‘ನಾ ನೆಟ್ಟ ಗಿಡಕ್ಕೆ ಹೂ ಬಿಡುವ ಸಮಯ ಒಮ್ಮೆ ನೋಡಿದರೆ ಹಗುರ ಆಗುವ ಭಾವ’ …ಕವಿ ನಾಗರಾಜ ಬಿ.ನಾಯ್ಕ ಅವರ ಕವನದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಜೀವದ ಉಸಿರೇ
ಅದೆಷ್ಟು ದೂರ ನಿನ್ನ ಪಯಣ
ನೀನು ನನ್ನದಷ್ಟೇ
ಎಂದವರೂ ದೂರ ನಿಂತು
ಕೈ ಬೀಸಿದಂತೆ
ಯಾರಿಗೂ ಹೇಳದೇ
ಹೊರಟು ಬಿಡುವ
ಅವಸರ ನಿನಗೆ
ಹಸಿವೆ ನೋವು ನುಂಗಿ
ಬದುಕಿ ಉಳಿಯಲು
ಮತ್ತೆ ಇರಬೇಕಿತ್ತು
ಈ ಜಗದ ಹಸಿರಲಿ
ಹೆಜ್ಜೆ ಇಟ್ಟು ಸುತ್ತ
ನಡೆಯಲು ಸ್ವಲ್ಪ ಹೊತ್ತು
ಬಿಟ್ಟರೆ ಸಾಕಿತ್ತು
ನಾ ನೆಟ್ಟ ಗಿಡಕ್ಕೆ
ಹೂ ಬಿಡುವ ಸಮಯ
ಒಮ್ಮೆ ನೋಡಿದರೆ
ಹಗುರ ಆಗುವ ಭಾವ
ಮನೆಯ ಹಂಚಿನ ತುದಿಗೆ
ಹಕ್ಕಿ ಗೂಡೊಂದಿದೆ
ಅದರ ಮುಖ ನೋಡಲು
ನನಗೆ ಬಿಟ್ಟರೆ ಬೇಕಿತ್ತು
ಅಲ್ಲಿಯೇ ತೊಟ್ಟಿಲಲ್ಲಿ
ಮಲಗಿದ್ದ ಪುಟ್ಟ ನಗುವ
ಮಗುವ ಒಮ್ಮೆ
ಮಲಗಿಸಿ ಬಂದು
ಬಿಡುತ್ತಿದ್ದೆ ಸುಮ್ಮನೆ
ನಿನ್ನ ಹಿಂದೆ ಹಾಗೆ
ಅನ್ನ ಕೊಟ್ಟ ಮಣ್ಣಿಗೆ
ನಮಿಸ ಬೇಕಿತ್ತು
ಸಾಕಿದ ಬೆಕ್ಕಿಗೆ
ಅನ್ನ ಕೊಡಬೇಕಿತ್ತು
ಕೊನೆಗೆ ಜೊತೆ ಜೊತೆಗೆ
ಇದ್ದವರ ಒಮ್ಮೆ
ನೋಡ ಬೇಕಿತ್ತು
ಏನೋ ಹೇಳಬೇಕಿತ್ತು
ದೀರ್ಘ ಮೌನ ನನ್ನದು
ಉಸಿರೇ ಜಗವೇ ನಿನ್ನದು
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
