಿಂಡಿ ತಿನ್ನು. ನನ್ನ ಫ್ರೆಂಡ್ ಒಬ್ಬರು ಬರೋಕೆ ಹೇಳಿದ್ದಾರೆ.

ಫೋಟೋ ಕೃಪೆ : google
ಯಾವುದಾದರೂ ಕೆಲಸ ಸಿಕ್ಕಿದ್ರೆ ಸಾಕು ಬೇಜಾರಿಂದ ಹೇಳಿದ್ರು ‘ರೀ… ಇವತ್ತು ಗೌರಿ ಹಬ್ಬ. ಇವತ್ತಾದರೂ ಮನೆಯಲ್ಲಿ ಇರಬಾರ್ದಾ ಎಂದೆ. ನಂಗೆ ನೀನೇ ಗೌರಿ. ನನ್ನ ದೇವತೆ ನೀನು. ನಿನ್ನ ಉಪವಾಸ ಕೆಡವಿ, ಹಬ್ಬ ಮಾಡಿದ್ರೆ ಏನ್ ಚಂದ ಹೇಳು. ಒಂದು ಕೆಲಸ ಅಂತ ಸಿಕ್ಕಿದ್ರೆ ಹೊಟ್ಟೆ ತುಂಬಾ ಊಟನಾದರೂ ಮಾಡಿ ನೆಮ್ಮದಿಯಿಂದ ಇರಬಹುದಲ್ಲಾ ವೈಶೂ. ನೀನು ಪೂಜೆ ಮಾಡು. ಊಟಕ್ಕೆ ಬರ್ತೀನಿ’ ಅಂತ ನಡೆದೇ ಬಿಟ್ರು. ಅವರ ನೋವಿನ ಅರಿವು ನನಗೆ ಇದೆ. ಅದಕ್ಕೆ ಏನೂ ಮಾತನಾಡದೇ ಸುಮ್ಮನೆ ಕೂತೆ.
ಅಮ್ಮ ಹೇಳ್ತಿದ್ದ ಮಾತು ನೆನಪಿಗೆ ಬಂತು. ಆಡಂಬರಕ್ಕಿಂತ ಭಕ್ತಿ ಮುಖ್ಯ ಅಂತ. ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕು ಅನಿವಾರ್ಯ. ಎದ್ದು ಕಪಾಟಿನ ಬಾಗಿಲು ತೆರೆದೆ. ಒಂದಿಷ್ಟು ಹೊಸ ಬ್ಲೌಸ್ ಪೀಸ್ ಇತ್ತು. ಐದಾರು ಕೈಗೆತ್ತಿಕೊಂಡೆ. ನೀಟಾಗಿ ಸಾರಿಯಂತೆ ರೆಡೀ ಮಾಡಿ ಹೊಲಿದೆ. ಹತ್ತಿಯನ್ನು ಬಟ್ಟೆಯೊಳಗೆ ತುಂಬಿ ಮುಖ ಮಾಡಿ ಚಿಕ್ಕ ಬಿಂದಿಗೆಯ ಮೇಲಿಟ್ಟೆ. ವಾವ್ ನನ್ನ ಗೌರಮ್ಮ ರೆಡೀ ಆಗೇ ಬಿಟ್ಲು. ದುಡ್ಡು ಕೊಟ್ಟು ಗೌರಮ್ಮನ ಪಡೆಯಲಾಗಲಿಲ್ಲ ನಿಜ. ಕಸದಿಂದ ರಸ ಈಗ ನನ್ನ ಸಹಾಯಕ್ಕೆ ಬಂತು.
