ನಮ್ಮ ಮನೆಯ ಒಂದು ಬಳ್ಳಿಯಲ್ಲಿ ಒಂದು ಬುಟ್ಟಿ ತುಂಬಾ ಹೆಡಗೆ ಗೆಣೆಸು ಸಿಕ್ಕಿದೆ. ಹೆಡಗೆ ಗೆಣೆಸು ಎಂಬ ಹೆಸರು ಬಂದಿದ್ದಾದರೂ ಹೇಗೆ?. ಅರುಣ್ ಪ್ರಸಾದ್ ಅವರು ಹೆಡಗೆ ಗೆಣಸಿನ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಳೆ ನೀರಿನ ಆಶ್ರಯದಲ್ಲಿ ಗೊಬ್ಬರ ಔಷಧಿ ಇಲ್ಲದೆ ಬರುವ ಫಸಲು. ಹೆಡಗೆ ಅಂದರೆ ಬೆತ್ತದ ಬುಟ್ಟಿ ಒಂದು ಬಳ್ಳಿಯಲ್ಲಿ ಒಂದು ಬುಟ್ಟಿ ತುಂಬುವ ಪ್ರಮಾಣದಲ್ಲಿ ಗೆಣಸು ಸಿಗುವುದರಿಂದ ಈ ಗೆಣಸಿಗೆ ಹೆಡಗೆ ಗೆಣಸು ಎಂಬ ಹೆಸರು ಬಂದಿದೆ.
ಬೇಲಿ ಸಾಲಿನಲ್ಲಿ ಸಣ್ಣ ಜಾಗದಲ್ಲಿ ಮಣ್ಣಿನಲ್ಲಿ ಆಳವಾಗಿ ಬೆಳೆಯುವ ಈ ಬಳ್ಳಿ ಗೆಣಸಿಗೆ ಹೆಡಗೆ ಗೆಣಸು ಎಂದು ಕರೆಯುತ್ತಾರೆ ಯಾವ ಕಾಲದಿಂದ ಈ ಹೆಸರು ಬಂತೋ ಗೊತ್ತಿಲ್ಲ ಆದರೆ ಬೆತ್ತದ ಬುಟ್ಟಿಗೆ ಹೆಡಗೆ ಅನ್ನುತ್ತಾರೆ.

ಈ ಬಳ್ಳಿ ಗೆಣಸಿನ ಸುಗ್ಗಿ ಮಾಡಿದರೆ ಬುಟ್ಟಿ (ಹೆಡಗೆ) ತುಂಬಾ ಸಿಗುವುದು ಸತ್ಯ. ಆದ್ದರಿಂದಲೇ ಇದಕ್ಕೆ ಅನ್ವರ್ಥನಾಮವಾಗಿ ‘ಹೆಡಗೆ ಗೆಣಸು’ ಎಂಬುದು ಸೂಕ್ತವಾಗಿದೆ. ಮಳೆಗಾಲದ ಮಳೆ ನೀರಿನ ಆಶ್ರಯದಲ್ಲಿ ಬೆಳೆಯುವ ಈ ಬಳ್ಳಿ ಗೆಣಸಿಗೆ ಗೊಬ್ಬರ ಔಷಧ ಬೇಕಾಗಿಲ್ಲ. ಡಿಸೆಂಬರ್, ಜನವರಿ ತಿಂಗಳಲ್ಲಿ ಬಳ್ಳಿ ಒಣಗಿದಾಗ ಬುಡದ ಮಣ್ಣು ಗೆಣಸಿನ ತಳದ ತನಕ ಸುತ್ತಲೂ ಬಿಡಿಸುತ್ತಾರೆ. ನಂತರ ಗೆಣಸಿನ ಬುಡದ ಸಣ್ಣ ತುಂಡು ಅಲ್ಲೇ ಬಿಟ್ಟು ಸ್ವಲ್ಪ ಮಣ್ಣು ಮುಚ್ಚಿ ಮೇಲೆ ಒಣ ಎಲೆ ಇತ್ಯಾದಿ ತೆಗೆದ ಮಣ್ಣಿನ ಜೊತೆ ಸೇರಿಸಿ ಈ ಗೆಣಸಿನ ಕುಣಿ ತಪ್ಪದೇ ಮುಚ್ಚುವ ಶಾಸ್ತ್ರ ಸಂಪ್ರದಾಯ ಇದೆ. ಕಾರಣ ಮುಂದಿನ ವರ್ಷದ ಪಸಲು ಸಿಗಲಿ ಎಂಬುದು, ಮುಂಗಾರು ಮಳೆ ಬಿದ್ದಾಗ ಕುಣಿಯಲ್ಲಿ ಬಿಟ್ಟಿರುವ ಗೆಣಸಿನ ತುಂಡು ಮೊಳಕೆ ಬಂದು ಚಿಗುರಿ ಬಳ್ಳಿಯಾಗಿ ಬೆಳೆದು ಗೆಣಸಾಗುವ ಪರಿಸರದ ಚಕ್ರದ ಚಲನೆ ಇದು.

ಈ ಹೆಡಗೆ ಗೆಣಸಿನಿಂದ ಪಲ್ಯ, ಸಾಂಬಾರು ಇತ್ಯಾದಿ ತಯಾರಿಸುತ್ತಾರೆ. ಇದರಲ್ಲಿ ಸ್ಟಾರ್ಚ್ ಜಾಸ್ತಿ. ಆದ್ದರಿಂದ ಇದನ್ನು ಕುದಿಯುವ ನೀರಲ್ಲಿ ಹುಳಿ, ಉಪ್ಪು ಹಾಕಿ ಬೇಯಿಸಿ ನಂತರ ಆ ನೀರನ್ನು ತೆಗೆದು ಅಡುಗೆ ಮಾಡುವ ಪದ್ದತಿ ಇದೆ.

ನಮ್ಮ ಮನೆ ಹಿತ್ತಲಲ್ಲಿ ಒಂದು ಬಳ್ಳಿಯಲ್ಲಿ ಒಂದು ಪ್ಲಾಸ್ಟಿಕ್ ಬುಟ್ಟಿ ತುಂಬಾ ಈ ಗೆಣಸು ಸಿಕ್ಕಿದೆ. ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಂಚಿದರೂ ಖಾಲಿ ಆಗದಷ್ಟು ಇನ್ನೂ ಮೂರು ಬಳ್ಳಿ ಇದೆ.
- ಅರುಣ್ ಪ್ರಸಾದ್
