ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು…ಗಾದೆ ಮಾತು ಕೇಳಿದ್ದೇವೆ. ಆದರೆ ಮನೆ ಕಟ್ಟಿ, ಮದುವೆ ಮಾಡಿದ ಮೇಲೆ ಇಲ್ಲಿಗೆ ಜವಾಬ್ದಾರಿಗಳು ಮುಗಿಯಲ್ಲ. ಮನೆ ಕಟ್ಟಿದ ಮೇಲೆ ಅದಕ್ಕೆ ಅಂದದ ಚಂದದ ಹೆಸರನ್ನು ಇಡಲಿಲ್ಲವೆಂದರೆ ಮನಸ್ಸಿಗೆ ಕಸಿಬಿಸಿ ಅಲ್ಲವೇ?…ಲೇಖಕಿ ಸುಧಾ ಸರನೋಬತ್ ಅವರ ಹಾಸ್ಯ ಬರಹವನ್ನು ತಪ್ಪದೆ ಮುಂದೆ ಓದಿ…
ನಾವು ಅಂದುಕೊಂಡದ್ದು ಸುಲಭದ ಕೆಲಸವಲ್ಲ ಹೆಸರು ಇಡುವುದು. ಈಗ ನಮ್ಮ ಮನೆ ಕಟ್ಟಿಸಿದಾಗ, ಮನೆ ಕಟ್ಟಿಸುವಾಗ ಎಷ್ಟಯ ತಲೆ ಬಿಸಿ ಆಗಿತ್ತೋ, ಅದರ ಹತ್ತರಷ್ಟು ತಲೆ ಬಿಸಿ ಆ ಕಟ್ಟಿದ ಮನೆಗೆ ಹೆಸರು ಇಡುವಾಗ ಆಗಿತ್ತು. ಸಿಮೆಂಟು, ಜಲ್ಲಿ, ಮರಳು, ಕಂಬಿ, ಕಂಟ್ರಾಕ್ಟರ್ ಜೊತೆ ವಾದ, ವಿವಾದ, ಇದೆರಲ್ಲದರ ಮಧ್ಯೆ ಈ ಮನೆಗೆ ಏನು ನಾಮಕರಣ ಮಾಡುವುದು, ಎಂಬ ಬಿಸಿ ಬಿಸಿ ಚರ್ಚೆ ಮನೆಯಲ್ಲಿ ದಿನಾ ನಡೆಯುತ್ತಿತ್ತು. ನಾವು ಏಳು ಜನ ಮಕ್ಕಳು, ನಮ್ಮ ಅಮ್ಮನಿಗೆ ಒಬ್ಬೊಬ್ಬರು ಒಂದೊಂದು ಹೆಸರು ದಿನಾಲು ಸೂಚಿಸುತ್ತಿದ್ದೆವು. ಹಿರಿಯಣ್ಣ ಹೇಳಿದ ‘ನವಜೀವನ’ ಅಂತ ಎಲ್ಲರೂ ಗೊಳ್ಳೆಂದು ನಕ್ಕೆವು, ಕಿರಿಯ ತಮ್ಮ ಸೂಚಿಸಿದನು ‘ಸೂರ್ಯಕಿರಣ’ ಅಂತ ಇಡೋಣ ಎಂದು, ಮತ್ತೆ ಎಲ್ಲರೂ ಸಾಮೂಹಿಕವಾಗಿ ನಕ್ಕೆವು. ಅವನಿಗೆ ಅವಮಾನ ಆಗಿ ಕಾಲು ಅಪ್ಪಳಿಸುತ್ತಾ ಹೊರಗೆ ಹೋದನು. ನನ್ನ ತಂದೆ “ಗೋವಿಂದ” ಅಂತ ಇಡೋಣ ದೇವರ ಹೆಸರೂ ಆಗುತ್ತೆ ಹೇಳಲೂ ಸುಲಭ ಎಂದಾಕ್ಷಣ ನಾವೆಲ್ಲರೂ ಬಾಲವಿಲ್ಲದ ಮಂಗನಂತಿದ್ದವರು
“ಗೋವಿಂದಾ ಗೋವಿಂದಾ” ಎಂದು ತಿರುಪತಿ ಬಾಲಾಜಿಗೆ ಕೂಗುವಂತೆ ಕೂಗಿ, ನಮಗೆ ಈ ಹೆಸರು ಸಮ್ಮತವಿಲ್ಲ ಎಂಬುದನ್ನು ಅಪರೋಕ್ಷವಾಗಿ ಸೂಚಿಸಿದೆವು. ನಮ್ಮ ತಾಯಿ, ನಮ್ಮನ್ನೆಲ್ಲ ಉದ್ದೇಶಿಸಿ ಹಾಗೆಲ್ಲ ದೇವರ ಹೆಸರಿಗೆ ಅವಮಾನ ಮಾಡಬಾರದು ಎಂದು ನಯವಾಗಿ ಗದರಿಸಿದಳು. ಆಗ ನಾವು ನಮ್ಮ ಮಂಗಾಟವನ್ನು ಮುಂದುವರಿಸಿ, “ನಾವೆಲ್ಲಿ ಅವಮಾನ ಮಾಡಿದ್ದೇವೆ..? ‘ಗೋವಿಂದಾ, ಗೋವಿಂದಾ’ ಎಂಬ ನಾಮಸ್ಮರಣೆ ಮಾಡಿದ್ದೀವಿ.
