ಕನ್ನಡದ ಬಹುಮುಖಿ ಪ್ರತಿಭೆಯ ಹೂಲಿ ಶೇಖರ್ ಕುರಿತ ‘ಹೂಲಿ ರಂಗ ಶಿಖರ’ ಸಂಪಾದನಾ ಗ್ರಂಥ ಅವರ ಅನಂತ ಮುಖಗಳ ಅನಾವರಣ ಮಾಡುತ್ತದೆ.ಅವುಗಳನ್ನು ಅವರ ವೈಯಕ್ತಿಕ, ಕೌಟುಂಬಿಕ, ಸಾಂಸ್ಕೃತಿಕ ಮುಖಗಳ ಮೂಲಕ ಗ್ರಹಿಸಬಹುದು. ಈ ಕೃತಿಯ ಬಗ್ಗೆ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹೂಲಿ ರಂಗ ಶಿಖರ
ಸಂಪಾದಕರು : ಡಾ.ಮಹೇಂದ್ರ ಕುಮಾರ್ ಮತ್ತು
ಬಿ.ಪಿ. ನರೇಂದ್ರ ಬಾಬು
ಪ್ರಕಾರ : ಅಭಿನಂದನಾ ಗ್ರಂಥ
ಬೆಲೆ : ೬೦೦.೦೦
ಖರೀದಿಗಾಗಿ : 9880144705
ವೈಯಕ್ತಿಕ: ಅದನ್ನು ಅವರ ಬಾಲ್ಯದ ಜೀವನದಿಂದ ಅವರದೇ ಮಾತುಗಳಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ಮೇಲೆ, ಇವರ ತಂದೆಯೇ ಇಬ್ಬರೂ ಆಗಿ ಇವರನ್ನು ಪೋಷಿಸಿದರು. ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದು, ನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ತಮ್ಮ ಪ್ರೌಢ ಶಿಕ್ಷಣ ಪಡೆದರು. ಆಗ ಅಲ್ಲಿ ಗುರುಗಳಾದ ಕವಿ.ಎಸ್. ಡಿ ಇಂಚಲ ಇವರ ಮೇಲೆ ದಟ್ಟ ಪ್ರಭಾವ ಬೀರಿದರು. ಮುಂದೆ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಇವರ ಉದ್ಯೋಗ ಪರ್ವ ಆರಂಭವಾಯಿತು.
ಅಲ್ಲಿ ಅವರಿಗೆ ದೊರೆತ ಬಹುಭಾಷಾ ಪರಿಸರ ಅವರ ಪ್ರತಿಭೆಯ ಮೂಲದ್ರವ್ಯ. ಕೌಟುಂಬಿಕ:ನಂತರ ಅವರಿಗೆ ತನ್ನ ಜೊತೆಗಾತಿಯಾಗಿ ದೊರೆತವರು, ಅವರ ಶಾಲೆಯ ಕಿರಿಯ ಸಹಪಾಠಿ ಕಾಶಮ್ಮನವರು. ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಅವರ ದಾಂಪತ್ಯ ಜೀವನದ ಫಲವಾಗಿ ಮೂವರು ಮಕ್ಕಳು.ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳು . ಅವರೆಲ್ಲ ಈಗ ಮದುವೆಯಾಗಿ ತಮ್ಮದೇ ಕುಟುಂಬಗಳನ್ನು ಹೊಂದಿದ್ದಾರೆ. ಅವರ ಕಿರಿಯ ಮಗಳು ಶಾಲಿನಿ ಪ್ರದೀಪ್ ,ತಮ್ಮ ಆಕೃತಿ ಅಂತರ್ಜಾಲ ಪತ್ರಿಕೆಯ ಮೂಲಕ ಅಪ್ಪನ ಸಾಹಿತ್ಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.

ಬೆಳಗಾವಿಯ ಸವದತ್ತಿ ತಾಲೂಕಿನ ಹೂಲಿಯಲ್ಲಿ ಜನಿಸಿದ ಶೇಖರ್, ಉತ್ತರ ಕನ್ನಡದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಂಡು, ಕಳೆದ ಎರಡು ದಶಕಗಳಿಂದ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಅಲ್ಲದೆ ಏಳು ದಶಕಗಳನ್ನು ಅವರು ಯಶಸ್ವಿಯಾಗಿ ಪೂರೈಸಿದ ದ್ಯೋತಕವಾಗಿ ಮೇಲಿನ ಶೀರ್ಷಿಕೆಯ ಪುಸ್ತಕ ಕಳೆದ ವಾರ ಬಿಡುಗಡೆ ಹೊಂದಿತು.
ಸಾಂಸ್ಕೃತಿಕ: ಇವರ ಸಾಂಸ್ಕೃತಿಕ ಸಾಧನೆ ಹಲವು ಮಗ್ಗಲುಗಳನ್ನು ಹೊಂದಿದೆ. ಅವುಗಳ ಪ್ರವೇಶಕ್ಕೆ ಮುನ್ನ, ಅದಕ್ಕೆ ಹಿನ್ನೆಲೆಯಲ್ಲಿ ಅವರ ಹುಟ್ಟಿದ ಸ್ಥಳದ ಸಾಂಸ್ಕೃತಿಕ ಇತಿಹಾಸವನ್ನು ಗ್ರಹಿಸಬಹುದು. ಅವುಗಳನ್ನು ಸ್ಥೂಲವಾಗಿ ಪೌರಾಣಿಕ, ಚಾರಿತ್ರಿಕ ಮತ್ತು ಭೌಗೋಳಿಕ ಎಂದು ವಿಂಗಡಿಸಬಹುದು. ಪೌರಾಣಿಕವಾಗಿ ಇವರ ಊರು ಹೂಲಿ ಕಾರ್ತವೀರ್ಯಾಜುನನಿದ್ದ ಊರು, ಅವನನ್ನು ಪರಶುರಾಮ ಸೋಲಿಸಿದ.ಚಾರಿತ್ರಿಕವಾಗಿ ರಟ್ಟರು ಇವರ ಪ್ರದೇಶವನ್ನು ಆಳಿದರು. ಭೌಗೋಳಿಕವಾಗಿ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಸವದತ್ತಿ ಯಲ್ಲಮ್ಮನ ಜಾತ್ರೆ ಸಂದರ್ಭದಲ್ಲಿ ನಡೆದ ದೊಡ್ಡಾಟ ಸಣ್ಣಾಟ,ಡಪ್ಪಿನಾಟಗಳು ಅವುಗಳ ವೀಕ್ಷಿಸಿದರು. ಅವುಗಳ ದಟ್ಟ ಪ್ರಭಾವ ಇವರ ಮೇಲೆ ಆಯಿತು. ಸ್ವತ: ಇವರ ಅಜ್ಜ ,ತಂದೆ ಅವುಗಳಲ್ಲಿ ಪಾತ್ರ ವಹಿಸಿದ್ದರು. ಇದು ಇವರನ್ನು ಬಾಲ್ಯದಲ್ಲೇ ಆಕರ್ಷಿಸಿತು.
