‘ಗುಲಾಬಿ ಮತ್ತು ಗ್ಯಾಂಗ್’ ಕೃತಿ ಪರಿಚಯ

ಅಂಜಲಿ ರಾಮಣ್ಣ ಅವರು ಪ್ರಚಲಿತ ವಿದ್ಯಮಾನಗಳನ್ನು ಗಹನವಾಗಿ, ಸೂಕ್ಷ್ಮ ಸಂವೇದನೆಯಿಂದ ಅವಲೋಕಿಸಿ ಸೊಗಸಾಗಿ ತಮ್ಮ ಅನಿಸಿಕೆಗಳನ್ನು ಬರೆಯಬಲ್ಲ ಬರಹಗಾರ್ತಿ. ಅವರ ಗುಲಾಬಿ ಮತ್ತು ಗ್ಯಾಂಗ್ ಕೃತಿಯ ಕುರಿತು ಲೇಖಕಿ ಮಮತಾ ವೆಂಕಟೇಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಗುಲಾಬಿ ಮತ್ತು ಗ್ಯಾಂಗ್
ಲೇಖಕರು : ಅಂಜಲಿ ರಾಮಣ್ಣ
ಪ್ರಕಾಶಕರು : ಮಹಿಮಾ ಪ್ರಕಾಶನ
ಪ್ರಥಮ ಮುದ್ರಣ : 2025
ಬೆಲೆ : 400 ರೂಗಳು
ಪುಟಗಳು : 300

ಅಂಜಲಿ ರಾಮಣ್ಣ  “ಜೀನ್ಸ್ ಟಾಕ್ “ಅಂಕಣವನ್ನು ತಪ್ಪದೇ ಓದುವಾಗಲೇ ಬಹಳ ಇಷ್ಟವಾಗಿದ್ದಂತಹ ಲೇಖಕಿ ಕೂಡ….!!ಈ ಕೃತಿಯನ್ನು ಡಾಕ್ಟರ್ ನಾಗರತ್ನ.ಜಿ.ರಾವ್ ರವರ ಪ್ರಾಯೋಜಕತ್ವದಲ್ಲಿ ವೀಣಾ ಮೇಡಂರವರು ಮೂವರು ಪ್ರಬುದ್ಧ ಲೇಖಕಿಯರ ಅಭಿಯಾನದ ವಿಶೇಷ ಪುಸ್ತಕ ಬಹುಮಾನವಾಗಿ ವೀಣಾ ಮೇಡಂ ರವರು ಅಕ್ಕರೆಯಿಂದ ಕಳುಹಿಸಿಕೊಟ್ಟಿದ್ದಾರೆ. ಅವರಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು.

ಈ ಪುಸ್ತಕದ ಮುಖಪುಟ ಎಷ್ಟು ಆಕರ್ಷಕವೋ ಅಷ್ಟೇ ಸಾಂಕೇತಿಕವೂ ಹೌದು. ಶೀರ್ಷಿಕೆಯನ್ನು ನೋಡಿ ಈ ಕೃತಿ ಸಾಕಷ್ಟು ಗಮನ ಸೆಳೆದಿದ್ದ ಗುಲಾಬಿ ಮತ್ತು ಗ್ಯಾಂಗ್ ನವರ ಕುರಿತಾದ ಲೇಖನಗಳ ಗುಚ್ಛ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾದರೂ ಲೇಖನಗಳು ನಿರಾಸೆ ಮಾಡಲಿಲ್ಲ….!!

ವೃತ್ತಿಯಿಂದ ವಕೀಲೆಯಾಗಿರುವುದರಿಂದ ತಾವು ಕಾಣುವ ವಿಷಯ ಸಂಘರ್ಷಗಳು ಸಹಜವಾಗಿಯೇ ಇವರ ಲೇಖನಗಳ ವಸ್ತುಗಳಾಗಿ ಪ್ರಭಾವಯುತವಾಗಿವೆ. ಇಡೀ ಕೃತಿಯಲ್ಲಿ ಲೇಖಕಿ ತಮ್ಮ ದಿನನಿತ್ಯದ ಜೀವನದಲ್ಲಿ ಸರಾಗವಾಗಿ ಕಣ್ಣಿಗೆ ಬೀಳುವಂತಹ ವಿಷಯಗಳನ್ನೇ ವಿಚಾರಯುತವಾಗಿ, ವಿನೋದಮಯವಾಗಿ ಅಷ್ಟೇ ಪರಿಣಾಮಕಾರಿಯಾಗಿ ಓದುಗರ ಮನಸ್ಸನ್ನು ತಟ್ಟುವಂತೆ ಹೇಳುತ್ತಾ ಹೋಗುತ್ತಾರೆ.

