ಸಾವಿನಂಥ ಸಂಕಟ ಕಡಿಮೆಯಾದೀತು…ಯಾವ ಕಾರಣ ಹೇಳಿದರೆ ಸರಿ ಈಗ ಹೋಗಿ ಬಾ ಎನ್ನಲಾದೀತು…ಕವಿಯತ್ರಿ ಬಿ ವಿ ಭಾರತಿ ಕವನದಲ್ಲಿ ಮೂಡಿದ ಅದ್ಬುತ ಸಾಲುಗಳಿವು…ಮುಂದೆ ಓದಿ …
ಹೊರಟವರು ಯಾವ ಕಾರಣ ಹೇಳಿದರೆ
ಎದೆಯ ಸಂಕಟ ಕಡಿಮೆಯಾದೀತು
ಯಾವ ಕಾರಣ ಹೇಳಿದರೆ
ಸರಿ ಈಗ ಹೋಗಿ ಬಾ ಎನ್ನಲಾದೀತು
ಯಾವ ಕಾರಣ ಹೇಳಿದರೆ
ನಗುಮೊಗದಲ್ಲಿ ಕಳಿಸಿಕೊಡಲಾದೀತು…
ಪ್ರೀತಿ ಯಾಕೆ ಹುಟ್ಟಿತೆನ್ನುವುದಕ್ಕೆ
ಕಾರಣಗಳನ್ನು ಕೇಳಿ ಎದೆ ಪುಲಕಗೊಳ್ಳಬಹುದು
ಪ್ರೀತಿ ಮುಗಿದ ಕಾರಣಗಳು ಎಂದಿಗೂ
ಎದೆಯಲ್ಲಿನ ಚುಚ್ಚು ಮುಳ್ಳುಗಳು…
ಪ್ರತಿ ಉಸಿರಿಗೊಮ್ಮೆ ಚುಚ್ಚುತ್ತದೆ
ಉಸಿರಿರುವ ತನಕವೂ
ಕೊನೆಗೆ ಹಿಡಿ ಬೂದಿಯಾಗುವ ತನಕವೂ
ನೆನಪುಗಳು!
ಬದುಕಿನುದ್ದಕ್ಕೂ ಉಳಿಯುತ್ತವೆ
ಒಂದಿಷ್ಟು ನಗು
ಕೆಲ ಪಶ್ಚಾತ್ತಾಪಗಳು
ಹಲವು ಮುನಿಸುಗಳು
ನಂತರದ ರಾಜಿ… ಮುದ್ದು…
ಮತ್ತಿಷ್ಟು ಉತ್ಕಟವಾದ ಪ್ರೀತಿ…
ಕೊನೆಗೊಂದು ಬೇಗುದಿಯ ನಿಡುಸುಯ್ಯು
ಯಾವಾಗ ಬತ್ತಲು ಶುರುವಾಗಿದ್ದು
ಪ್ರೀತಿಯ ಒರತೆ?
ಆ ಬಿರು ಬೇಸಿಗೆಯ ಉರಿ ಬಿಸಿಲಿನಲ್ಲಿ ?
ಆ ಮಳೆಗಾಲದ ಉಪೇಕ್ಷೆಯಲ್ಲಿ?
ಆ ಚಳಿಗಾಲದ ಕೊರೆತದಲ್ಲಿ?
ಮಗುಚಿ ಹಾಕುತ್ತಲೇ ಇರುತ್ತದೆ ಮನಸ್ಸು
ಎರಡೂ ಬದಿ ಬೇಯುತ್ತದೆ
ಕಣ್ಣಿಲ್ಲದವ ಬಣ್ಣದ ಜಾಡು ಹಿಡಿದಂತೆ
ಅವರವರಿಗೆ ಅನ್ನಿಸಿದ್ದೇ ಸತ್ಯ…
ಬರಿದೆ ಇರುವು ಪ್ರೀತಿಯಿಂದ
ಒಂದು ಬದುಕಾಗಿ ಬದಲಾಗಿತ್ತು
ಇತ್ತು
ಹೋಯಿತು
ಮುಗಿಯಿತು
ಇಷ್ಟೇ… ಇಷ್ಟು ಮಾತ್ರವೇ ಉಳಿಯುವುದು
ಹೊರಟವರು ಯಾಕೆ ಕಾರಣ ಹೇಳಬೇಕು
ಯಾವ ಕಾರಣ ಹೇಳಿದರೆ
ಸಾವಿನಂಥ ಸಂಕಟ ಕಡಿಮೆಯಾದೀತು…
- ಬಿ ವಿ ಭಾರತಿ (ಕವಯಿತ್ರಿ- ಸಾಹಿತಿ, ಬೆಂಗಳೂರು)
