ಕಾರ್ಗಿಲ್ ಗರ್ಲ್ ‘ಗುಂಜನ್ ಸೆಕ್ಸೆನಾ’ ಕುರಿತಾದ ಈ ಸಿನಿಮಾವನ್ನು Netflix ನಲ್ಲಿ ನೋಡಬಹುದು. ಸಿನಿಮಾ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಬಾನಂಗಳದಲ್ಲಿ ಚಲಿಸುವ ವಿಮಾನವನ್ನು ನೋಡುವಾಗ ಜೀವನದಲ್ಲೊಮ್ಮೆ ವಿಮಾನವನ್ನು ಹತ್ತಬೇಕು ಎನ್ನುವ ಸಣ್ಣ ಆಸೆ ಮನುಷ್ಯನಿಗೆ ಬರುವುದು ಸಹಜ. ಆದರೆ ಗುಂಜನ್ ಸೆಕ್ಸೆನಾ ಎನ್ನುವ ಪುಟ್ಟ ಬಾಲಕಿಯ ಕನಸ್ಸುಗಳು ಭಿನ್ನವಾಗಿದ್ದವು. ವಿಮಾನದಲ್ಲಿ ಕೂತಾಗ ಕಿಟಕಿಯಾಚೆ ನೋಡುವ ತವಕ, ಆದರೆ ಆಕೆಯ ಅಣ್ಣನೋಡಲು ಬಿಡುವುದಿಲ್ಲ. ಅದನ್ನು ಗಮನಿಸಿದ ಗಗನಸಖಿ, ಆಕೆಯನ್ನು ವಿಮಾನದ ಮುಂಭಾಗದಲ್ಲಿ ಅಂದರೆ ಪೈಲೆಟ್ ಕೂರುವ ಜಾಗದಲ್ಲಿ ಕರೆದೊಯ್ಯುತ್ತಾಳೆ. ವಿಮಾನದ ಮುಂಭಾಗದಲ್ಲಿ ದೊಡ್ಡದಾಗಿ ಕಾಣುವ ಮೋಡಗಳು, ಆಕಾಶವನ್ನು ನೋಡಿ, ದಿಗ್ಭ್ರತಳಾಗುತ್ತಾಳೆ. ತಾನು ಕೂಡಾ ಹೀಗೆ ಯಾವಾಗಲು ಮೋಡಗಳ ಮಧ್ಯೆ ಹಾರಾಡುತ್ತಿರಬೇಕು ಎನ್ನುವ ಆಸೆ, ಹಠ ಅಲ್ಲಿಂದಲೇ ಶುರುವಾಗುತ್ತದೆ. ಹಠ, ತನ್ನ ಕನಸ್ಸಿನ ಬೆನ್ನಟ್ಟಿ ಹೋಗುವ ಆಕೆ ಮುಂದೆ ‘ಕಾರ್ಗಿಲ್ ಗರ್ಲ್’ ಎಂದೇ ಖ್ಯಾತಿ ಪಡೆಯುತ್ತಾಳೆ.
ನಾನು ಇತ್ತೀಚಿಗೆ ನೋಡಿದಂತಹ ‘ಗುಜನ ಸೆಕ್ಸ್ಸೆನಾ’ ಸಿನಿಮಾ ಕತೆಯಿದು. #ಏರ್ ಫೋರ್ಸ್_ಆಫೀಸರ್ ಆದ ದೇಶದ ಮೊದಲ ಮಹಿಳೆ . ಈಕೆಯ ಕುರಿತಾಗಿ ತಗೆದಂತಹ ಸಿನಿಮಾವಿದು. ೧೯೯೪ರ ಪೂರ್ವದಲ್ಲಿ ವಾಯುದಳ ಸೇರಲು ಪುರುಷರಿಗೆ ಮಾತ್ರ ಅವಕಾಶವಿತ್ತು. ೧೯೯೪ರ ನಂತರ ಮಹಿಳೆಗೂ ವಾಯುದಳ ಸೇರಲು ಅವಕಾಶವನ್ನು ನೀಡಿತು, ಆ ಮೊದಲ ಬ್ಯಾಚ್ ನಲ್ಲಿದ್ದ ಮಹಿಳೆಯೇ #ಗುಂಜನ್_ಸೆಕ್ಸೆನಾ. ಆಗ ಒಬ್ಬ ಮಹಿಳೆ ಇಂಡಿಯನ್ ಏರ್ ಫೋರ್ಸ್ ಸೇರುವುದೆಂದರೆ ದೊಡ್ಡ ಮಾತಾಗಿತ್ತು. ಗುಜನ್ ತಾಯಿ ಹಾಗು ಆಕೆಯ ಅಣ್ಣ ಆಕೆಯ ಕನಸ್ಸಿಗೆ ವಿರೋಧಿಯಾಗಿದ್ದರೂ ಸಹ ತನ್ನ ತಂದೆಯ ಬೆಂಬಲದಿಂದ ಏರ್ ಫೋರ್ಸ್ ಸೇರುತ್ತಾಳೆ .