ಇಲ್ಲಿ ಕಾಣಸಿಗುವ ವಿಷಯಗಳು ಬಹಳ ಅಪರೂಪವಾದ ವಿಷಯಗಳೇನಲ್ಲ. ದಿನನಿತ್ಯವೂ ನಮ್ಮ ಗಮನವನ್ನು ಸಹ ಸೆಳೆಯುವಂತಹ ವಿಷಯಗಳೇ….!! ಆದರೂ ಸಹ ಅಂಜಲಿಯವರ ಸೂಕ್ಷ್ಮವಾದ ನೋಟ ಅವರ ಬರಹಗಳಲ್ಲಿ ಆ ವಿಷಯಗಳನ್ನು ಮತ್ತಷ್ಟು ವಿಶೇಷವಾಗಿಸಿ ಮನಸ್ಸನ್ನು ತಾಕುತ್ತವೆ. ಶೀರ್ಷಿಕೆಯಿಂದಾಗಿ ಕೃತಿ ಮಹಿಳಾ ಪರ ಎನಿಸಿದರೂ ಸಹ ಹಾಗಿಲ್ಲ….!!

ಬದಲಿಗೆ ಲಿಂಗ ಭೇದವಿಲ್ಲದೆ ಸಮಸ್ಯೆಗಳನ್ನು ,ವಿವಿಧ ರೀತಿಯ ದೌರ್ಜನ್ಯಗಳನ್ನು ಅಬ್ಬರದ ದನಿಯಲ್ಲಲ್ಲದೆ, ದಿಟ್ಟವಾಗಿ ಮನಮುಟ್ಟುವ ರೀತಿಯಲ್ಲಿ ಹೇಳುವುದು ಅಂಜಲಿಯವರ ವಿಶೇಷತೆ.

ಗುಲಾಬಿ ಗ್ಯಾಂಗಿನ ಸಂಪತ್ ಪಾಲ್ ದೇವಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗ ಲೇಖಕಿ ಅವರ ಬದುಕಿನ ವಿಶೇಷತೆಗಳನ್ನು ಓದುಗರಿಗೆ ತಲುಪಿಸುವುದೇ ಅಲ್ಲದೆ ಗುಲಾಬಿ ಗ್ಯಾಂಗಿನ ವೈಶಿಷ್ಯಗಳನ್ನೂ ಸಹ ತಿಳಿಸುತ್ತಾರೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಕಂದಾಚಾರಗಳ ವಿರುದ್ಧ ದನಿ ಎತ್ತಿದ ಸಂಪತ್ ಮನೆಯಲ್ಲಿಯೇ ಸೊಸೆಯ ಆಚರಿಸುತ್ತಿದ್ದಂತಹ ಅಂತಹದೇ ಆಚಾರ ಕಣ್ಣಿಗೆ ಬಿದ್ದಾಗ ಅದನ್ನು ಗಮನಿಸುವ ಲೇಖಕಿಯವರ ಮನಸ್ಥಿತಿ ಆ ಕ್ಷಣಕ್ಕೆ ಹೇಗಿದ್ದೀತು ಎಂದು ಯೋಚಿಸುವಂತಾಗುತ್ತದೆ…..!! ಸಂಬಂಧಗಳ ವಿವಿಧ ಮಗ್ಗುಲುಗಳು ಸಮಾಜದ ವಿಕೃತ ಮನಸ್ಥಿತಿಗಳ ಕಾರಣ ಬದಲಾಗುತ್ತಿರುವ ರೀತಿ ಲೇಖಕಿಯ ಮನಸ್ಸನ್ನು ಅಪಾರವಾಗಿ ಪ್ರಭಾವಿಸಿರುವುದು ಈ ಕೃತಿಯಲ್ಲಿ ಪದೇ ಪದೇ ಕಂಡುಬರುತ್ತದೆ. ಇಂತಹದೊಂದು ಪರಿಸ್ಥಿತಿಯನ್ನು ನಾವೆಲ್ಲರೂ ಅನುಭವಿಸಿದ್ದೇವೆ….!!

