ಹಲಗಲಿ ಊರಿನಲ್ಲಿ ನಡೆದಂತೆ ಹೋರಾಟದ ಸತ್ಯ ಕತೆಯನ್ನು ಆಧಾರವಾಗಿಟ್ಟುಕೊಂಡು ಬರೆದಂತಹ ನಾಟಕವೇ “ಹಲಗಲಿ ಬೇಡರ ದಂಗೆ”. ಈ ನಾಟಕದ ಕುರಿತು ಲೇಖಕಿ ಸ್ಮಿತಾ ಬಲ್ಲಾಳ್(ಅಸ್ಮಿತೆ) ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ನಾಟಕ : ಹಲಗಲಿ ಬೇಡರ ದಂಗೆ
ರಚನೆ : ಹೂಲಿಶೇಖರ್
ನಿರ್ದೇಶನ : ಪೂರ್ಣಚಂದ್ರ ತೇಜಸ್ವಿ
ತಂಡ : ನವೋದಯ
ನಾಟಕದ ಅವಧಿ : ಒಂದೂವರೆ ಗಂಟೆ
“ಹಲಗಲಿ ಬೇಡರ ದಂಗೆ” ನಾಟಕ ಇದೇ ಬರುವ ಶನಿವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುವುದರಲ್ಲಿದೆ, ಎಂದು ಗೊತ್ತಾದ ಕೂಡಲೇ ಶುಕ್ರವಾರ ಮೊದಲೇ ಟಿಕೆಟ್ ಕಾಯ್ದಿರಿಸಿಕೊಂಡಿದ್ದೆ. ಶನಿವಾರ ಬೆಳಿಗ್ಗೆ ಮಾಮೂಲಿನಂತೆ ವಾಕಿಂಗ್ ಮುಗಿಸಿ ಹಿಂದಿರುಗುವಾಗ, ಕಲ್ಲು ತೊಡರಿ ಎಡಗಾಲಿನ ಪಾದ ಉಳುಕಿತ್ತು. ಮನೆಗೆ ಬರುವಷ್ಟರಲ್ಲಿ ನೋವು ಜಾಸ್ತಿ ಆಗಿತ್ತು. ನೋವಿನಣ್ಣೆ ತಿಕ್ಕಿದ್ದೂ ಆಗಿತ್ತು. ಸದ್ಯ, ಊತ ಬಂದಿಲ್ಲ, ಬರೀ ನೋವು. ‘ಹೇಗೋ ಸಂಭಾಳಿಸಿದರಾಯ್ತು’ ಎಂದುಕೊಂಡು ಸಮಾಧಾನ ಮಾಡ್ಕೊಂಡಿದ್ದೆ. ‘ನಾನು ಬಸ್ ಹತ್ತುವ ಸ್ಥಿತಿಯಲ್ಲಿಲ್ಲ’ ಅನ್ನುವುದು ಖಚಿತವಾದಾಗ ಆಟೋರಿಕ್ಷಾ ಪ್ರಯಾಣವೇ ಸುಗಮವೆನಿಸಿತ್ತು. ಅಂತೂ ಇಂತೂ ನಾಟಕ ಪ್ರದರ್ಶನದಲ್ಲಿಗೆ ಬಂದಾಗಿತ್ತು.

ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನಗೊಂಡ ಶ್ರೀ. ಹೂಲಿ ಶೇಖರ್ ವಿರಚಿತ ನಾಟಕ ‘ಹಲಗಲಿ ಬೇಡರ ದಂಗೆ’ ಮನೋಜ್ಞವಾಗಿತ್ತು. ಬ್ರಿಟಿಷರ ಗುಲಾಮಗಿರಿಯ ವಿರುದ್ದ ದಂಗೆ ಎದ್ದ ‘ಹಲಗಲಿ’ ಎಂಬ ಗ್ರಾಮದ ಬೇಡರ ಕರುಣಾಜನಕ ಕತೆಯೇ ಈ ನಾಟಕದ ಮುಖ್ಯ ಕಥಾವಸ್ತು. ಉತ್ತರ ಕರ್ನಾಟಕ ಭಾಷೆಯ ಸೊಗಡಲ್ಲಿ ಮೂಡಿ ಬಂದ ನಾಟಕ ತುಂಬಾ ಖುಷಿಕೊಟ್ಟಿತು. ನಾನೆಷ್ಟು ಆ ನಾಟಕದೊಳಗೇ ತಲ್ಲೀನಳಾಗಿಬಿಟ್ಟಿದ್ದೆನೆಂದರೆ ನಾಟಕ ಮುಗಿದು ಎದ್ದೇಳುವವರೆಗೂ ನನ್ನ ಕಾಲು ನೋವಿನ ನೆನಪೇ ಇರಲಿಲ್ಲ. ಎದ್ದು ನಿಂತಾಗಲೇ ತಿಳಿದಿದ್ದು, ಬಿಚ್ಚಿಟ್ಟ ಚಪ್ಪಲಿಗೆ ಕಾಲು ತೂರಿಸಲಾರದಷ್ಟು ಪಾದ ಊದಿಕೊಂಡು ಬಿಟ್ಟಿದೆಯೆಂದು. ಇಷ್ಟರಲ್ಲಿ ನೀವೇ ಊಹಿಸಿರ್ತೀರಿ…ನಾನೇನೂ ಜಾಸ್ತಿ ಹೇಳಬೇಕಾಗಿಲ್ಲ…ನಾಟಕ ಹೇಗಿತ್ತೂಂತ!

