ಒಂದು ಪುಟ್ಟ ನಾಯಿಮರಿ ಪದೇ ಪದೇ ನಮ್ಮ ದೈತ್ಯ ಜೀಪಿಗೆ ರಸ್ತೆಯಲ್ಲಿ ಅಡ್ಡ ಬಂದು ನಿಲ್ಲುತ್ತಿತ್ತು. ನಮ್ಮ ಜೀಪಿನ ಬಾನೆಟ್ ಉದ್ದವಿದ್ದದ್ದರಿಂದ ಈ ಪುಟ್ಟ ಪೈಲ್ವಾನ್ ಕಾಣಿಸದೇ ಸತಾಯಿಸುತ್ತಿದ್ದ. ಗಿರಿವಾಲ್ಮೀಕಿ ಅವರ ಅನುಭವದ ಕಾಡಿನ ಕತೆಯನ್ನು ತಪ್ಪದೆ ಮುಂದೆ ಓದಿ…
ಮಾಳ್ಷೇಜ್ ಘಾಟಿನ ಕಣಿವೆಯೊಳಗೆ ಚಕ್ರಕಾರವಾಗಿ ಸುರಿಯುತ್ತಿದ್ದ ಮಳೆಗೆ ಬಿಡವಿರಲಿಲಲ್ಲಾ. 5 ರಾತ್ರಿ 4 ಹಗಲುಗಳ ಅವಿಶ್ರಾಂತ ಕೆಲಸ ಅಪಾರ ದೈಹಿಕ ಶ್ರಮ ಬೇಡಿದ ಕೆಲಸಕ್ಕೆ, ಮೈಯ ನೆಣವೆಲ್ಲಾ ಬಸಿದು ಹೋಗಿತ್ತು. ಬೀಳುವ ಮಳೆಗೆ ನೆನೆದು ಬೂಟಿನೊಳಗಿನ ಪಾದದ ಬೆರೆಳೆಲ್ಲಾ ಸೆಲೆತು ಹೋಗಿದ್ದವು. ಕನಿಷ್ಠ ಬಿಸಿಲಿನ ದರ್ಶನವಾಗದೇ 15 ದಿನ ಮೇಲಾಗಿದ್ದವು.
ಬೀಸುವ ಥಂಡಿ ಗಾಳಿಗೆ ಎಷ್ಟು ಉಂಡರು ತೀರದ ಹಸಿವು. ಹೀಗೆ ಕೆಲಸದ ನಡುವೆ ಕಾಡಲ್ಲಿ ನಡೆದು ಹೋಗುತ್ತಿರುವಾಗ ಯಾವುದಾದರು ಕಾಡಂಚಿನ ಗ್ರಾಮಗಳಲ್ಲಿ ಮನೆ ಕಂಡರೆ ಸಾಕು ಅತ್ತ ಓಡುತ್ತಿದ್ದೆವು. ಈಗ ದಸರಾ ಹಬ್ಬವಾದ್ದರಿಂದ ಮರಾಠಿ ನೆಲದ ಪ್ರತಿ ಹಳ್ಳಿಗಳಲ್ಲಿ ಮುಂಜಾನೆ ದುರ್ಗಾದೇವಿ ಉತ್ಸವ ನಡೆಯವುದು ಸರ್ವೇ ಸಾಮಾನ್ಯ ನೋಟ. ಹಾಗಾಗಿ ಬೆಳಿಗ್ಗೆ ಯಾವುದಾದರು ಅನಾಮಧೇಯ ಹಳ್ಳಿ ಹೊಕ್ಕರು ನಮಗೆ ಕಡಕ್ ಎನ್ನುವ ಹೂರಣ&ಎಮ್ಮೆ ತುಪ್ಪ ತುಂಬಿದ ಸಿಹಿ ಪುರಿ ಲಭ್ಯವಾಗುತ್ತಿತ್ತು. ಬೆಲ್ಲದ ರುಚಿ ಮಾತ್ರ ಸ್ವರ್ಗ ಹತ್ತಿ ಇಳಿದಂತಾಗುತ್ತಿತ್ತು.