ಇಷ್ಟೆಲ್ಲಾ ಒಳಗೆ ನಡೀತಿರಬೇಕಾದರೆ, ಹೊರಗೆ ಬಿಟ್ಟ ನಮ್ಮ ಚಪ್ಪಲಿ, ಶೂಗಳೆಲ್ಲ ಗೋವಿಂದ! ಗ್ರಿಲ್ ಇಲ್ಲದ ನಮ್ಮ ಮನೆಯ ಹೊರಗೆ ಬಿಟ್ಟಿದ್ದ ಕಾಂಪೌಂಡಿನಿಂದ ಮಿನಿಕಳ್ಳ ಎಲ್ಲವನ್ನೂ ಕದ್ದು ಒಯ್ದಿದ್ದನು. ಮತ್ತೆ ಎಲ್ಲರೂ ಹೊಸ ಚಪ್ಪಲಿ ಖರೀದಿಸಿದ್ದಾಯಿತು ಆದರೂ, ಹೆಸರಿನ ಪುರಾಣ ಮುಗಿಯಲಿಲ್ಲ.
ಸಂಜೆ ಮತ್ತೆ ಎಲ್ಲರೂ ಸಭೆ ಸೇರಿ, ಮನೆಗೆ ಹೆಸರಿಡುವ ಬಗ್ಗೆ ಚರ್ಚೆ ಆರಂಭಿಸಿದೆವು. ಮಂತ್ರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದಂತಾಯಿತು! ಚರ್ಚೆ ವಿಫಲ, ಮನೆ ಕಟ್ಟುವುದು ಪೂರ್ತಿ ಮುಗಿದರೂ, ನಮಗೆ ಅದಕ್ಕೆ ಇಡುವ ಸಮರ್ಪಕ ಹೆಸರು ಹೊಳೆಯಲೇ ಇಲ್ಲ! ಒಬ್ಬರಿಗೆ ಹೊಳೆದದ್ದು ಇನ್ನೊಬ್ಬರಿಗೆ ಒಪ್ಪಿಗೆಯಿಲ್ಲ, ಬೀಛಿhee ಯವರ ಜೋಕು ನೆನಪಾಯಿತು, ಅವರು ಕೆಲವು ಹೆಸರು ‘ರಮಾವಿಲ್ಲಾ’ ‘ಸುಧಾವಿಲ್ಲಾ’ ಎಂಬ ಹೆಸರಿನ ಬದಲಾಗಿ ‘ಸುಖವಿಲ್ಲಾ’ ಸಮಾಧಾನವಿಲ್ಲಾ’ ಎಂಬ ಹೆಸರು ತಿಂಮನಿಗೆ ಹೊಳೆದಿದ್ದು.
ಅಷ್ಟರಲ್ಲಿ ಮೇಸ್ತ್ರಿ ನಮ್ಮನ್ನು ಹೊರಗೆ ಕರೆದು, “ಸರ್ ಮನೆಗೆ ಹೆಸರು ಬೇಕಾ…….? ನನ್ನ ಫ್ರೆಂಡು ಕಾಲಿಮುತ್ತು ಸಾವಿರ ಹೆಸರಿನ ‘ಲಿಸ್ಟ್’ ಇಟ್ಟುಕೊಂಡಿದ್ದಾನೆ, ಬೇಕಾದ್ರೆ ತಂದುಕೊಡ್ತೀನಿ ಅದರಲ್ಲಿ ನಿಮಗೆ ಒಳ್ಳೆಯ ಹೆಸರು ಸಿಕ್ಕೇ ಸಿಗುತ್ತದೆ” ಎಂದು ಸರ್ರಂತ ಗಾಡೀ ಮೇಲೆ ಹೋಗಿ ಲಿಸ್ಟ್ ಸಮೇತ ಕಲ್ಲೀಮುತ್ತುವನ್ನೂ ಕರೆತಂದಿದ್ದ. ಕಲ್ಲಿ ಮುತ್ತು ಲಿಸ್ಟ್ ಹಿಡಿದು ಒಳಗೆ ಬಂದು “ಎನ್ನ ವೇಣು ಸರ್ ವೀಟಿಕಿ ನಲ್ಲ ಪೇರಾ…..? ನಾವು, ಎಲ್ಲರೂ ಮುಖ ಮುಖ ನೋಡಿಕೊಂಡೆವು, ಅರ್ಥವಾಗಲಿಲ್ಲ ನೀನು ಹೇಳಿದ್ದು ಎಂಬಂತೆ. “ಪಾರಂಗೋ ಸಾರ್ ಪೇರು” ಲಿಸ್ಟ್ ನಮ್ಮ ಕೈಗಿಟ್ಟ ಒಂದೊಂದಾಗಿ ಓದಿದೆವು ತಲೆತಿರುಗಿದಂತಾಯಿತು. ‘ಮುತ್ತುಲಕ್ಷ್ಮಿ’ ‘ಅನಂತಲಕ್ಷ್ಮಿ’ ‘ಪೆರುಮಾಳ’ ‘ತಂಬಿಯಾರ್’ ‘ನಂಬಿಯಾರ್’ ‘ನಂಬೂದ್ರಿ’ ‘ಚಿನ್ನತಂಬಿ’ ‘ಗಲಾಟಾ ಸಂಸಾರಂಗಳ್’ ‘ಅಮ್ಮಾ ಕ್ಯಾಂಟೀನ್’ ‘ಕಾವೇರೀ ಗಲಾಟಾ’ ‘ಸಾಂಬಾ’ ಮುಂದೆ ಓದಲಾಗದೆ ಕಣ್ಣು ಕತ್ತಲಿಟ್ಟಿತು. ಲಿಸ್ಟ್ ವಾಪಸ್ ಕೊಟ್ಟು ಬಿಸಿ ಕಾಫಿ ಕೊಟ್ಟು ಕಳಿಸಿದೆವು. ಊರಿನಿಂದ ನಮ್ಮ ನೆಂಟರಿಷ್ಟರು ಕೆಲವು ಹೆಸರು ಸೂಚಿಸಿದ್ದರು.
‘ಕಮಲಾಕ್ಷಿ’ ‘ಜಲಜಾಕ್ಷಿ’ ‘ಆಕ್ಷೀ’ ‘ಮಾಧುರಿ’ ‘ಅಂತರಾತ್ಮ’ ಇವ್ಯಾವೂ ನಮ್ಮ ಅಂತರಾತ್ಮಕ್ಕೆ ಒಪ್ಪಿಗೆಯಾಗಲಿಲ್ಲ. ಈ ನಡುವೆ, ನಮ್ಮ ಮನೆಯ ಕೆಲಸದ ತಿಮ್ಮಕ್ಕ ಚಿಕ್ಕದೊಂದು ಮನೆ ಕಟ್ಟಿಸಿ ಅದಕ್ಕೆ ಹೊಸ ಹೆಸರು ಇಟ್ಟಿದ್ದೇನೆ ಎಂದು ಹೇಳಿದ್ದಳು ಆದರೆ ತನಗೆ ಆ ಹೆಸರು ಹೇಳಲು ಬರದು ನೀವೇ ಖುದ್ದಾಗಿ ಬಂದು ನಿಮ್ಮ ಕಣ್ಣಿಂದ ನೋಡಿ ಎಂದು ಹೇಳಿದ್ದರಿಂದ ನಾನೇ ಸ್ವತಃ ಸಂದಿ-ಗೊಂದಿಯಲ್ಲಿದ್ದ ಅವಳ ಮನೆಗೆ ಕಸದ ರಾಶಿಯ ನಡುವೆ ಮೂಗುಮುಚ್ಚಿಕೊಂಡು ಹೋದೆ, ನೋಡಿದೆ ಕಣ್ಣು ಅಗಲಿಸಿ ಮತ್ತೊಮ್ಮೆ ನೋಡಿದೆ. “ಸರ್ಕಲ್ ಮಾರಮ್ಮ” ದೊಡ್ಡ ದಪ್ಪನೆಯ ಅಕ್ಷರದಲ್ಲಿ ಹಾಕಿಸಿದ್ದಳು. ಕಲ್ಲಿಮುತ್ತು ಹೆಸರೇ ಎಷ್ಟೋ ಮೇಲು ಅನ್ನಿಸಿ ಮತ್ತೆ ಮೂಗು ಮುಚ್ಚಿ ಹೊರಗೆ ಬಂದು ಉಸಿರಾಡಿದೆ. ‘ಚನ್ನಾಗಿಲ್ಲವೇನಮ್ಮ’ ತಿಮ್ಮಕ್ಕ ಕೇಳಿದಾಗ
‘ತುಂಬಾ ಚೆನ್ನಾಗಿದೆ ತಿಮ್ಮಕ್ಕ’ ಎಂದು ಯಾಂತ್ರಿಕವಾಗಿ ಹೇಳಿದೆ.
ಮನೆಗೆ ಬರುವಾಗ ಒಂದು ಪುಟ್ಟ ಶಾಲೆ, ಒಳಗೆ ಮಕ್ಕಳ ಗಲಾಟೆ, ಬಹುಶಃ ಕನ್ನಡ ಮೀಡಿಯಂ ಶಾಲೆ ಇರಬಹುದು ಟೀಚರ್ ಬಂದು ಅಟೆಂಡೆನ್ಸ್ ಕೂಗುತ್ತಿದ್ದರು, ‘ಕಮಲಾ, ವಿಮಲಾ, ಕಲಾ, ರತ್ನಾ, ಶಂಕರಿ, ಶಾಂಭವಿ, ಕೊನೆಯಲ್ಲಿ ಕೂಗಿದಳು ‘ಅನನ್ಯ’ ನನ್ನ ಕಿವಿ ನಿಮಿರಿತು ‘ಅನನ್ಯ’ ಎಷ್ಟು ಚೆನ್ನಾಗಿದೆ. ಯುರೇಕಾ, ಎಂದು ಕೂಗಿದೆ ಹೊಸ ಸಂಶೋಧನೆ ಮಾಡಿದಂತೆ. ನನ್ನ ಕೂಗಿಗೆ ಒಳಗಿಂದ ಟೀಚರ್ ಬಂದು ‘ರೇಕಾ ಅಂತ ಯಾರಿಲ್ಲ ಇಲ್ಲಿ’ ಎಂದು ಹೇಳಿ ಹೋದರು. ಮೂಗು ಮುಚ್ಚಿ ಆ ಬೀದಿಗೆ ಹೋದ ನಾನು ಬಾಯಿ ತೆರೆದುಕೊಂಡು ಮನೆಗೆ ಬಂದೆ. ಎಲ್ಲರೆದುರು ಹೇಳಿದೆ “ಅನನ್ಯ” ಅಂತ ಇಡೋಣ ಮನೆಗೆ ಹೆಸರು, ಎಲ್ಲರೂ ಒಕ್ಕೊರಲಿನಿಂದ “ಜೈ” ಅಂದರು, ತಂದೆಯವರು ‘ತಥಾಸ್ತು’ ಎಂದರು. ನಮ್ಮ ಹೊಸಮನೆಯ ಹೆಸರು “ಅನನ್ಯ” ಯಾರು, ಯಾವಾಗ ಬೇಕಾದರೂ ಬನ್ನಿ ಸುಸ್ವಾಗತ!!
- ಸುಧಾ ಸರನೋಬತ್
