ವ್ಯಕ್ತಿತ್ವ ವಿಕಸನದಲ್ಲಿ ಗೀತೆಯ ಪಾತ್ರ 

ಭಗವದ್ಗೀತೆಯನ್ನು ಆಳವಾಗಿ ಯಥಾರ್ಥವಾಗಿ ಅಧ್ಯಯನ ಮಾಡಿದರೆ ಅದರ ಅಗಾಧ ವ್ಯಾಪ್ತಿಯ ಪರಿಚಯ ಸಾಧ್ಯ. ಭಗವದ್ಗೀತೆಯು ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಕ ಉತ್ತರವನ್ನು ನೀಡುತ್ತದೆ. ವ್ಯಕ್ತಿತ್ವ ವಿಕಸನದಲ್ಲಿ ಗೀತೆಯ ಪಾತ್ರದ ಕುರಿತು ಲೇಖಕಿ ಸುಜಾತಾ ರವೀಶ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮಹಾಭಾರತದಲ್ಲಿ ಒಳಿತು ಕೆಡುಕಿನ ಸಂಘರ್ಷವಾಗಿ ಕೌರವ ಪಾಂಡವರ ಮಧ್ಯೆ ಕುರುಕ್ಷೇತ್ರದಲ್ಲಿ ಯುದ್ಧ ಆರಂಭವಾಗುತ್ತದೆ. ಸಾಕ್ಷಾತ್ ಕೃಷ್ಣನನ್ನೇ ಸಾರಥಿಯಾಗಿಸಿಕೊಂಡ ಅರ್ಜುನನಿಗೆ ಯುದ್ಧ ಮಾಡುವ ಮನಸ್ಸಿರದೆ ಸಂಬಂಧಿಕರನ್ನು ಕೊಲ್ಲುವ ಯುದ್ಧ ಬೇಡವೆಂದು ತನ್ನ ಮನದ ಜಿಜ್ಞಾಸೆ ದ್ವಂದ್ವಗಳನ್ನು ಕೃಷ್ಣನಿಗೆ ಹೇಳುತ್ತಾನೆ .ಅವನ ಪ್ರಶ್ನೆಗಳಿಗೆ ಗೊಂದಲಗಳಿಗೆ ಕೃಷ್ಣ ಉತ್ತರಿಸಿ ತನ್ನ ವಿಶ್ವರೂಪ ದರ್ಶನವನ್ನು ತೋರುವ ಭಾಗವೇ ಶ್ರೀಮದ್ಭಗವದ್ಗೀತೆ.  ಹದಿನೆಂಟು ಅಧ್ಯಾಯಗಳಲ್ಲಿ ಜೀವನ ವಿಧಾನ ನೀತಿ ಸೃಷ್ಟಿರಹಸ್ಯ ವೇದಾಂತದ ಪ್ರಾಮುಖ್ಯತೆಗಳನ್ನು ಅನಾವರಣಗೊಳಿಸುತ್ತಾನೆ ಆ ಕೇಶವ.

ಬಹುತೇಕ ಜನರಲ್ಲಿ ಇದು ಧರ್ಮಕ್ಕೆ ಸೀಮಿತ ಸಾಹಿತ್ಯ ಎಂಬ ತಪ್ಪು ಗ್ರಹಿಕೆ ಇದೆ .ಭಗವದ್ಗೀತೆಯನ್ನು ಆಳವಾಗಿ ಯಥಾರ್ಥವಾಗಿ ಅಧ್ಯಯನ ಮಾಡಿದರೆ ಅದರ ಅಗಾಧ ವ್ಯಾಪ್ತಿಯ ಪರಿಚಯ ಸಾಧ್ಯ. ಇದರಲ್ಲಿ ಅನೇಕಾನೇಕ ಸಂಗತಿಗಳು ಅಡಕವಾಗಿದ್ದು ಸಾರ್ವಕಾಲಿಕ ಪ್ರಸ್ತುತಿ ಹೊಂದಿರುವುದರಿಂದ ಜ್ಞಾನಾರ್ಜನೆಗೆ ತನಗೆ ಬೇಕಾದ ವಿಷಯಗಳ ಬಗ್ಗೆ ಮಾಹಿತಿ ಬರೆಯುವುದಂತೂ ಖಡಾಖಂಡಿತ. ಇಂದಿನ ಈ ವೈಜ್ಞಾನಿಕ ಯುಗದಲ್ಲಿ ಭಗವದ್ಗೀತೆಯ ಓದಿನಿಂದ ತಿಳಿವಳಿಕೆಯಿಂದ ಏನು ಪ್ರಯೋಜನ ಎಂದು ಕೊಂಡರೆ ಇಂದಿನ ಸಮಸ್ಯೆಗಳಿಗೆ ಹಿಂದಿನ ಕಾಲದ ತತ್ವಗಳು ಹೇಗೆ ಅನ್ವಯಿಸುತ್ತದೆ ಎಂಬ ಸಂದೇಹವಿದ್ದರೆ, ಮನುಷ್ಯನಿಗೆ ಅಂದಿನ ದಿನಗಳಲ್ಲಿ ಇದ್ದ ಕಾಮಕ್ರೋಧಾದಿಗಳು ಇಂದೂ ಇದೆ :ದುಗುಡ ಅಸಹಾಯಕತೆಗಳು ಮತ್ತೂ ಹೆಚ್ಚಾಗಿ ಕಾಡುತ್ತಿದೆ ಎಂಬುದು ಕೋವಿಡ್ ೧೯ ಅಲೆ ಅಪ್ಪಳಿಸಿದ ಸಮಯದಲ್ಲಿ ಚೆನ್ನಾಗಿ ಮನದಟ್ಟಾಗಿದೆ .ಹೀಗಾಗಿ ಭಗವದ್ಗೀತೆಯು ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಕ ಉತ್ತರವನ್ನು ನೀಡುತ್ತದೆ ಎಂಬುದಂತೂ ನಿರ್ವಿವಾದ . ಭಗವದ್ಗೀತೆಯ ಓದು ಆಧ್ಯಾತ್ಮಿಕ ಚಿಂತನೆಗಳಿರುವವರಿಗೆ ವಯಸ್ಸಾದವರಿಗೆ ಸೂಕ್ತ ಎಂಬೆಲ್ಲಾ ಪರಿಕಲ್ಪನೆಗಳು ಜನಮಾನಸದಲ್ಲಿ ಬೇರೂರಿದೆ.  ಅದು ಖಂಡಿತ ತಪ್ಪು. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರ,  ಜೀವನದ ಅಂತ್ಯ ಸಮೀಪಿಸಿರುವ, ಎಲ್ಲಾ ವಯೋಮಾನದವರಿಗೂ ಅನ್ವಯಿಸುವಂತಹ ಉಪದೇಶಗಳು ಸೂಚನೆಗಳು ಮಾರ್ಗದರ್ಶನಗಳು ಗೀತೆಯಲ್ಲಿವೆ .ಹಾಗಾಗಿ ಜೀವನದುದ್ದಕ್ಕೂ ಇದರ ಅಧ್ಯಯನ ಹಾಗೂ ತತ್ವಗಳ ಪಾಲಿಸುವಿಕೆ ಐಹಿಕವಾಗಿ ಯಶಸ್ಸು ಐಶ್ವರ್ಯ ನೆಮ್ಮದಿ ಮನಶ್ಶಾಂತಿ ಹಾಗೂ ದೇವನೆಡೆಗೆ ಹೋಗುವ ಪ್ರಗತಿಗೂ ಸಾಧನವಾಗುವುದು .

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ 
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ 

ಎಲ್ಲ ಉಪನಿಷತ್ತುಗಳು ಗೋವುಗಳು.  ಗೋಪಾಲ ನಂದನನು ಹಾಲು ಕರೆಯುವವನು.. ಪಾರ್ಥ ಕರು ಮಹತ್ ಗೀತಾಮೃತವೇ ಹಾಲು. ಜ್ಞಾನಿಗಳು ಅದನ್ನು ಕುಡಿಯುವರು. ಹಾಲು ಪರಿಪೂರ್ಣ ಆಹಾರ .  ಎಲ್ಲಾ ವಯೋಮಾನದವರಿಗೂ ಅನಿವಾರ್ಯವೂ ಹೌದು.  ಗೀತೆಯೂ ಹಾಗೆಯೇ …..

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಗವದ್ಗೀತೆ 

ತತ್ವ ಮತ್ತು ಯೋಗಗಳ ಸಮನ್ವಯ. ಯಾವ ತತ್ವವನ್ನೂ ಯೋಗವನ್ನು ಹೆಸರಿಸದಿದ್ದರೂ ಅವುಗಳ ಮುಖ್ಯ ಭಾವನೆಗಳು ಏಕತೆಯಲ್ಲಿ ಮಿಲನವಾಗಿ ವೈರುಧ್ಯಗಳನ್ನು ಕಳೆದುಕೊಂಡು ತಮ್ಮ ತಮ್ಮ ಸಾರ್ಥಕತೆ ಪಡೆದುಕೊಳ್ಳುತ್ತವೆ

ಈಗ ಸಮಾಜದ ವಿವಿಧ ಸ್ತರಗಳ ಜನರಿಗೆ ಗೀತೆ ಏನು ಹೇಳುವುದೆಂದು ತಿಳಿಯೋಣ ಬನ್ನಿ .

ವಿದ್ಯಾರ್ಥಿಗಳಿಗೆ:

ಮೂಲಭೂತ ಅರಿಯುವ ಮನಸ್ಸು ಶ್ರದ್ಧೆ ಕಲಿಕೆಗೆ ಕಾರಣ. ಇದೇ ಗೀತೆಯಲ್ಲಿ ಹಲವಾರು ಬಾರಿ ಶ್ರದ್ಧೆಯ ಪ್ರಸಕ್ತಿ ಕಂಡುಬರುತ್ತದೆ  ಹಿರಿಯರಲ್ಲಾಗಲಿ ತಂದೆ ತಾಯಿಯರ ಮಾತುಗಳಲ್ಲಾಗಲೀ ಶ್ರದ್ದೆ ಇರದ ಇಂದಿನ ಅವಿಧೇಯ ಮಕ್ಕಳು ಇದರಿಂದ ಖಂಡಿತಾ ಪಾಠ ಕಲಿಯಬಹುದು.

ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯ 
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ  

(ಅಧ್ಯಾಯ  ೪ ಶ್ಲೋಕ ೨೯)

ಜಿತೇಂದ್ರಿಯನೂ ಕರ್ತವ್ಯಪರನೂ ಶ್ರದ್ಧೆಯುಳ್ಳವನೂ ಆದ ಮನುಷ್ಯನಿಗೆ ಜ್ಞಾನ ಲಭಿಸುತ್ತದೆ ಮತ್ತು ಆ ಜ್ಞಾನದಿಂದಲೇ ಉತ್ತಮ ಮಟ್ಟದ ಶಾಂತಿ ಅವನಿಗೆ ಲಭಿಸುತ್ತದೆ.  ಶ್ರದ್ಧೆ ಇಲ್ಲದವರಿಗೆ, ಸಂಶಯ ಪ್ರವೃತ್ತಿಯವರಿಗೆ ಇಹಪರದಲ್ಲಿ ದುಃಖವನ್ನೇ ಸಹಿಸಬೇಕಾಗುತ್ತದೆ .

ಹಾಗೆಯೇ ಏಕಾಗ್ರತೆ ಅಧ್ಯಯನಶೀಲತೆಗಳ ಬಗೆಗೂ ಗೀತೆ ಬೆಳಕು ಚೆಲ್ಲುತ್ತದೆ .ಹಿಂದೆ ಗುರುಕುಲದಿಂದ ಹೊರಡುವ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಉಪದೇಶದಲ್ಲಿ “ಸ್ವಾಧ್ಯಾಯಾತ್ ಮಾ ಪ್ರಮದಃ” ಎಂಬುದೂ ಸೇರಿತ್ತು .ನಿರಂತರ ಅಧ್ಯಯನ ಅಭ್ಯಾಸ ಚಿನ್ನವನ್ನು ಮತ್ತೆ ಮತ್ತೆ ಪುಟಕ್ಕಿಟ್ಟಂತೆ .ಇಲ್ಲಿ ಸರ್ವಜ್ಞನ ತ್ರಿಪದಿ ಒಂದನ್ನು ನೆನೆಯಬಹುದು.

 ಸರ್ವರೊಳಗೊಂದೊಂದು ನುಡಿಗಲಿತು
ವಿದ್ಯೆಯಾ ಪರ್ವತವೇ ಆದ ಸರ್ವಜ್ಞ 

ಆದರೆ ಹೀಗಾಗಲು ವಿನಯಶೀಲತೆಯು ಅಗತ್ಯ. ಈ ಅಂಶವನ್ನು ಗೀತೆ ಹೇಳುತ್ತದೆ.

ಗೃಹಿಣಿಯರಿಗೆ: 

“ಗೃಹಿಣೀ ಗೃಹಮುಚ್ಯತೇ” ಎಲ್ಲರಿಗೂ ತಿಳಿದ ವಾಕ್ಯ ಪ್ರತಿ ಮನೆಯಲ್ಲಿ ಶಾಂತಿ ನೆಮ್ಮದಿ ಈಗಲೂ ತಾಂಡವವಾಡುತ್ತಿದ್ದರೆ ಅದು ಪ್ರತಿ ಬೀದಿ, ಊರು, ದೇಶ, ಕಡೆಗೆ ವಿಶ್ವದಲ್ಲೆಲ್ಲಾ ವಿಜೃಂಭಿಸುತ್ತದೆ. ಅದಕ್ಕೆ ಕಾರಣಳಾಗುವಳು ಮನೆಯ ಗೃಹಲಕ್ಷ್ಮಿ .

ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕ ಶರಣಂ ವ್ರಜ 
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ 

ಎಂದು ದೇವದೇವನೇ ಗೀತೆಯ ಭರತವಾಕ್ಯ ವಾಗಿ ನುಡಿದಿದ್ದಾನೆ. ಪ್ರತಿ ಗೃಹಿಣಿಯೂ ತನ್ನ  ಧರ್ಮ ಕರ್ತವ್ಯಗಳನ್ನು ಪಾಲಿಸುತ್ತಾ ದೈವ ಭಕ್ತಿ ಗೀತೆ ಬೋಧನೆಗಳನ್ನು ತಾನೂ ಅನುಸರಿಸಿ ಪತಿಯೂ ಅನುಸರಿಸುವಂತೆ ಮಾಡಿ ಮಕ್ಕಳಲ್ಲಿ ಎಳವೆಯಿಂದಲೇ ಸದ್ಗುಣಗಳನ್ನು ಬೆಳೆಸಿದರೆ ಅಂತಹ ಪ್ರತಿ ಮನೆಯೂ ವೃಂದಾವನವೇ ಹಾಗಾಗಿ ಗೃಹಿಣಿಯರು ಗೀತಾಪಾಠ, ಪರಿಪಾಲನೆ ಮಾಡುವುದು ತುಂಬಾ ಸೂಕ್ತ .

ಪುರುಷರಿಗೆ:  

ಉದ್ಯೋಗಂ ಪುರುಷ ಲಕ್ಷಣಂ 
ವಿದ್ಯಾಮಂ ಸಾಹಸಂ ಧೈರ್ಯಂ
ಬುದ್ಧಿಶಕ್ತಿ ಪರಾಕ್ರಮಃ
ಏತಾನಿ ಪ್ರವರ್ತಂತೇ ತತ್ರದೇವತಾ ಪ್ರಸೀದತಿ 

ಉದ್ಯೋಗ ಧೈರ್ಯ ಸಾಹಸ ಬುದ್ದಿ ಪರಾಕ್ರಮಗಳೇ ಭಗವಂತನನ್ನು ಪ್ರಸನ್ನಗೊಳಿಸುತ್ತದೆ . ಅಲ್ಲದೆ ನಿರ್ಭಯತೆಯು ಪುರುಷನಿಗೆ ಶೋಭೆ .

ಅಭಯಂ ಸತ್ತ್ವ ಸಂಶುದ್ಧಿಃ ಜ್ಞಾನಯೋಗ ವ್ಯವಸ್ಥಿತಿ  
ದಾನಂ  ಧರ್ಮಶ್ಚ ಯಜ್ಞಶ್ಚ ಸ್ವಾಧ್ಯಾಯ ಸ್ತಪ ಆರ್ಜವಂ  

ಪರಸ್ಪರರ ಮೇಲೆ ಪ್ರೀತಿ ವಿಶ್ವಾಸ ಸಹೃದಯತೆ ಮತ್ತು ಸಹಕಾರಗಳ ಸ್ಥಿತಿ ಒದಗಬಹುದು. ಸುತ್ತೆಲ್ಲಾ ನಿರ್ಭಯತೆ ಇದ್ದಾಗಲೇ ಮೊದಲು ಮನದಲ್ಲಿ ಆ ಭಾವವನ್ನು ತುಂಬಿ ಕೊಂಡು ಆನಂದವಾಗಿರಿ ಎಂದು ಗೀತೆ ಹೇಳುತ್ತದೆ ಇಹಪರದ ಶ್ರೇಯಕ್ಕಾಗಿ ನಿರ್ಭಯತೆ ಬೇಕು ಆಗಲೇ ಸಮೃದ್ಧವಾದ ಪವಿತ್ರವಾದ ದೈವೀ ಜೀವನ ನಮ್ಮದಾಗುತ್ತದೆ .

ಎಲ್ಲರಿಗೂ ಅನ್ವಯವಾಗುವಂತಹ ತತ್ವಗಳು;

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ
ಕಾಯಂ ಲೋಕೋಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ 

ಅಜ್ಞಾನ ಶ್ರದ್ಧೆಗಳಿಂದ ತುಂಬಿರುವ ಸಂಶಯಾತ್ಮ ವಿನಾಶ ಹೊಂದುತ್ತಾನೆ. ಅವನಿಗೆ ಇಹದಲ್ಲಿಯಾಗಲಿ ಪರದಲ್ಲಿಯಾಗಲಿ ಸುಖವಿರದು .ಇಂದಿನ ಈ ಯುಗದಲ್ಲಿ ತ್ರಿಶಂಕುಗಳಾಗಿ ನಾವೆಲ್ಲಾ ಅನುಭವಿಸುತ್ತಿರುವ ಪಾಡು ಇದೇ ಅಲ್ಲವೇ? ಧರ್ಮದಲ್ಲಿ ಪುರಾಣದಲ್ಲಿ ಸಂಪ್ರದಾಯಗಳಲ್ಲಿ ಶ್ರದ್ಧೆ ಇರದೆ ಅಧೋಗತಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಕೃಷ್ಣನ ಮಾತುಗಳು ಹೆಚ್ಚು ಪ್ರಸ್ತುತ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ 
ಮಾಕರ್ಮ ಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ 

ಕರ್ಮ ಮಾಡುವ ಅಧಿಕಾರ ನಿನಗಿದೆ.  ಫಲ ಬಯಸಬೇಡ ನಿನ್ನ ಕರ್ಮಕ್ಕನುಗುಣವಾಗಿ ಫಲ ನಾನು ಕೊಡುವೆ . ಈ ಸತ್ಯವನ್ನು ಅರಿತರೆ ದ್ವೇಷ ಮಾತ್ಸರ್ಯಗಳು ನಾಶವಾಗಿ ಮನವನ್ನು ಶಾಂತಿ ಆವರಿಸಿಕೊಳ್ಳುವುದರಲ್ಲಿ  ಸಂಶಯವಿಲ್ಲ.

ಭಗವದ್ಗೀತೆಯು ಈ ಕಡೆಯ ಶ್ಲೋಕದೊಂದಿಗೆ ಮುಕ್ತಾಯವಾಗುತ್ತದೆ .

ಯತ್ರ ಯೋಗೇಶ್ವರ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ 
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ 

ಎಲ್ಲಿ ಯೋಗೇಶ್ವರನಾದ ಕೃಷ್ಣನು ಇರುತ್ತಾನೋ ಮತ್ತು  ಎಲ್ಲಿ ಧನುರ್ಧಾರಿಯಾದ ಅರ್ಜುನನಿರುತ್ತಾನೋ ಅಲ್ಲಿ ಶ್ರೀ ವಿಜಯ ಐಶ್ವರ್ಯಾ ಧೃವನೀತಿ ಇವುಗಳು ನೆಲೆಸಿರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಸಂಜಯನೇ ಹೇಳುತ್ತಾನೆ . ಇಲ್ಲಿ ಯೋಗೇಶ್ವರ ಅಂದರೆ ಶಾಂತ ವ್ಯಕ್ತಿ, ವಿವೇಚನೆ ತುಂಬಿದವನು ಮತ್ತು ಮಾನವರೆಲ್ಲೆಡೆ ಅನುಕಂಪ ತುಂಬಿದ ದೃಷ್ಟಿಶಕ್ತಿ . ಅರ್ಜುನ ಬಿಲ್ಲು ಹಿಡಿದು ಕ್ರಿಯಾಶೀಲ ವ್ಯಕ್ತಿತ್ವ ತೋರುವವನು . ಎಲ್ಲಿ ದೃಷ್ಟಿಶಕ್ತಿ ಕ್ರಿಯಾಶಕ್ತಿ ಎರಡೂ ಮೇಳೈಸಿರುವುದೋ ಅಲ್ಲಿ ಶ್ರೀ ಅಂದರೆ ಅಭಿವೃದ್ಧಿಶೀಲತೆಯ, ವಿಜಯ ಅಂದರೆ ಯಶಸ್ಸು, ಭೂತಿ ಎಂದರೆ ನೆಮ್ಮದಿ ಸುಖ ಸಂತೃಪ್ತಿ ,ಧ್ರುವಾ ನೀತಿ  ಅಂದರೆ ಋಜುತ್ವ ಹಾಗೂ ಸ್ಥಿರವಾದ ನ್ಯಾಯ ಇವೆಲ್ಲವೂ ಇದ್ದು ನೈತಿಕಪ್ರಜ್ಞೆ ಜಾಗ್ರತವಾಗಿರುತ್ತದೆ.

ಸುಂದರ ಸುಸ್ಥಿರ ಸಮಾಜಕ್ಕೆ ಇಹಪರಗಳ ಏಳಿಗೆಗೆ ಇದಕ್ಕಿಂತ ಹೆಚ್ಚಿನದಿನ್ನೇನು ಬೇಕು ?


  • ಸುಜಾತಾ ರವೀಶ್ – ಮೈಸೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW