ಗಿಡಮರಗಳೂ ಈ ಬ್ರಹ್ಮಾಂಡದಷ್ಟೇ ಅದ್ಭುತ. ಸೃಷ್ಟಿಯಲ್ಲಿ ಭಾವನೆಗಳಿರುವ ಪ್ರಾಣಿ, ಮನುಷ್ಯ ಮಾತ್ರ ಅಂತ ನಮಗೆ ನಾವೇ ಘೋಷಿಸಿಕೊಂಡ ಮೇಲೂ ಸಸಿಗಳು ತೋರುವ ಈ ಹೋರಾಟ ಪ್ರಕೃತಿಯಲ್ಲಿ ‘ಮನುಷ್ಯ ಕೇವಲ ಮಾತ್ರ’ ಎನ್ನುವುದನ್ನು ಹೇಳ್ತಿದೆ ಅಲ್ವಾ ತನು?…ಎಲ್ಲರಿಗೂ ವಿಶ್ವ ಮಣ್ಣು ದಿನದ ಶುಭಾಶಯಗಳು. ಮಣ್ಣು ನಾವು ಪಡೆಯಬಹುದಾದ ಅತಿ ಸುಂದರ ಕೊಡುಗೆ.
ಗಿಡ ಇಷ್ಟು ಚೆನ್ನಾಗಿದೆ. ಮೊಗ್ಗೂ ಬರ್ತದೆ. ಕಾಯಿ ಕಚ್ಚಲ್ಲ ನೋಡು. ಅಪರೂಪಕ್ಕೆ ಎರಡು ಹೂವರಳಿದ್ರೂ ಹೀಚಾಗುವ ಮುನ್ನ ಉದುರಿ ನೆಲ ಕಾಣ್ತದೆ. ನಿಂಬೆ ಗಿಡ ಬೆಳೆಸಿದ್ದಕ್ಕೆ ಉದುರಿದ ಹೂವಿನ ಪರಿಮಳವಷ್ಟೇ ಪ್ರಾಪ್ತಿ’ ಅಂದರು ಅವರು. ಹೀಗೇಕಾಗ್ತಿದೆ ಗೊತ್ತಾಗ್ತಿಲ್ಲ ಎನ್ನುವುದು ಅವರ ಮುಖದಲ್ಲಿ ಎದ್ದು ಕಾಣ್ತಿತ್ತು.

ತನು…
ಟೆರೇಸಿನ ಮೇಲೆ ಒಂದಷ್ಟು ಹೂವು ಹಣ್ಣಿನ ಕಿಚನ್ ಗಾರ್ಡನ್ ಮಾಡಿ ಆಗಾಗ ಆ ಫೋಟೋ ಹಾಕಿ ಸಂಭ್ರಮಿಸ್ತಿದ್ದ ಅವರು ನನ್ನ ಆತ್ಮೀಯರು. ದೇಹ ದಂಡನೆಗೂ ಕೃಷಿ ಆಸಕ್ತಿಗೂ ಕಿಚನ್ ಗಾರ್ಡನ್ನೇ ಆಧಾರ.
ಆದರೆ ತನು ..
ಮಣ್ಣಿಗೆ ಊರಿದ್ದೆಲ್ಲ ಮೊಳೆಯಲ್ಲ.ಮೊಳೆತಿದ್ದೆಲ್ಲ ಬೆಳೆಯಲ್ಲ. ಬೆಳೆದಿದ್ದೆಲ್ಲ ಫಲವಾಗಲ್ಲ. ಫಲವಾದದ್ದೆಲ್ಲ ಕೈಸೇರಲ್ಲ. ಹಾಗೇನಾದರು ಆದರೆ ಮನುಷ್ಯರ ತಲೆ ನೆತ್ತಿ ಮೇಲೆ ನಿಲ್ಲುವುದೂ ಇಲ್ಲ. ಅವರು ಹಾಕಿದ ಹಣ್ಣಿನ ಗಿಡಗಳಲ್ಲಿ ಉಳಿದವು ನಾಕಾರು ಹಣ್ಣು ಕೊಟ್ಟು ಕರ್ತವ್ಯ ನಿಭಾಯಿಸಿದ್ರೆ ನಿಂಬೆ ಗಿಡ ಮಾತ್ರ ಹುಲುಸಾಗಿ ಬೆಳೆಯಿತೇ ಹೊರತು ಹಣ್ಣು ಬಿಡಲಿಲ್ಲ.

