ಭಾರತೀಯ ಚದುರಂಗಕ್ಕೆ ಆನಂದ್ ತುಂಬಿದ ಹೊಸ ಚೈತನ್ಯದಿಂದ ಹಲವು ಹೊಸ ಪ್ರತಿಭೆಗಳು ಮೂಡಿ ಬಂದಿವೆ. ಗುಕೇಶ್ ದೊಮ್ಮರಾಜು ಕೂಡ ಅವರಲ್ಲೊಬ್ಬರು. ಖ್ಯಾತ ಪತ್ರಕರ್ತರಾದ ಎನ್.ಎಸ್. ಶ್ರೀಧರ ಮೂರ್ತಿ ಅವರು ಗುಕೇಶ್ ದೊಮ್ಮರಾಜು ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….
‘ಸುಧಾ’ ವಾರಪತ್ರಿಕೆಯಲ್ಲಿ ‘ಬೆಳದಿಂಗಳ ಬಾಲೆ’ ಕಾದಂಬರಿ ಬರುತ್ತಿದ್ದ ಕಾಲ, ನನಗೆ ಚದುರಂಗದ ಕುರಿತು ಆಸಕ್ತಿ ಬೆಳೆದಿದ್ದು. ಪ್ರತಿ ಕಂತಿನ ಸಂಚಿಕೆ ಬಂದಾಗಲೂ ನಾವು ಚೆಸ್ ಬೋರ್ಡ್ ಹಿಡಿದು ಕುಳಿತು ಕೊಳ್ಳುತ್ತಿದ್ದೆವು. ಯಂಡೆಮೂರಿ ಚದುರಂಗದ ನಡೆಗಳನ್ನು ವರ್ಣಿಸಿರುವ ರೀತಿಯನ್ನು ಪರೀಕ್ಷಿಸಿ ನೋಡುತ್ತಿದ್ದೆವು. ಆಗ ಭಾರತದಲ್ಲಿ ಯಾರೂ ಗ್ರ್ಯಾಂಡ್ ಮಾಸ್ಟರ್ ಗಳಿರಲಿಲ್ಲ. ರಷ್ಯದ ಗ್ಯಾರಿ ಕ್ಯಾಸ್ಪರೋವ್ ಮತ್ತು ಅನತೋಲಿ ಕಾರ್ಪೋವೋ ಅವರ ಅಧಿಪತ್ಯದ ಕಾಲ (ಈ ವಿವರ ಕಾದಂಬರಿಯಲ್ಲಿಯೂ ಇದೆ) ಮುಂದೆ ವಿಶ್ವನಾಥನ್ ಆನಂದ್ ಅವರ ಕಾಲ ಆರಂಭವಾಯಿತು. ಅವರು ಸಾಂಪ್ರದಾಯಿಕ ಹಾದಿಯನ್ನು ಬಿಟ್ಟು ಹೊಸ ನಡೆಗಳನ್ನು ಅನ್ವೇಷಿಸಿದ ಕ್ರಮ ನನ್ನನ್ನು ಆಕರ್ಷಿಸಿತು. ಒಂದು ರೀತಿಯಲ್ಲಿ ನನ್ನಂತಹ ಅನೇಕರಿಗೆ ಅವರು ಮಾನಸ ಗುರುಗಳು. ಅವರು ಒಂಟೆಯನ್ನು ಕೇಂದ್ರವಾಗಿರಿಸಿ ವ್ಯೂಹವನ್ನು ರಚಿಸುವ ಕ್ರಮವನ್ನು ನಾವು ಅನುಸರಿಸಲು ಆರಂಭಿಸಿದೆವು. 1998 ರಲ್ಲಿ ಆನಂದ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರ ಹೊಮ್ಮುವುದರೊಂದಿಗೆ ಭಾರತೀಯ ಚದುರಂಗದ ಇತಿಹಾಸದಲ್ಲಿ ಹೊಸ ಯುಗ ಆರಂಭವಾಯಿತು. ಅದೇ ವರ್ಷ ಅವರು ಚದುರಂಗದ ದಂತಕತೆ ಕ್ಯಾಸ್ಪರೋವ್ ಅವರನ್ನು ಸೋಲಿಸಿದಾಗ ಹುಚ್ಚೆದ್ದು ಕುಣಿದಿದ್ದೆವು. ಆನಂದ್ ಮುಂದೆ ಐದು ಸಲ ವಿಶ್ವ ಕಿರೀಟ ಧರಿಸಿದರು. ನನಗೆ ಚೆನ್ನಾಗಿ ನೆನಪಿರುವುದು 2008ರ ಕ್ರಾಮ್ನಿಕ್ ಅವರೊಂದಿನ ಪಂದ್ಯವಳಿ. ಇದರ ಪ್ರತಿ ಪಂದ್ಯವೂ ಕುತೂಹಲಕರವಾಗಿತ್ತು.

ಫೋಟೋ ಕೃಪೆ : google
ಭಾರತೀಯ ಚದುರಂಗಕ್ಕೆ ಆನಂದ್ ತುಂಬಿದ ಹೊಸ ಚೈತನ್ಯದಿಂದ ಹಲವು ಹೊಸ ಪ್ರತಿಭೆಗಳು ಮೂಡಿ ಬಂದಿವೆ. ಗುಕೇಶ್ ದೊಮ್ಮರಾಜು ಕೂಡ ಅವರಲ್ಲೊಬ್ಬರು. ಈ ಸಲದ ವಿಶ್ವಚಾಂಪಿಯನ್ ಶಿಪ್ ಅನ್ನು ನಾನು ಬಹಳ ವರ್ಷದ ನಂತರ ಕುತೂಹಲದಿಂದ ಗಮನಿಸಿದೆ. ಹಾಗೆ ನೋಡಿದರೆ ಎದುರಾಳಿ ಡಿಂಗ್ ಲಿರೆನ್ ಫಾರಂನಲ್ಲಿಲ್ಲದ ಕಾರಣ ಗುಕೇಶ್ ಅವರೇ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲಿಯೇ ಸೋಲು ಅವರ ಆತ್ಮವಿಶ್ವಾಸವನ್ನು ಕುಂದಿಸಿತು. ಮೂರನೇಯ ಪಂದ್ಯದಲ್ಲಿ ಗೆದ್ದು ಉತ್ಸಾಹ ಪಡೆದು ಕೊಂಡರು. ಕೆಲವು ಪಂದ್ಯಗಳಲ್ಲಿ ಅವರ ಆಟ ಉತ್ತಮವಾಗಿತ್ತು. ಆದರೆ ಮಧ್ಯಮ ಹಂತದ ನಂತರ ಕಳೆದು ಕೊಳ್ಳುತ್ತಿದ್ದ ಏಕಾಗ್ರತೆ ಪಂದ್ಯ ಕೈ ಜಾರುವಂತೆ ಮಾಡುತ್ತಿತ್ತು. 11ನೆಯ ಪಂದ್ಯ ಇದಕ್ಕೆ ಉತ್ತಮ ಉದಾಹರಣೆ, ಹತ್ತನೆಯ ನಡೆಗೆ ಗುಕೇಶ್ ಬಹಳ ಸಮಯ ತೆಗೆದುಕೊಂಡರು. ಆದರೂ ಅದು ನಿಖರವಾಗಿತ್ತು. ಆದರೆ 25ನೆಯ ಆತುರದ ನಡೆ ಪಂದ್ಯ ಕೈಜಾರುವಂತೆ ಮಾಡಿತ್ತು. ಇಲ್ಲಿಂದ ಮುಂದೆ ಚದುರಂಗ ಪಂಡಿತರು ‘ಅವರೀಗ ಫೇವರೇಟ್ ಆಟಗಾರನಲ್ಲ’ ಎಂದು ತೀರ್ಮಾನಿಸಿದ್ದರು. ಲಿರೆನ್ ಅವರ ಸಾಂಪದ್ರಾಯಿಕ ರಕ್ಷಣಾ ಆಟ ಗುಕೇಶ್ ಅವರ ಉತ್ಸಾಹದ ನಡೆಗಳ ಎದುರು ಮೇಲುಗೈ ಸಾಧಿಸಿತ್ತು. ನಿನ್ನೆಯ ಹದಿನಾಲ್ಕನೆಯ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದರೆ ಟ್ರೈ ಬ್ರೇಕರ್ ಪ್ರವೇಶಿಸ ಬೇಕಿತ್ತು. ಆಗ ಸಹಜವಾಗಿಯೇ ಗುಕೇಶ್ ಗೆಲುವಿನ ಅವಕಾಶ ಕಡಿಮೆಯಾಗುತ್ತಿತ್ತು. ನಿನ್ನೆಯ ಮೊದಲ ನಲವತ್ತು ನಡೆ ಡ್ರಾ ಕಡೆಗೆ ಪಂದ್ಯ ಸಾಗುವಂತೆ ಮಾಡಿತ್ತು. 55ನೆಯ ನಡೆಯಲ್ಲಿ ಲಿರಿಲ್ ಆನೆಯನ್ನು ಎಫ್-2 ಕಡೆ ನಡೆಸಿ ಬಿಟ್ಟರು. ಇದು ಪಂದ್ಯವನ್ನು ಗುಕೇಶ್ ಕಡೆಗೆ ತಿರುಗಿಸಿ ಬಿಟ್ಟಿತು. ಅವರ ಬಳಿ ಹೆಚ್ಚುವರಿ ಕಾಲಾಳುಗಳು ಇದ್ದಿದ್ದು ಈಗ ನೆರವಿಗೆ ಬಂದಿತು.ಮುಂದೆ ಆಗಿದ್ದು ಇತಿಹಾಸ ಗುಕೇಶ್ ಭಾರತದ ಎರಡನೆಯ ವಿಶ್ವ ಚಾಂಪಿಯನ್ ಆಗಿ ಹೊಮ್ಮಿದ್ದಾರೆ. ಈ ಪಂದ್ಯಾವಳಿಯಲ್ಲಿ ಆದ ತಪ್ಪುಗಳನ್ನು ತಿದ್ದಿ ಕೊಂಡು ಬೆಳೆಯುವುದಕ್ಕೆ ಅವರ ಮುಂದೆ ವಿಪುಲ ಅವಕಾಶಗಳಿವೆ. ಮಾಗಿದಂತೆ ಅವರ ಆಟ ಇನ್ನೂ ಸೊಗಸಾಗ ಬಲ್ಲದು. ಮುಖ್ಯ ಭಾರತದಲ್ಲಿ ಚದುರಂಗದ ಕುರಿತು ಆಸಕ್ತಿ ಹೆಚ್ಚುವಂತೆ ಅದರಲ್ಲಿ ಕ್ರಿಕೆಟ್ ನ ಇನ್ನೂ ವಿಸ್ತರಿಸಿದರೆ ಐಪಿಎಲ್ನ ಉನ್ಮಾದದಿಂದ ದೇಶವನ್ನು ಕಾಪಾಡಿದರೆ ಆಗುವ ಲಾಭ ಅಷ್ಟಿಷ್ಟಲ್ಲ.

ಫೋಟೋ ಕೃಪೆ : google
ವಿಶ್ವನಾಥನ್ ಆನಂದ ಅವರಿಗೆ ಭಾರತ ರತ್ನ ನೀಡ ಬೇಕು ಎಂದು ಬಹಳ ಕಾಲದಿಂದ ಪ್ರತಿಪಾದಿಸುತ್ತಾ ಬಂದವನು ನಾನು. ಇನ್ನೊಮ್ಮೆ ಅದನ್ನು ಪುನರುಚ್ಚಿಸುತ್ತೇನೆ.
- ಎನ್.ಎಸ್.ಶ್ರೀಧರ ಮೂರ್ತಿ
