ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ಗೃಹಿಣಿ ಅಂದ್ರೆ ಅವಳು ಗೃಹಕ್ಕಷ್ಟೇ ಸೀಮಿತವಾಗಿರಬೇಕು, ಒಂದು ಹೆಣ್ಣಿಗೆ ತನ್ನವರ ಪ್ರೀತಿಯೊಂದು ಸಿಕ್ಕರೆ ಸಾಕು ಅವಳು ಜಗವನ್ನೇ ಗೆಲ್ಲಬಲ್ಲಳು. – ಶೋಭಾ ಆರ್ , ತಪ್ಪದೆ ಮುಂದೆ ಓದಿ…
ಗೃಹಿಣೀ ಗೃಹಮುಚ್ಯತೇ – ಪರಸ್ಪರ ಗುಣ ಸ್ವಭಾವಗಳ ಹೊಂದಾಣಿಕೆಯೇ ಸುಖ ಸಂಸಾರಕ್ಕೆ ಭದ್ರ ಬುನಾದಿ ಎಂದರೆ ತಪ್ಪಾಗಲಾರದು, ಗೃಹ ಹಾಗೂ ಗೃಹದ ಉನ್ನತಿಯಾಗಬೇಕಾದರೆ ಸದ್ಗೃಹಿಣಿಯ ಸಹಕಾರವಿಲ್ಲದೇ ಅದು ಸಾಧ್ಯವಿಲ್ಲ, ಒಂದು ಮನೆ ಸಾರ್ಥಕ ಗೃಹವೆನ್ನಿಸಿಕೊಳ್ಳಬೇಕಾದರೆ ಆ ಮನೆ ಪ್ರೀತಿ ನಂಬಿಕೆ ಸಾಮರಸ್ಯಗಳಿಂದ ಕೂಡಿರಬೇಕು, ಸೌಹಾರ್ದತೆ, ಔದಾರ್ಯ, ಸತ್ಯ ನ್ಯಾಯಗಳ ಅಡಿಯಲ್ಲಿ ಬದುಕನ್ನು ನಡೆಸುವ ಪದ್ಧತಿ ಹಿಂದಿನಿಂದ ಬಂದಿರಬೇಕು, ಆಗ ಮಾತ್ರ ಅಲ್ಲಿ ಹೆಣ್ಣಿಗೆ ತನ್ನದೇ ಆದಂತಹ ಗೌರವ ಸ್ಥಾನಮಾನಗಳು ದೊರಕುತ್ತವೆ, ಅಂತೆಯೇ ಆ ಮನೆಗೆ ಸೊಸೆಯಾಗಿ ಬಂದಂತಹ ಹೆಣ್ಣು ಮಗಳು ಕೂಡ ಮನೆಯ ಬೆಳಕಾಗಿ ಬದುಕುತ್ತಾಳೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹೆಣ್ಣು ತವರು ಮನೆಯಲ್ಲಿ ಅಕ್ಕರೆಯ ಕೂಸಾಗಿ ಬೆಳೆದು ಮದುವೆಯಾದ ನಂತರ ಎಲ್ಲರನ್ನು ಬಿಟ್ಟು ತನ್ನದೇ ಆದ ಮನೆಗೆ ನೂರಾರು ಕನಸುಗಳನ್ನು ಹೊತ್ತು ಬರುವ ಗೃಹಿಣಿಗೆ ಮನೆಯಲ್ಲಿನ ವಾತಾವರಣ ಇಷ್ಟ ಇರಲಿ ಇಲ್ಲದಿರಲಿ. ಅವಳು ಎಲ್ಲರನ್ನು ತನ್ನವರೆಂಬಂತೆ ನೋಡಿಕೊಳ್ಳುತ್ತಾ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರಳಾಗುತ್ತಾಳೆ ಎನ್ನುವುದು ಸತ್ಯ.

ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ನಿಜ. ಆದರೆ ಮೊದಲು ತನ್ನ ಮನೆ, ತನ್ನವರನ್ನು ಪ್ರೀತ್ಯಾಸ್ಥೆಯಿಂದ ಮನಗೆಲ್ಲುವಲ್ಲಿ ಯಶಸ್ವಿಯಾದಳೆಂದರೆ ಅದಕ್ಕಿಂತ ಬೇರೆ ಬೇಕಿಲ್ಲ. ಒಂದು ಹೆಣ್ಣಿಗೆ ತನ್ನವರ ಪ್ರೀತಿಯೊಂದು ಸಿಕ್ಕರೆ ಸಾಕು ಅವಳು ಜಗವನ್ನೇ ಗೆಲ್ಲಬಲ್ಲಳು. ”ಜಗವನಾಳುವ ಜಾನಕಿಗಿಂತ ಮನೆಬೆಳಗುವ ಮಹಾದೇವಿ”ಯೇ ಸಾಕೆಂಬಂತೆ, ಹಿಂದಿನ ಕಾಲದಲ್ಲಿ ಹೆಣ್ಣು ಮನೆಗಷ್ಟೇ ಸೀಮಿತವಾಗಿದ್ದಳು, ಹಾಗಂತ ಅಲ್ಲಿ ಅವಳಿಗೆ ಪೂಜ್ಯನೀಯ ಭಾವ ಇಲ್ಲ ಅಂತಲ್ಲ, ಅವಳನ್ನು ಮನೆಯ ಮಹಾಲಕ್ಷ್ಮಿಯಂತೆ ನಡೆಸಿಕೊಳ್ಳುತ್ತಿದ್ದರು. ಕೂಡು ಕುಟುಂಬದಲ್ಲಿ ಅತ್ತೆಯ ಮಾತೇ ವೇದ ವಾಕ್ಯ ಆದರೂ ಸೊಸೆಯರ ಮೇಲೆ ದೌರ್ಜನ್ಯವಿರಲಿಲ್ಲ, ಎಲ್ಲ ಒಟ್ಟು ಸೇರಿ ಕೆಲಸ ಮಾಡಿ ಮನೆಯನ್ನು ಒಪ್ಪ ಓರಣ ಮಾಡುವಲ್ಲಿ ನಮ್ಮ ಗೃಹಿಣಿಯರು ಸೈ ಎನಿಸಿಕೊಂಡಿದ್ದರು. ದುಡಿದು ಬಂದ ಗಂಡನ ಆಗು ಹೋಗುಗಳನ್ನು ಗಮನಿಸಿ ಅವನ ಮನ ಗೆದ್ದ ಮಹಾದೇವಿಯಾಗಿದ್ದರು. ಮಕ್ಕಳ ಲಾಲನೆ ಪಾಲನೆ, ಮನೆಗೆ ಬಂದ ಅತಿಥಿ ಅಭ್ಯಾಗತರ ಆಗು ಹೋಗುಗಳನ್ನು ಗಮನಿಸುವಲ್ಲಿ ಆಗಿನ ಹೆಣ್ಣು ಮಕ್ಕಳು ತುಸು ಮುಂದೆ ಅಂದರೆ ತಪ್ಪಾಗಲಾರದು. ಅತಿಥಿದೇವೋಭವ ಅಂತ ನಂಬಿದ್ದಂತಾ ಕಾಲವದು. ಒಟ್ಟಿನಲ್ಲಿ ಆಗಿನ ಕಾಲದ ಹೆಣ್ಣು ಮಕ್ಕಳು ತಾಳ್ಮೆಯ ಗಣಿಗಳು ನಮ್ಮ ಮಹಿಳಾಮಣಿಗಳು ಅನ್ನುವಂತೆ ಬದುಕಿದ್ದರು, ಇಲ್ಲವಾದಲ್ಲಿ ಎಷ್ಟೋ ಮನೆಗಳು ಈಗಿನಂತೆ ಮುರಿದು ಬೀಳುತ್ತಿದ್ದವು.
