ನಾಲ್ಕು ದಶಕಗಳಿಂದ ಜಾನಪದ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಡಾ. ಪುರುಷೋತ್ತಮ ಬಿಳಿಮಲೆಯವರ ಆಯ್ದ ಸಂಶೋಧನ ಲೇಖನಗಳ ಸಂಕಲನವೇ ಹುಡುಕಾಟ ಕೃತಿ. ಈ ಕೃತಿಯ ಕುರಿತು ಹಿರಿಯ ಕವಿಯತ್ರಿಯಾದ ಬಿಟ್ಟೀರ ಚೋಂದಮ್ಮ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹುಡುಕಾಟ
ಲೇಖಕರು : ಡಾ. ಪುರುಷೋತ್ತಮ ಬಿಳಿಮಲೆ
ಬೆಲೆ : ೧೭೫.೦೦
ಡಾ. ಪುರುಷೋತ್ತಮ ಬಿಳಿಮಲೆಯವರ ಸಂಶೋಧನೆಯ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಮುಂದೆ ನಡೆದಾಗ ದೊರೆತ ಇತಿಹಾಸವಿಲ್ಲದವರ ಇತಹಾಸ ಮತ್ತು ಕುಮಾರರಾಮ ಮನಸೆಳೆದವು. ಮುಂದಕ್ಕೆ ಹೆಜ್ಜೆಯಿರಿಸಿದಾಗ ತೆರೆದುಕೊಂಡ ಮೈಲಾರ ಲಿಂಗ ಮತ್ತವನ ಮೂವ್ವರು ಪತ್ನಿಯರು ಬಹಳಷ್ಟು ವಿಚಾರ ತಿಳಿದಂತಾಯಿತು. ಹಾಗೇ ಒಂದು ವಿಷಯ ಮುರುಗನ (ಕುಮಾರ) ಎರಡನೆ ಹೆಂಡತಿಯಾದ ವಳ್ಳಿ ದೇವಿಯು ಬೇಡರ (ಕಾಡು ಜನರ) ಕುಲದವಳು. ಇಲ್ಲಿ ವಳ್ಳಿ = ವಲ್ಲಿ = ಹುತ್ತ, (ಗುಹೆ) ಯಲ್ಲಿ ವಾಸಮಾಡುವ ರಾಜನ ಕುವರಿ. ಮೈಲಾರ ಲಿಂಗೇಶನ ಕಥೆ ನಾಥ ಪಂಥದ ಕುರುಹಾಗಿ ಇಡೀ ಭರತವರ್ಷದಲ್ಲಿ ವ್ಯಾಪಿಸಿದೆ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರೂ ಮೂಲ ಒಂದೇ ಎಂದು ಸಾರಿ ಸಾರಿ ಹೇಳುತ್ತದೆ. ಹಾಲೂಡುವ ಹಸು ಇರಬಹುದು, ಮಹಿಳೆ ಇರಬಹುದು ಇವುಗಳ ಸಂಕೇತ ಮಾತ್ರ ಒಂದೇ ವಿಷಯವನ್ನು ತಿಳಿಸುತ್ತದೆ. ಲಿಂಗದಿಂದ ರಕ್ತ ಚಿಮ್ಮುವ ಕಾರಣ ಹಲವು, ಒಟ್ಟಿನಲ್ಲಿ ತನ್ನಿರವನ್ನು ಪ್ರಕಟಪಡಿಸಿ ಒಂದು ಗುಡಿ ಕಟ್ಟಿಸಿಕೊಳ್ಳುವ ಪರಮಾತ್ಮನ ಲೀಲೆ. ಬಹುತೇಕ ಶಿವ ಲಿಂಗಗಳಲ್ಲಿ ಈ ಕಥೆ ಪ್ರಚಲಿತವಿದೆ. ಇನ್ನು ಸ್ತ್ರೀ ಲಿಂಗಗಳ ಬಗ್ಗೆ ಹೇಳುವುದಾದರೆ ಉದಾಹರಣೆಗೆ ಕೊಲ್ಲೂರು ಮೂಕಾಂಬಿಕೆ ಲಿಂಗದಲ್ಲಿ ಐಕ್ಯವಾದ ಭಾವವನ್ನು ಹೊದಿದೆ. ಸ್ವರ್ಣ ರೇಖಾಂಕಿತ ಲಿಂಗದಲ್ಲಿರುವ ಸುವರ್ಣ ರೇಖೆಯೇ ತಾಯಿ ಮೂಕಾಂಬಿಕೆಯ ಪ್ರಸ್ತುತಿ. ಅರ್ಧನಾರೀಶ್ವರ ಭಾವ.

ಇನ್ನು ಜಾನಪದದೊಳಗಡೆಗೆ ಹೆಜ್ಜೆಯಿಟ್ಟರಂತು ಲೇಖಕರು ಹೇಳಿದಂತೆ ತುಳು ಮತ್ತು ಸಮಕಾಲೀನರಲ್ಲಿ ಪ್ರಚಲಿತವಿರುವ ವೈವಿಧ್ಯಮಯ ಕಥೆಗಳು ಬೇರೆಲ್ಲೂ ಸಿಗಲಾರದು. ಸಿಗಲಾರದು ಎಂದರೆ ತಪ್ಪಾಗಬಹುದು, ಪರಕೀಯರ ದಾಳಿಗಳು ಮತ್ತು ವಲಸೆಯಂಥ ಪರಿಸ್ಥಿತಿಯಿಂದಾಗಿ ಉತ್ತರ ಭಾರತದಲ್ಲಿ ಬಹುತೇಕ ಮರೆಯಾಗಿದೆ. ಕರಾವಳಿ, ಮಧ್ಯ ಭಾರತ, ಈಶಾನ್ಯ ಭಾರತ ಮತ್ತು ಬಹುತೇಕ ದಕ್ಷಿಣ ಭಾರತದಲ್ಲಿ ಇಂತಹ ಕಥೆಗಳು ಅವರದ್ದೇ ಆದ ಭಾವದಲ್ಲಿ ಇಂದಿಗೂ ಜೀವಂತವಾಗಿರುವುದನ್ನು ಕಾಣಬಹುದು. ತುಳು ನಾಡಿನಲ್ಲಿ ಯಕ್ಷಗಾನ ಮುಂತಾದ ಕಡೆ ಈ ಕಥೆಗಳನ್ನು ಬಳಸಿಕೊಳ್ಳುವುದರಿಂದ ಇಂದಿಗೂ ಹೆಚ್ಚು ಪ್ರಚಾರದಲ್ಲಿ ಇದೆ.

ಮಹಿಳಾ ಕೇಂದ್ರಿತ ಜನಪದ ಕಥೆಯು ಪುರುಷ ಕೇಂದ್ರಿತ ನಾಟಕವಾದಾಗ. ಇಲ್ಲಿ ಗಿರೀಶ್ ಕಾರ್ನಾಡರ ನಾಗಮಂಡಲ ಸಮಯೋಚಿತವಾಗಿದೆ. ಮುಂದುವರೆದು, ಅಂತ್ಯ ಸಂಸ್ಕಾರ ಮತ್ತು ಬೊಜ್ಜ, ಇದರಲ್ಲಿ ಬಹಳ ಚೆನ್ನಾಗಿ ಅರೆಗನ್ನಡ (ನಡುಗನ್ನಡ) ಭಾಷಿಕ ಗೌಡರ ಪೂರ್ತಿ ಚರಿತ್ರೆಯೇ ಬಿಂಬಿತವಾಗಿದೆ. ಇನ್ನು ಸಿದ್ಧವೇಶದ ಕಥೆಯನ್ನೂ ಲೇಖಕರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಜೊತೆಗೆ ಸಿದ್ಧ ವೇಶದ ಹಾಡು ಕೂಡ ಇದ್ದು ಓದುಗರಿಗೆ, ಒಂದು ಜನಾಂಗವು ತಾವು ಸಾಗಿ ಬಂದ ಮಾರ್ಗದ ಸ್ಪಷ್ಟ ಚಿತ್ರಣ ನೀಡುತಿದೆ. ಕೊನೆಯಾಗಿ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ಎಲ್ಲಮ್ಮ, ಹುಲಿಗೇರಮ್ಮನ ಸುಂದರ ಪ್ರಸ್ತುತಿಯೊಂದಿಗೆ ಪಯಣದ ಮುಕ್ತಾಯವಾಗಿದೆ. ಜಗದಂಬೆ ರೇಣುಕೆಯ ಮತ್ತು ಜಮದಗ್ನಿಯ ಪುರಾಣ ಕಥೆಯೇ ಎಲ್ಲಮ್ಮ ಮತ್ತು ಹುಲಿಗೇರಮ್ಮನ ಕಥೆ. ಎಲ್ಲಮನ ಹಾಡು ಕೂಡ ಇಲ್ಲಿ ಸಮಯೋಚಿತವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಹುಡುಕಾಟವು ನವರಸಭರಿವಾಗಿದೆ. ಯಾರಿಗೆ ಏನು ಬೇಕೋ ಅದನ್ನು ಸವಿಯಬಹುದು. ಪ್ರತಿಯೊಬ್ಬರೂ ಹುಡುಕಾಟದ ಜೊತೆಗೆ ನಾಲ್ಕು ಹೆಜ್ಜೆ ಹಾಕಿದರೆ ಅವರಿಗೆ ಬೇಕಾದ ಮಾಹಿತಿ ಸಿಗುವುದು ನಿಜ. ಇಂತಹ ಪುಸ್ತಕ ಇಂದಿನ ಪೀಳಿಗೆಗೆ ಬಹಳ ಅವಶ್ಯಕವಾಗಿದೆ. ಹಾಗು ಪ್ರಯೋಜನಕಾರಿಯಾಗಿದೆ.
ಡಾ. ಪುರುಷೋತ್ತಮ ಬಿಳಿಮಲೆಯವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.
- ಬಿಟ್ಟೀರ ಚೋಂದಮ್ಮ
