ಮಳೆಬಿದ್ದ ಜಾಗದಲೀಗ ಚಿಗುರುತ್ತಿಲ್ಲ ಹಸಿರಿನ ಇನ್ನಾವುದೇ ಫಲ…ಕವಿಯತ್ರಿ ದೀಪಿಕಾ ಬಾಬು ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಓದಿ…
ಕೇಳಿದಿಯೋ
ಅದ್ಯಾರೋ ಬೆಂಕಿಯನದ್ದಿ
ಕಳುಯಿದ್ದಾರೆ
ಜೀವಮೃತವಾಗಬೇಕಾಗಿದ್ದ
ನಾಲ್ಕೇ-ನಾಲ್ಕು ಮಾತಿಗೆ
ಇದೀಗ ಗುಟುಕಿಸಲಾಗದ ದ್ವಂದ್ವತೆ
ಹಳೆ ಜೀವಕೆ
ಇಲ್ಲ ಇಲ್ಲ
ತಡವಾಗಿರಬೇಕು
ಅಥವಾ
ಹೀಗೆಲ್ಲ ಊಹಿಸಿಕೊಂಡಿರಲು ಬಹುದು
ಮಳೆಬಿದ್ದ ಜಾಗದಲೀಗ
ಚಿಗುರುತ್ತಿಲ್ಲ
ಹಸಿರಿನ ಇನ್ನಾವುದೇ ಫಲ
ನೆತ್ತಿಗೆ ಸೂರಾಗಿದ್ದ
ಜೋಪಡಿಯಲಿ
ಪಾಚಿಯದೇ ವಾಸ್ತವ್ಯ
ಉಟ್ಟ ವಸ್ತ್ರಕೂ
ಕಳ್ಳರ ಕಣ್ಗಾವಲು
ಮೂಲೆ-ಮೂಲೆಯಲೂ
ಜೇಡರ ಬಲೆ
ಇರಬೇಕು ಇದ್ದಿಲ್ಲದಂತೆಯೇ
ಸತ್ವ ಸತ್ತಾಗ
ಜೀವಂತಿಕೆಯ
ಪಾತ್ರವಾಗುವ ಮಾಯೆ
ಇದೆಲ್ಲವೂ
ಮಾಯಗಾರನದೇ ಆಟ
ಅದೋ
ಗೂಳೆ ಹೊರಟಾಗಿದೆ
ಹೂ-ಧೂಳಿನ ರಾಶಿ
ಬಹು ದೂರ-ದೂರು
ಮತ್ತು
ದಟ್ಟ ಕಾರ್ಮುಗಿಲು
ಇಳಿ ಸಂಜೆಗೆ ಚಿತಭಸ್ಮ
ಸೊಡರಾರಿದ ಪಕಳೆ
ನಿಚ್ಛಲ ಕಣ್ಣ ದೀಪ
ಇನ್ನೂ
ದಹಿಸುತಿಹವು
ಒಣ-ಒಣ ಮಾತಗ್ನಿಗಳು
ನಾಳೆಯ ಭವಿಷ್ಯತ್
ಇದೇ ಒಣ-ಪ್ರತಿಷ್ಟೆ
ಯಥಾವತ್!!
- ದೀಪಿಕಾ ಬಾಬು
