‘ಹೆಣ್ಣು ಬೇಕಾಗಿದೆ ಹೆಣ್ಣು’ ಕೃತಿ ಪರಿಚಯ

ಲೇಖಕಿ ಸ್ವರ್ಣಲತಾ ಎ.ಎಲ್ ಅವರು ‘ಹೆಣ್ಣು ಬೇಕಾಗಿದೆ ಹೆಣ್ಣು’ ಕೃತಿಯ ಕುರಿತು ಖ್ಯಾತ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಹೆಣ್ಣು ಬೇಕಾಗಿದೆ ಹೆಣ್ಣು
ಲೇಖಕರು : ಸ್ವರ್ಣಲತಾ ಎ.ಎಲ್
ಪ್ರಕಾಶನ : ಎ ಬಿ ಸಿ ಪಬ್ಲಿಷನ್

ಈಚೆಗೆ ತಾನೇ ಪ್ರಕಟವಾದ ಸ್ವರ್ಣಲತಾ ಎ.ಎಲ್ ಅವರ ಕೃತಿಗೆ ಅವರ ಅಪೇಕ್ಷೆಯಂತೆ ನಾನು ಬರೆದ ಮುನ್ನುಡಿ ನಿಮ್ಮ ಮುಂದೆ ಇದೆ. ನಾನು ಮುಂಬೈನಲ್ಲಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ‘ you are out going they are incoming. Therefore they are welcome ಎಂದು ಹೇಳುತ್ತಿದ್ದ ಮಾತುಗಳು ನೆನಪಾದವು.

ಸುಶಿಕ್ಷಿತ ಹೆಣ್ಣಿನ ಕಣ್ಣೋಟದಲ್ಲಿ ಕಂಡ ,ಗ್ರಾಮೀಣ ಸಮಾಜದಲ್ಲಿನ ಪಲ್ಲಟಗಳ ಅನಾವರಣ, ಈ ಕೃತಿಯ ಕೇಂದ್ರ. ಇದರಲ್ಲಿ ಶೀರ್ಷಿಕೆಯ ಹೆಣ್ಣನ್ನು ಕುರಿತ ಸಮಾಜದ ದೃಷ್ಟಿಯಲ್ಲಿನ ವೈಪರೀತ್ಯಗಳು ಮತ್ತು ಅದರ ಪರಿಣಾಮಗಳ ಅನ್ವೇಷಣೆ ಇದೆ. ಹೆಣ್ಣಿನ ಭ್ರೂಣ ಹತ್ಯೆಗಳಿಂದಾಗಿ ಗಂಡುಗಳಿಗೆ ಹೆಣ್ಣು ಸಿಕ್ಕದೆ ಹೋಗಿರುವುದು, ಇದರಿಂದ ಮೊದಲು ಅಸ್ತಿತ್ವದಲ್ಲಿ ಇದ್ದು, ಈಗ ಪುನಃ ಜಾರಿಗೆ ಬರುತ್ತಿರುವ ತೆರ ಕೊಟ್ಟು ಮದುವೆ ಆಗುವ ದುಸ್ಥಿತಿ ಒದಗಿರುವುದನ್ನು ವಿಷಾದದಿಂದ ದಾಖಲಿಸಿದ್ದಾರೆ.ಮತ್ತು ಇದಕ್ಕೆ ಕಾರಣ ನಮ್ಮ ಸಮಾಜದಲ್ಲಿ ಇರುವ ಪುರುಷ ಪ್ರಧಾನ ವ್ಯವಸ್ಥೆ ಎಂದು ಸರಿಯಾಗಿಯೇ ಗುರುತಿಸಿದ್ದಾರೆ. ಅದು ಕೇವಲ ಪುರುಷರಿಗೆ ಮಾತ್ರ ಮೀಸಲಾಗ,ದೆ, ಹೆಣ್ಣು ಮಕ್ಕಳು ಕೂಡ ಅದಕ್ಕೆ ಬಲಿಪಶುಗಳಾಗಿರುವುದಕ್ಕೆ, ನಿದರ್ಶನವಾಗಿ ಸ್ವತಃ ಲೇಖಕಿಯ ತಾಯಿಯ ಉದಾಹರಣೆ ಕೊಟ್ಟು,ಆರು ಜನ ಹೆಣ್ಣು ಮಕ್ಕಳು ಇದ್ದರೂ,ಅವರು ಸಾಯಲು ಬಯಸುವುದು ತನ್ನ ಒಬ್ಬನೇ ಗಂಡು ಮಗನ ಮನೆಯಲ್ಲಿ ಎಂದು ಬರೆದಿರುವುದು, ಅವರ ವಸ್ತು ನಿಷ್ಠತೆಗೆ ಸಾಕ್ಷಿ. ಇದರೊಂದಿಗೆ ಹೆಣ್ಣು ಮಕ್ಕಳಿಗೆ ಇರುವ ತಾಳ್ಮೆ,ಕಷ್ಟ ಸಹಿಷ್ಣುತೆಗಳು ಗಂಡಸರಿಗೆ ಇಲ್ಲ ಎಂದು ಸರಿಯಾಗಿಯೇ ಗುರುತಿಸಿದ್ದಾರೆ.ಅದಕ್ಕೆ ಅವರು ಕೊಟ್ಟ ಉದಾಹರಣೆಗಳು ಕುಡುಕ ಗಂಡನ ಕಟ್ಟಿಕೊಂಡು ಸಂಸಾರ ನೀಸುವ, ಸುಶಿಕ್ಷಿತ ಹೆಣ್ಣು ಮಕ್ಕಳು ಗಂಡ ಇಲ್ಲವಾದರೂ, ಏಕಾಂಗಿಯಾಗಿ ಮಕ್ಕಳನ್ನು ಸುಶಿಕ್ಷಿತರಾಗಿ ಬೆಳೆಸುವುದರಲ್ಲಿ ಸಫಲರಾದ ಹಲವರು. ಆದರೆ ಇದೆ ತಾಳ್ಮೆ ಹೆಂಡತಿಯರನ್ನು ಕಳೆದುಕೊಂಡ ಗಂಡಸರಲ್ಲಿ ಕಾಣುವುದಿಲ್ಲ ಎಂದಿದ್ದಾರೆ.ಇದಕ್ಕೆ ಅಪವಾದಗಳು ಇರಬಹುದು. ಇದಲ್ಲದೆ ಹೆಣ್ಣಿನ ಅಂತರಂಗದ ಪಿಸುಮಾತುಗಳನ್ನು ಬಹಿರಂಗಗೊಳಿಸಿದರೆ ಉಂಟಾಗಬಹುದಾದ ಅಲ್ಲೋಲ ಕಲ್ಲೋಲಗಳ ಕಡೆಗೆ ಗಮನ ಸೆಳೆದಿರುವುದು ವಿಶಿಷ್ಟವಾಗಿದೆ.

