ನೆನಪಿರಲಿ….. ತಂದೆ ತಾಯಿಯರ ಎದೆ ಚಿಪ್ಪಿನಲ್ಲಿ ಮಕ್ಕಳ ಮೇಲಿನ ಪ್ರೀತಿಯ ಭಾವವೆನ್ನುವುದು ಆಟೋಮ್ಯಾಟಿಕ್ ಆಗಿರುತ್ತದೆ. ಆದರೆ ಮದುವೆಯಾದ ಮಾತ್ರಕ್ಕೇ ಗಂಡ ಹೆಂಡಿರ ನಡುವಿನ ಪ್ರೀತಿಯೆನ್ನುವುದು ಆಟೋಮ್ಯಾಟಿಕ್ ಆಗಿ ಹೃದಯದಲ್ಲಿ ಸಹಜವಾಗಿ ಅರಳಲಾರದು . – ಹಿರಿಯೂರು ಪ್ರಕಾಶ್, ಮುಂದೆ ಓದಿ…
ಬ್ಯಾಂಕ್ ಅಧಿಕಾರಿಯಾಗಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ , ಆರೇಳು ವರ್ಷಗಳ ಹಿಂದೆ ನಿವೃತ್ತಿಯಾದ ನಂತರ ಸಧ್ಯಕ್ಕೆ ಬೆಂಗಳೂರಿನಲ್ಲಿ ನಿವೃತ್ತ ಜೀವನ ನೆಡೆಸುತ್ತಿರುವ ನಮ್ಮ ಹಿರಿಯ ಸಹೋದ್ಯೋಗಿಯಾಗಿದ್ದವರೊಬ್ಬರು ಮೊನ್ನೆ ಯಾವುದೋ ಕೆಲಸದ ನಿಮಿತ್ತ ನಮ್ಮ ಕಚೇರಿ ಕಡೆಗೆ ಬಂದಾಗ ಆಕಸ್ಮಿಕವಾಗಿ ಎದುರಿಗೆ ಸಿಕ್ಕರು. ವಯಸ್ಸಿನಲ್ಲಿ ಹಿರಿಯರಾದರೂ ಅವರೊಟ್ಟಿಗೆ ಸ್ವಲ್ಪ ಸಲಿಗೆಯಿದ್ದಿದ್ದರಿಂದ ಅವರನ್ನು ನಾನಿದ್ದೆಡೆ ಕರೆತಂದು ಕುಳ್ಳಿರಿಸಿ ಕಾಫ಼ೀ ತರಿಸಿ ಸಹಜವಾಗಿ ಮಾತಿಗಾರಂಭಿಸಿದೆ.
ಅಣ್ಣಾ… ಜೀವನದಲ್ಲಿ ಈಗ ತುಂಬಾ ನಿರಾಳ ವಾಗಿರಬೇಕಲ್ಲವೇ….? ಬ್ಯಾಂಕ್ ಕೆಲಸದ ಅತಿಯಾದ ಒತ್ತಡ, ಮೇಲಧಿಕಾರಿಗಳ ಬಯ್ಗುಳ, ಮನೆಯವರೊಟ್ಟಿಗೆ ಇರಲಾರದಷ್ಟು ಬಿಜ಼ಿ ಶೆಡ್ಯೂಲು, ಬಂಧು ಬಳಗ ಸೇರಿದಂತೆ ಎಲ್ಲರೊಡನೆ ಬೆರೆಯಲಾಗದೇ ಇದ್ದದ್ದಕ್ಕೆ ಎಲ್ಲರಿಂದ ನಿಷ್ಠುರ ಇತ್ಯಾದಿ ಕಿರಿಕ್ಕು- ಕಿರಿಕಿರಿಗಳಿಂದ ಮುಕ್ತರಾಗಿ ಈಗ ಸಂಪೂರ್ಣ ನೆಮ್ಮದಿಯೆನ್ನುವುದು ನಿಮ್ಮ ಮನೆ ಬಾಗಿಲಲ್ಲೇ ಕಾಲು ಮುರಿದುಕೊಂಡು ಬಿದ್ದಿರಬಹುದಲ್ಲವೇ..? ಎನ್ನುತ್ತಾ ಅವರನ್ನು ಮಾತಿಗೆಳೆದೆ.
ಮೇಲಾಗಿ ಇವರು ತಮ್ಮಇಬ್ಬರು ಹೆಣ್ಣುಮಕ್ಕಳನ್ನು ಸರ್ವೀಸಿನ ಕೊನೆ ಹಂತದಲ್ಲಿರುವಾಗಲೇ ಒಳ್ಳೆಯ ಉದ್ಯೋಗ ಹಾಗೂ ಚೆನ್ನಾಗಿ ಸಂಪಾದನೆ ಮಾಡುವ ಇಬ್ಬರು ಅರ್ಹರಿಗೆ ಕೊಟ್ಟು ಮದುವೆಯನ್ನೂ ಮಾಡಿ ಮುಗಿಸಿ, ಮದುವೆಗೆ ಹಾಗೂ ಮನೆ ಕಟ್ಟಲು ಎಂದು ಮಾಡಿದ್ದ ಸಾಲವನ್ನೂ ತೀರಿಸಿ, ಯಾವುದೇ ಋಣಭಾರ ವಿಲ್ಲದೇ , ಬದುಕಿನ ಮಿಕ್ಕ ಮಹತ್ತರ ಜವಾಬ್ದಾರಿ ಗಳಿಲ್ಲದೇ ಜೊತೆಗೆ ಅರ್ಥಿಕವಾಗಿ ಸಾಕಷ್ಟು ಅನುಕೂಲಕರವಾಗಿಯೇ ಇದ್ದವರು. ಒಬ್ಬ ವ್ಯಕ್ತಿಗೆ ಇಷ್ಟಿದ್ದ ಮೇಲೆ…. ಮತ್ತೇನ್ರೀ ಬೇಕು…?? ಒಂಥರಾ ಟಾಪ್ ಆಫ಼್ ದಿ ವರ್ಲ್ಡ್ ಇದ್ದಂತೆ ! ಜೀವನದಲ್ಲಿ ಪ್ಲಾನಿಂಗ್ ಅಂದ್ರೆ ಹೀಗಿರಬೇಕು ನೋಡಿ !

ಫೋಟೋ ಕೃಪೆ : google
ಹೀಗೆ ……ಈ ವಿಚಾರಗಳ ಬಗೆಗೆ ಮಾತನಾಡುತ್ತಾ ಖುಷಿಯಿಂದ ಅವರನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಮುಖದಲ್ಲಿ ಇದನ್ನೆಲ್ಲಾ ನಾನು ಹೇಳುತ್ತಿರು ವಾಗ ಸಹಜವಾಗಿರಬೇಕಾದಂತಹಾ ಸಂತೋಷದ ಭಾವ ಕಾಣಿಸಲಿಲ್ಲ. ಅದನ್ನು ಕಂಡು ನಾನೇ “ಅಲ್ಲಣ್ಣಾ…..ಬದುಕಿನಲ್ಲಿ ಎಲ್ಲ ಜವಾಬ್ದಾರಿಯನ್ನು ಮುಗಿಸಿ ಆನಂದವಾಗಿ ಕಾಲ ಕಳೆಯುವ ಟೈಮಿನಲ್ಲಿ ಇದ್ಯಾಕೆ ಹೀಗೆ ನನ್ನಂತಹಾ ಎಡಬಿಡಂಗಿಯಂತೆ ಏನೋ ಕೊರತೆ ತುಂಬಿಕೊಂಡವರಂತೆ ಇದ್ದೀರಲ್ಲಾ……..” ಎಂದು ನೇರವಾಗಿಯೇ ಕಿಚಾಯಿಸಿದೆ .
ಅದಕ್ಕೆ ಅವರು…
” ಹಾಗೇನಿಲ್ಲಾ ಪ್ರಕಾಶ್, ನೀನು ಹೇಳಿದ್ದು ನಿಜ. ದೇವರ ದಯೆಯಿಂದ ಎಲ್ಲವೂ ಅನುಕೂಲವಾಗಿದೆ. ಒಳ್ಳೆಯ ಉದ್ಯೋಗ, ಅರಿತು ನೆಡೆಯುವ ಹೆಂಡತಿ, ಪ್ರೀತಿಸುವ ಮಕ್ಕಳು, ಅವರ ಎಜುಕೇಷನ್, ಉದ್ಯೋಗ , ಗೌರವಿಸುವ ಅಳಿಯಂದಿರು, ನಿವೃತ್ತಿಯಾದ ನಂತರ ಕೈಯಲ್ಲಿ ಸಾಕಾಗುವಷ್ಟು ಹಣ…. ಆದರೆ ಇವೆಲ್ಲಾ ಇದ್ದರೂ ಎಲ್ಲೋ ಒಂದು ಕಡೆ ಮನಸಿನಲ್ಲಿ ಸಮಾಧಾನ, ಹೃದಯದಲ್ಲಿ ನೆಮ್ಮದಿ ಎನ್ನುವುದು ದಿನೇ ದಿನೇ ಕಾಣೆಯಾಗುತ್ತಲಿದೆಯೇನೋ ಎನಿಸಿದೆ,
ಯಾಕೆಂದು ಗೊತ್ತಿಲ್ಲ”….!
ಅಯ್ಯೋ…… ಇವನಜ್ಜಿ……..ಜಗತ್ತಿನಲ್ಲಿ ಹೀಗೂ ಉಂಟಾ….ಎಂದುಕೊಂಡು , ಇಷ್ಟು ವರ್ಷವಾದ್ರೂ ನಾನು ನನ್ನದೇ ಅಂತ ಒಂದು ಮನೆ ಕಟ್ಟಿಕೊಂಡಿಲ್ಲ, ಇಬ್ಬರು ಹೆಣ್ಣುಮಕ್ಕಳ ಭವಿಷ್ಯ ರೂಪಿಸಬೇಕು, ಇನ್ನೂ ಕೆಲವು ಮೂಲಭೂತ ಜವಾಬ್ದಾರಿಗಳು ನನ್ನಲ್ಲಿ ಹಾಗೇ ಉಳಿದಿವೆ, ರಿಟೈರ್ ಆದ್ಮೇಲೆ ಹೆಂಗಪ್ಪಾ ಅನ್ನೋದರ ಬಗ್ಗೆ ಪ್ಲಾನ್ ಮಾಡಿಲ್ಲ… ಇಷ್ಟೆಲ್ಲಾ ಸ್ವಯಂಕೃತಾಪರಾಧದ ಕಿರಿಕ್ಕುಗಳಿದ್ರೂ ಯಾವ ಸಮಸ್ಯೆಯೂ ಇಲ್ಲದವನಂತೆ ನೋಡೋರ ಕಣ್ಣಿಗೆ ನಾನೇ ಹಾಯಾಗಿರುವಾಗ ಎಲ್ಲ ಇದ್ದೂ, ಎಲ್ಲಾ ಜವಾಬ್ದಾರಿ ಮುಗಿಸಿಯೂ ಹೀಗೆ ಹೇಳುತ್ತಿರುವ ಈ ಮನುಷ್ಯನಿಗೇನು ಬಂತು….? ಎಂದು ಮನದಲ್ಲೇ ಲೆಕ್ಕ ಹಾಕಿದೆ. ಆದರೂ ಅದನ್ನು ಅವರೆದುರು ತೋರಗೊಡದೇ, ನಾನು ಕೆಲ ನಿಮಿಷ ಮೌನಕ್ಕೆ ಜಾರಿದ್ದರಿಂದ ಅವರೇ ಹೇಳುತ್ತಾ ಹೋದರು.
ಪ್ರಕಾಶ್, ಬ್ಯಾಂಕಿನಲ್ಲಿರುವಾಗಂತೂ ನನ್ನ ಕುಟುಂಬದ ಜೊತೆ ಹೆಚ್ಚಿಗೆ ಕಾಲ ಕಳೆಯಲಾಗಲಿಲ್ಲ, ನನ್ನ ಕೆಲಸದ ಒತ್ತಡ, ಮಕ್ಕಳ ವಿಧ್ಯಾಭ್ಯಾಸ, ಉದ್ಯೋಗ ಅಂತೆಲ್ಲಾ ಅದರಲ್ಲೇ ಮುಳುಗಿದ್ದ ನಮಗೆ, ನಾನೂ ನನ್ನ ಹೆಂಡತಿ ಹೆಚ್ಚಿಗೆ ಎಲ್ಲೂ ದೇಶ -ವಿದೇಶ , ಕೋಶ ಅಂತ ಸುತ್ತಲಾಗಲಿಲ್ಲ , ಅನುಭವಿಸಲಾಗಲಿಲ್ಲ. ಈ ಒತ್ತಡಗಳ ನಡುವೆಯೇ ಮನೆ ಕಟ್ಟಿಸಿದೆ , ಮಕ್ಕಳ ಮದುವೆಯೂ ಮಾಡಿದೆ. ಕೊನೇಪಕ್ಷ ನಿವೃತ್ತಿಯ ನಂತರವಾದರೂ ನಮ್ಮೂರಿನ ಮನೆಯಲ್ಲೇ ಯಾವ ಒತ್ತಡ ಚಿಂತೆಗಳಿಲ್ಲದಂತೆ ನೆಮ್ಮದಿಯಾಗಿರೋಣ ವೆಂದರೆ…. ನನ್ನ ಹೆಣ್ಣು ಮಕ್ಕಳಿಬ್ಬರೂ ಬೆಂಗಳೂರಿನಲ್ಲಿಯೇ ಸೆಟ್ಲ್ ಆಗಿದ್ದಾರೆ. ನಾವು ಇಲ್ಲೇ ನಮ್ಮ ಊರಲ್ಲಿರೋಣವೆಂದರೆ
” ನೀವಿಬ್ಬರೇ ಅಲ್ಲಿ ಊರಲ್ಲೇನು ಇರ್ತೀರ…. ಇಲ್ಲಿಗೇ ನಮ್ಮೊಂದಿಗೆ ಬನ್ನಿ ಅಂತ ಇಬ್ಬರೂ ಮಕ್ಕಳು ಮಾಡಿದ ಬಲವಂತಕ್ಕೆ ಕಟ್ಟುಬಿದ್ದು ನಿವೃತ್ತಿಯ ನಂತರ ನಾವಿಬ್ಬರೂ ಬೆಂಗಳೂರಿಗೆ ಬಂದೆವು…..

ಫೋಟೋ ಕೃಪೆ : google
ದೊಡ್ಡಮಗಳ ಅಪಾರ್ಟ್‌ಮೆಂಟ್ ಇರೋದು ಬೆಂಗಳೂರು ಉತ್ತರವಾದರೆ, ಚಿಕ್ಕವಳಿರುವುದು ಬೆಂಗಳೂರು ದಕ್ಷಿಣದಲ್ಲಿ. ಇಷ್ಟು ವರ್ಷ ಅಲ್ಲಿ ಇಲ್ಲಿ ಎರಡೂ ಕಡೆ ಕಷ್ಟಪಟ್ಟು ಓಡಾಡಿಕೊಂಡು ಹೇಗೋ ಮ್ಯಾನೇಜ್ ಮಾಡಿದ್ದೆವು. ಕಳೆದ ವರ್ಷದಿಂದ ಕೊರೋನಾ ಕಾಟದಿಂದ ಅಪಾರ್ಟ್ ಮೆಂಟ್ ನ ನಾಲ್ಕು ಗೋಡೆ ಬಿಟ್ಟು ಹೊರಗಡೆ ಎಲ್ಲೂ ಹೋಗಲಾಗಲಿಲ್ಲ. ಬೆಂಗಳೂರಿಗೆ ಬಂದ ಕೆಲ ಸಮಯದ ನಂತರ , ಮಕ್ಕಳು ಹಾಗೂ ಅಳಿಯಂದಿರು ಉದ್ಯೋಗದಲ್ಲಿರುವುದರಿಂದ ಅವರಿಗೆ ಆಸರೆಯಾಗಲೆಂದು ದೊಡ್ಡ ಮಗಳ ಮನೆಯಲ್ಲಿ ನನ್ನ ಹೆಂಡತಿ ಮತ್ತು ಚಿಕ್ಕ ಮಗಳ ಮನೆಯಲ್ಲಿ ನಾನು ಇರುವುದೆಂದು ತೀರ್ಮಾನಿಸಿದೆವು. ಬಂದ ಹೊಸತು, ಮಕ್ಕಳು ಏನಂದುಕೊಳ್ಳುವರೋ ಎಂದು ಒಟ್ಟಿಗೆ ಇದ್ದ ನಾವು ಅನಿವಾರ್ಯವಾಗಿ ಸ್ವಲ್ಪ ಬೇರೆಯಾಗಲೇ ಬೇಕಾಯಿತು. ಅದರಂತೆಯೇ ವಿಧಿಯಿಲ್ಲದೇ ನಾವಿಬ್ಬರೂ ಉತ್ತರ- ದಕ್ಷಿಣವಾದೆವು. ಅಲ್ಲಿಂದಲೇ ನನಗೆ ಏನೋ ಕಳೆದುಕೊಂಡಂತಹಾ ಭಾವ , ಏನೋ ಕಳವಳ ನಮಗರಿವಿಲ್ಲದಂತೆಯೇ ನಮ್ಮೊಳಗೆ ಶುರುವಾಗಿತ್ತು. ಕೆಲ ಕಾಲದ ತರುವಾಯ ಮೊದಲ ಮಗಳು ಪ್ರೆಗ್ನೆಂಟ್ ಎಂದು ಗೊತ್ತಾದಾಗ ನನ್ನ ಮನೆಯವಳು ಅವಳ ಮನೆಯಲ್ಲಿಯೇ ಠಿಕಾಣಿ ಹೂಡಬೇಕಾಯಿತು. ನಂತರ ಮಗಳಿಗೆ ಮಗುವೂ ಆಯಿತು, ವರ್ಷಗಟ್ಟಲೆ ಅಲ್ಲಿಯೇ ಇದ್ದು ಬಾಣಂತನವೂ ಸೇವೆಯೂ ಮಾಡಿದ್ದಾಯಿತು. ನಾನೂ ಆಗಾಗ್ಗೆ ಹೋಗಿ ಬರುವುದು ಮಾಡುತ್ತಿದ್ದೆ. ನಮ್ಮ ಮೊಮ್ಮಗುವನ್ನು ಈಗ ಶಾಲೆಗೆ ಸೇರಿಸಿದ್ದಾಯಿತು . ಅದನ್ನು ನೋಡಿಕೊಳ್ಳುವ ಹೊಣೆ ನಮ್ಮದೇ.!
ಇತ್ತ ಚಿಕ್ಕ ಮಗಳಿಗೂ ಹೆರಿಗೆಯಾಗಿ ಬಾಣಂತನಕ್ಕಾಗಿ ನಮ್ಮನೆಯವಳು ಇಲ್ಲಿಗೆ ಬಂದಳು. ನಾನು ದೊಡ್ಡಮಗಳ ಮಗುವನ್ನು ನೋಡಿಕೊಳ್ಳಲು ಅಲ್ಲಿಗೆ ತಕ್ಷಣವೇ ಹೋಗಬೇಕಾಯಿತು. ಹೀಗಾಗಿ ನಾವಿಬ್ಬರು ಗಂಡ ಹೆಂಡತಿ ಒಟ್ಟಿಗೇ ಇರಲು ಆಗಲೇ ಇಲ್ಲ. ಸಧ್ಯಕ್ಕೆ ನಾನು ಅವರ ಮನೆಯ ಸಾಕು ನಾಯಿ ಹಾಗೂ ಅವಳ ಮಗು ಎರಡನ್ನೂ ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಒಂಥರಾ ನನ್ನನ್ನು ಮನೆ ಯೊಳಗೇ ಕಟ್ಟಿಹಾಕಿದಂತಿದೆ. ನಮ್ಮ ಮಕ್ಕಳನ್ನು ಸಾಕಿ ಸಲಹಿ, ಓದಿಸಿ, ಉದ್ಯೋಗ ಕೊಡಿಸಿ ಮದುವೆ ಮಾಡಿಕೊಟ್ಟು ಈಗ ಅವರೊಟ್ಟಿಗೆ ಅವರ ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳು…. ಮೊಮ್ಮಕ್ಕಳು…..ಎಲ್ಲವೂ ಸರಿ ಪ್ರಕಾಶ್, ಆದರೆ ಈ ಎಲ್ಲದರ ಮಧ್ಯೆ ನಮ್ಮಿಬ್ಬರ ನಡುವೆ ಮಾತು- ಕತೆ ,ಸಂಪರ್ಕ- ಸಂವಹನವೇ ಇಲ್ಲದಂತಾಗಿ ಜೀವನದ ಯಾವುದೋ ಸುಂದರ ಕ್ಷಣಗಳನ್ನು ಕಳೆದುಕೊಂಡುಬಿಟ್ಟಿದ್ದೇವೇನೋ ಎನಿಸಿದೆ……..
ಅಂದರೆ …
ನಾನು ನನ್ನ ಹೆಂಡತಿ ಮದುವೆಯ ಆರಂಭದ ವರ್ಷಗಳಲ್ಲಿ ಹೇಗೆಲ್ಲಾ ಆತ್ಮೀಯವಾಗಿದ್ದೆವೋ ಆ ಮಧುರ ಕ್ಷಣಗಳು ಮತ್ತೆಂದೂ ನಮ್ಮದಾಗಲೇ ಇಲ್ಲ. ಬದುಕಿನ ಈ ಜಂಜಾಟದಲ್ಲಿ ನಾವಿಬ್ಬರೂ ಪರಸ್ಪರ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮುಕ್ತವಾಗಿ ಮಾತನಾಡಿಕೊಳ್ಳುವ ಅವಕಾಶಗಳು ಸಾಕಷ್ಟು ಸಿಗಲೇ ಇಲ್ಲ. ಕೊನೇಪಕ್ಷ ನಿವೃತ್ತಿಯ ನಂತರವಾದರೂ ಅದು ಸಿಗಬಹುದೆಂಬ ನಮ್ಮ ನಿರೀಕ್ಷೆ, ನಿರೀಕ್ಷೆಯಾಗಿಯೇ ಉಳಿದು, ಒಟ್ಟಾಗಿರುವ ಆ ಅದೃಷ್ಟವೇ ನಮಗಿಲ್ಲದೇ ಹೋಯಿತೋ ಅಥವಾ ನಾವು ಅದನ್ನು ಬಳಸಿಕೊಳ್ಳದೇ ಉಳಿದೆವೋ..ಅಂತೂ ಇಂದಿಗೂ ಮಕ್ಕಳ ಮೊಮ್ಮಕ್ಕಳ ಸೇವೆಯಲ್ಲೇ ನಿರತರಾಗಿದ್ದೇವೆ….

ಹಾಗೆಯೇ ಮುಂದುವರೆದು…
ನನ್ನವಳು ತನ್ನ ಆರೋಗ್ಯ ಲೆಕ್ಕಿಸದೇ ನಿತ್ಯವೂ ಅಡಿಗೆ ತಿಂಡಿ, ಮಗುವಿನ ಲಾಲನೆ ಪೋಷಣೆ , ಮನೆಕೆಲಸ ಹೀಗೆ ಎಡಬಿಡದೇ ಅವರ ಸೇವೆ ಮಾಡುತ್ತಲೇ ಇದ್ದಾಳೆ. ಇದು ನಮ್ಮ ಕರ್ತವ್ಯ ವೆಂದು ಮಾಡುತ್ತಲೇ ಇದ್ದೇವೆ. ಹೆಚ್ಚುಕಡಿಮೆ ನಾನೂ ಹಾಗೆಯೇ ಇದ್ದೇನೆ. ಇಂದಿಗೂ ನಾನಿಲ್ಲಿ…ಅವಳಲ್ಲಿ….! ನಮ್ಮ ಊರಿಗೆ ಹೋಗಿ ಬಂಧು ಬಳಗ ಸ್ನೇಹಿತರ ಮುಖ ನೋಡಿ ಆರೇಳು ವರ್ಷಗಳಾಯಿತು……..ಈ ಗಡಿಬಿಡಿಯ ನಡುವೆ ಏನೋ ಒಂಥರ ನೆಮ್ಮದಿಯೇ ಮಿಸ್ ಆಗಿದೆ ಅನಿಸುತ್ತೆ ಪ್ರಕಾಶ್…….. ಎಂದು ಹೇಳಿ ಮಾತು ಮುಗಿಸುವಷ್ಟರಲ್ಲಿ ನಾನು ಎರಡು ಬಾರಿ ಟೀ ಕುಡಿದು ಮುಗಿಸಿಯಾಗಿತ್ತು….!
ಈಗ ಹೇಳಿ….. ಇದು ನಮ್ಮಲ್ಲಿ ಅನೇಕ ದಂಪತಿಗಳ ಕಥೆಯೂ ಹೆಚ್ಚುಕಡಿಮೆ ಹೀಗೆ ಇರುವಂತೆ ತೋರುತ್ತದೆಯಲ್ಲವೇ ? ಸ್ವಲ್ಪಮಟ್ಟಿಗೆ ಸನ್ನಿವೇಶ, ಸಂಧರ್ಭ, ಘಟನೆ ಬೇರೆ ಬೇರೆಯಾಗಿರ ಬಹುದಷ್ಟೇ ! ಬಹುತೇಕ ಗಂಡಂದಿರು ತಮಗೆ ವಯಸ್ಸಿದ್ದಾಗ , ಹುಮ್ಮಸ್ಸಿದ್ದಾಗ, ಆರೋಗ್ಯವಿದ್ದಾಗ ದುಡಿಮೆ -ಸಂಪಾದನೆ ಎಂದೆಲ್ಲಾ ಬಿಜ಼ಿಯಾಗಿ ತಮ್ಮ ಹೆಂಡತಿಯೆಡೆಗೆ, ಅವರನ್ನು ಅರಿಯುವೆಡೆಗೆ ಲಕ್ಷ್ಯ ಕೊಡಲಾರದಷ್ಟು ಒತ್ತಡದಲ್ಲಿ ಭಾವರಹಿತ ರಾಗಿರುತ್ತಾರೆ. ಹೆಂಡತಿಯಾದವಳೂ ಸಹ ಗಂಡ- ಮನೆ – ಮಕ್ಕಳು ಎಂದೆಲ್ಲಾ ತನ್ನ ಆರೋಗ್ಯವನ್ನೂ ಲೆಕ್ಕಿಸದೇ ಸಂಸಾರಕ್ಕಾಗಿ ದುಡಿಯುತ್ತಲೇ ಬರುತ್ತಾಳೆ. ಈ ಎಲ್ಲದರ ನಡುವೆ ಗಂಡ -ಹೆಂಡತಿ ಪ್ರತ್ಯೇಕವಾಗಿ ಕೂತು ನೆಮ್ಮದಿಯಿಂದ ನಾಲ್ಕು ಮಧುರವಾದ ಮಾತುಗಳನ್ನಾಡಿ ಎಷ್ಟು ದಿನವಾಯಿತೋ , ಜೊತೆಯಲ್ಲಿ ಸುತ್ತಾಡಿ ಯಾವ ಕಾಲವಾಯಿತೋ , ಸಿನಿಮಾಗೇ ಅಂತ ಒಟ್ಟಿಗೆ ಹೋಗಿದ್ದು ಎಂದೋ.. ನೆನಪಾಗುತ್ತಿಲ್ಲಅಲ್ಲವೇ ?? ಮದುವೆಯ ನಂತರ ಹೆಂಡತಿಗೆ ಕೊನೇಪಕ್ಷ ಒಮ್ಮೆ ಪ್ರೀತಿಯಿಂದ ” ಐ ಲವ್ ಯೂ ” ಹೇಳಿ ಯಾವ ಶತಮಾನವಾಯಿತೋ ..? ತಮ್ಮಿಬ್ಬರ ಆರೋಗ್ಯದ ಕಡೆ ಗಮನ ಕೊಡಲಿಕ್ಕೆ ಟೈಮೇ ಸಾಕಾಗಲಿಲ್ಲ. ಆ ಲೆವೆಲ್ಲಿಗೆ ಉದ್ಯೋಗ, ಮಕ್ಕಳು ಅವರ ಶಾಲೆ, ಅವರ ಪ್ರೊಗ್ರೆಸ್ ಕಾರ್ಡ್, ಪೇರೆಂಟ್ಸ್ ಮೀಟಿಂಗು, ಉನ್ನತ ವಿಧ್ಯಾಭ್ಯಾಸ, ಅವರ ಕೇರ್ ಟೇಕಿಂಗ್…ಈ ಮಧ್ಯೆ ಕೆಲಸದ ಒತ್ತಡ…ಇತ್ಯಾದಿ ಬದುಕಿನ ಅನೇಕಾನೇಕ ತಪರಾಕಿಗಳ ಮಧ್ಯೆ ಪರಸ್ಪರ ಅರ್ಥ ಮಾಡ್ಕೊಂಡು ಜೀವನದ ದಾಂಪತ್ಯದ ಸಾರ್ಥಕ್ಯ ಕಂಡುಕೊಳ್ಳಲು ದಂಪತಿಗಳಿಗೆ ಆಗಲೇ ಇಲ್ಲ ಅಥವಾ ಮನಸಾಗಲೇ ಇಲ್ಲ…..ಅಲ್ಲವೇ..?
ಇದಕ್ಕೆ ಬದುಕಿನ ಯೋಜನೆಯನ್ನು ಸರಿಯಾಗಿ ನಿರ್ವಹಿಸದಿರುವುದು ಕಾರಣವೇ ? ದಂಪತಿಗಳ ನಡುವಿನ ಸಾಮರಸ್ಯದ ಕೊರತೆಯೇ ಅಥವಾ ಮಕ್ಕಳ ಮೇಲಿನ ಅತಿಯಾದ ವ್ಯಾಮೋಹ ಕಾರಣವೋ ಇಲ್ಲವೇ ತಕ್ಕ ಸಮಯದಲ್ಲಿ ಗಂಡ ಹೆಂಡತಿಗೆ ತಮ್ಮ ನಡುವಿನ ಪ್ರೀತಿಯ ಮೌಲ್ಯವನ್ನು ಅರಿತುಕೊಳ್ಳುವ ಕೊರತೆ ಕಾರಣವೋ…ಇವೆಲ್ಲವೂ ಅವರವರ ಪರಿಸ್ಥಿತಿಗೇ ಬಿಟ್ಟದ್ದು.
ಬದುಕು ಎಂದಮೇಲೆ ತಂದೆ ,ತಾಯಿ ,ಮನೆ, ಮಡದಿ ಮಕ್ಕಳು, ಮೊಮ್ಮಕ್ಕಳು, ಬಂಧು- ಬಳಗ, ಸ್ನೇಹಿತರು ಸಹೋದ್ಯೋಗಿಗಳು…. ಎಲ್ಲರೂ ಇರುತ್ತಾರೆ. ಆಯಾ ಸಂಧರ್ಭಕ್ಕೆ ತಕ್ಕಂತೆ ಮನುಜ ತನ್ನ ಇತಿಮಿತಿಯಲ್ಲಿ ತಕ್ಕ ಪಾತ್ರಗಳನ್ನು ನಿರ್ವಹಿಸುವ ಜಾಣ್ಮೆ ತೋರಬೇಕಾಗುತ್ತದೆ. ಆದರೆ ಲೈಫ಼ು ಅನ್ನೋದೆಲ್ಲವೂ ಲೆಕ್ಕಾಚಾರದಂತೆ ನೆಡೆಯೋಕೆ ಅದು ಕೂಡಿ ಕಳೆಯುವ ಮ್ಯಾಥಮೆಟಿಕ್ಸ್ ಅಲ್ಲ. ಜೀವನದ ಹಾದಿಯಲ್ಲಿ ಏಳು, ಬೀಳು, ತಿರುವುಗಳು, ಉಬ್ಬು -ತಗ್ಗುಗಳು ಸರ್ವೇ ಸಾಮಾನ್ಯ. ಅವೆಲ್ಲವನ್ನೂ ಆಯಾ ಹಂತದಲ್ಲಿ ಖುಷಿ ಖುಷಿಯಿಂದ ಎದುರಿಸಿ ಮುಂದೆ ಸಾಗಲೇ ಬೇಕು. ಈ ಹಂತಗಳಲ್ಲಿ ಇಡುವ ಹೆಜ್ಜೆ ನಮ್ಮ ಸುಖ ಸಂತೋಷ ಸಮಾಧಾನಗಳ ಪ್ರಮಾಣವನ್ನು ನಿರ್ಧರಿಸಬಹುದೇನೋ…!
ಅಂದು ನನ್ನ ಎದುರಿಗೆ ಕುಳಿತಿದ್ದ ಪರಿಚಿತ ಹಿರಿಯರಿಗೆ ಹೀಗೆಂದು ಹೇಳಿದೆ.
” ಅಣ್ಣಾ….. ಹೀಗೆ ಹೇಳುವೆನೆಂದು ತಪ್ಪು ತಿಳಿಯ ಬೇಡಿ. ಜೀವನದಲ್ಲಿ ಎಲ್ಲವೂ ಇದ್ದು ಇಂದು ನೀವು ನಿರ್ದಿಷ್ಠವಾಗಿ ಏನ್ನನು ಹುಡುಕುತ್ತಿರುವಿರಿ ಎಂಬುದು ನಿಮ್ಮ ಮಾತುಗಳಿಂದ ನನಗೆ ಕೊಂಚ ಅರ್ಥವಾಗಿದೆ. ನಿಮ್ಮ ಹೆಂಡತಿ ಈ ವಯಸ್ಸಿ ನಲ್ಲಿಯೂ ತನ್ನ ಮಕ್ಕಳು ಮೊಮ್ಮಕ್ಕಳಿಗಾಗಿ ಜೀವ ತೇಯುತ್ತಿರುವುದರ ಬಗೆಗೆ ನಿಮಗೆ ಕಾಳಜಿ ಮೂಡಿರುವುದು ಪರಿಪಕ್ವ ಪ್ರೀತಿಯ ಸಂಕೇತ ! ಬದುಕಿನ ಸಂಧ್ಯಾ ಕಾಲದಲ್ಲಿ ವಜ್ರಕ್ಕಿಂತಲೂ ಹೆಚ್ಚು ಮೌಲ್ಯಯುತವಾಗುವುದು ನಮ್ಮ ಆರೋಗ್ಯ ಹಾಗೂ ಬಾಳಸಂಗಾತಿಯಷ್ಟೇ ! ಇವೆರಡನ್ನೂ ಜತನದಿಂದ ನಾವೇ ನೋಡಿಕೊಳ್ಳಬೇಕು. ನಿಮ್ಮ ಮಕ್ಕಳಿಬ್ಬರೂ ಅವರ ಗಂಡಂದಿರೂ ಕೆಲಸಕ್ಕೆ ಹೋಗುವುದರಿಂದ ಅವರ ಮಕ್ಕಳನ್ನು, ಅವರ ಮನೆಯನ್ನು ಸದಾ ನೋಡಿಕೊಂಡಿರಬೇಕಾದ ಅಗತ್ಯ ಅವರಿಗಿದೆ. ಅದರಲ್ಲೂ ತಮ್ಮ ಪೇರೆಂಟ್ಸ್ ಜೊತೆಯಲ್ಲಿದ್ದಲ್ಲಿ ಇನ್ನೂ ಒಳ್ಳೆಯದೇ ಎಂಬ ಅವರ ಅನಿಸಿಕೆ, ಬೇಡಿಕೆ ತಪ್ಪಲ್ಲ. ಆದರೆ ಈ ಹಂತದಲ್ಲಿ ನೀವು ಕೆಲ ದಿನಗಳವರೆಗಷ್ಟೇ ಅದೂ ಅವರ ತುರ್ತು ಅಗತ್ಯದಲ್ಲಿ ಅವರೊಂದಿಗೆ ಇರಬಹುದೇ ವಿನಃ ಸದಾ ಇರೋದು….ನಾಟ್ ಅಟ್ ಆಲ್ ಅಡ್ವೈಸಬಲ್ !
ಒಮ್ಮೆ…..ಹೀಗೆ ಯೋಚಿಸಿ ಅಣ್ಣ ! ನಿವೃತ್ತಿಯ ನಂತರ ನಿಮ್ಮೂರಿನ ವಿಶಾಲವಾದ ಮನೆಯಲ್ಲಿ ನೀವಿಬ್ಬರು ಒಟ್ಟಿಗೆ ಇದ್ದು , ನಿಮ್ಕಿಬ್ಬರ ಆರೋಗ್ಯವನ್ನೂ ಚೆನ್ನಾಗಿ ನೋಡಿಕೊಂಡು ಊರಿನಲ್ಲಿ ಬಾಲ್ಯದಿಂದಲೂ ಬಲ್ಲ, ಬಂಧು ಬಳಗ ಸ್ನೇಹಿತರೊಟ್ಟಿಗೆ ಕಾಲ ಕಳೆಯುತ್ತಾ… ಹಬ್ಬ ಹರಿದಿನಗಳಿಗೆ ಅಪರೂಪಕ್ಕೆ ಬರುವ ಮಕ್ಕಳು ಮೊಮ್ಮಕ್ಕಳನ್ನು ಆದರದಿಂದ ಬರಮಾಡಿಕೊಂಡು ಅಥವಾ ಅವರಿದ್ದಲ್ಲಿಗೇ ವರ್ಷಕ್ಕೆರಡು ಮೂರು ಬಾರಿ ಹೋಗಿ ಕೆಲ ದಿನಗಳ ಕಾಲ ಸಂತಸದಿಂದ ಅವರೊಂದಿಗೆ ಇದ್ದು ಬರುವ ಸುಂದರ ಸೀನ್ ಗಳಿದ್ದಿದ್ದಲ್ಲಿ ಹೇಗಿರುತ್ತಿತ್ತು ? ಹೀಗೆ ಇದ್ದಿದ್ದಲ್ಲಿ, ಇದು ಬೆಂಗಳೂರಿನ ಬೆಂಕಿಪೊಟ್ಟಣದಂತಹಾ ಅಪಾರ್ಟ್ ಮೆಂಟ್ ಗಳಲ್ಲಿ ಈ ವಯಸ್ಸಿನಲ್ಲಿ ಗಂಡ ಒಂದೆಡೆ, ಹೆಂಡತಿ ಒಂದೆಡೆ ಇರುವ ಏಕತಾನತೆಯ ಸಪ್ಪೆ ಬದುಕಿಗಿಂತ ಹೆಚ್ಚಿನ ಜೀವನೋತ್ಸಾಹವಿದೆ ಎನಿಸುವುದಿಲ್ಲವೇ…??
ಮುಂದುವರೆಯುತ್ತಾ….ಹೇಳಿದೆ.
ನನಗೆ ಕೇಳಿದರೆ….ಜೀವನದ ಮುಕ್ಕಾಲು ಭಾಗ ನೀವಿಬ್ಬರೂ ಇತರರಿಗಾಗಿ ನಿಮ್ಮ ಬದುಕು ಸವೆಸಿದ್ದಾಯಿತು. ಇನ್ನುಳಿದಿರುವ ಕೆಲ ಸಾರ್ಥಕ ವರ್ಷಗಳ, ಕೈ ಕಾಲು ಸ್ವಲ್ಪ ಮಾತು ಕೇಳುವ ಹಂತದಲ್ಲಿಯಾದರೂ ನಿಮ್ಮ ಶ್ರೀಮತಿಯವ ರೊಂದಿಗೆ ಒಟ್ಟಿಗೆ ಇದ್ದು ನಾಲ್ಕು ಕಡೆ ಸುತ್ತಾಡಲು ಶುರು ಮಾಡಿ , ಎಲ್ಲೆಡೆ ಒಟ್ಟೊಟ್ಟಿಗೆ ಹೋಗಿ ಬನ್ನಿ, ಬಂಧುಗಳನ್ನು ಸ್ನೇಹಿತರನ್ನು ಬದುಕಿಗೆ ಆತ್ಮೀಯ ರಾದವರನ್ನು ಹತ್ತಿರದಿಂದ ಮಾತನಾಡಿಸಿ. ಇದುವರೆಗೂ ಲೈಫ಼ಲ್ಲಿ ಏನನ್ನೆಲ್ಲಾ ಮಿಸ್ ಮಾಡಿಕೊಂಡಿದ್ದಿರೋ ಅದನ್ನು ಪಡೆಯಲು ಯತ್ನಿಸಿ….. ಮಕ್ಕಳು ಅವರ ಮಕ್ಕಳು ಅವರ ಸಂಸಾರದಾಚೆಗೂ ನಿಮಗಾಗಿಯೇ ಒಂದು ಪ್ರಪಂಚವಿದೆ ಎಂಬ ಭಾವ ನಿಮ್ಮದಾಗಲಿ, ಎಲ್ಲದರಲ್ಲೂ, ಎಲ್ಲರಲ್ಲೂ ಪ್ರೀತಿ ಹರಿಸುತ್ತಲೇ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ ಸಾಧ್ಯವಾದಷ್ಟೂ ಸಮಾಜಮುಖಿಯಾಗಿ ಜೀವನೋತ್ಸಾಹ ತುಂಬಿಕೊಂಡು ಮುನ್ನಡೆಯಿರಿ……
Ofcourse…. ಮಕ್ಕಳು, ಮೊಮ್ಮಕ್ಕಳು ಅವರವರ ಇಷ್ಟದಂತೆ ಅವರು ಬದುಕುತ್ತಾರೆ. ಅದು ಹೇಗೆ ಎಂಬುದು ನಿಮಗಿಂತ ಚೆನ್ನಾಗಿ ಅವರಿಗೆ ಗೊತ್ತು ! ಇನ್ನು ಮೇಲಾದರೂ ನಿಮ್ಮ ಹೆಂಡತಿಯ ಸವಿಯಾದ ಪ್ರೀತಿಯನ್ನು Unconditional ಆಗಿ ಪ್ರೀತಿಯಿಂದಲೇ ರಿನೀವಲ್ ಮಾಡಿ, ಬರಲಿರುವ ಹೊಸ ಬೆಳಕಲ್ಲಿ ಹೊಸ ಬದುಕು ಆರಂಭಿಸಿ. …… ಆಗ ನಿಮ್ಮಿಬ್ಬರಿಗೂ ಮಾತ್ರೆ , ಔಷಧಿ, ಆಸ್ಪತ್ರೆಗಳ ಅಗತ್ಯ ಬರಲು ಛಾನ್ಸೇ ಇಲ್ಲ…….
ಹೀಗೆ ಹೇಳಿ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟೆ.!!
** ಮರೆಯುವ ಮುನ್ನ **
ಪೇರೆಂಟ್ಸ್ ಎಂದರೆ ತಮ್ಮ ಮಕ್ಕಳಿಗಾಗಿ ಎಂತಹದೇ ಸಂಧರ್ಭದಲ್ಲೂ ಯಾವುದೇ ತ್ಯಾಗಕ್ಕೂ ಸಿದ್ಧರಿರುವ ಪ್ರತಿಫಲಾಪೇಕ್ಷೆಯಿಲ್ಲದ ಪ್ರಾಮಾಣಿಕ ಮನಸುಗಳು ಎಂದರ್ಥ ! ಮಕ್ಕಳಿಗಾಗಿ ಅವರ ಪ್ರೀತಿ- ಪ್ರೇಮ, ತ್ಯಾಗವೆನ್ನುವುದು ಅಂತಃಕರಣ ದಿಂದ ತಾನಾಗಿಯೇ ಸೃಜಿಸುತ್ತದೆ. ತಮಗೆಷ್ಟೇ ಕಷ್ಟ ಇದ್ದರೂ ಮಕ್ಕಳ ಭವಿಷ್ಯದಲ್ಲಿಯೇ ತಮ್ಮೆಲ್ಲಾ ಸುಖವನ್ನು ಕಂಡುಕೊಂಡ ತಂದೆ ತಾಯಂದಿರೇ ಹೆಚ್ಚು.
ನೆನಪಿರಲಿ….. ತಂದೆ ತಾಯಿಯರ ಎದೆ ಚಿಪ್ಪಿನಲ್ಲಿ ಮಕ್ಕಳ ಮೇಲಿನ ಪ್ರೀತಿಯ ಭಾವವೆನ್ನುವುದು ಆಟೋಮ್ಯಾಟಿಕ್ ಆಗಿರುತ್ತದೆ. ಆದರೆ ಮದುವೆಯಾದ ಮಾತ್ರಕ್ಕೇ ಗಂಡ ಹೆಂಡಿರ ನಡುವಿನ ಪ್ರೀತಿಯೆನ್ನುವುದು ಆಟೋಮ್ಯಾಟಿಕ್ ಆಗಿ ಹೃದಯದಲ್ಲಿ ಸಹಜವಾಗಿ ಅರಳಲಾರದು . ಅಲ್ಲಿ ಪ್ರೀತಿಯನ್ನು ಪರಸ್ಪರ ನಂಬಿಕೆ, ಸ್ನೇಹ, ವಿಶ್ವಾಸದಿಂದ ಗಳಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕಾಗಿಯೇ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಪ್ರೀತಿಯಿಲ್ಲದೇ, ಕೇವಲ ಮದುವೆಯಾದ ಏಕೈಕ ಕಾರಣಕ್ಕೆ ಯಾಂತ್ರಿಕವಾಗಿ ಜೀವನ ಸಾಗಿಸುತ್ತಿರುವ ಸಂಸಾರಗಳನ್ನೂ ನಾವು ನೋಡಬಹುದು. ಇದೇ ಹಂತದಲ್ಲಿ ಒಂದೊಮ್ಮೆ ಗಂಡ ಹೆಂಡಿರ ನಡುವೆ ಪ್ರೀತಿಯಿಲ್ಲದಿದ್ದರೂ ಅವರ ಮಕ್ಕಳ ಮೇಲೆ ಮಾತ್ರ ಅದಮ್ಯ ಪ್ರೀತಿಯಿರುವ ಪೇರೆಂಟ್ಸ್ ಗಳನ್ನೂ ಕಾಣಬಹುದು.
ಹೀಗಾಗಿಯೇ… ಎಲ್ಲೋ ಒಂದು ಕಡೆ ಮಕ್ಕಳ ಮೇಲಿನ ಪ್ರೀತಿ, ಅತಿಯಾದ ಕಾಳಜಿ , ಅವರ ಭವಿಷ್ಯ ರೂಪಿಸಲು ತಮ್ಮ ಹೆಗಲ ಮೇಲೆ ಹೊತ್ತುಕೊಂಡ ಜವಾಬ್ದಾರಿ, ಸಂಪಾದನೆ…..ಈ ಎಲ್ಲಾ ಒತ್ತಡಗಳು ಬದುಕಿನ ಮುಕ್ಕಾಲು ಭಾಗವನ್ನು ಅನಾಮತ್ತಾಗಿ ಕಸಿದುಕೊಂಡು ಬಿಡುತ್ತವೆ. ಈ ಕಾರಣಕ್ಕಾಗಿ ದಂಪತಿಗಳು ಪರಸ್ಪರ ಅರ್ಥಮಾಡಿಕೊಳ್ಳಲು , ಜೀವನ ಸಂಧ್ಯಾಕಾಲದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಲು ತಮ್ಮ ನಡುವಿನ ಪ್ರೇಮಬಂಧನವನ್ನು ಗಟ್ಟಿಗೊಳಿಸಿಕೊಳ್ಳಲೇಬೇಕು ಹಾಗೂ ಆ ಪ್ರಕ್ರಿಯೆಯಲ್ಲಿ ಬರುವ ಭಾವನಾತ್ಮಕ ಕರ್ತವ್ಯಗಳ, ಭಾವುಕ ಸಂಬಂಧಗಳ ಅಡೆತಡೆ ಗಳನ್ನು ಅಥವಾ ಆ ಹಾದಿಯಲ್ಲಿ ಎದುರಾಗುವ ಸಿಕ್ಕು- ಸಮಸ್ಯೆಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಹರಿಸಿಕೊಂಡೇ ಮುನ್ನೆಡೆಯಬೇಕಾದ ಅಗತ್ಯವಿದೆ . ಅಂದರೆ ” ಡಿಟ್ಯಾಚ್ ಮೆಂಟಿನಲ್ಲೂ ಅಟ್ಯಾಚ್ ಮೆಂಟ್ ” ಉಳಿಸಿಕೊಳ್ಳುವ ಬದುಕಿನ ವಾಸ್ತವತೆಗೆ ಮುಖ ಮಾಡಲೇಬೇಕು.
ಇದು ಅನಿವಾರ್ಯ.
ಗಂಡ ಹೆಂಡಿರ ಈ ನಿರ್ಧಾರಕ್ಕೆ ಇಡೀ ಜಗತ್ತೇ ಎದುರು ನಿಂತರೂ ಪರವಾಗಿಲ್ಲ…. ಏಕೆಂದರೆ ನಮ್ಮೆಲ್ಲಾ ಶಕ್ತಿ ,-ದೌರ್ಬಲ್ಯ, ನೋವು- ನಲಿವು, ಅಭ್ಯಾಸ – ದುರಭ್ಯಾಸ , ಕೋಪ- ತಾಪ, ಪ್ರೀತಿ ದ್ವೇಷ…. ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ದೇಹ ಮಣ್ಣು ಸೇರುವವರೆಗೂ ಜೊತೆ ಜೊತೆಯಾಗಿಯೇ ಇರಬೇಕಾದವರು, ಇರುವವರು.. ಕೇವಲ ಬಾಳ ಸಂಗಾತಿಗಳು ಮಾತ್ರವಲ್ಲವೇ…??
So…..ಕೊನೇಪಕ್ಷ ಅರವತ್ತರ ನಂತರವಾದರೂ ನಿಮ್ಮ ಬಾಳಸಂಗಾತಿಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಅಂತಃಕರಣ ಪ್ರೀತಿಗುಚ್ಛದಿಂದ , ತುಂಬು ಭರವಸೆಯಿಂದ ನಾ ನಿನ್ನೊಡನಿದ್ದೇನೆ ಎನ್ನುವ ಆತ್ಮೀಯ ಭಾವ ಮೂಡಿಸುತ್ತಾ ” ಐ ಲವ್ ಯೂ ” ಎಂದು ಹೇಳುವ ನಿಮ್ಮದೇ ಆದ ಬೆಚ್ಚನೆಯ ವಾತವಾರಣ ನಿರ್ಮಿಸಿಕೊಳ್ಳಿ……..!
ಪ್ರೀತಿಯಿಂದ……
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