ನನ್ನ ಕೆಲ ಆರ್ಟಿಫಿಷಿಯಲ್ ಒಡವೆ ತೊಡಿಸಿದೆ. ಮುದ್ದು ಗೌರಮ್ಮ ಚಂದ ಕಂಡಳು. ಒಂದಿಷ್ಟು ಥರ್ಮಾಕೋಲ್ ಇತ್ತು. ಅದರಿಂದ ಚಂದದ ಚಿಕ್ಕ ಮಂಟಪ ಮಾಡಿದೆ. ಹತ್ತಿಯ ಮಾಲೆಯಿಂದ ಸಿಂಗರಿಸಿದೆ. ಇನ್ನು ಸಿಹಿ ಅಡುಗೆ ಮಾಡಿ ಪೂಜೆ ಮಾಡಿದರೆ ಹಬ್ಬ ಆದಂತೆ ಅಂತ ಅಡುಗೆ ಮನೆ ಹೊಕ್ಕೆ. ಎಲ್ಲಾ ಡಬ್ಬ ಖಾಲಿ ಖಾಲಿ.ಪರಿಚಯದ ಅಂಗಡಿಗೆ ಹೋಗಿ ಸಾಲ ಕೇಳೋಣ ಅಂದ್ರೆ ನಂದಿನಿ ಪಾರ್ಲರ್ ಬಿಟ್ರೆ ಯಾವ ಅಂಗಡಿಯೂ ಇಲ್ಲ. ಎಲ್ಲಾ ಸೀಲ್ ಡೌನ್.
ಏನ್ ಮಾಡ್ಲಿ ಚಿಂತೆ ಆಯಿತು. ಮೊನ್ನೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬಾಗಿಣಕ್ಕೆ ಬಂದ ಒಂದೆರಡು ನೀರಾರಿದ ತೆಂಗಿನ ಕಾಯಿ ಮತ್ತೆ ಅಚ್ಚು ಬೆಲ್ಲ ಇತ್ತು… ಹುರಿಗಡಲೆ ಒಂದು ನೂರು ಗ್ರಾಂ ಆಗುವಷ್ಟು ಎಲ್ಲೋ ನನ್ನ ಕೈಯಿಂದ ತಪ್ಪಿ ಮಿಕ್ಕಿತ್ತು. ಚೂರು ಅಕ್ಕಿಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಪೌಡರ್ ಮಾಡಿಕೊಂಡೆ. ಇರುವುದನ್ನೇ ಬಳಸಿ ಸಿಹಿಕಡುಬು ಬೇಯಿಸಿದೆ. ಟೊಮೇಟೊ ಹಾಕಿ ಒಂದು ತಿಳಿ ಸಾರು, ಅನ್ನ ರೆಡೀ ಆಯಿತು ಹಬ್ಬದೂಟ.
ಎಲ್ಲವನ್ನೂ ತಂದು ಗೌರಿ ಮಂಟಪದ ಬಳಿ ಇಟ್ಟೆ. ಒಂದೆರಡು ಸಾಂಬ್ರಾಣಿ ಕಡ್ಡಿ ಇತ್ತು ಹಚ್ಚಿ ಬೆಳಗಿದೆ. ದೀಪ ಹಚ್ಚಲು ಎಣ್ಣೆ ಇಲ್ಲ. ಸರಿ, ಮೇಣದ ಬತ್ತಿ ಇತ್ತು ಅದರಲ್ಲೇ ಆರತಿ ಬೆಳಗಿದೆ. ಏನೋ ಮನಸ್ಸಿಗೆ ಆನಂದವಾಯಿತು. ಕಣ್ಣು ಮುಚ್ಚಿ ಒಮ್ಮೆ ಭಕ್ತಿಯಿಂದ ಬೇಡಿಕೊಂಡೆ. ತಾಯಿ ಗೌರಮ್ಮ ‘ನೀ, ನನಗೆ ಎಷ್ಟು ಶಕ್ತಿ ನೀಡಿದೀಯೋ ಅಷ್ಟು ಭಕ್ತಿಯಿಂದ ಪೂಜೆ ಮಾಡಿದೀನಮ್ಮ. ತುಂಬಾ ಕಷ್ಟ ಕೊಡಬೇಡ. ಸಿರಿವಂತರು ಹೇಗೋ ಮಾಡ್ತಾರೆ ನನ್ನ ಮ್ಮ. ನಮ್ಮಂತವರು ಏನೇ ಮಾಡೋದು ತಾಯಿ ಹರಸು. ಭಕ್ತಿಯಿಂದ, ಶುದ್ಧ ಮನದಿಂದ ಪೂಜೆ ಮಾಡಿದೀನಿ. ನನ್ನ ಗಂಡಂಗೆ ಒಂದು ಕೆಲಸ ಕೊಡಿಸು ತಾಯಿ. ಒಂದು ಕೆಲಸ ಕೈಯಲ್ಲಿ ಇದ್ರೆ ಹೇಗೋ ಜೀವನ ನಡಿಯುತ್ತೆ. ನೋಡು ಹಬ್ಬ ಆಗಿ ನಂದಾ ದೀಪ ಬೆಳಗೋಕೂ ಎಣ್ಣೆ ಇಲ್ಲದಂತಾಯಿತು’ ಅಂತ ಹೇಳ್ಕೊಳ್ಳುವಾಗ ದುಃಖ ಉಕ್ಕಿ ಬಂತು ಎಂತ ಪರಿಸ್ಥಿತಿ ಬಂದ್ಬಿಡ್ತು ತಾಯಿ ಬಿಕ್ಕಿ ಬಿಕ್ಕಿ ಅತ್ಬಿಟ್ಟೆ. ಗೌರಮ್ಮನ ಮೂರ್ತಿಯ ಬಲಭಾಗದಿಂದ ಏನೋ ಬಿದ್ದಂತೆ ಭಾಸ ಆಯಿತು.
ನೋಡಿದ್ರೆ ಹತ್ತಿಯ ಹೂ ಪ್ರಸಾದವಾಗಿ ನೀಡಿದ್ದಳು ನನ್ನ ಗೌರಮ್ಮ. ಖುಷಿಯಿಂದ ಹೂ ಎತ್ತಿ ಕೊಳ್ಳುತ್ತಿರುವಾಗಲೇ, ವೈಶೂ… ವೈಶೂ… ಅಂತ ಕೂಗುತ್ತಾ ಓಡಿ ಬಂದ್ರು ಗಂಡ ವಿಜಯ್. ಏನು ಎಂಬ ಪ್ರಶ್ನಾರ್ಥಕ ಭಾವದಿಂದ ಅವರತ್ತ ತಿರುಗಿ ನೋಡಿದೆ. ಬಂದವರೇ ನನ್ನ ಎತ್ತಿ ತಿರುಗಿಸಿದ್ರು ‘ನನಗೆ ಕೆಲಸ ಸಿಕ್ತು ಕಣೇ ವೈಶೂ… ಒಂದು ಪ್ರೈವೇಟ್ ಕಂಪೆನಿಯಲ್ಲಿ, ಸ್ಯಾಲರಿ ಚೂರು ಕಡಿಮೆ ಪರ್ವಾಗಿಲ್ಲ, ಈಗ ಕೆಲಸ ಮುಖ್ಯ ಅಲ್ವಾ…ನಾಳೆಯಿಂದ ಬರೋಕೆ ಹೇಳಿದ್ದಾರೆ’ ಅಂತ ಖುಷಿಯಿಂದ ನನ್ನ ಯಜಮಾನರು ಹೇಳುತ್ತಿದ್ರು .ಗೌರಮ್ಮನ ಕಡೆ ನೋಡಿದೆ ನಿನ್ನ ಭಕ್ತಿಗೆ ಮೆಚ್ಚಿರುವೆ ಮಗಳೇ ಎಂದು ಮುಗುಳ್ನಕ್ಕಂತೆ ಭಾಸವಾಯಿತು. ನನ್ನ ಕಂಗಳಿಂದ ಆನಂದ ಭಾಷ್ಪ ಹರಿಯಿತು. ಗೌರಮ್ಮ ನೀಡಿದ ಪ್ರಸಾದ ಹತ್ತಿಯ ಹೂವನ್ನು ಭಕ್ತಿಯಿಂದ ಕಣ್ಣಿಗೆ ಒತ್ತಿ ಮುಡಿಗೆ ಮುಡಿದು ಧನ್ಯಳಾದೆ.
- ಶೋಭಾ ನಾರಾಯಣ ಹೆಗಡೆ – ಶಿರಸಿ.