೧: ಇವರ ವೃತ್ತಿ ಜೀವನದಲ್ಲಿ ಕಾಳಿ ಸೂಪಾ ಅಣೆಕಟ್ಟಿನ ನಡುವೆ , ಕಾಡು ಸುರಂಗಗಳಲ್ಲಿ ಕೆಲಸದ ಉಸ್ತುವಾರಿ ವಹಿಸಿದಾಗ, ಅದಕ್ಕಾಗಿ ಇವರು ಒಂದು ಕೈಯಲ್ಲಿ ಕತ್ತಿಯನ್ನು ಮತ್ತು ತಮ್ಮ ಪ್ರವೃತ್ತಿಯನ್ನು ಪೋಷಿಸಲು ಇನ್ನೊಂದು ಕೈಯಲ್ಲಿ ಪೆನ್ನು ಹಿಡಿಯುತ್ತಿದ್ದರು. ಇವರೆಡೂ ಇವರ ಬದುಕಿನ ರೂಪಕಗಳು ಎಂದರೆ ಅದು ಸತ್ಯಕ್ಕೆ ಹತ್ತಿರ ಎಂದರೆ ಉತ್ಪ್ರೇಕ್ಷೆಯಲ್ಲ. ಕತ್ತಿ ಇವರಿಗೆ ಆತ್ಮರಕ್ಷಣೆಗಾಗಿ ಒದಗಿಬಂದರೆ, ಪೆನ್ನು ಇವರ ಆತ್ಮಾಭಿವ್ಯಕ್ತಿಯ ಸಾಧನವಾಯಿತು. ಅದು ವಿವಿಧ ಪ್ರಕಾರಗಳ ಮೂಲಕ ಅಭಿವ್ಯಕ್ತಿಯನ್ನು ಪಡೆದಿದೆ. ಅದನ್ನು ಸ್ಥೂಲವಾಗಿ ಕೆಳಗಿನಂತೆ ವರ್ಗೀಕರಿಸಬಹುದು. ಅವು:೧: ನಾಟಕ: ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಇವರು ಬರೆದಿದ್ದಾರೆ.ಅವುಗಳನ್ನು ಬಹುತೇಕ ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ. ಆದರೆ ಎಲ್ಲವೂ ರಂಗವೇರಿವೆ.ನೂರಾರು ಪ್ರದರ್ಶನಗಳನ್ನು ಕಂಡಿವೆ. ಕರ್ನಾಟಕದಲ್ಲಿ ಮಾತ್ರವಲ್ಲ.ದೇಶದ ವಿವಿಧ ಭಾಗಗಳಲ್ಲಿ. ಇದಕ್ಕೆ ಕಾರಣ ಅವು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಗೊಂಡಿರುವುದು. ಅಲ್ಲಿ ಕೂಡ ಇವು ಹಲವು ಪ್ರದರ್ಶನಗಳನ್ನು ಕಂಡಿವೆ. ಇದಕ್ಕೆ ಅವುಗಳ ವಸ್ತುವಿನ ಸಾರ್ವಕಾಲಿಕತೆ ಎಂದು ಇಲ್ಲಿ ಅವುಗಳನ್ನು ಕುರಿತು ಬರೆದ ಲೇಖಕರು ಗುರುತಿಸಿದ್ದಾರೆ. ಅವುಗಳಲ್ಲಿ ಮೂರು ಬಗೆ: ೧: ವಚನಕಾರರ ಕಾಲವನ್ನು ಆಧರಿಸಿದ ನಾಟಕಗಳು:
ಕ್ರಾಂತಿ ಕಲ್ಯಾಣ, ಸುಳಿವಾತ್ಮ ಎನ್ನೊಳಗೆ, ಕರಿಯು ಕನ್ನಡಿಯೊಳಗೆ: ಇವುಗಳನ್ನು ಕುರಿತು ಪ್ರಸಿದ್ಧ ಲೇಖಕರಾದ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಬರೆದಿದ್ದಾರೆ.ಅವರ ಜೊತೆ ನನ್ನ ಬರಹಗಳು ಇವೆ ಎನ್ನುವುದು ಸಂತೋಷದ ಸಂಗತಿ.

೨: ಐತಿಹಾಸಿಕ ನಾಟಕಗಳು: ರಾಣಿ ಆದಿಲ್ ಶಾಹಿಅಮ್ಟೂರು ಬಾಳಪ್ಪ ಕುರಿತ ಇವರ ನಾಟಕ ಪ್ರಸಿದ್ಧವಾಗಿದೆ. ಹಲಗಲಿಯ ಬೇಡರು. ಬೆಳವಡಿ ಮಲ್ಲಮ್ಮ, ಮೂರೂ ನಾಟಕಗಳು ಆಂಗ್ಲರ ವಿರುದ್ಧ ಹೋರಾಟ ಮಾಡಿದ ನಾಯಕರನ್ನು ವಸ್ತುವನ್ನಾಗಿ ಹೊಂದಿವೆ.
೩ ಸಾಮಾಜಿಕ ನಾಟಕಗಳು: ಹಾವು ಹರಿದಾಡತಾವ. ರಾಕ್ಷಸ, ಅರಗಿನ ಬೆಟ್ಟ,ಧಫನ್ ಜನಪ್ರಿಯ ನಾಟಕಗಳು. ಇವೆಲ್ಲ ನಾಟಕಗಳನ್ನು ನಿರ್ದೇಶಿಸಿದ ನಿರ್ದೇಶಕರ ಲೇಖನಗಳನ್ನು ಈ ಗ್ರಂಥ ಒಳಗೊಂಡಿದೆ. ಕಾದಂಬರಿಕಾರರಾಗಿ :ಕದಡಿದ ಕೆರೆ ಮುಂತಾದ ಕಾದಂಬರಿಗಳ ಕುರಿತು ಅವುಗಳನ್ನು ಓದಿ ಬರೆದ ಲೇಖನಗಳು ಕೂಡ ಇಲ್ಲಿವೆ. ಇವಲ್ಲದೆ ಜನಜಾಗೃತಿಗಾಗಿ ಹಲವಾರು ಬೀದಿ ನಾಟಕಗಳನ್ನು ಕೂಡ ಬರೆದಿದ್ದಾರೆ.
೪: ಕಥೆಗಾರನಾಗಿ: ಸುಧಾ, ಮಯೂರ ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳನ್ನು ಒಂದು ಕಡೆ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳ ಕುರಿತ ಬರಹಗಳು ಇಲ್ಲಿ ಸೇರ್ಪಡೆಗೊಂಡಿವೆ. ಇವಲ್ಲದೆ ಸ್ವತಃ ಲೇಖಕರು ನಾಟಕದ ವಿಭಿನ್ನ ಪ್ರಕಾರಗಳ ಕುರಿತು ಬರೆದ ಲೇಖನಗಳು ಕೂಡ ಇಲ್ಲಿ ಇವೆ. ಅವು ಶಿಷ್ಟ ನಾಟಕ ಪರಂಪರೆ, ಜಾನಪದ ನಾಟಕ ಪರಂಪರೆ, ಯಕ್ಷಗಾನ, ಹಾಗೂ ಭರತನ ನಾಟ್ಯ ಶಾಸ್ತ್ರ ( ಶ್ರೀರಂಗರ ಕೃತಿಯನ್ನು ಆಧರಿಸಿದ,,,,) ಇವುಗಳ ಕುರಿತು ಬರೆಯುತ್ತ ತಮ್ಮದು ದೇಸಿ ಪರಂಪರೆಯ ನಾಟಕಗಳು ಎಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ನಿರ್ದೇಶಕರಾದ ಎಸ್.ಮಾಲತಿ, ಬಿ.ವಿ.ಕಾರಂತ ಹಾಗೂ ಮರಾಠಿಯ ಪ್ರಸಿದ್ಧ ನಾಟಕಕಾರ ವಿಜಯ್ ತೆಂಡೂಲ್ಕರ್ ಅವರನ್ನು ಇವರು ಮಾಡಿದ ಸಂದರ್ಶನಗಳು ವಿಶೇಷವಾಗಿವೆ.
ಇತರರು ಇವರಿಂದ ಪಡೆದ ಪ್ರೋತ್ಸಾಹವನ್ನು ಕುರಿತು ಕೃತಜ್ಞತಾ ಪೂರ್ವಕವಾಗಿ ಬರೆದ ಲೇಖನಗಳು ಇಲ್ಲಿವೆ. ಇದು ತಾವು ಮಾತ್ರ ಬೆಳೆಯದೆ ಇತರರನ್ನು ಬೆಳೆಸುವ ಅವರ ಔದಾರ್ಯಕ್ಕೆ ನಿದರ್ಶನಗಳು.
ಕಿರುತೆರೆ ಬರಹಗಾರಾಗಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ.ಅವುಗಳಲ್ಲಿ ಮೂಡಲ ಮನೆ , ಗೆಳತಿ, ಕುಂತಿ, ಮುಂತಾದ ಧಾರಾವಾಹಿಗಳು ಜನಪ್ರಿಯವಾಗಿವೆ.ಏಕಕಾಲಕ್ಕೆ ಎರಡು ಮೂರು ಧಾರಾವಾಹಿಗಳಿಗೆ ಒಂದೇ ಸಮನೆ ಬರೆಯಬಲ್ಲ ಇವರ ಸಾಮರ್ಥ್ಯಕ್ಕೆ ಬೆರಗಾದವರು, ಇವರಿಗೆ ಅಕ್ಷರ ಬ್ರಹ್ಮ, ರಾಕ್ಷಸ ಬರಹಗಾರ ಎಂದೆಲ್ಲಾ ಬಿರುದುಗಳನ್ನು ಕೊಟ್ಟು ಗೌರವಿಸಿದ್ದಾರೆ. ಮೂಡಲಮನೆಗೆ ಇವರು ಬರೆದ ಸಂಭಾಷಣೆಗಳು ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿಗಳ ವಾಹಕಗಳಾಗಿವೆ ಎಂದು ಹಲವರು ಪ್ರಮಾಣ ಪತ್ರ ಕೊಟ್ಟಿದ್ದಾರೆ.
ಅವರ ಶ್ರೀಮತಿ ಕಾಶಮ್ಮ, ಅವರ ಹಿರಿಯ ಅಳಿಯ ದಿನೇಶ್ ಮತ್ತು ಅವರ ಮುದ್ದಿನ ಮಗಳು ಶಾಲಿನಿ ಪ್ರದೀಪ್ ಬರಹಗಳು ಆತ್ಮೀಯವಾಗಿದ್ದು ಅವರ ಕೌಟುಂಬಿಕ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತವೆ. ಇಷ್ಟಾದರೂ ಅವರ ಪ್ರಥಮ ಮತ್ತು ಕೊನೆಯ ಪ್ರೇಮ ಎಂದರೆ ಅದು ರಂಗಭೂಮಿಯೇ ಸರಿ.
ಮೇಲೆ ಉಲ್ಲೇಖಿಸಿದ ಎಲ್ಲವೂ ಅವರ ಸಾಧನೆಗಳು. ಬೆಂಗಳೂರಿಗೆ ಬಂದ ನಂತರ ಅವರಿಗೆ ಆಧುನಿಕ ರಂಗಭೂಮಿಯ ಪರಿಚಯ ಆಯಿತು ಮತ್ತು ತಮ್ಮ ಇಲ್ಲಿಯವರೆಗಿನ ನಾಟಕ ಗ್ರಹಿಕೆಯನ್ನು ವಿಸ್ತರಿಸಿತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಪ್ರಶಸ್ತಿಗಳಿಗಾಗಿ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಬರೆಯುತ್ತಾ ಹೋಗುವುದು ಕೂಡಾ ಇವರ ಸಾಧನೆ . ಬಂದ ಪ್ರಶಸ್ತಿಗಳು ಇವರಿಗೆ ಯಾವ ಹಮ್ಮು ಬಿಮ್ಮುಗಳನ್ನು ಮೂಡಿಸಿಲ್ಲ. ನಮ್ಮಂತಹ ಸಾಮಾನ್ಯರ ಮನೆಗೂ ತಾವಾಗಿಯೇ ಬಂದು ಸಂತೋಷ ಉಂಟುಮಾಡಿದ್ದು ಇವರ ಸರಳ ವ್ಯಕ್ತಿತ್ವದ ಕೈಗನ್ನಡಿ.

ಮಿತಿಗಳು ೧:
ವೈರುಧ್ಯಗಳು: ಪ್ರೊಫೆಸರ್ ಗಳು ಬರೆದ ನಾಟಕಗಳ ಬಗ್ಗೆ ಇವರಿಗೆ ಅಸಹನೆ ವ್ಯಕ್ತ ಪಡಿಸಿದ್ದಾರೆ.( ಸತೀಶ್ ಕುಲಕರ್ಣಿ ಅವರ ಸಂದರ್ಶನ) ಈ ಕೃತಿಗೆ ಮುನ್ನುಡಿ ಬರೆದ ನನ್ನ ಮೇಷ್ಟ್ರು ಕಾಳೇಗೌಡ ನಾಗವಾರ ಅವರು , ಬೆನ್ನುಡಿಯಲ್ಲಿ ಹಾಕಿಕೊಂಡ ನನ್ನ ಇನ್ನೊಬ್ಬ ಮೇಷ್ಟ್ರು ಕಂಬಾರರು( ಇವರ ಊರಿನಿಂದ ಬಂದ ನಾಟಕಕಾರರು) ಅದರಂತೆ ಇವರ ನಾಟಕಗಳನ್ನು ಮೆಚ್ಚಿ ಬರೆದ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಕೂಡ ಕಾಲೇಜು ಮೇಷ್ಟ್ರು. ಕನ್ನಡದ ಪ್ರಸಿದ್ಧ ಸಂಶೋಧಕರು, ಪ್ರಾಧ್ಯಾಪಕರಾದ ಡಾಕ್ಟರ್ ಎಂ.ಎಂ.ಕಲ್ಬುರ್ಗಿ ಇವರ ‘ಕರಿಯು ಕನ್ನಡಿಯೊಳಗೆ’ ನಾಟಕದ ನಾಯಕ ಪಾತ್ರ ( ತೀರ್ಪುಗಾರರು).
೨: ತಪ್ಪು ಮಾಹಿತಿ: ಕನ್ನಡದಲ್ಲಿ ನಾಗರತ್ನಮ್ಮ ಕುರಿತು ಪುಸ್ತಕ ಬಂದಿಲ್ಲ ಎಂದು ಬರೆದಿದ್ದಾರೆ. ಈಗಾಗಲೇ ಜಗದೀಶ್ ಕೊಪ್ಪ ಅವರು ಅವರ ಕುರಿತು ಪುಸ್ತಕ ಬರೆದಿದ್ದಾರೆ.ಅದನ್ನು ಕುರಿತು ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ಲೇಖನ ಬರೆದಿದ್ದಾರೆ.
೩: ಸಂದಿಗ್ಧತೆ: ಪ್ರಕಾರ ಪ್ರಾಕಾರ ಎರಡೂ ಒಂದೇ ಅರ್ಥದಲ್ಲಿ ತಪ್ಪಾಗಿ ಬಳಸಲಾಗಿದೆ .ಅದೇ ರೀತಿ ಪಗರಣ ಮತ್ತು ಪರಗಣ ಕೂಡ.ಎರಡರ ಅರ್ಥ ಬೇರೆ ಬೇರೆ
೪: ಹುಟ್ಟಿದ ದಿನಾಂಕ ಒಂದೊಂದು ಕಡೆ ಒಂದೊಂದು ಆಗಿದೆ.
೫ ಸುಳಿವಾತ್ಮ ಎನ್ನೊಳಗೆ, ಕರಿಯ ಕನ್ನಡಿಯೊಳಗೆ ಕೂಡ ತಪ್ಪಾಗಿ ಮುದ್ರಣ ಗೊಂಡಿವೆ.
೬: ಸಂಪಾದಕರು ಇನ್ನಷ್ಟು ಅಚ್ಚುಕಟ್ಟಾಗಿ ಸಂಪಾದನೆ ಮಾಡಬಹುದಿತ್ತು.
೭ ಹಲವಾರು ಲಿಪಿಸ್ಖಾಲಿತ್ಯಗಳು ಉಳಿದುಕೊಂಡಿವೆ
೮. ವಸ್ತುನಿಷ್ಠ ವಿಮರ್ಶೆ ಕಾಣೆಯಾಗಿದೆ.
೯. ಹಲವಾರು ಪುನರುಕ್ತಿಗಳಿಂದ ಕೂಡಿರುವುದು.
ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ಅವರನ್ನು ಈ ಅಭಿನಂದನ ಗ್ರಂಥದ ಪರಿಚಯ ಮಾಡಿಸಲೆಂದು, ಕರೆದು ಸತ್ಕಾರ ಮಾಡಿದ,ಪುಸ್ತಕ ಕಳಿಸಿದ ಶಾಲಿನಿ ಪ್ರದೀಪ್ ಅವರಿಗೆ, ನಮ್ಮನ್ನು ಬೀಳ್ಕೊಟ್ಟ ಅವರ ಮನೆಯವರಿಗೆ, ಈ ಪುಸ್ತಕದ ಕೇಂದ್ರ ಬಿಂದು ಹೂಲಿ ಶೇಖರ್ ಅವರಿಗೆ ಅಭಿನಂದನೆಗಳು. ಅವರ ಕೃತಿಗಳ ಕುರಿತು ತೌಲನಿಕ ಅಧ್ಯಯನ ಮಾಡಿದ ( ನನ್ನ ಮೇಷ್ಟ್ರು ಚಂದ್ರ ಶೇಖರ ಕಂಬಾರ ಮತ್ತು ಇವರು ಉತ್ತರ ಕರ್ನಾಟಕದ ಜಾನಪದ ರಂಗಭೂಮಿಯ ಜೀವಂತ ಪ್ರತಿನಿಧಿಗಳು . ಅವರ ಜೋಕುಮಾರ ಸ್ವಾಮಿ ನಾಟಕ ಇವರ ಮೇಲೆ ಬೀರಿದ ಪ್ರಭಾವ ಇವರ ಅದೇ ಹೆಸರಿನಲ್ಲಿ ಕಲಾ ಬಳಗ ಸ್ಥಾಪನೆಗೆ ದಾರಿ ಮಾಡಿಕೊಡುತ್ತದೆ. ಹಲವಾರು ಲೇಖಕರು ಕಲ್ಯಾಣದ ಕ್ರಾಂತಿಯಿಂದ ಪ್ರಭಾವಿರಾಗಿ ಅದನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ನಾಟಕಗಳನ್ನು ಬರೆದಿದ್ದಾರೆ. ಶ್ರೀರಂಗರ ಸಿರಿ ಪುರಂದರ ಮತ್ತು ಇವರ ರಂಗಪುರಂದರ ನಾಟಕಗಳ ತೌಲನಿಕ ಅಧ್ಯಯನ ಸಾಧ್ಯ . ಅದರಂತೆ ಟಿಪ್ಪುಸುಲ್ತಾನ್ ಕುರಿತು ಗಿರೀಶ್ ಕಾರ್ನಾಡ್ ಮತ್ತು ಇವರ ಅವನ ಕುರಿತು ಬರೆದ ನಾಟಕ) ಮೌಲ್ಯ ಮಾಪನ ಮಾಡಿದ ಕೃತಿ ಮೂಡಿ ಬರಲಿ ಎಂದು ಹಾರೈಸೋಣ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