——————————————————–
ಇನ್ನು ಈಗಿನ ಕಾಲಕ್ಕೆ ತಕ್ಕಂತೆ ಗೃಹಿಣಿಯರ ಬಗ್ಗೆ ಹೇಳಬೇಕೆಂದರೆ ಎಷ್ಟೋ ಮನೆಗಳಲ್ಲಿ ಹೆಣ್ಣು ಮನೆಯ ಒಳಗೆ ಹೊರಗೆ ಎರಡೂ ಕಡೆ ದುಡಿಯಲೇಬೇಕೆಂಬ ಅನಿವಾರ್ಯತೆ ಇರುತ್ತದೆ, ಆಗ ಮನೆಯ ಜನರ ಸಹಕಾರ ಕೂಡ ಅಷ್ಟೇ ಅಗತ್ಯವಾಗಿರುತ್ತದೆ, ಅವಳು ತಾನೇ ಯಾರಿಗಾಗಿ ಇಷ್ಟೆಲ್ಲ ಕಷ್ಟ ಪಡುತ್ತಾಳೆ, ನಮ್ಮೆಲ್ಲರ ಜೀವನದ ಸುಖಕ್ಕಾಗಿ ಅಲ್ಲವೇ ಎಂದು ದುಡಿಯುವ ಹೆಣ್ಣು ಮಕ್ಕಳಿಗೆ ಮನೆಯಿಂದಲೇ ಪ್ರೋತ್ಸಾಹ ದೊರಕಿದರೆ ಅವಳು ಇನ್ನು ಹೆಚ್ಚಿನ ರೀತಿಯಲ್ಲಿ ತನ್ನ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯ, ಆದರೆ ಎಲ್ಲ ಹೆಣ್ಣು ಮಕ್ಕಳಿಗೂ ಅಂತಹ ಪ್ರೋತ್ಸಾಹ ದೊರಕುವುದು ಕಷ್ಟ ಸಾಧ್ಯ.
ಇಂದಿನ ಕಾಲದಲ್ಲಿ ಗೃಹಿಣಿ ಗೃಹಕ್ಕಷ್ಟೇ ಅಲ್ಲದೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಜಗತ್ತಿಗೆ ತನ್ನ ಸಾಧನೆಯನ್ನು ತೋರಿಸುವಲ್ಲಿ ಮುಂದುವರಿದಿದ್ದಾಳೆ, ಇದಕ್ಕೆಲ್ಲ ಕಾರಣ ಮನೆಯವರ ಪ್ರೋತ್ಸಾಹ.
ಕೆಲವೊಮ್ಮೆ ಮನೆಯವರ ಪ್ರೋತ್ಸಾಹವಿಲ್ಲದೆಯೂ ದಿಟ್ಟ ತನದಿಂದ ತನ್ನ ಹಾಗೂ ತನ್ನ ಮಕ್ಕಳ ಬದುಕಿಗಾಗಿ ಹೋರಾಟ ನಡೆಸಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶ್ರಮಪಟ್ಟಿರುತ್ತಾಳೆ, ಕೆಲಸಕ್ಕೆ ಹೋದ ಹೆಣ್ಣುಮಕ್ಕಳೆಲ್ಲ ವೈಯುಕ್ತಿಕ ಬದುಕಿನಲ್ಲಿ ಸೋತಿರುವರೆಂದು ಕೆಲವರ ಅಭಿಪ್ರಾಯವಿರುತ್ತದೆ, ಕೆಲವೊಮ್ಮೆ ಚುಚ್ಚು ಮಾತುಗಳಿಂದ ಅವಳ ಮನ ನೋಯಿಸಿರುತ್ತಾರೆ, ಆದರೆ ಅವಳು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ಹಿಂದಿರುವ ಉದ್ದೇಶ ಹಾಗೂ ಅವಳ ಪರಿಸ್ಥಿತಿ ಮತ್ತು ಸ್ಥಿತಿ ಗತಿಗಳು ಮಾತ್ರ ಅವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸವೇ ಸರಿ.