ಊರಿನ ಗೌಡ ಬ್ರಿಟಿಷ್ ಸರಕಾರಕ್ಕೆ ಸಹಕಾರ ನೀಡುತ್ತಾ, ಊರಲ್ಲಿ ದೌರ್ಜನ್ಯ ನಡೆಸುತ್ತಲೇ ಇದ್ದ ಊರಿನ ಗೌಡ. ಇತ್ತ ಮುಗ್ಧ ಬೇಡರು ಗ್ರಾಮ ದೇವತೆಯಾದ ಹುಲಿಗೆವ್ವನ ಜಾತ್ರೆಯನ್ನು ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸುವ ವೇಳೆಯಲ್ಲಿ ಗೌಡ ಹಾಗೂ ಅವನ ಸಹಚರರಿಂದ ಬಹುತೇಕ ತೊಂದರೆಗಳು ಎದುರಾಗುತ್ತವೆ. ಗೌಡನ ಅಹಂಕಾರದ ಪರಮಾವಧಿ ಮೇರೆ ಮೀರಿ, ಬೇಡರ ದೊಡ್ಡಿಯ ಹೆಣ್ಣುಮಕ್ಕಳ ಮೇಲೂ ಆತನ ಕೆಟ್ಟ ದೃಷ್ಟಿ ಬಿದ್ದಾಗ, ಬೇಡರ ಇಡೀ ಜನಾಂಗವೇ ರೊಚ್ಚಿಗೇಳುತ್ತದೆ. ಕೆಂಪು ಮೂತಿ ಸರಕಾರ “ಯಾರೂ ಶಸ್ತ್ರಾಸ್ತ್ರಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಇಟ್ಟುಕೊಂಡವರು ಸರ್ಕಾರಕ್ಕೆ ಒಪ್ಪಿಸಬೇಕು.” ಎಂಬ ಆಜ್ಞೆಯನ್ನು ಹೊರಡಿಸಿದಾಗ ಇಡೀ ಬೇಡರ ಜನಾಂಗವೇ ರೊಚ್ಚಿಗೆದ್ದು ಅಡ್ಡ ಬಂದ ಫಿರಂಗಿಯವನನ್ನೇ ಅವರು ಕೊನೆಗಾಣಿಸುತ್ತಾರೆ. ನಂತರ,ಎಲ್ಲವೂ ಮುಗಿಯಿತೆಂದು ತಮ್ಮ ಕೂಸು, ಕುನ್ನಿಗಳ ಜತೆ ನಿಶ್ಚಿಂತೆಯಿಂದಿರುತ್ತಾರೆ ಹಲಗಲಿ ಬೇಡರು. ರಾತ್ರೋರಾತ್ರಿ ಬೇಡರ ಗುಡಿಸಲುಗಳಿಗೆ ಬೆಂಕಿ ಇಡಿಸಿ ಮೋಸದಿಂದ ಬೇಡರ ಇಡೀ ಜನಾಂಗವನ್ನೇ ಮುಗಿಸಿಬಿಡುವ ಫಿರಂಗಿ ಸರ್ಕಾರ. ಎಲ್ಲೆಲ್ಲೂ ಕರುಣಾಜನಕ ಆಕ್ರಂದನ, ಕರುಳು ಕಿತ್ತು ಬರುವಂತಹ ರೋಧನ! ಕೊನೆಯವರೆಗೂ ದಿಟ್ಟತನದಿಂದ ಹೋರಾಡಿದ ಹಲಗಲಿ ಬೇಡರ ಪಡೆಯ ಛಲ ಮೆಚ್ಚುವಂತಹದು.
