ಲೇಖಕಿ ಎಂ.ಆರ್. ಕಮಲ ಅವರ ‘ಹೊನ್ನಾವರಿಕೆ’ ಪ್ರಬಂಧ ಸಂಕಲನದ ಕುರಿತು ಸರ್ವ ಮಂಗಳ ಜಯರಾಮ್ ಅವರು ತಮ್ಮ ಅಭಿಪ್ರಾಯವನ್ನುಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹೊನ್ನಾವರಿಕೆ
ಲೇಖನ : ಎಂ.ಆರ್ .ಕಮಲ
ಪ್ರಕಾರ : ಪ್ರಬಂಧ ಸಂಕಲನ
ಪ್ರಕಾಶನ : ಕಥನ
ಬೆಲೆ : ೧೭೫.೦೦
ಲೇಖಕಿ ಎಂ.ಆರ್. ಕಮಲ ವಿರಚಿತ ಹೊನ್ನಾವರಿಕೆ ಪ್ರಬಂಧ ಸಂಕಲನ ಓದುತ್ತಾ ಹೋದಂತೆ ಮನ ಆವರಿಸಿ ಓದಿನ ಸುಖ ನೀಡಿ ಗಾಢ ಪರಿಮಳದಲ್ಲಿ ಮಿಯುವಂತೆ ಮಾಡುವ ಗದ್ಯ ಕುಸುಮ. ಇಲ್ಲಿ ಲೇಖಕಿ ತೀರಾ ಸಾಮಾನ್ಯವೆನಿಸುವ, ತಮ್ಮ ಜೀವನದಲ್ಲಿ ದಿನನಿತ್ಯ ಎದುರಾಗುವ ಹಲವಾರು ಸಂದರ್ಭಗಳ, ಕಂಡುಂಡ ಅನುಭವಗಳ ಸರಮಾಲೆಯನ್ನೇ ಸುಂದರವಾಗಿ ಹೆಣೆದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇವರ ಬರಹಗಳಲ್ಲಿ ಸರಳತೆ ಹಾಗೂ ವಿಮರ್ಶಾತ್ಮಕ ದೃಷ್ಟಿಕೋನ ಎಂದು ಕಾಣುತ್ತದೆ. ತಮ್ಮ ಅರಿವಿಗೆ ಬಂದಂತಹ, ಅನುಭವಕ್ಕೆ ನಿಲುಕಿದ ಪ್ರತಿಯೊಂದು ಸಣ್ಣ ಪುಟ್ಟ ಘಟನೆಗಳನ್ನು ಕೂಲಂಕುಷವಾಗಿ ಅವಲೋಕಿಸುತ್ತ ಸೊಗಸಾದ ಲೇಖನಗಳನ್ನು ರಚಿಸಿದ್ದಾರೆ.
ಲೇಖಕಿ ಇಲ್ಲಿ ಉಲ್ಲೇಖಿಸಿರುವ ಪ್ರತಿಯೊಂದು ಘಟನೆಯು ತನ್ನದೇ ಆದ ವಿಶಿಷ್ಟ ಅಸ್ಮಿತೆಯನ್ನು ಹೊಂದಿ ಓದುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ದಿನನಿತ್ಯದ ಸಾಮಾನ್ಯ ಸಂಗತಿಗಳು ಕೂಡ ಹೇಗೆ ಅಸಾಮಾನ್ಯ ಬರಹಗಳಾಗಬಲ್ಲವು ಎಂಬುದಕ್ಕೆ ಎಂ ಆರ್ ಕಮಲ ಅವರ ಹೊನ್ನಾವರಿಕೆ ಪ್ರಬಂಧ ಸಂಕಲನ ಸಾಕ್ಷಿಯಾಗಿದೆ. ಮನುಷ್ಯನ ಖಾಸಗಿ ಜೀವನದ ಅನುಭವಗಳು ಇತರರ ಅನುಭವಗಳಾಗಿ ಅಕ್ಷರದ ರೂಪ ತಳೆದಾಗ ಸಹಜವಾಗಿ ಓದುಗ ತನಗೆ ಅರಿವಿಲ್ಲದಂತೆ ಆ ಓದಿನಲ್ಲಿ ಮುಳುಗಿ ಹೋಗುತ್ತಾನೆ. ಅಂತಹುದೇ ಸಜೀವ ಅನುಭವದ ಅನುಭೂತಿಯನ್ನು ಹೊನ್ನಾವರಿಕೆ ಪ್ರಬಂಧ ಸಂಕಲನ ನೀಡಬಲ್ಲದು. ಅಂತಹ ಅನನ್ಯ ಅನುಭೂತಿಯ ದಿವ್ಯ ಅನುಭವ ನನಗೂ ಕೂಡ ದೊರೆತಿದ್ದು ಓದಿನ ಸುಖ ಉಂಡಿದ್ದೇನೆ . ಇವರ ಎಷ್ಟೋ ಲೇಖನಗಳಲ್ಲಿ ನಮ್ಮನ್ನು ನಾವು ಕಾಣುತ್ತೇವೆ. ಇದು ನಾನೇ ಅಲ್ಲವೇ ….ಇದು ನನ್ನದೇ ಕಥೆಯಲ್ಲವೇ ಎನ್ನಿಸುವಷ್ಟು ಸಹಜವಾಗಿರುವಂತಹ ಲೇಖನಗಳನ್ನು ಹೆಣೆದಿದ್ದಾರೆ. ಒಟ್ಟಾರೆಯಾಗಿ ದಿನನಿತ್ಯದ ಆಗುಹೋಗುಗಳಲ್ಲಿ ಹೆಣ್ಮನದ ತವಕ ತಲ್ಲಣಗಳನ್ನು,ಅವಳು ಹೆಜ್ಜೆ ಹೆಜ್ಜೆಗೂ ಎದುರಿಸಬಹುದಾದ ಸವಾಲುಗಳನ್ನು ಒಂದೆಡೆ ಸೆರೆ ಹಿಡಿದಿದ್ದಾರೆ ಎಂದೇ ಹೇಳಬಹುದು.
ಹೊನ್ನಾವರಿಕೆಯಲ್ಲಿನ ಒಂದು ಲೇಖನ “ಬಾಗಿಲು ತೆಗೆಯೇ” ಶೀರ್ಷಿಕೆ ಹೊತ್ತ ಬರಹ ಬಹಳ ಆಸಕ್ತಿ ಹಾಗೂ ಕುತೂಹಲಕಾರಿಯಾಗಿತ್ತು. ಓದುತ್ತಾ ಹೋದಂತೆ ನನ್ನ ಕುತೂಹಲ ತಣಿಸಿದ್ದು ಹರಪ್ಪನಹಳ್ಳಿಯ ಭೀಮವ್ವನ ಕೀರ್ತನೆಗಳು. ಆ ಕೀರ್ತನೆಗಳನ್ನೆಲ್ಲ ಸೇರಿಸಿ ಲೇಖಕಿ ಸರಳ ಸುಂದರ ಸಂಭಾಷಣೆಯ ರೂಪದಲ್ಲಿ ವಿವರಿಸಿದ್ದಾರೆ.

ಶಿವನು ತನ್ನನ್ನು ತಾನು ಪಶುಪತಿ ,ಸರ್ಪ ಶರೀರಿ, ನೀಲಕಂಠ ,ಭೂತನಾಥ ,ಸದ್ಯೋಜಾತ ಎಂದೆಲ್ಲ ಹೊಗಳಿಕೊಳ್ಳುತ್ತಾ ಅತ್ಯಂತ ಖ್ಯಾತಿವೆತ್ತ ಮಹಾಮಹಿಮ ಶಿವ ನಾನು ಬಂದಿದ್ದೇನೆ ಬಾಗಿಲು ತೆಗೆಯೇ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾನೆ. ಆದರೆ ಅಂತಹ ಯಾವ ಗುಣ ವಿಶೇಷಣಗಳಿಗೂ ಆಕರ್ಷಿತಳಾಗದ ಹೆಣ್ಣಾಗಿ ಪಾರ್ವತಿ ಕಾಣಿಸಿಕೊಂಡಿದ್ದಾಳೆ. ಪಾರ್ವತಿ ಮಾತಿಗೆ ಮಾತು ಪೋಣಿಸುತ್ತಾ ಹೋದಾಗ ಶಿವನು ಸೋತು ಇನ್ನು ಮೂಕನಂತಿರುತ್ತೇನೆ ಪಾರ್ವತಿ ಬಾಗಿಲು ತೆಗೆಯೆ ಎಂದು ವಿವೇಕಯುಕ್ತವಾಗಿ ಕೇಳಿಕೊಳ್ಳುತ್ತಾನೆ. ಇಂದಿನ ಸಮಾಜದಲ್ಲಿ ಭೀಮವ್ವನ ಕೀರ್ತನೆ ಅದೆಷ್ಟು ಪ್ರಸ್ತುತ ಎಂಬುದನ್ನು ಇಲ್ಲಿ ಲೇಖಕಿ ವಿಡಂಬನಾತ್ಮಕವಾಗಿ ವಿವರಿಸಿದ್ದಾರೆ. ಲೋಕವೆಲ್ಲ ಬಿರುದು, ಬಾವಲಿ, ಸನ್ಮಾನ,ಪ್ರಶಸ್ತಿ, ಅಬ್ಬರಾಟದ ಆಡಂಬರದಲ್ಲಿ ಮುಳುಗಿರುವಾಗ ನಯವಾಗಿಯೇ ಅವುಗಳನ್ನು ತಿರಸ್ಕರಿಸಿ ಒಳಗಿನ ವಿವೇಕವನ್ನು ಜಾಗೃತಗೊಳಿಸುವ ಆಂತರಿಕ ಬದಲಾವಣೆಯನ್ನು ಇಲ್ಲಿ ಲೇಖಕಿ ಎತ್ತಿ ಹಿಡಿದಿದ್ದಾರೆ. ಅಂತಹ ಪ್ರಜ್ಞಾವಂತ ಸಮಾಜವು ಇಂದಿನ ತುರ್ತು ಎಂಬುದನ್ನು ಒತ್ತಿ ಹೇಳಿದ್ದಾರೆ. ಯಾವ ವ್ಯಕ್ತಿಯೇ ಆಗಿರಲಿ,ಎಷ್ಟೇ ಪ್ರಖ್ಯಾತಿಯನ್ನು ಹೊಂದಿದ್ದರೂ ಹುಸಿ ಪ್ರಭಾವಗಳ ಹಂಗನ್ನು ತೊರೆದು ಸಹಜ ಮನುಷ್ಯನಾಗಿರಬೇಕು. ಇತರರ ಭಾವನೆಗಳಿಗೆ ಸ್ಪಂದಿಸುವ ಉದಾತ್ತ ಗುಣ ಹೊಂದಬೇಕು. ಮೌನದ ವಿವೇಕವನ್ನು ಕಲಿಯಬೇಕೆಂದು ಎಚ್ಚರಿಸಿದ್ದಾರೆ.
ಈ ಸಂಕಲನದ ಮೊದಲ ಪ್ರಬಂಧ “ಚೋಟುದ್ದದ ಹುಡುಗರು” ಈ ಲೇಖನದಲ್ಲಿ ಅದೃಶ್ಯವಾದವರ ಕಥೆ ಕವನ ರೂಪದಲ್ಲಿ ಮನಮಿಡಿಯುವಂತೆ ಚಿತ್ರತವಾಗಿದೆ. ಲೇಖಕಿಯು ದಿನನಿತ್ಯ ರಸ್ತೆಯಲ್ಲಿ ನೋಡುತ್ತಿದ್ದ ಐರನ್ ಮಾಡುತ್ತಿದ್ದ ಮುದುಕನ ಬಗ್ಗೆಯೇ ಆ ಸಾಲುಗಳಿದ್ದವು. ಪ್ರತಿನಿತ್ಯ ನೋಡುತ್ತಿದ್ದವರು ಇದ್ದಕ್ಕಿದ್ದಂತೆ ಲೋಕದ ವ್ಯವಹಾರ ಮುಗಿಸಿ ಕಣ್ಮರೆಯಾದರೆ ಎಂತಹವರ ಮನಸ್ಸಿನಲ್ಲೂ ವಿಷಾದದ ಛಾಯೆ ಮೂಡುತ್ತದೆ. ತಮ್ಮ ಸಾಕು ನಾಯಿಯೊಂದಿಗೆ ಆ ರಸ್ತೆಯಲ್ಲಿ ಓಡಾಡುವಾಗ ಎದುರಾಗುವ ಖಾಲಿ ಗಾಡಿಗಳು ಅದೃಶ್ಯವಾದವರ ಕಥೆ ಹೇಳುತ್ತವೆ ಎಂದು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.