ಇತ್ತೀಚಿಗೆ ವಿಚ್ಛೇದನದ ಕೇಸುಗಳು ಜಾಸ್ತಿಯಿದ್ದು, ಅದಕ್ಕೆಲ್ಲ ಹೆಣ್ಣೇ ಕಾರಣ ಅಂತ ಕೆಲವರು ಬಿಂಬಿಸುವುದನ್ನು ನೋಡಿದ್ದೇನೆ, ಯಾರೇ ಆಗಲಿ ನಮಗೆ ಸಂಪೂರ್ಣವಾಗಿ ಒಬ್ಬರ ಬಗ್ಗೆ ತಿಳಿಯದೆ ಅವರ ತೇಜೋವದೆ ಮಾಡುವುದಾಗಲಿ ಅಥವಾ ವ್ಯಕ್ತಿಯನ್ನು ವೈಯುಕ್ತಿಕವಾಗಿ ಅವಮಾನಿಸುವುದು ಸರಿಯಲ್ಲ.

ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಉದಾಹರಣೆಗೆ ಹೇಳುವುದಾದರೆ ೨೦ ವರ್ಷಗಳು ಸಂಸಾರ ಮಾಡಿದ ಒಂದು ಹೆಣ್ಣು ವಿಚ್ಛೇದನದ ಹಂತಕ್ಕೆ ತನ್ನ ಮನಸ್ಸನ್ನು ಸಧೃಡಗೊಳಿಸುತ್ತಾಳೆ ಅಂದರೆ, ಅವಳಿಗೆ ಆ ೨೦ ವರ್ಷಗಳಲ್ಲಿ ಆಗಿರುವ ಮಾನಸಿಕ ನೋವಿನ ಬಗ್ಗೆ ಅರಿಯುವ ಪ್ರಯತ್ನ ಪಡಬೇಕೆ ಹೊರತು, ಗಂಡನಿಂದ ಬೇರ್ಪಟ್ಟ ಹೆಣ್ಣುಮಕ್ಕಳೆಲ್ಲ ತಪ್ಪು ಅಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ.
ಇನ್ನು ಕೆಲವರು ಇರುತ್ತಾರೆ ಶೋಕಿಗೋಸ್ಕರ ಅಥವಾ ಇನ್ಯಾವುದೋ ತಮ್ಮ ಸ್ವಯಂ ಬದುಕಿನ ಸ್ವೇಚ್ಛೆಗೋಸ್ಕರ ಗಂಡನಿಂದ ಬೇರ್ಪಡುವ ಹುಡುಗಿಯರು ಇರುತ್ತಾರೆ, ಇಂತವರಿಂದ ಒಳ್ಳೆಯ ಹೆಣ್ಣುಮಕ್ಕಳಿಗೂ ಕೆಟ್ಟ ಹೆಸರು ಬರುತ್ತಿದೆ.
ಗೃಹಿಣಿ ಅಂದ್ರೆ ಅವಳು ಗೃಹಕ್ಕಷ್ಟೇ ಸೀಮಿತವಾಗಿರಬೇಕು ಅಂತೇನಿಲ್ಲ, ಅಗತ್ಯ ಬಿದ್ದಾಗ ಅಗತ್ಯ ತಕ್ಕಂತೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುವುದರ ಜೊತೆ ಜೊತೆಗೆ ತನ್ನ ಪ್ರೀತಿ ಪಾತ್ರರ ಹಾಗೂ ತನಗಾಗಿ ಮಿಡಿಯುವವರ ಸಂಬಂಧಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಗೃಹಿಣಿಯ ಜವಾಬ್ದಾರಿ, ಆದರೆ ಅವಳು ಇಷ್ಟೆಲ್ಲ ಮಾಡಬೇಕು ಅಂದರೆ ಬಾಳಲ್ಲಿ ಜೊತೆಗಾರನಾಗಿ ಬಂದವರ ಸಹಕಾರವು ಅಷ್ಟೇ ಮುಖ್ಯವಾಗುತ್ತದೆ.
- ಶೋಭಾ ಆರ್