ನಮ್ಮ ಹೆಸರು ಊರು ಯಾವುದನ್ನು ಕೇಳದೇ ಕರೆದು “ಖಹೀ ಕಹಿಸ್ಲಾ ಖಾ “..? ಎಂದು ಭಾಷೆ – ಗಡಿ ಮೀರಿ ನಮಗೆ ಆತಿಥ್ಯ ನೀಡುತ್ತಿದ್ದರು. ಹಲವು ದಿನಗಳಿಂದ ನಮ್ಮ ಹಸಿವು ನೀಗಿಸುತ್ತಿದ್ದ ಮರಾಠಿಗರ ಋಣ ಹೊತ್ತು ಕಾಡಿನ ಹಾದಿ ಹಿಡಿದರೆ, ಒಂದು ಪುಟ್ಟ ನಾಯಿಮರಿ ಪದೇ ಪದೇ ನಮ್ಮ ದೈತ್ಯ ಜೀಪಿಗೆ ರಸ್ತೆಯಲ್ಲಿ ಅಡ್ಡ ಬಂದು ನಿಲ್ಲುತ್ತಿತ್ತು. ನಮ್ಮ ಜೀಪಿನ ಬಾನೆಟ್ ಉದ್ದವಿದ್ದದ್ದರಿಂದ ಈ ಪುಟ್ಟ ಪೈಲ್ವಾನ್ ಕಾಣಿಸದೇ ಸತಾಯಿಸುತ್ತಿದ್ದ. ನೋಡಿದ ಎಂತವರಿಗೂ ಮುದ್ದು ಬರುವಂತಹ ಡುಮ್ಮ ಡುಮ್ಮ. ಎಲ್ಲಿ ಚಕ್ರಕ್ಕೆ ಸಿಲುಕಿ ಬಿಡುತ್ತದೋ ಎನ್ನುವ ಗಾಬರಿಯಲ್ಲಿ, ಮತ್ತೆ ಮತ್ತೆ ವಾಹನದ ಹಾರ್ನ್ ಹೊಡೆಯುವುದು, ಕೆಳಗೆ ಇಳಿಯುವುದು ನೋಡುವುದು, ವಾಹನ ಹತ್ತುವ ಸರ್ಕಸ್ ನಡೆದೇ ಇತ್ತು.

ಎತ್ತಿ ಆ ಕಡೆ ಬಿಡೋಣವೆಂದರೆ ಹತ್ತಿರ ಹೋದೊಡನೆ ಕೈಗೆ ಸಿಗದೇ ಮಳೆಯಲ್ಲಿ ಸತಾಯಿಸುತ್ತಿದ್ದ. ಸರಿಯೆಂದು ಬಿಟ್ಟು ಸ್ವಲ್ಪ ದೂರ ಹೋಗುತ್ತಿದ್ದಂತೆ ಮತ್ತೆ ಜೀಪಿನ ಹಿಂದೆ ಓಡಿ ಬರುವುದು ಕಾಣಿಸಿತು. ವಾಹನ ನಿಲ್ಲಿಸಿ ಬಳಿಗೆ ಹೋದರೆ ಪಾಪ ಪಾದ ನೆಕ್ಕುತ್ತಾ ಮುದ್ದು ಮಾಡತೊಡಗಿತು.ಎತ್ತಿಕೊಂಡು ತಲೆ ಸವರತೊಡಗಿದೆ.ಕುತ್ತಿಗೆ ತಿರುಗಿಸಲು ಆಗದೇ ವಿಪರೀತ ಹಿಂಸೆ ಅನುಭವಿಸುತ್ತಿದ್ದ ಮರಿಯ ಕುತ್ತಿಗೆಯ ಸುತ್ತಾ ದಪ್ಪನೆಯ ಬಟ್ಟೆಯಂಥಾ ಹಗ್ಗದಿಂದ ಬಿಗಿಯಲಾಗಿತ್ತು. ಆ ನೋವಿಗೆ ಪಾಪ ಅದೆಷ್ಟೂ ದಿನದಿಂದ ಹಿಂಸೆ ಅನುಭವಿಸಿತ್ತೇನೋ ಕಾಣೆ..? ಹಗ್ಗ ಬಿಚ್ಚಿದೊಡನೆ ನೋವಿನಿಂದ ಮುಕ್ತವಾಗಿ ಬಾಲ ಅಲ್ಲಾಡಿಸುತ್ತ ಮುಖ ನೆಕ್ಕತೊಡಗಿತು.

ಹೇಳಿಕೊಳ್ಳುವಂಥಹಾ, ತಲೆದೂಗುವಂಥಹಾ, ಆಶ್ಚರ್ಯ ಪಡುವಂಥಹಾ ವಿಷಯವೇನಲ್ಲಾ. ಆದರೆ ಅಷ್ಟೆಲ್ಲಾ ಜನರಿದ್ದು ಯಾರ ಹತ್ತಿರವೂ ಹಗ್ಗ ಬಿಚ್ಚಿಸಿಕೊಳ್ಳದೇ, ನಾವು ಬರುವವವರೆಗೂ ಕಾದು 6-7 ಬಾರಿ ನಮ್ಮ ವಾಹನಕ್ಕೆ ಅಡ್ಡವಾಗಿ ಪದೇ ಪದೇ ಸತಾಯಿಸಿ ನೋವು ಹೇಳಿಕೊಂಡ ಪಡಿಪಾಟಲನ್ನ ಅದರ ನಿಷ್ಕಲ್ಮಶ ಪ್ರೀತಿಯನ್ನ ಅಕ್ಷರಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ.! ಮಾಳ್ಷೇಜ್ ಕಣಿವೆಯ ಈ ಡುಮ್ಮನ ನೆನಪು ನನ್ನ ಈ ಅಲೆಮಾರಿ ಬದುಕಿಗೆ ಒಂದು ಚೆಂದನೆಯ ನೆನಪು.ಅವನನ್ನು ಅಲ್ಲಿಯೇ ಬಿಡದೇ ಮನಸ್ಸಾಗದೇ, ನನಗೆ ಗೊತ್ತಿರುವ ಮಾಳ್ಷೇಜ್ ಘಾಟಿನ ಕೋತಾಲೆಯೆನ್ನುವ ಹಳ್ಳಿಯ ಕಾನಿಟ್ಕರ್ ಎನ್ನುವ ಹಾಲು ಮಾರುವ ಗೌಳಿಗೆ ಡುಮ್ಮನ ದೇಖರೇಖಿ ನೋಡಿಕೊಳ್ಳುವಂತೆ ಜವಾಬ್ದಾರಿ ನೀಡಿದ್ದೇನೆ.

ಕಡು ಹಸಿರು ತುಂಬಿಕೊಂಡ ಕಣಿವೆಯಲ್ಲಿ ಮಳೆ ಮೋಡಗಳು ದಟ್ಟೈಸತೊಡಗಿದವು. ಕಪ್ಪನೆಯ ಥಾರ್ ಜೀಪು ಕಾಡಿನ ಹಾದಿ ಸೀಳತೊಡಗಿದರೆ ಮರಾಠಿ ಕಾನಿಟ್ಕರ್ ಮುಂದಿನ ಸಾರಿ ಬರುವಾಗ ಡುಮ್ಮನಿಗೆ ಕುತ್ತಿಗಿಗೆ ಗಂಟೆಯ ಬೆಲ್ಟ್ ತರಲು ಮರೆಯಬೇಡಿ ಎಂದು ಗಾಳಿಯಲ್ಲಿ ಕೈ ಬೀಸಿದ…
ಮುಂದುವರೆಯುತ್ತದೆ…
ಹಿಂದಿನ ಸಂಚಿಕೆಗಳು :
- ಕಾಡಿನ ಸುತ್ತ – ಭಾಗ ೧
- ಕಾಡಿನ ಸುತ್ತ – ಭಾಗ ೨
- ಕಾಡಿನ ಸುತ್ತ – ಭಾಗ ೩
- ಕಾಡಿನ ಸುತ್ತ – ಭಾಗ ೪
- ಕಾಡಿನ ಸುತ್ತ – ಭಾಗ ೫
- ಕಾಡಿನ ಸುತ್ತ – ಭಾಗ ೬
- ಕಾಡಿನ ಸುತ್ತ – ಭಾಗ ೭
- ಗಿರಿವಾಲ್ಮೀಕಿ
