ದುಂಡನೆ ರೂಪವು ಹಾಲ್ಕೆನೆ ಬಣ್ಣವು ಮುಟ್ಟಲು ಕೋಮಲ ಪಕಳೆಗಳು…ಸೌಮ್ಯಾ ಭಟ್ ಅವರ ರೆಂಜೆಯ ಹೂವಿನ ಮೇಲೆ ಹುಟ್ಟಿದ ಕವಿತೆ , ತಪ್ಪದೆ ಮುಂದೆ ಓದಿ….
ರೆಂಜೆಯ ಹೂವನು ಕಾಣಲು ಮನದಲಿ
ಹೊರಳಿತು ಬಾಲ್ಯದ ನೆನಪುಗಳು
ಸಖಿಯರ ಕೂಡುತ ಜಗಳವನಾಡುತ
ಸುಮಗಳ ಹೆಕ್ಕಿಹ ಘಳಿಗೆಗಳು//
ಶಾಲೆಯ ಪ್ರಾಂಗಣದೊಳಗಡೆ ಬಿದ್ದಿಹ
ಬಕುಳಕೆ ನಡೆಸುತ ಪೈಪೋಟಿ
ಹೊಟ್ಟೆಯನುರಿಸುತಲಿದ್ದೆವು ಎಲ್ಲರ
ಉದ್ದದ ಮಾಲೆಯ ಜಡೆಗಿಟ್ಟು//
ದುಂಡನೆ ರೂಪವು ಹಾಲ್ಕೆನೆ ಬಣ್ಣವು
ಮುಟ್ಟಲು ಕೋಮಲ ಪಕಳೆಗಳು
ಟೋಪಿಯ ರೀತಿಯೆ ಹಿಂಬದಿ ತೆರೆದಿದೆ
ದಾರವ ತೂರಿಸಿ ಜೋಡಿಸಲು//
ಬೈಗೂ ಬೆಳಗೂ ತಂಬೆಲರೊಂದಿಗೆ
ಕಂಪನು ಹರಡುತ ಇಳಿಯುವರು
ಗಗನದಿ ಅರಳುತ ಚಂದದಿ ಮಿನುಗುವ
ತಾರೆಯ ಒನಪಿನ ಚೆಲುವೆಯರು//
ಹೆಣ್ಣಿನ ಕರದೊಳು ಸೇರಲು ಸುಂದರ
ಹಾರವು ಆಗುವ ಸೌಭಾಗ್ಯ
ಮರದಲಿ ಮೆರೆಯುವ ಸೃಷ್ಟಿಯ ಮಾಟವು
ದೇವನ ಪೂಜೆಗೆಯಿದು ಯೋಗ್ಯ//
- ಸೌಮ್ಯಾ ಭಟ್ ಅಂಗ್ರಾಜೆ