ಸುಶಿಕ್ಷಿತರಾದ ಲೇಖಕಿ ತಮ್ಮ ಪತಿಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ನೆಲೆಸುವ ನಿರ್ಧಾರ ಕೈಗೊಂಡಿದ್ದರ ಪರಿಣಾಮವಾಗಿ ಅವರು ರೈತ ಮಹಿಳೆಯಾಗಿ ರೂಪುಗೊಂಡು ಅಲ್ಲಿ ಎದುರಿಸಬೇಕಾಗಿ ಬಂದ ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ.ಅವು: ತೆಂಗಿನ ತೋಟ ಮಾಡಿದರೂ ,ಅದು ಫಸಲು ಬರುವವರೆಗೆ ಆನುಷಂಗಿಕವಾಗಿ ಹಾಲಿನ ಡೈರಿ ಮಾಡಿದಾಗ , ಎದುರಿಸಬೇಕಾಗಿ ಬಂದ ಕಷ್ಟಗಳು ಹಲವು. ಅದರಲ್ಲಿ ಇವರ ಕಾಲೆಳೆಯುವವರು, ಹೊಟ್ಟೆ ಕಿಚ್ಚಿನವರಿಂದ ಪಡಬೇಕಾಗಿ ಬಂದ ಪಾಡುಗಳು ಸೇರಿವೆ. ಇದರಂತೆ ಇವರು ತೆಂಗಿನ ತೋಟ ಮಾಡಿ ಅದು ಫಸಲು ಬಂದಾಗ ಅದನ್ನು ಇಳಿಸಲು, ಕಾಯಿ ಸುಲಿಯಲು, ಕೂಲಿಕಾರರ ಸಮಸ್ಯೆ. ಅದರಲ್ಲಿ ಹೊರಗಿನಿಂದ ಬಂದವರ ನಿಷ್ಠೆ ಮತ್ತು ಸ್ಥಳೀಯರ ಸೋಮಾರಿತನ.ಕೊಬ್ಬರಿ ಮಾಡಿ ಅದನ್ನು ಮಾರಲು ಹೋದರೆ ಸರ್ಕಾರದ ಅವ್ಯವಸ್ಥೆ.ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಸುಲಿಗೆ, ಇದರಿಂದ ಕಷ್ಟಪಟ್ಟ ಬೆಳೆದ ರೈತರಿಗೆ ಆಗುವ ಅನ್ಯಾಯ. ಹಾಲಿನ ಉತ್ಪಾದಕರಿಗೆ ಸರ್ಕಾರದ ಸಬ್ಸಿಡಿಯಿಂದ ಆಗುವ ಲಾಭ, ಇವುಗಳ ನಡುವೆ ಇರುವ ವೈಪರೀತ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅದರಂತೆ ಕಂದಾಯ ಇಲಾಖೆಯ ಅವ್ಯವಸ್ಥೆ ತೆಂಗಿನ ಬೆಳೆಗೆ ಬದಲು ರಾಗಿ ಎಂದು ತಪ್ಪಾಗಿ ದಾಖಲಿಸುವುದು ಇತ್ಯಾದಿ. ಇದರಿಂದಾಗಿ ರೈತರು ಎದುರಿಸುವ ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.

ಕೃಷಿಯಲ್ಲಿನ ಯಂತ್ರಗಳ ಬಳಕೆ ಅತಿಯಾಗಿ, ಇಂದು ನೇಗಿಲು, ಕೂರಿ, ಕುಂಟೆ, ರೋಣಗಲ್ಲುಗಳು ಮೂಲೆಗೆ ಬಿದ್ದು, ಕೃಷಿ ಸಂಸ್ಕೃತಿ,ಕಾಯಕ ಗೌರವ ನಾಶವಾಗುತ್ತಿರುವ ಪಲ್ಲಟಗಳನ್ನು ದಾಖಲಿಸಿದ್ದಾರೆ.

ಮನುಷ್ಯ ಸ್ವಭಾವದ ಗ್ರಹಿಕೆಗೆ ನಿದರ್ಶನ, ಅವರ ಕರುಬು ಕುರಿತು ಗಾಂಧಾರಿಯ ಉಲ್ಲೇಖ, ಮಕ್ಕಳ ಮೇಲೆ ಕುರುಡು ಅಭಿಮಾನ, ಅವರನ್ನು ದಾರಿ ತಪ್ಪಿಸುವುದಕ್ಕೆ ಅನೇಕ ಬಾರಿ ತಂದೆ ತಾಯಿಗಳೇ ಕಾರಣಕರ್ತರು ಎಂದು ಸರಿಯಾಗಿಯೇ ಗುರುತಿಸಿದ್ದಾರೆ. ಮತ್ತು ತಂದೆ ತಾಯಿಗಳು ದುಡ್ಡಿಗೆ ಕೊಟ್ಟ ಪ್ರಾಮುಖ್ಯತೆ, ಮನುಷ್ಯ ಸಂಬಂಧಗಳಿಗೆ ಇಲ್ಲದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದ ದುರಂತದ ಕಡೆಗೆ ಕೂಡ ಗಮನ ಸೆಳೆದಿದ್ದಾರೆ.