(ಗುಂಜನ್ ಸೆಕ್ಸೆನಾ ಜೊತೆಗೆ ನಟಿ ಜಾನ್ವಿ ಕಪೂರ್)
ತರಬೇತಿ ಸಂದರ್ಭದಲ್ಲಿ ದೈಹಿಕವಾಗಿ ಎಷ್ಟೇ ಕಷ್ಟವಾದರೂ ಜಗ್ಗದೆ, ಕುಗ್ಗದೆ ಎಲ್ಲವನ್ನು ಎದುರಿಸಿ ಏರ್ ಫೋರ್ಸ್ ಆಫೀಸರ್ ಆಗಿ ನಿಲ್ಲುತ್ತಾಳೆ. ಆದರೆ ಯುದ್ಧ ತರಬೇತಿ ಕ್ಯಾಂಪ್ ನಲ್ಲಿ ಒಬ್ಬ ಮಹಿಳೆಯನ್ನು ಆಫೀಸರ್ ಆಗಿ ಸ್ವೀಕರಿಸಲು ಅಲ್ಲಿನ ಪುರುಷ ವರ್ಗದವರಿಗೆ ಕಷ್ಟವಾಗುತ್ತದೆ. ವಾಯುದಳದಲ್ಲಿ ಕೆಲಸ ಮಾಡಲು ಪುರುಷರಷ್ಟೇ ಅರ್ಹರು ಎನ್ನುವ ಮನಸ್ಥಿತಿ ಇದ್ದಂತಹ ಸಮಯವದು. ಅಲ್ಲಿನ ಕಟ್ಟಡಗಳ ವ್ಯವಸ್ಥೆಯು ಕೂಡಾ ಹಾಗೆ ಇತ್ತು, ಮಹಿಳೆಯರಿಗಾಗಿ ಪ್ರತ್ಯೇಕ ಬಾತ್ ರೂಮ್ ಅಥವಾ ಬಟ್ಟೆ ಬದಲಿಸಲು ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆಗಳಿರಲಿಲ್ಲ. ಬಟ್ಟೆ ಬದಲಾಯಿಸಬೇಕೆಂದರೆ ಗುಂಜನ್ ದೂರದಲ್ಲಿದ್ದ ತನ್ನ ರೂಮ್ ಗೆ ಹೋಗಿ ಬದಲಿಸಿ ಬರಬೇಕಿತ್ತು. ಇದರಿಂದಾಗಿ ನಿತ್ಯವೂ ಯುದ್ಧ ತರಬೇತಿಗೆ ಹೋಗಲು ತಡವಾಗುತ್ತಿತ್ತು .ಕೊನೆಗೆ ಆ ಸಮಸ್ಯೆಗೆ ತಾನೇ ಪರಿಹಾರ ಕಂಡುಕೊಂಡು, ಸಮಯಕ್ಕೆ ಸರಿಯಾಗಿ ತರಬೇತಿಗೆ ಹೋದಾಗ ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಮಹಿಳೆಯೊಂದಿಗೆ ತರಬೇತಿಗೆ ಹೋಗಲು ಪುರುಷ ಪೈಲೆಟ್ ಗಳು ಹಿಂದೇಟು ಹಾಕುತ್ತಾರೆ. ಹೀಗೆ ಮಹಿಳೆ, ಪುರುಷರ ತಾರತಮ್ಯದಿಂದಾಗಿ ಅಲ್ಲಿನ ಸಹದ್ಯೋಗಿ, ಅಧಿಕಾರಿಗಳಿಂದ ಗುಂಜನ್ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಾಳೆ. ಕೊನೆಗೆ ಕೆಲಸವನ್ನು ಬಿಟ್ಟು ಮದುವೆಯಾಗಿ ಸಂಸಾರ ಮಾಡಿಕೊಂಡು ಮನೆಯಲ್ಲಿ ಕೂರುವ ಮಟ್ಟಕ್ಕೂ ಯೋಚಿಸುತ್ತಾಳೆ. ಆದರೆ ಆಕೆಯ ತಂದೆ ಮಗಳನ್ನು ಮತ್ತೆ ಹುರುದುಂಬಿಸಿ ಮತ್ತೆ ವಾಪಾಸ್ ಕಳುಹಿಸುತ್ತಾರೆ.
೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ಧ ಸಮಯದಲ್ಲಿ ಗುಜನ್ ಯುದ್ಧದ ಹೆಲಿಕಾಪ್ಟರ್ ನ್ನು ತಾನೇ ಚಲಾಯಿಸಿಕೊಂಡು ಹೋಗಿ ಪಾಕಿಸ್ತಾನದ ಉಗ್ರರನ್ನು ಪತ್ತೆ ಹಚ್ಚಿದ್ದಲ್ಲದೆ, ಗಾಯಾಳದ ಸಾಕಷ್ಟು ಯೋಧರ ಜೀವ ಉಳಿಸುತ್ತಾಳೆ. ಇದರಿಂದ ಮಂಕು ಕವಿದಿದ್ದ ತನ್ನ ಸಹದ್ಯೋಗಿಗಳಿಗೆ, ಆಕೆಯ ಧೈರ್ಯವನ್ನು ನೋಡಿ ಬೆರಗಾಗುತ್ತಾರೆ, ಮತ್ತು ಅವರ ತಪ್ಪಿನ ಅರಿವಾಗುತ್ತದೆ. ಆ ದೃಶ್ಯವನ್ನು ನೋಡುವಾಗ ಮಹಿಳೆಯರಲ್ಲಿ ಒಂದು ಆತ್ಮವಿಶ್ವಾಸ,ಸಂತೋಷ ಮೂಡುತ್ತದೆ. ಗುಂಜನ್ ಸೆಕ್ಸೆನಾ ಈ ಸಾಧನೆಗೆ ‘ಕಾರ್ಗಿಲ್ ಗರ್ಲ್’ ಎಂದೇ ಕರೆಯುತ್ತಾರೆ. ಅವರು ಒಟ್ಟು ೪೦ ಮಿಷನ್ ಗಳನ್ನೂ ಯಶಸ್ವಿಪೂರ್ವವಾಗಿ ಮುಗಿಸಿದ್ದಾರೆ.

ಗುಂಜನ್ ಸೆಕ್ಸೆನಾ ಪಾತ್ರದಲ್ಲಿ ಜಾನ್ವಿ ಕಪೂರ್ ಅಭಿನಯಿಸಿದ್ದಾರೆ. ನಿಖಿಲ್ ಮಲ್ಹೋತ್ರ ಮತ್ತು ಶರಣ್ ಶರ್ಮ ಅವರು ಕತೆಯನ್ನು ಸುಂದರವಾಗಿ ಹೆಣೆದಿದ್ದಾರೆ. ಶರಣ್ ಶರ್ಮ ನಿರ್ದೇಶನ ಮಾಡಿದ್ದು, ಪಂಕಜ್ ತ್ರಿಪಾಠಿ, ಅಂಗದ್ ಬೇಡಿ ತಾರಾಗಣದಲ್ಲಿದ್ದಾರೆ.
ಇದು ಮಹಿಳಾ ಪ್ರಧಾನ ಸಿನಿಮಾ. ಹಾಡು, ಡಾನ್ಸ್, ಕತ್ತಿ, ಮಚ್ಚುಗಳ ಹಾವಳಿಗಳಿಲ್ಲದೆ, ಸುಂದರ ಕಥೆಯನ್ನಾಧಾರಿತ ಸಿನಿಮಾ. ಮಕ್ಕಳಿಂದ ಹಿರಿಯರವರೆಗೂ ಜೋಶ್ ನಲ್ಲಿ ನೋಡಬಹುದಾದಂತಹ ಸಿನಿಮಾ. ಇಂತಹ ಜೀವನಾಧಾರಿತ ಸಿನಿಮಾಗಳು ಬಂದಾಗ ಸಾಧನೆಗೈದ ವ್ಯಕ್ತಿಗಳನ್ನು ಮತ್ತೆ ಸ್ಮರಿಸಲು ಸಾಧ್ಯವಾಗುತ್ತದೆ. ಮಚ್ಚು,ಕತ್ತಿ ಸಿನಿಮಾಗಳಿಗಿಂತ ಉತ್ತಮ ಸಂದೇಶ ಸಾರುವ ಇಂತಹ ಸಿನಿಮಾಗಳು ತೆರೆಯ ಮೇಲೆ ಇನ್ನಷ್ಟು ಬರಲಿ…
- ಶಾಲಿನಿ ಹೂಲಿ ಪ್ರದೀಪ್