ಪ್ರಸಿದ್ಧ ಹಿರಿಯ ಅನುಭವಿ ನಾಟಕಕಾರರಾದ ಶ್ರೀ. ಹೂಲಿ ಶೇಖರ್ ಅವರ ‘ಹಲಗಲಿ ಬೇಡರ ದಂಗೆ’ ನಾಟಕದ ರಚನೆ ಬಹಳ ಅದ್ಭುತ. ಅದರಲ್ಲಿ ಕಾಣ ಬರುವಂತಹ ಪ್ರಾಸಬದ್ಧ ಸಂಭಾಷಣೆ, ಉತ್ತರಕರ್ನಾಟಕ ಭಾಷೆ ಪ್ರೇಕ್ಷಕರ ಮನ ಸೆಳೆಯುತ್ತವೆ. ಅಲ್ಲದೇ ಅದರಲ್ಲಿ ಜಾನಪದ ಶೈಲಿಯಲ್ಲಿ ರಂಗಗೀತೆಗಳನ್ನು ಸೇರಿಸಿಕೊಂಡು ನಾಟಕ ರಚಿಸಿದ್ದು, ಶ್ರೀ. ಹೂಲಿ ಶೇಖರ್ ಅವರ ಈ ವಿಭಿನ್ನ ಶೈಲಿಯೂ ನಾಟಕವನ್ನು ಅಂತ್ಯದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಇದೂ ಒಂದು ಕಾರಣವೆನಿಸುತ್ತದೆ.

ಪೂರ್ಣಚಂದ್ರ ತೇಜಸ್ವಿ ಅವರ ನವೋದಯ ತಂಡದವರಿಂದ ಪ್ರದರ್ಶನಗೊಂಡ ಈ ನಾಟಕದಲ್ಲಿ ಸುಂದರ ಹಿನ್ನೆಲೆ ಸಂಗೀತದೊಂದಿಗೆ, ರಂಗಗೀತೆಗಳನ್ನು ನಾಟಕದಲ್ಲಿನ ದೃಶ್ಯಗಳಿಗೆ ತಕ್ಕಂತೆ ಭಾವಗಳನ್ನು ತುಂಬಿ, ಸುಶ್ರಾವ್ಯವಾಗಿ ಹಾಡಿ, ನಾಟಕದ ಅಂತ್ಯದಲ್ಲಂತೂ ನಮಗರಿವಿಲ್ಲದೆಯೇ ಕಂಬನಿಯಿಂದ ಕೆನ್ನೆಗಳು ತೋಯ್ದದ್ದಂತೂ ನಿಜ.
ಸರಿದು ಹೋದ ಪಾತ್ರಗಳೂ ಅಷ್ಟೇ…ಬೇಡರ ತಂಡದ ನಾಯಕ, ಬೇಡರ ಹೆಣ್ಮಕ್ಕಳು ರಾಮಿ, ಹೊನ್ನಿ, ಹುಲಿಯವ್ವ ದೇವಿ ಮೈಮೇಲೆ ಬಂದ ಹುಡುಗ, ಗೌಡ ಮತ್ತು ಆತನ ಸಹಚರರು, ನಾಟಕದ ಕಥೆಯನ್ನು ಪ್ರೇಕ್ಷಕರಿಗೆ ಹೇಳಬರುವ ಇಬ್ಬರು, ಗೌಡನ ಕುಳ್ಳ ಸಹಾಯಕ, ಫಿರಂಗಿಗಳು, ಅವರ ಭಾಷೆ, ಜೊತೆಗೆ ರಂಗಸಜ್ಜಿಕೆ, ಬೆಳಕು ಎಲ್ಲವೂ ಪ್ರೇಕ್ಷಕರ ಮನಮುಟ್ಟಿದವು.

ಶ್ರೀ.ಪೂರ್ಣಚಂದ್ರ ತೇಜಸ್ವಿ ನಿರ್ದೇಶನದಲ್ಲಿ ಮೂಡಿಬಂದ ಹಲಗಲಿ ಬೇಡರ ದಂಗೆ ನಾಟಕ ಇದು ಅವರ ೬೦ ನೇ ಪ್ರದರ್ಶನವಾಗಿದ್ದು, ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ . ಈ ನಾಟಕ ನೆರೆದ ಪ್ರೇಕ್ಷಕರ ಮನಕ್ಕೆ ತಟ್ಟಿತು. ಇಂತಹ ಉತ್ಕೃಷ್ಟ ಮಟ್ಟದ ನಾಟಕ ನೋಡಿದ ಧನ್ಯತಾ ಭಾವ ನನ್ನಲ್ಲಿ ಇದೆ.
- ಸ್ಮಿತಾ ಬಲ್ಲಾಳ್(ಅಸ್ಮಿತೆ)