ನಾವು ಚಿಕ್ಕಂದಿನಲ್ಲಿ ಬೆಳೆದ ವಾತಾವರಣಕ್ಕೂ ಇಂದಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸ ನಮ್ಮಷ್ಟೇ ಅವರ ಮನಸ್ಸನ್ನೂ ಕಾಡುತ್ತದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಎನ್ನುವ ಅಂತರವಿಲ್ಲದೆ ನಡೆಯುತ್ತಿರುವಂತಹ ಲೈಂಗಿಕ ದೌರ್ಜನ್ಯವು ಹಿರಿಯರ ಮತ್ತು ಮಕ್ಕಳ ಮನಸ್ಸನ್ನು ಬದಲಿಸುತ್ತಿರುವ ಬಗೆ ಆತಂಕಕಾರಿ ಬೆಳವಣಿಗೆಯೇ ಹೌದು …!! ವಾತ್ಸಲ್ಯದಿಂದ ಆದರಿಸುವ ಕೈಗಳು ಕಾಮುಕತೆಯಿಂದ ಸೆಳೆಯುವ ಕೈಗಳೇ ಎಂದು ಸಂಶಯಿಸಬೇಕಾದಂತ ಪರಿಸ್ಥಿತಿ ಸಮಾಜದಲ್ಲಿ ರೂಪುಗೊಂಡಿರುವುದು ವಿಪರ್ಯಾಸವೇ ಸರಿ.

ಇಂತಹದೊಂದು ಕಾಮುಕ ಜಗತ್ತಿನ ನಡುವೆ ನಿಷ್ಪಕ್ಷಪಾತವಾದಂತಹ ಅಷ್ಟೇ ವಾತ್ಸಲ್ಯಮಯವಾದಂತಹ ಸಂಬಂಧಗಳ ಹೆಣಿಗೆಯನ್ನು ಮತ್ತೆ ಬೆಸೆಯಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಲೇಖಕಿಯನ್ನು ಕಾಡಿದಷ್ಟೇ ತೀವ್ರವಾಗಿ ನಮ್ಮನ್ನೂ ಕಾಡುತ್ತದೆ….!! ಇಲ್ಲಿರುವಂತಹ ಇಷ್ಟೂ ಲೇಖನಗಳು ಸಹ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದವಲ್ಲ…!!

ಬದುಕಿನ ವಿವಿಧ ಮಜಲುಗಳ ನಡಿಗೆಯಲ್ಲಿ ಆಯಾ ವಯಸ್ಸಿಗೆ ತಕ್ಕಂತೆ ಕಾಣಿಸುವಂತಹ ವಿಷಯಗಳು ಸಹ ಮುಂದೊಮ್ಮೆ ಯೋಚಿಸುವ ರೀತಿಯನ್ನು ಬದಲಾಯಿಸಬಹುದಾದ ಎಲ್ಲಾ ಸಾಧ್ಯತೆಗಳು ಲೇಖನಗಳನ್ನು ಓದಿದಾಗ ಹೊಳೆಯುತ್ತವೆ.

“ಹೆಣ್ಣಿನ ಮನಸ್ಸಿನ ವಿರುದ್ಧ ಗಂಡು ಎಂದು ಅವಳ ದೇಹವನ್ನು ಮುಟ್ಟಲಾರನೋ ಅಂದು ಸಂಸ್ಕೃತಿಯ ಕಾಲ ಬರುತ್ತದೆ” ಎಂಬ ರೇಣುಕಾ ನಿಡಗುಂದಿಯವರ ಮಾತುಗಳನ್ನು ಉಲ್ಲೇಖಿಸುವ ಲೇಖಕಿ ಸಮಾನತೆಯ ಬಗ್ಗೆ ಮಾತನಾಡುವವರೇ ಗಂಡು ಮಕ್ಕಳೆಡೆಗೆ ತೋರ್ಪಡಿಸುವಂತಹ ಅಸಡ್ಡೆಯನ್ನು ಸಹ ಪ್ರತಿಭಟಿಸುತ್ತಾರೆ…!!