ಚುನಾವಣೆಗಳಲ್ಲಿ ಮತದಾರರನ್ನು ದಾಳಗಳಾಗಿ ಬಳಸುವವರು, ಅದಕ್ಕಾಗಿ ಹಣದ ಆಮಿಷ ಒಡ್ಡುವವರ ಮತ್ತು ಅದಕ್ಕೆ ಬಲಿಯಾದ ಇಂದಿನ ಗ್ರಾಮೀಣರ ಕುರಿತು ಬರೆದಿರುವುದು ಲೇಖಕಿಗೆ ಇರುವ ಸಾರ್ವಜನಿಕ ಕಾಳಜಿಗೆ ನಿದರ್ಶನವಾಗಿದೆ.

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಡಿಗ್ರಿಗೆ ಇರುವ ಪ್ರಾಮುಖ್ಯತೆ, ಅವರ ಕುಶಲ ಕಲೆಗೆ ಇಲ್ಲ ಎಂದು ಇದರಿಂದಾಗಿ ನಮ್ಮ ಶಿಕ್ಷಣ ಮತ್ತು ಯುವ ಜನಾಂಗ ನಿರುದ್ಯೋಗಿಗಳಾಗಿದ್ದಾರೆ ಅವುಗಳ ನಡುವೆ ಇರುವ ಸಂಬಂಧದ ಮೇಲೆ ಬೆಳಕು ಚೆಲ್ಲಿದ್ದಾರೆ.

ಕ್ವಚಿತ್ತಾಗಿ ಬರುವ ಸಾಹಿತ್ಯದ, ಸಂಗೀತದ ಉಲ್ಲೇಖಗಳು, ಇವರ ಬಹುಮುಖಿ ಆಸಕ್ತಿಗೆ ಕನ್ನಡಿ ಹಿಡಿಯುತ್ತವೆ.ಎಸ್.ಪಿ ಬಿ. ಹಾಡುಗಳ ಕುರಿತ ಬರಹ, ನನ್ನ ಮೇಷ್ಟ್ರು ಜಿ.ಎಸ್.ಎಸ್. ಅವರ’ ಪ್ರೀತಿಯಿಲ್ಲದ ಮೇಲೆ’ ಅವರ ಮಹತ್ವದ ಹಾಡಿನ ಉಲ್ಲೇಖಗಳು ಇದಕ್ಕೆ ನಿದರ್ಶನ. ಅದನ್ನು ಸಮಕಾಲೀನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವುದಕ್ಕೆ ಬಳಸಿರುವುದು ಇವರ ಸ್ವೋಪಜ್ಞತೆಗೆ ಸಾಕ್ಷಿ.

ಶ್ರೀ ಕೃಷ್ಣ ಆಲನಹಳ್ಳಿ ಅವರ ಭುಜಂಗಯ್ಯನ ದಶಾವತಾರದಲ್ಲಿ ‘ಪೇಟೆಯಲ್ಲಿನ ಗಂಡುಗಳಾದರೆ ಚೆನ್ನ ‘ಎಂದು ಒಂದು ಮಾತು ಬರುತ್ತದೆ. ಇಲ್ಲಿ ಅದಕ್ಕೆ ವಿರುದ್ಧವಾಗಿ, ಹಳ್ಳಿಯಲ್ಲಿ ಹುಟ್ಟಿ, ನಗರದಲ್ಲಿ ಬೆಳೆದು ಸುಶಿಕ್ಷಿತರಾದ ಲೇಖಕಿ ,ಮರಳಿ ಹಳ್ಳಿಗೆ ಹೋಗಿ ನೆಲೆ ನಿಂತು, ಅಲ್ಲಿನ ಸವಾಲುಗಳನ್ನು ಸಮರ್ಥವಾಗಿ ಗುರುತಿಸಿ ಅನಾವರಣ ಮಾಡಿರುವುದು, ಈ ಕೃತಿಯ ಹೆಗ್ಗಳಿಕೆಯಾಗಿದೆ.

ಇದಕ್ಕೆ ನಾನು ಮುನ್ನುಡಿ ಬರೆಯಬೇಕು, ಎಂದು ಕೇಳುವ ಮೂಲಕ, ಆ ನೆಪದಲ್ಲಿ ಇದನ್ನು ಮೊದಲಿಗೆ ಓದುವ ಅವಕಾಶ ಕಲ್ಪಿಸಿ, ನನ್ನ ಅರಿವನ್ನು ವಿಸ್ತರಿಸಿದ್ದಕ್ಕೆ ಲೇಖಕಿಗೆ ವಂದನೆ ಅಭಿನಂದನೆ. ಇದನ್ನು ಓದಿ ನಮ್ಮ ನಾಗರಿಕ ಜನರು, ನಮ್ಮ ಭಾರತದ ಬೆನ್ನೆಲುಬಾದ ಹಳ್ಳಿಗಳ ಕುರಿತು, ತಮ್ಮ ಅಜ್ಞಾನ ಮತ್ತು ಅವಜ್ಞೆಗಳನ್ನು ಕಳೆದುಕೊಂಡರೆ ಮತ್ತು ಪ್ರೇರಣೆ ಪಡೆಯಲು ಕಾರಣವಾದರೆ ಈ ಲೇಖಕಿಯ ಶ್ರಮಕ್ಕೆ ಸಾರ್ಥಕತೆ ಉಂಟಾಗುತ್ತದೆ. ನನ್ನ ಸಹಪಾಠಿ, ಅನುಗಾಲದ ಗೆಳೆಯರಾದ ಚಂದ್ರುವಿಗೆ ತಕ್ಕ ಸಹೋದರಿಯಾಗಿ, ಇವರ ಮೊದಲ ಮತ್ತು ಈ ಕೃತಿಯ ಮೂಲಕ, ಅವರ ಋಣ ಸಂದಾಯ ಮಾಡಿರುವುದಲ್ಲದೆ, ವಿಸ್ತರಿಸಿದ ಶ್ರೇಯಸ್ಸು ಈ ಲೇಖಕಿಗೆ ಸಲ್ಲಬೇಕು. ಅಭಿನಂದನೆಗಳು.

ಸೂಚನೆಗಳು:

  • ನಿಮ್ಮ ಮೊದಲ ಕೃತಿಯಲ್ಲಿ ಬಂದ ಕೆಲವು ಇಲ್ಲಿ ಪುನರುಕ್ತಿಗೊಂಡಿವೆ ಗಮನಿಸಿ.
  • ಕೆಲವು ಕಡೆ ಅನಾವಶ್ಯಕವಾಗಿ ಇಂಗ್ಲಿಷ್ ಶಬ್ದಗಳ ಬಳಕಯಾಗಿದೆ. ಸಾಧ್ಯವಾದರೆ ಅವುಗಳ ಕನ್ನಡ ರೂಪಗಳನ್ನು ಕೊಟ್ಟರೆ ಒಳ್ಳೆಯದು.
  • ಕೆಲವು ಲಿಪಿ ಸ್ಖಾಲಿತ್ಯಗಳು ಇನ್ನೂ ಉಳಿದುಕೊಂಡಿವೆ ಗಮನಿಸಿ.

  • ರಘುನಾಥ್ ಕೃಷ್ಣಮಾಚಾರ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW