ಬರಲಿರುವ ನಾಳೆಯ ಹೊಸ ಸೂರ್ಯನ ಕಾಯುವುದನೂ ಮರೆತು… ಕು.ಸ.ಮಧುಸೂದನ್ ರಂಗೇನಹಳ್ಳಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಾಲ ಕಳೆಯುತ್ತಿಹೆವು
ಪುರಾಣದ ಮಿಥ್ಯ ಕಥೆಗಳನು
ಹಾಡುಗಳೆಂದು ಕೊಂಡ
ಆಕ್ರಂದನಗಳನು ಕೇಳುತ್ತ
ಸಾವಿರ ಯುದ್ದಗಳ
ಗೆಲುವಿನ ಗೋಪುರಗಳಲ್ಲಿ
ಸಮಾಧಿಯಾಗಿ ಹೋದವರ
ಕರುಣಾಜನಕ ಪ್ರಲಾಪಗಳನು
ಶತಮಾನಗಳಿಂದಲೂ ಕೇಳುತ್ತ.
ಇದ್ದ ಸೂರ್ಯನನೂ ಮರೆಸುವಂತಹ
ತಮವ ಹೊದ್ದು
ಉಟ್ಟ ಸೀರೆಯ ಬಿಚ್ಚದೇ
ಬೆತ್ತಲಾಗಿಸಿ
ಬಗೆದು ನೋಡುವ
ಕಾಮಾಂಧತೆಯ ಕಣ್ಣುಗಳನ್ನು
ಉದ್ದುದ್ದ ನಖಗಳನೇ ಕತ್ತಿಯಲುಗನ್ನಾಗಿಸಿ
ತಿವಿಯುವ ಸರದಾರರ
ಅವರ ಹೆಂಡಂದಿರ
ಹೆಂಡಂದಿರ ಮಿಂಡಂದಿರ
ಸೆರೆಯಾಳುಗಳಾಗಿ
ಬರಲಿರುವ ನಾಳೆಯ ಹೊಸ
ಸೂರ್ಯನ ಕಾಯುವುದನೂ ಮರೆತು
ಮುಸುಕೆಳೆದುಕೊಂಡ ಕತ್ತಲನೇ
ಭಾಗ್ಯ
ಎಂದುಕೊಂಡು
ಕತ್ತಲ
ದಯಪಾಲಿಸಿದ ಭಾಗ್ಯವಿಧಾತನನ್ನು
ಬೆಟ್ಟವೆಂಬ ಅಟ್ಟದ ಮೇಲಿನ
ಗರ್ಭಗುಡಿಯೊಳಗಿಟ್ಟು
ಪೂಜುತಿಹೆವು
ನಮ್ಮ ಬಿಡುಗಡೆಗೆ ಬಂದ ಅವತಾರ ಪುರುಷನೆಂದು!
ಇದೀಗ ಕಿತ್ತೆಸೆಯಲಿದ್ದಾರೆ
ಬುದ್ದ ಬಸವ ಗಾಂಧಿಯ
ಹಳೇ ಪೋಟೊಗಳನು
ಬರೆಯಲಿದ್ದಾರೆ
ಸಿದ್ದರಾಗಿರಿ
ಓದಲು ಹೊಸ ಇತಿಹಾಸವನು
- ಕು.ಸ.ಮಧುಸೂದನ್ ರಂಗೇನಹಳ್ಳಿ