ಇಷ್ಟೆಲ್ಲಾ ಆರೈಕೆ ಮಾಡಿದ್ರೂ ಫಲವಿಲ್ಲ ಅಂತ ಅವರು ಗೊಣಗಿದಾಗ ಕುತೂಹಲಕ್ಕೆ ಏನು ಆರೈಕೆ ಮಾಡಿದ್ರಿ ಅಂದೆ. ಇಡೀ ವರ್ಷ ನೀರೂಡಿದ್ದಾರೆ. ಗೊಬ್ಬರ ಕೊಟ್ಟು ಸಾವಯವ ಸ್ಲರಿ ಹಾಕಿದ್ದಾರೆ. ಗಿಡ ದಿನದಿಂದ ದಿನಕ್ಕೆ ಹುಲುಸಾಗಿ ಬೆಳೆದಿದ್ದು ನೋಡಿ ಖುಷಿಯಾಗಿ ಇನ್ನೇನು ಫಲ ಕೊಡುತ್ತೆ ಅಂತ ಕಾದೂ ಕಾದೂ ಸೋತರೂ ಅದರ ಪಾಡಿಗೆ ಅದು ಬೆಳೆಯುತ್ತಲೇ ಹೋಗಿದೆ.
ನಿನಗೆ ಗೊತ್ತಾ ತನು ..
ಪ್ರಕೃತಿ ತನ್ನೊಳಗೆ ಅಗಾಧ ಕುತೂಹಲವನ್ನು ಅಚ್ಚರಿಯ ವಿಜ್ಞಾನವನ್ನೂ ಅಡಗಿಸಿಕೊಂಡಿದೆ. ಒಂದೊಂದು ಗಿಡಮರಗಳೂ ಒಂದೊಂದು ಸಂಶೋಧನೆಯ ಅಕರ ಗ್ರಂಥ. ಹೀಗೆ ನಿಂಬೆ ಗಿಡವೊಂದು ಒಂದೂ ಹಣ್ಣು ಕರುಣಿಸದಿದ್ದಿದ್ದಕ್ಕೆ ಕಾರಣ ಗೊತ್ತಾ ನಿನಗೆ?
ಇಡೀ ವರ್ಷ ಅದಕ್ಕೆ ಉಬ್ಬರವಾಗುವಷ್ಟು ಪೋಷಣೆ ನೀಡಿದ್ದು!
ತನು..ಫಲ ಕೊಡುವ ಈ ಗಿಡಮರಗಳಲ್ಲಿ ಒಂದು ಅಚ್ಚರಿಯಿದೆ. ಅವು ಒಂದು ಋತುವಿನ ಮಳೆಗಾಲ ಮುಗಿಸಿ ಮೈತುಂಬ ಎಲೆ ಮುಡಿದು ಭರ್ಜರಿ ಆಹಾರೋತ್ಪಾದನೆ ಮಾಡಿ ಬರುವ ಚಳಿಗಾಲಕ್ಕೆ ಸ್ವಲ್ಪ ಸೋಮಾರಿಯಾಗಿ ಕಳೆಯುವ ಖುಷಿಯಲ್ಲಿರ್ತವೆ.
ಕಾರಣ ಚಳಿಗಾಲದಲ್ಲಿ ಮರಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುವುದಿಲ್ಲ. ಆದ್ದರಿಂದ ಅವು ಕ್ಲೋರೊಫಿಲ್ ಉತ್ಪಾದನೆಯನ್ನು ಕಡಿಮೆ ಮಾಡಿಕೊಳ್ತವೆ. ಹಾಗಾಗಿ ಎಲೆಗಳ ಹಸಿರು ಕುಂದಿ ಉದುರಿ ಮುಂದಿನ ಋತುವಿಗೆ ತಯಾರಿ ನಡೆಸುತ್ತದೆ. ನಂತರದ ಮೂರು ತಿಂಗಳು ಕಡು ಬೇಸಿಗೆ. ಆ ದಿನಗಳಲ್ಲಿ ಗಿಡಮರಗಳು ಬಾಡುತ್ತವೆ.ಸೋಲುತ್ತವೆ.

ಇನ್ನೇನೂ ತಮ್ಮ ಬದುಕು ಮುಗಿಯಿತು ಅಂದು ಕೊಳ್ಳುತ್ತವೆ. ಅದು ಹಾಗೇ ಆಗಬೇಕು ಕೂಡ. ಸ್ಟ್ರೆಸ್ ಪಿರಿಯಡ್ ಅಂತೀವಿ ಇದನ್ನು. ತೋಟಗಾರಿಕೆ ಬೆಳೆಗಳಿಗೆ ಈ ಸ್ಟ್ರೆಸ್ ,ಪಿರಿಯಡ್ ಅವಶ್ಯಕ.
Plants can modify their development to adapt to stress conditions. Stressed plants might flower as an emergency response to produce the next generation. In this way, plants can preserve its species, even in an unfavorable environment.
ತನು..ಹೀಗೆ ಕಡುಬಿಸಿಲಿಗೆ ಒಡ್ಡಿಕೊಂಡಾಗ ಗಿಡದಲ್ಲಿ ಒಂದು ಅದ್ಭುತ ಘಟಿಸ್ತದೆ!!
ಈ ಬೇಸಿಗೆಯೇ ತನ್ನ ಬದುಕಿನ ಕೊನೆಯ ಋತುವಿರಬಹುದು. ನಾಳೆ ನಾನು ಬದುಕ್ತಿನೋ ಇಲ್ಲವೋ ಎನ್ನುವ ಸಂದೇಹದಲ್ಲಿ ತನ್ನ ಅಂತಿಮ ಕರ್ತವ್ಯ ‘ತನ್ನ ಪೀಳಿಗೆಯನ್ನು ಬೆಳೆಸುವ’ ಕ್ರಿಯೆಗೆ ಗಿಡಮರಗಳು ತಯಾರಾಗ್ತವೆ. ಈ ಕಾಲಘಟ್ಟದಲ್ಲಿ ಮೊಗ್ಗಾಗಲಿಕ್ಕೆ ಬೇಕಾದ ಒಂದು ಪ್ರೋಟೀನು ಗಿಡ ಮರಗಳಲ್ಲಿ ಉತ್ಪತ್ತಿಯಾಗಿ ಹರೆಹರೆಯ ತುದಿಯಲ್ಲಿ ಬಂದು ಕೂರುತ್ತದೆ ತನು. ಹೀಗೆ ಶೇಖರಣೆ ಆಗುವ ಈ ಪ್ರೋಟೀನು ಗಿಡಮರಗಳ ಬದುಕಿನ ಅಂತಿಮ ಕರ್ತವ್ಯ ನಿಭಾಯಿಸುವ ಜವಬ್ದಾರಿಯಲ್ಲಿರ್ತದೆ. ತಾನು ಎದುರಿಸುವ ಋತುವಿನ ಕಡುಬೇಸಿಗೆಯನ್ನು ಕಳೆಯುವಾಗ ಇದು ತನ್ನ ಕೊನೆಯ ಋತುವಂತಲೇ ತಿಳಿಯುತ್ತದಂತೆ. ತನ್ನ ಸಂತಾನ ಮುಂದುವರೆಯಲೇಬೇಕೆಂಬ ಅದಮ್ಯ ಇಚ್ಛೆಯಿಂದ ಫಲ ಬಿಟ್ಟು ಬೀಜೋತ್ಪತ್ತಿಗಾಗಿ ಹರೆ ತುದಿಗೆ ಬಂದು ಸೂಕ್ತ ಸಮಯಕ್ಕೆ ಕಾಯುತ್ತದೆ.
ತನು… ಸರ್ವೈವಲ್ ಅಫ್ ದಿ ಫೆಟ್ಟೆಸ್ಟ್ ಎನ್ನುವುದು ಪ್ರಾಣಿ ಲೋಕದಲ್ಲಿ ಮಾತ್ರವಲ್ಲ. ಈ ಜಗದ ಸಚರಾಚರ ಜೀವಿಗಳಲ್ಲೂ ನಡೆಯುತ್ತದೆ. ಉಳಿವಿಗಾಗಿ ಹೋರಾಟ ಮತ್ತು ಇದು ಕೊನೆಗಾಲವೆನ್ನುವಾಗ ಸಂತಾನ ಮುಂದುವರಿಸುವುದು ಜೀವಿಗಳ ಅಂತಿಮ ಮತ್ತು ಆದ್ಯ ಧ್ಯೇಯ. ಸಸ್ಯಕುಲವೂ ಇದಕ್ಕೆ ಹೊರತಲ್ಲ ಅಂದರೆ ಅಚ್ಚರಿ ಅಲ್ವಾ ತನು. ಈ ಋತುವಿನ ಬೇಸಿಗೆಗೆ ಗಿಡಮರಗಳ ಜೀವ ಬಡಕಲಾದಾಗ ಅದು ತನ್ನ ಇಡೀ ದೇಹದ ಶಕ್ತಿಯನ್ನೆಲ್ಲವನ್ನೂ ಒಗ್ಗೂಡಿಸಿ ಮೊಗ್ಗೊಡೆಯಲು ತಯಾರಾಗ್ತದೆ. ಆ ಸಂದರ್ಭದಲ್ಲಿ ಅದಕ್ಕೆ ಯಥೇಚ್ಛ ನೀರು ಗೊಬ್ಬರ ಸಿಕ್ಕಿತೋ.
ಮೊಗ್ಗಾಗಬೇಕಿದ್ದ ಆ ಪ್ರೋಟೀನು ಚಿಗುರಿ ಮರಳಿ ಎಲೆಯಾಗ್ತದೆ!! ಗಮನಿಸು ತನು. ಮೊಗ್ಗು ಗಿಡದ ರೀಪ್ರೊಡಕ್ಟಿವ್ ಪಾರ್ಟ್. ಚಿಗುರು ಆ ಸಸ್ಯದ ವೆಜಿಟೆಟಿವ್ ಗ್ರೋತ್. ಯಾವಾಗ ತನಗೇ ಒಳ್ಳೆಯ ಪೋಷಣೆ ದೊರಕಿತೋ ಆಗ “ನಾನೇ” ಇನ್ನೂ ಬಾಳಬಲ್ಲೆ ಎನ್ನುವ ಸಣ್ ಅಹಮ್ಮು ಗಿಡಮರಗಳಿಗೆ. ಥೇಟು ಮನುಷ್ಯರ ಹಾಗೆ.
ಮೊಗ್ಗಾಗಬೇಕಿದ್ದಿದ್ದು ಚಿಗುರಾಗ್ತದೆ. ಈ ಸ್ಟ್ರೆಸ್ ಪಿರಿಯಡ್ ಸಿಗದೆ ಹೋದಾಗ ಗಿಡಮರಗಳು ಫಲಕಚ್ಚದೆ ತನ್ನ ಪಾಡಿಗೆ ತಾವೇ ಹಚ್ಚಗೆ ಬೆಳೆಯುವುದನ್ನು ಮುಂದುವರಿಸ್ತವೆ. (ಈ ಸ್ಟ್ರೆಸ್ ಪಿರಿಯಡ್ ಮರದಿಂದ ಮರಕ್ಕೆ ವ್ಯತ್ಯಾಸವಾಗ್ತದೆ)
ಚಿತ್ರದಲ್ಲಿರುವ ಈ ಬೂರುಗದ ಹತ್ತಿಯ ಮರ ಕೂಡ ಇಂತಹುದೇ ಪರಿಸ್ಥಿತಿಯಲ್ಲಿದೆ ತನು. ಆದರೆ ಈ ವರ್ಷ ಅಂತಹ ಕೊರೆವ ಚಳಿಗಾಲ ಕಡುಬೇಸಿಗೆಯೇ ಬಂದಿಲ್ಲ .ಆದರೂ ಈ ಮರ ಹೀಗೆ ಇಡೀ ಮೈಯೆಲ್ಲಾ ಹೂ ಅರಳಿಸಿಕೊಂಡಿದೆ. ಅದಕ್ಕೂ ಕಾರಣ ಏನೂಂತ ಕೇಳಿದ್ರೆ ಅಚ್ಚರಿ ಪಡ್ತಿಯಾ ನೀನು. ಹೇಗೆ ಕಡುಬೇಸಿಗೆಯಲ್ಲಿ ಗಿಡಮರಗಳು ಇದು ತನ್ನ ಕೊನೆಯ ಋತು ಅನ್ಕೊಂಡು ಸಂತಾನ ಮುಂದುವರಿಕೆಗೆ ಅಣಿಯಾಗ್ತವೋ ಹಾಗೆಯೇ ಮರವೊಂದಕ್ಕೆ ತಾನು ಸಾಯುವುದು ನಿಶ್ಚಿತ ಅಂತ ಗೊತ್ತಾದಾಗ ಕೂಡ ಸಂತಾನ ಮುಂದುವರಿಕೆಗೆ ತಯಾರಾಗುತ್ತದೆ. ಈ ಬೂರುಗದ ಮರದ ಬುಡವನ್ನು ಗಮನಿಸು ತನು. ಅದನ್ನು ಖಂಡು(girdling)ಹಾಕಲಾಗಿದೆ. ಮರದ ಮೇಲುಗಡೆ ಹಾದು ಹೋಗಿರುವ ಎಲೆಕ್ಟ್ರಿಕ್ ತಂತಿಗಳಿಗೆ ಇದು ತಾಗಿ ಸಮಸ್ಯೆ ಮಾಡಬಹುದೆನ್ನುವ ಕಾರಣಕ್ಕೆ ‘ಖಂಡು’ ಹಾಕಿದ್ದಾರೆ. ಈ ಖಂಡು ಹಾಕುವುದು ಅಂದರೆ ಮರದ ಮುಖ್ಯ ಕಾಂಡದ ಸಣ್ಣ ಭಾಗದ ತೊಗಟೆಯನ್ನು ಒಳಗಿನ ಗಟ್ಟಿ ಕಾಂಡ ಕಾಣುವವರೆಗೆ ಹೆರೆದು ತೆಗೆಯುವುದು. ಎಲೆಯಲ್ಲಿ ಉತ್ಪಾದನೆ ಆಗುವ ಆಹಾರವೂ ಬೇರಿನಿಂದ ಹೀರಲ್ಪಡುವ ಸಾರವೂ ಇದೇ ಹೊರ ತೊಗಟೆಯ ಮೂಲಕವೇ ಸಾಗಾಣೆ -ಯಾಗಬೇಕು ತನು. ಹೀಗೆ ಖಂಡು ಹಾಕಿದ ಮರದಲ್ಲಿ ಈ ಸಾಗಾಣೆ ನಿಂತು ಹೋಗುತ್ತದೆ. ಎಲೆಯಲ್ಲಿ ಉತ್ಪತ್ತಿಯಾದ ಆಹಾರ ಮರದ ಮೇಲ್ಬಾಗದಲ್ಲೇ ಉಳಿಯುತ್ತದೆ , ಹೀರಿದ ಸಾರವೂ ಬೇರಿನಲ್ಲೇ. ಹೀಗಾದಾಗ ತಾನು ಸಾಯುವುದು ನಿಶ್ಚಿತ ಅಂತ ಆ ಮರಕ್ಕೆ ಗೊತ್ತಾಗುತ್ತದೆ. ಈ ಸಂದರ್ಭದಲ್ಲೇ ಸಂತಾನ ಮುಂದುವರೆಸುವ ಪಣ ತೊಟ್ಟು ಮೇಲ್ಬಾಗದಲ್ಲಿ ಕಾರ್ಬೋಹೈಡ್ರೇಟ್ ರೂಪದಲ್ಲಿದ್ದ ಆಹಾರ ಪ್ರೋಟೀನ್ ಆಗಿ ಬದಲಾಗುತ್ತದೆ. ಹರೆಹರೆಯನ್ನೂ ಹೋಗಿ ಸೇರುತ್ತದೆ. ಇನ್ನಿಲ್ಲದ ಸಾಮರ್ಥ್ಯದಿಂದ ಶಕ್ತಿ ಮೀರಿ ಹೂವರಳಿಸಿಕೊಳ್ಳುತ್ತದೆ. ಕಾಯಿಕಚ್ಚಿ ಫಲ ಮಾಗುವ ತನಕವೂ ಉಸಿರುಹಿಡಿದು ಬದುಕಲು ಹೆಣಗುತ್ತದೆ.

ಹೇಗಾದರೂ ತನ್ನ ಸಂತಾನ ಮುಂದುವರೆಯಲಿ ಎನ್ನುವ ಪ್ರಯತ್ನ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ತನು. ಬೇರಿನ ಭಾಗದಲ್ಲಿ ಶೇಖರಣೆಯಾದ ಸಾರ ಮತ್ತೊಂದು ಬಗೆಯಲ್ಲಿ ಸಂತಾನ ಮುಂದುವರೆಸಲು ಪ್ರಯತ್ನಿಸುತ್ತದೆ. ಹೀಗೆ ಖಂಡು ಬಿದ್ದ ನಂತರ ಅದು ಮೂರು ನಾಲ್ಕು ವಾರದವರೆಗೂಆ ಜಾಗದಲ್ಲಿ ಸ್ರವಿಸುತ್ತದೆ(bleed).ನಂತರ ತನ್ನಿಂತಾನೇ ಗಾಯವನ್ನು ಮಾಯಿಸಿಕೊಂಡು ಆ ಜಾಗದಿಂದ ಹೊಸ ಬಲಿಷ್ಠ ಚಿಗುರನ್ನು ಹೊಮ್ಮಿಸುತ್ತದೆ.(varies from tree to tree) ಎಂತಹ ಬೆರಗಲ್ವಾ ತನು ಇದು. ಉಳಿವಿಗಾಗಿ ಹೋರಾಟ!!
ಅಚ್ಚರಿ ಅಂದರೆ ಮನುಷ್ಯ ಗಿಡಮರಗಳ ಈ ಹೋರಾಟವನ್ನು ತನ್ನ ಅನುಕೂಲಕ್ಕಾಗಿ ಬಳಸಿಕೊಳ್ತಾನೆ. ಸೇಬು ಸೀಬೆ ದ್ರಾಕ್ಷಿಯಂತಹ ಹಣ್ಣಿನ ಜಾತಿಗಳ ಮುಖ್ಯ ಕಾಂಡವನ್ನು ಸಣ್ಣದಾಗಿ ಖಂಡು ಹೊಡೆದು ಎಲೆಗಳಲ್ಲಿ ಉತ್ಪತ್ತಿಯಾದ ಕಾರ್ಬೋಹೈಡ್ರೇಟ್ ಬೇರನ್ನು ತಲುಪಿಸಗೊಡದೆ ಪ್ರೋಟೀನ್ ಆಗಿ ಬದಲಾವಣೆಗೊಂಡು ಹೆಚ್ಚು ಫಲಕಟ್ಟಲು ತಂತ್ರ ರೂಪಿಸುತ್ತಾರೆ. ಹಣ್ಣಿನ ಗಾತ್ರ ಕೂಡ ಉತ್ತಮಪಡಿಸ್ತಾರೆ.( ಎಲೆಯಲ್ಲಿ ತಯಾರಾದ ಆಹಾರ ನೇರ ಹಣ್ಣನ್ನು ತಲುಪಿ ಗಾತ್ರದಲ್ಲಿ ಉತ್ತಮವಾಗುತ್ತದೆ) ಇದೆಲ್ಲವೂ ಕೇಳಲಿಕ್ಕೆ inhuman ಅನಿಸಲ್ವಾ ತನು?
ಗಿಡಮರಗಳೂ ಈ ಬ್ರಹ್ಮಾಂಡದಷ್ಟೇ ಅದ್ಭುತ. ಸೃಷ್ಟಿಯಲ್ಲಿ ಭಾವನೆಗಳಿರುವ ಪ್ರಾಣಿ, ಮನುಷ್ಯ ಮಾತ್ರ ಅಂತ ನಮಗೆ ನಾವೇ ಘೋಷಿಸಿಕೊಂಡ ಮೇಲೂ ಸಸಿಗಳು ತೋರುವ ಈ ಹೋರಾಟ ಪ್ರಕೃತಿಯಲ್ಲಿ ‘ಮನುಷ್ಯ ಕೇವಲ ಮಾತ್ರ’ ಎನ್ನುವುದನ್ನು ಹೇಳ್ತಿದೆ ಅಲ್ವಾ ತನು?
- ನಂದಿನಿ ಹೆದ್ದುರ್ಗ