ಮತ್ತೊಂದು ಮನೋಜ್ಞ ಬರಹ “ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ”… ದಿನನಿತ್ಯದ ಜೀವನದಲ್ಲಿ ಅವಳದೊಂದು ಪುಟ್ಟ ಪ್ರಪಂಚ, ಪುಟ್ಟ ಬದುಕು ಆ ಬದುಕಿನಲ್ಲಿ ಅವಳ ಪ್ರತಿದಿನದ ದಿನಚರಿ, ಇಡೀ ಮನೆಯನ್ನು ,ಕೋಣೆ ಕೋಣೆಗಳಲ್ಲಿ ಇಣುಕಿ ವ್ಯವಸ್ಥೆಗೊಳಿಸುವ ಹಪಾಹಪಿ, ತನಗೆ ತಾನೇ ಸವಾಲಾಗಿ ಜಿದ್ದಿಗೆ ಬಿದ್ದವಳಂತೆ ನಿರಂತರ ದುಡಿತದಲ್ಲಿ ಮುಳುಗಿ ಹೋಗುವ ಖಯಾಲಿ. ಅವಳಿಗೆ ಒಂದು ನಿಮಿಷವೂ ಪುರುಸೊತ್ತೆಂಬುದು ಇಲ್ಲ. ಅವಳಿಗೆ ಪುರುಸೊತ್ತು ಬೇಕಾಗಿಯೂ ಇಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಸಾಲದು ಅವಳಿಗೆ ಗಂಡ ಮನೆ ಮಕ್ಕಳ ಆರೈಕೆಗಾಗಿ. ಆದರೆ ದಿನದ ಒಂದು ಗಂಟೆಯ ಸಮಯವಾದರೂ ಸಿಗದು ಅವಳ ಆರೋಗ್ಯಕ್ಕಾಗಿ.ಹೀಗೆ ಅವಳದೊಂದು ಪುಟ್ಟ ಬದುಕಿನಲ್ಲಿ ಏನೆಲ್ಲಾ ಕನಸು,ಕನವರಿಕೆಗಳು, ಭರವಸೆಗಳು, ನಿರೀಕ್ಷೆಗಳು ,ಒತ್ತಡಗಳು, ನೋವು ,ನಲಿವುಗಳು ,ಆತಂಕ ,ಭಯ,ಗಾಬರಿ ,ಕುತೂಹಲ ತುಂಬಿವೆ ಎಂಬುದನ್ನು ಲೇಖಕಿ ಇಲ್ಲಿ ಭಾವಪೂರ್ಣವಾಗಿ ಸಹಜವೆಂಬಂತೆ ವಿವರಿಸುತ್ತಾ ಸಾಗಿದ್ದಾರೆ.ಈ ಲೇಖನ ಅದೆಷ್ಟೋ ಹೆಣ್ಣು ಮಕ್ಕಳ ದಿನನಿತ್ಯದ ವಾಸ್ತವದ ಚಿತ್ರಣವಾಗಿದೆ. ಇದೇ ಸಮಯದಲ್ಲಿ ನನ್ನದೊಂದು ಕವನ ನೆನಪಾಗುತ್ತಿದೆ.ಅದನ್ನಿಲ್ಲಿ ಸ್ಮರಿಸುವುದು ಸೂಕ್ತವೆನಿಸುತ್ತದೆ.
ಅವಳು ಹಾಗೇ …….
ಪದೇಪದೇ ಸೋಲುತ್ತಾಳೆ ಅರ್ಥವಿಲ್ಲದ ಭಾವನೆಗಳ ತಾಕಲಾಟದಲ್ಲಿ ಮುಳುಗಿ ಸೋಲು ಗೆಲುವಿನ ಲೆಕ್ಕವಿಡದೆ ಅವನ ಹಿಡಿ ಪ್ರೀತಿಗಾಗಿ.
ಅವಳು ಹಾಗೇ….
ಪದೇ ಪದೇ ನಗುತ್ತಾಳೆ ಮನದಲ್ಲಿ ಮಡುಗಟ್ಟಿದ ನೋವು ಮತ್ತೆ ಮತ್ತೆ ಮರುಕಳಿಸಿ ದುಃಖದ ಸುರುಳಿ ಯೊಳಗೆ ಸಿಲುಕುದಿರಲೆಂದು.
ಅವಳು ಹಾಗೇ……
ಪದೇಪದೇ ಬಸಿರಾಗುತ್ತಾಳೆ ಕಂಡ ಕನಸುಗಳ ನನಸಾಗಿಸಿಕೊಂಡು ಬಾಳ ಪಯಣದಲಿ ಭರವಸೆಯ ಬೆಳಕನ್ನು ಹಡೆಯಲು.
ಅವಳು ಹಾಗೇ…..
ಪದೇಪದೇ ನಲುಗುತ್ತಾಳೆ ಅವನ ಪ್ರತಿ ದಿನದ ದಾಹವ ತಣಿಸುತ್ತ ಮುಗುಳ್ನಗೆಯ ಮುಖವಾಡ ಧರಿಸಿ ಮುಂದಿನ ಜೀವನಕ್ಕೆ ಸಜ್ಜಾಗಲು.
ಅವಳು ಹಾಗೇ….
ಪದೇಪದೇ ಸಾಯುತ್ತಾಳೆ ಭಾವನೆಗಳ ಅಸ್ತಿತ್ವಕ್ಕಾಗಿ ತಡಕಾಡುತ್ತಾ ನಿರಂತರ ಹೋರಾಟದ ಬದುಕಿನ ರಣರಂಗದಲ್ಲಿ ಕ್ಷಣ ಕ್ಷಣ ಮಡಿಯಲು.

ಇನ್ನೊಂದೆಡೆ “ಡಿಲೀಟ್ ಮಾಡುತ್ತಾ ಬದುಕುವುದು” ಎಂಬ ಲೇಖನದಲ್ಲಿ ಲೇಖಕಿಯು ಚಿಕ್ಕಂದಿನಲ್ಲಿ ತೋಟದಲ್ಲಿ ಅಡ್ಡಾಡಿದ, ಹೊಲದಲ್ಲಿ ತಿರುಗಾಡಿ ಸಾಸಿವೆ, ಸೂರ್ಯಕಾಂತಿ, ಹೊನ್ನಾವರಿಕೆ ಹೂಗಳ ಪ್ರಖರ ಕಾಂತಿಯನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಿದ್ದ,ಅವರೆ ಸೊಗಡಿನೊಂದಿಗೆ ಒಡನಾಟ, ತೆಂಗಿನ ಮರಗಳ ಜೊತೆಗಿನ ಮಾತು ಕಥೆ, ಕೊಚ್ಚೆಯ ನೀರಿನೊಂದಿಗೆ ಕುಣಿತ ಇವೆಲ್ಲವೂ ಇಂದಿಗೂ ಲೇಖಕಿಯ ಮನದಲ್ಲಿ ಡಿಲೀಟ್ ಆಗದೆ ಹಚ್ಚ ಹಸಿರಾಗಿವೆ. ಬಾಲ್ಯದಲ್ಲಿನ ಸಿಹಿ ಕಹಿ ನೆನಪುಗಳು ಭಾವ ಬಿತ್ತಿಯಲ್ಲಿ ಎಂದೆಂದಿಗೂ ಡಿಲೀಟ್ ಆಗದೆ ಉಳಿದಿರುತ್ತವೆ ಎಂಬುದನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಬಹುಶಃ ಬಾಲ್ಯಕ್ಕೆ ಡಿಲೀಟ್ ಎನ್ನುವ ಪದವೇ ಗೊತ್ತಿರಲಿಲ್ಲ ಎಂದು ಹೇಳುತ್ತಾ ಮನುಷ್ಯ ಒಮ್ಮೊಮ್ಮೆ ತನ್ನ ಮನಸ್ಸಿಗೆ ತೀರ ಅಹಿತಕರ ಅನ್ನಿಸುವುದನ್ನು ಕಸಿವಿಸಿ ಎನ್ನಿಸಿದ್ದನ್ನು ಒಂದು ಕಾಲಘಟ್ಟದಲ್ಲಿಯಾದರೂ ಡಿಲೀಟ್ ಮಾಡಲೇಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಗಳೂ ಹೊರತಲ್ಲ, ಯಾವುದೇ ಸಂಬಂಧಗಳಾಗಲಿ, ಸತ್ತಿವೆ ಎಂದು ಗೊತ್ತಾಗುವುದು ಅವು ದುರ್ವಾಸನೆ ಬಂದ ಮೇಲೆಯೇ. ಅಂತಹ ಉಸಿರುಗಟ್ಟಿಸುವ ಸಂಬಂಧಗಳನ್ನು ಡಿಲೀಟ್ ಮಾಡುತ್ತಾ ಸಾಗಿದಾಗ ಮಾತ್ರ ಬದುಕು ಸಹನೀಯವಾಗುತ್ತದೆ ಎಂದು ಹೇಳಿದ್ದಾರೆ. ಒಂದು ವೇಳೆ ಈ ಡಿಲೀಷನ್ ಎಂಬ ಪದವೇ ಇಲ್ಲದಿದ್ದರೆ ಬದುಕು ಎಷ್ಟೊಂದು ಅಸಹನೀಯವಾಗುತ್ತಿತ್ತು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಹೊನ್ನಾವರಿಕೆಯ ಪ್ರಖರ ಹಳದಿ ಬಣ್ಣದ ಹೂವುಗಳು ಅವರ ಊರಲ್ಲಿದ್ದ ಹಳ್ಳದ ದುರ್ವಾಸನೆಯನ್ನು ಡಿಲೀಟ್ ಮಾಡಿ ತನ್ನದೇ ಆದ ನೈಜ ಸೊಗಡಿನಿಂದ ಲೇಖಕಿಯ ಮನಸೂರೆಗೊಂಡು ಅವರನ್ನು ಜೀವಂತಿಕೆಯಿಂದ ಉಳಿಯುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಹೀಗೇ ಹೇಳುತ್ತಾ ಸಾಗಿದರೆ ಪ್ರತಿಯೊಂದು ಲೇಖನವೂ ಕೂಡ ಭಾವ ತೀವ್ರತೆಯಿಂದ ಕೂಡಿದ್ದು ಸಾಮಾನ್ಯ ಸಂಗತಿ ಯೊಂದು ಅಕ್ಷರದ ಸಖ್ಯ ಕಂಡಾಗ ಹೇಗೆ ಮಹತ್ವಪೂರ್ಣ ಲೇಖನವಾಗುತ್ತದೆ ಎಂಬುದಕ್ಕೆ ಇಲ್ಲಿನ ಪ್ರತಿಯೊಂದು ಲೇಖನಗಳು ನಿದರ್ಶನವಾಗುತ್ತವೆ. ಹೊನ್ನಾವರಿಕೆ ಓದುತ್ತಾ ಹೋದಂತೆ ಮನ ಆವರಿಸುತ್ತಾ ಪ್ರತಿಯೊಂದು ಲೇಖನವೂ ಆಪ್ತವೆನಿಸುತ್ತದೆ.
- ಸರ್ವ ಮಂಗಳ ಜಯರಾಮ್