“ಹಿಂಸೆಗೆ ನೋವಿಗೆ ಲಿಂಗ ಭೇದವಿಲ್ಲ “ಎನ್ನುವ ಲೇಖಕಿ ಅತ್ಯಾಚಾರಿ ಎನ್ನುವ ಪದಕ್ಕೆ ಪುಲ್ಲಿಂಗ ಎನ್ನುವ ವ್ಯಾಕರಣವನ್ನೇ ಆರೋಪಿಸುವುದು ತಪ್ಪು ಎನ್ನುವ ಸಂಗತಿಯನ್ನು ತಾವು ತಮ್ಮ ವೃತ್ತಿ ಜೀವನದಲ್ಲಿ ಕಂಡುಕೊಂಡಂತಹ ವಿಷಯಗಳ ಮುಖಾಂತರ ಓದುಗರಿಗೆ ಮನವರಿಕೆ ಮಾಡುತ್ತಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಗಂಡಸರುಗಳಲ್ಲಿ 28 ಶೇಕಡಾ ಜನರು ಮಹಿಳೆಯರಿಂದಲೇ ತೊಂದರೆಗೆ ಒಳಗಾಗಿರುತ್ತಾರೆ ಎನ್ನುವ ಮಾತು ಆಘಾತವನ್ನು ಮತ್ತು ದಿಗ್ಭ್ರಾಂತಿಯನ್ನು ಏಕಕಾಲದಲ್ಲಿ ಹುಟ್ಟಿಸಿತು. ಅರ್ಶಿಯಾ ಆಗಬೇಕೆಂದಿರುವ ಕನಸನ್ನು ಓದುಗರೊಂದಿಗೆ ಹಂಚಿಕೊಳ್ಳುವ ಲೇಖಕಿ ಹಿರಿಯರೊಬ್ಬರು ಹೇಳಿದ ಈ ಮಾತನ್ನು ಉಲ್ಲೇಖಿಸುತ್ತಾರೆ.

“ಮಗನಾದರೆ ತನ್ನ ಅಸ್ತಿತ್ವ ಕಂಡುಕೊಳ್ಳಕ್ಕೆ ಎಷ್ಟೊಂದು ಹೆಣಗಬೇಕು… ಆದರೆ ಗಂಡು ಮಕ್ಕಳು ಮನಸ್ಸು ಮಾಡಿದರೆ ಹತ್ತಾರು “ಮಗಳು” ಸುಖವಾಗಿರುವಂತೆ ಮಾಡಬಲ್ಲರು “ಎನ್ನುವ ಮಾತು ತೀವ್ರವಾಗಿ ಮನಸ್ಸನ್ನು ತಟ್ಟಿತು.

“ಶರಣಾಗತಿಯಲ್ಲಿ ದ್ರೌಪದಿ ಭಾವವಿರದ ಹೊರತು ಭಯ ಗೆಲ್ಲಲಾರೆ” ಎನ್ನುವ ಮಾತು ಸಹ ಅಷ್ಟೇ ಆಲೋಚನೆಗೆ ಒಳಗಾಗುವಂತೆ ಮಾಡಿತು

“ಜೀವಕ್ಕಿಂತ ಹಿರಿದಿದೆ ಜೀವನ ” ಲೇಖನ ಬಹಳ ಇಷ್ಟವಾಯಿತು.ಮೇರಿ ಕ್ಯೂರಿಯಂತಹ ಲೇಖಕಿ ಕೂಡಾ ಎದುರಿಸಿದ ಸಂದಿಗ್ಧ ಪರಿಸ್ಥಿತಿ ಮನಸ್ಸನ್ನು ತೀವ್ರವಾಗಿ ಕಲಕಿತು. ಹೆಣ್ಣೊಬ್ಬಳು ಸಾಧನೆಯ ಹಾದಿಯಲ್ಲಿ ರಾಜಾರೋಷವಾಗಿ ನಡೆಯಲು ಅದೆಷ್ಟು ಅಡೆತಡೆಗಳು….!!

ಪ್ರಚಲಿತ ವಿದ್ಯಮಾನಗಳನ್ನು ತಮ್ಮದೇ ಆದ ದೃಷ್ಟಿಕೋನದಿಂದ ರಸವತ್ತಾಗಿ ಬರೆದ ಇಲ್ಲಿನ ಲೇಖನಗಳು ಅವುಗಳ ಶೀರ್ಷಿಕೆಗಳಷ್ಟೇ ಮನಸ್ಸನ್ನು ಸೆಳೆಯುತ್ತವೆ. ತಮ್ಮ ವಿಚಾರಧಾರೆಯನ್ನು ಓದುಗರು ಸಹ ಅನುಮೋದಿಸಬೇಕು ಎನ್ನುವ ಯಾವುದೇ ಹಟವಿಲ್ಲದ ಲೇಖಕಿ ನಿರಾಳವಾಗಿ ತಮ್ಮ ಅನಿಸಿಕೆಗಳನ್ನು ಸಹಜವಾಗಿಯೇ ನಿರಾತಂಕವಾಗಿ ಓದುಗರ ಮುಂದೆ ಹರಿವಿಟ್ಟಿದ್ದಾರೆ.

ನೀವೂ ಒಮ್ಮೆ ಈ ಕೃತಿಯನ್ನು ಓದಿ ನೋಡಿ.


  • ಮಮತಾ ವೆಂಕಟೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW