ಕಾರಂತರನ್ನು ನೆನೆಯುವುದೆಂದರೆ ಪ್ರಪಂಚವನ್ನು ಒಮ್ಮೆ ಸುತ್ತಿ ಬಂದಂತೆ. ಲೇಖಕರಾಗಿ, ಪರಿಸರ ಹೋರಾಟಗಾರರಾಗಿ, ವಿಜ್ಞಾನ ಬರಹಗಾರರಾಗಿ ಕಾರಂತರ ಸಾಧನೆ ಶಿಖರಪ್ರಾಯದ್ದು. ಕಾರಂತರ ಜನ್ಮದಿನದ ನೆನಪಿಗೊಂದು ಲೇಖಕ ಡಾ.ಎಚ್.ಎಸ್. ಸತ್ಯನಾರಾಯಣ ಅವರು ಬರೆದ ಲೇಖನ, ತಪ್ಪದೆ ಓದಿ…
ಕಾರಂತರನ್ನು ನೆನೆಯುವುದೆಂದರೆ ಪ್ರಪಂಚವನ್ನು ಒಮ್ಮೆ ಸುತ್ತಿ ಬಂದಂತೆ. ಕನ್ನಡ ನಾಡಿನ ಕಡಲ ತೀರದಲ್ಲಿದ್ದು ಅಲ್ಲಿಂದಲೇ ಪ್ರಪಂಚದ ಎಲ್ಲ ಆಗುಹೋಗುಗಳನ್ನು ಗಮನಿಸುತ್ತ ತೊಂಬತ್ತೈದು ವರ್ಷಗಳ ತುಂಬು ಜೀವನವನ್ನು ಬಾಳಿದ ಕಾರಂತರು ಮನುಷ್ಯ ಚೈತನ್ಯ ಏರಬಹುದಾದ ಹಲವು ದಿಗಂತಗಳಿಗೆ ಏರುವ ಮೂಲಕ, ಒಬ್ಬ ವ್ಯಕ್ತಿ ಇಷ್ಟೊಂದು ಕ್ಷೇತ್ರಗಳಲ್ಲಿ ಆಸಕ್ತಿ ತಳೆಯಲು, ಕೃಷಿಮಾಡಲು ಸಾಧ್ಯವೇ ಎಂದು ಇಂದಿನವರ ಪಾಲಿಗೆ ದೊಡ್ಡ ಸೋಜಿಗವಾಗಿ ಬಿಟ್ಟಿದ್ದಾರೆ. ಇಡೀ ಇಪ್ಪತ್ತನೆಯ ಶತಮಾನದ ಕನ್ನಡ ನಾಡಿನ ಸಾಂಸ್ಕೃತಿಕ ಬದುಕನ್ನು ಕಾರಂತರ ವೈಚಾರಿಕತೆ ಬೆಳಗಿದೆ. ಲೇಖಕರಾಗಿ, ಪರಿಸರ ಹೋರಾಟಗಾರರಾಗಿ, ವಿಜ್ಞಾನ ಬರಹಗಾರರಾಗಿ ಕಾರಂತರ ಸಾಧನೆ ಶಿಖರಪ್ರಾಯದ್ದು.
ಕನ್ನಡ ಮಾತ್ರವಲ್ಲ, ಇತರ ಭಾರತೀಯ ಭಾಷೆಗಳಲ್ಲೂ ಕಾರಂತರಂತಹ ಲೇಖಕರು ಅಪರೂಪದಲ್ಲಿ ಅಪರೂಪ. ಆಡುಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬ ಮಾತು ಕ್ಲೀಷೆಯೆನಿಸಿದರೂ ಬೇರೆ ಯಾವ ಮಾತುಗಳಲ್ಲಿ ಅವರ ಕೆಲಸಗಳನ್ನು ವರ್ಣಿಸಬಹುದೆಂಬ ಗೊಂದಲವಾಗುವುದು ಸುಳ್ಳಲ್ಲ. ತನ್ನ ಮನಸ್ಸು ಮತ್ತು ಇಂದ್ರಿಯಗಳಿಗೆ ಗೋಚರವಾಗದ ಯಾವುದನ್ನೂ ಮನುಷ್ಯ ಒಪ್ಪಬಾರದೆಂಬುದನ್ನು ನಮಗೆಲ್ಲ ಹೇಳಿಕೊಟ್ಟ ಕಾರಂತರು ತಮ್ಮ ಬದುಕನ್ನೇ ಬಗೆ ಬಗೆಯ ಪ್ರಯೋಗಗಳ ಆಡುಂಬೊಲವಾಗಿಸಿಕೊಂಡಿದ್ದರು. ಸಾಹಿತ್ಯ, ವಿಜ್ಞಾನ, ಕಲೆ, ಸಂಗೀತ, ಯಕ್ಷಗಾನ, ವಿಚಾರವಾದ, ರಾಜಕೀಯ, ಶಿಕ್ಷಣ, ಸಿನಿಮಾ, ಪತ್ರಿಕೋದ್ಯಮ, ಪ್ರವಾಸ, ಚಳುವಳಿ ಹತ್ತು ಹಲವು ಬಗೆಯಲ್ಲಿ ಕಾರಂತರ ಸಾಧನೆಯ ಹೆಜ್ಜೆಗಳಿವೆ.

ಫೋಟೋ ಕೃಪೆ : google
ಬರಹ ಕಾರಂತರ ಮೂಲ ಮನೋಧರ್ಮ. ವಿವಿಧ ಕ್ಷೇತ್ರಗಳಲ್ಲಿ ಅವರು ಪ್ರಕಟಿಸಿರುವ ಕೃತಿಗಳ ಸಂಖ್ಯೆ ಹತ್ತಿರ ಹತ್ತಿರ ನಾಲ್ಕುನೂರು. ಅವರ ಕೃತಿಗಳನ್ನು ಪುಟಗಳಲ್ಲಿ ಗಣಿಸಿದರೆ ಅದು ಸರಿಸುಮಾರು ಮೂವತ್ತೈದು ಸಾವಿರ ಪುಟಗಳಷ್ಟಿದೆ. ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಬರಹಗಳು ಎಂಟು ಸಾವಿರದಷ್ಟಿದೆ. ಒಂದು ಅಂದಾಜಿನಂತೆ ಕಾರಂತರು ಎಂಟುನೂರಕ್ಕೂ ಹೆಚ್ಚು ಬಿಡಿ ಬಿಡಿ ಲೇಖನಗಳನ್ನು ಬರೆದಿದ್ದಾರೆ. ಸ್ಥಳೀಯ ದಿನಪತ್ರಿಕೆಗಳಿಂದ ಹಿಡಿದು ರಾಷ್ಟ್ರವ್ಯಾಪಿ ಪ್ರಚಾರವಾಗುವ ಕನ್ನಡ ಇಂಗ್ಲಿಷ್ ಪತ್ರಿಕೆಗಳಲ್ಲಿ ಕಾರಂತರು ಬರೆದಿದ್ದಾರೆ. ಅವರು ಬರೆಯದಿರುವ ಪತ್ರಿಕೆಗಳಿದ್ದವೇ ಎಂದು ತಡಕಾಡಬೇಕು. ಈ ಪ್ರಮಾಣದ ಬರಹವನ್ನು ಕಾರಂತರ ಸರೀಕರಲ್ಲಿ ಯಾರಲ್ಲೂ ಕಾಣಲಾರೆವು. ಹಾಗೆಯೇ ಸ್ವಂತ ಬರಹದ ಬಗ್ಗೆ ಕಾರಂತರಷ್ಟು ದಿವ್ಯನಿರ್ಲಕ್ಷ್ಯ ಹೊಂದಿದ್ದ ಮತ್ತೊಬ್ಬ ಲೇಖಕರನ್ನೂ ಕಾಣಲಾರೆವು. ಬರೆದು ಅಂಚೆಗೆ ಹಾಕಿದರಾಯ್ತು. ಅದು ಪ್ರಕಟಗೊಂಡಿತೆ? ಇಲ್ಲವೆ? ಪ್ರಕಟವಾಗಿದ್ದರೆ ಗೌರವ ಪ್ರತಿ ಬಂತೆ? ಬಂದರೆ ಅದನ್ನೆಲ್ಲ ಜೋಪಾನವಾಗಿ ಜೋಡಿಸಿಡೋಣವೆ? ಈ ಯಾವುದರಲ್ಲೂ ಅವರಿಗೆ ಆಸಕ್ತಿಯಿರಲಿಲ್ಲವಾಗಿ ಅವರ ಅನೇಕ ಮೌಲಿಕ ಬರಹಗಳಿಂದ ನಾಡಿನಾದ್ಯಂತ ಹರಡಿ ಹಂಚಿ ಹೋಗಿವೆ.
ಬರಹದ ಹೊರತಾದ ಕಾರಂತರ ಆಸಕ್ತಿ ಕಲೆ ಕುರಿತದ್ದು. ವಿವಿಧ ಬಗೆಯ ಕಲೆಗಳನ್ನು ಕುರಿತೇ ಏಳೆಂಟು ಪುಸ್ತಕಗಳನ್ನು ಕಾರಂತರು ಹೊರತಂದಿದ್ದಾರೆ. ಅವರೊಬ್ಬ ಅಪೂರ್ವ ಕಲಾಮೀಮಾಂಸಕರಾಗಿದ್ದರು. ಯಕ್ಷಗಾನವನ್ನು ಕುರಿತೇ ಐದು ಕೃತಿಗಳಿವೆ. ಕಾರಂತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿರುವುದು ಅವರು ಬರೆದ ಕಾದಂಬರಿಗಲ್ಲ, ‘ಯಕ್ಷಗಾನ ಬಯಲಾಟ’ ಎಂಬ ಕೃತಿಗೆ. ಯಕ್ಷಗಾನ ತಂಡ ಕಟ್ಟಿಕೊಂಡು ಯೂರೋಪ್ ಸುತ್ತಿ ಬಂದ ಕಾರಂತರು ಕನ್ನಡ ಕರಾವಳಿ ತೀರದ ಕಲೆಯನ್ನು ವಿದೇಶಿಗರೂ ಮೆಚ್ಚುವಂತೆ ಮಾಡಿರುವುದು ಅಂತಿಂಥ ಸಾಧನೆಯಲ್ಲ. ಚಿತ್ರಕಲರಯಲ್ಲಿ ಅವರಿಗಿದ್ದ ಪರಿಶ್ರಮ ಅಷ್ಟಿಷ್ಟಲ್ಲ. ನಮ್ಮ ರಾಜರತ್ನಂ ಅವರ ‘ರತ್ನನ ಪದಗಳು’ ಪ್ರಕಟವಾದಾಗ ಆ ರಚನೆಗಳಿಗೆ ತಕ್ಕ ಚಿತ್ರಗಳನ್ನು ಕಾರಂತರು ರಚಿಸಿಕೊಟ್ಟಿದ್ದರು. ಕಲಾತಪಸ್ವಿ ಕೆ. ವೆಂಕಟಪ್ಪನವರ ಕಲಾಕೃತಿಗಳ ಬಗ್ಗೆ ವಿಮರ್ಶೆ ಬರೆದು ವೆಂಕಟಪ್ಪನವರ ಕೋಪಕ್ಕೆ ಈಡಾಗಿದ್ದೂ ಉಂಟು. ಕಾರಂತರು ಬರೆದ ಕೆಟ್ಟ ಚಿತ್ರಗಳನ್ನು ನೋಡಿ ಇತರೆ ಕಲಾ ವಿಮರ್ಶಕರು ನಗಾಡಿದ್ದೂ ಉಂಟು. ಕಾರಂತರು ಮಾತ್ರ ಅದಕ್ಕೆ ಸೊಪ್ಪು ಹಾಕುತ್ತಿರಲಿಲ್ಲ.
ತಮ್ಮ ಯೌವನದ ದಿನಗಳಲ್ಲಿ ಕಾರಂತರ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿದ್ದ ಬಗ್ಗೆ ಹುಚ್ಚುಮನಸ್ಸಿನ ಹತ್ತುಮುಖಗಳಲ್ಲಿ ಬರೆದುಕೊಂಡಿದ್ದಾರೆ. ವೇಶ್ಯೆಯರು ಎಂಬ ಪದಪ್ರಯೋಗವನ್ನು ಗಾಂಧಿ ಒಪ್ಪುತ್ತಿರಲಿಲ್ಲ. ಪದ ಬದಲಾಯಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾದೀತೆ? ಎಂಬುದು ಕಾರಂತರ ತರ್ಕ. ವೇಶ್ಯಾವೃತ್ತಿಯನ್ನು ತ್ಯಜಿಸಿ ಬ್ರಹ್ಮಚರ್ಯೆಯನ್ನು ಆಚರಿಸಿರೆಂಬ ಗಾಂಧಿಯವರ ಸಲಹೆಗೆ ಕಾರಂತರು “ಗಾಂಧಿಜಿಗೆ ಮನುಷ್ಯ ಪ್ರವೃತ್ತಿಯ ಪರಿಚಯವೇ ಇಲ್ಲ” ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಪದ್ಮಪ್ರಶಸ್ತಿಯನ್ನು ಮರಳಿಸಿದ ಕಾರಂತರ ನಡೆಯನ್ನು ಇಡೀ ದೇಶವೇ ಮೆಚ್ಚುಗೆಯ ಕಣ್ಣಿಂದ ಕಂಡಿತು. ಚುನಾವಣೆಯಲ್ಲಿ ಸೋಲುತ್ತೇನೆಂಬ ಅರಿವಿದ್ದೂ ಹಕ್ಕನ್ನು ಪ್ರತಿಪಾದಿಸಲು ನಿಂತು ಸೋತರು.

ಫೋಟೋ ಕೃಪೆ : google
ಕಾರಂತರ ವಿಜ್ಞಾನದ ಆಸಕ್ತಿ ಕನ್ನಡಿಗರ ವೈಚಾರಿಕತೆಯನ್ನು ಹರಿತಗೊಳಿಸಿದೆ. ವಿಶೇಷವಾಗಿ ಮಕ್ಕಳಿಗಾಗಿ ಅವರು ರೂಪಿಸಿದ ‘ವಿಜ್ಞಾನ ಪ್ರಪಂಚ’ ಎಂಬ ಬೃಹತ್ ವಿಶ್ವಕೋಶಗಳನ್ನು ತಿರುವಿ ಹಾಕಿದರೆ ಸಾಕು ಕಾರಂತರ ಶ್ರದ್ಧೆ ಮತ್ತು ಜ್ಞಾನ ತೀವ್ರತೆಯ ಪರಿಚಯವಾಗಲು. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಬೆಟ್ಟದಷ್ಟು ಕೆಲಸವನ್ನು ಏಕಾಂಗಿಯಾಗಿ ಮಾಡಿದ್ದಾರೆ. ಮಕ್ಕಳ ಜೊತೆ ಆಡುವುದು, ಕಾಲ ಕಳೆಯುವುದೆಂದರೆ ಕಾರಂತರಿಗೆ ತುಂಬ ಇಷ್ಟ. ಅವರ ಬಾಲವನದ ಸ್ಥಾಪನೆಯ ಹಿಂದೆ ಈ ಇಷ್ಟವೇ ಒತ್ತಾಸೆಯಾಗಿರುವುದು. ಮಕ್ಕಳಿಗಾಗಿ ಅವರು ಅನುವಾದಿಸಿದ ಅಮರ ಚಿತ್ರಕಥೆಗಳೆಂಬ ಕಾಮಿಕ್ಸ್ ಪುಸ್ತಕಗಳನ್ನು ಓದಿಯೇ ಎಷ್ಟೋ ಜನರ ಓದಿನ ಅಭಿರುಚಿ ಚಿಗುರಿದ್ದುಂಟು. ಕಾರಂತರು ಯಕ್ಷಗಾನದಲ್ಲಿ ಪಾತ್ರ ಮಾಡಿದ್ದನ್ನು ಕಂಡವರಿದ್ದರು. ಅವರೊಳಗೊಬ್ಬ ಅದ್ಭುತ ನೃತ್ಯಗಾರನಿದ್ದ. ಕಾರಂತರ ನಾಟ್ಯವನ್ನು ಕಣ್ಣಾರೆ ಕಂಡಿದ್ದ ವಿ.ಸೀ.ಯವರು ‘ಕಾಲನಟ’ ಎಂಬ ಕವಿತೆಯನ್ನೇ ಬರೆದಿದ್ದಾರೆ.
ಶಿಕ್ಷಣ ಮತ್ತು ಸಂಸ್ಕೃತಿಯ ಬಗೆಗಿನ ಕಾರಂತರ ಕಾಳಜಿ ಅನನ್ಯವಾದುದು. ಶಿಕ್ಷಣ ಕುರಿತಾದ ಕಾರಂತರ ಲೇಖನಗಳು ನಲವತ್ತರಷ್ಟಿವೆ. ಒಂದು ಲೇಖನಕ್ಕೆ ‘ಇಂದಿನ ಶಿಕ್ಷಣ ಶಿಕ್ಷಣವಲ್ಲ ಶಿಶುಹತ್ಯೆ’ ಎಂದೇ ನಾಮಕರಣ ಮಾಡಿದ್ದರು. ಶಿಕ್ಷಣವು ಮಕ್ಕಳ ಪಾಲಿಗೆ ಶಿಕ್ಷೆಯಾಗದೆ, ಆಟವಾಗಬೇಕು ಎಂಬುದನ್ನು ಪದೇ ಪದೇ ಹೇಳುತ್ತಿದ್ದ ಕಾರಂತರು ತಾವೇ ಪಠ್ಯಪುಸ್ತಕಗಳನ್ನೂ ಸಿದ್ಧಪಡಿಸಿ ತೋರಿಸಿದ್ದರು. ಅನೇಕ ಶಿಕ್ಷಣದ ಸಮಸ್ಯೆಗಳಿಗೆ ಪರಿಹಾರವನ್ನೂ ಕಾರಂತರು ಸೂಚಿಸಿದ್ದಾರೆ. ಶಿಕ್ಷಣ ತಜ್ಞರೆನಿಸಿಕೊಂಡವರಿಗೆ ಮಕ್ಕಳ ಮನಸ್ಸು ಇರುವುದು ಮುಖ್ಯ ಎಂಬುದೂ ಕಾರಂತರ ಮಾತೆ. ಸ್ವತಃ ಆ ಮನಸ್ಸು ಕಾರಂತರಿಗಿತ್ತು. ನೋಡಲು ಪುರುಷ ಸಿಂಹನಂತೆ ಕಾಣುತ್ತಿದ್ದರೂ ಕಾರಂತರು ಮಹಾ ಸಂಕೋಚ ಪ್ರವೃತ್ತಿಯವರೆಂದು ಕಾರಂತರೊಂದಿಗೆ ಸಿಗರೇಟು ಸೇದಿದ ಲಂಕೇಶ್ ಒಂದು ಕಡೆ ಬರೆದಿದ್ದಾರೆ. ಉದಯೋನ್ಮುಖ ಎಳೆಯ ಲೇಖಕರು, ಮಕ್ಕಳು ಮತ್ತು ಹಳ್ಳಿಗಾಡಿನ ಮುಗ್ಧಜನರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ ಕಾರಂತರು ಬುದ್ಧಿಜೀವಿಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದರು. ಒಂದು ಹೈಸ್ಕೂಲಿನ ಕಾರ್ಯಕ್ರಮದ ಉದ್ಘಾಟನೆಗೆ ನೂರಾರುಮೈಲಿ ಪ್ರಯಾಣ ಮಾಡಲು ಹಿಂಜರಿಯುತ್ತಿರಲಿಲ್ಲ. ದಸರಾ ಮಹೋತ್ಸವದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ ಕಾರಂತರು ಪುತ್ತೂರಿಗೆ ನಾಡಿನ ಧೀಮಂತ ಸಾಹಿತಿಗಳನ್ನು ಆಹ್ವಾನಿಸಿ ಭಾಷಣ ಮಾಡಿಸುತ್ತಿದ್ದರು. ಸ್ವತಃ ಕಾರಂತರೆ ಮಹಾ ವಾಗ್ಮಿಯಾಗಿದ್ದರು.

ಫೋಟೋ ಕೃಪೆ : google
ಬರವಣಿಗೆ, ಮಿತ ಆಹಾರ, ಶುಭ್ರ ಬಿಳಿಯ ಕಚ್ಚೆಪಂಚೆ ಜುಬ್ಬಾ, ಊರುಗೋಲು, ಅಪರಿಮಿತ ಸಮಯಪ್ರಜ್ಞೆ, ಗೆರೆ ಕೊರೆದಂತಹ ನಡೆನುಡಿ ಇವೆಲ್ಲವೂ ಕಾರಂತರೆಂದರೆ ನೆನಪಿಗೆ ಬರುವ ವಿಚಾರಗಳು. ಆದಷ್ಟು ಕಡಿಮೆ ತಿನ್ನುವುದೇ ದೀರ್ಘಾಯಸ್ಸಿನ ಗುಟ್ಟು ಎಂದೊಮ್ಮೆ ಹೇಳಿದ್ದರು. ಇಹದ ಬದುಕನ್ನು ಸೂರೆಮಾಡಿ ಸಂತೋಷಪಡದವನೇ ದಡ್ಡ ಎಂಬುದೂ ಅವರೇ ಬರೆದ ಮಾತು. ಹಣವೆಂಬುದು ಉಪ್ಪು ಇದ್ದ ಹಾಗೆ, ತುಸುವೇ ತಿಂದರೆ ರುಚಿ, ಹೆಚ್ಚಾದರೆ ದಾಹ- ಇದು ಕಾರಂತರ ಲೋಕದೃಷ್ಟಿ.
ಗೃಹವಿಜ್ಞಾನದ ಬಗೆಗೂ ಕಾರಂತರು ಮೂರು ಪುಸ್ತಕಗಳನ್ನು ಬರೆದಿದ್ದಾರೆಂದರೆ ಕೆಲವರಾದರೂ ಹುಬ್ಬೇರಿಸಬಹುದು. ನಿಜ, ಹೈಸ್ಕೂಲು ಮುಗಿದೊಡನೆ ಅಥವಾ ಆ ವಯಸ್ಸಿನ ಹೆಣ್ಣುಮಕ್ಕಳ ಹೆಗಲಿಗೆ ಅಡುಗೆ ಕೆಲಸದ, ಮನೆವಾರ್ತೆಯ ಹೊಣೆಹೊರಿಸುವ ನಮ್ಮ ಸಮಾಜದ ನಡುವಳಿಕೆಯನ್ನು ಚೆನ್ನಾಗಿ ಬಲ್ಲ ಕಾರಂತರು ನಮ್ಮ ಹೆಣ್ಣುಮಕ್ಕಳಿಗಾಗಿ ಈ ಕೃತಿಗಳನ್ನು ರಚಿಸಿದ್ದಾರೆ. ಅವರ ಆಸಕ್ತಿಯ ವೈವಿಧ್ಯತೆಯನ್ನು ನೆನಪಿಸುವುದಕ್ಕಾಗಿ ಇದನ್ನು ಉಲ್ಲೇಖಿಸಿದೆನಷ್ಟೆ. ಅವರ ಆಸಕ್ತಿಗೆ, ಪ್ರಯೋಗಶೀಲತೆಯ ವ್ಯಾಪಕತೆಗೆ ಸರಿಗಟ್ಟುವ ಮತ್ತೊಬ್ಬರನ್ನು ನಾವು ಕಾಣಲಾರೆವು. ಹಾಗಾಗಿ ಕಾರಂತರನ್ನು ಕಡಲತೀರದ ಭಾರ್ಗವ ಎಂದು ಕೆಲವರು ಕರೆದು ಖುಷಿಪಟ್ಟರೆ, ಕಾರಂತರೆ ಒಂದು ಕಡಲಂತೆ ಎಂಬ ಭಾವ ಹಲವರದು. ಕಾರಂತರ ಹುಟ್ಟುಹಬ್ಬವೆಂದರೆ ಅವರ ಕೆಲಸಗಳನ್ನು ಅರಿಯುವುದು ಮತ್ತು ಅನುಸರಿಸುವುದು. ತಿಳಿದು ಬದುಕಬೇಕಾದುದು ಮನುಷ್ಯ ಧರ್ಮ ಎಂಬ ಮಾತಿಗೆ ಕಾರಂತರೇ ದೊಡ್ಡ ಉದಾಹರಣೆ.
- ಡಾ.ಎಚ್.ಎಸ್. ಸತ್ಯನಾರಾಯಣ (ಉಪನ್ಯಾಸಕರು, ಲೇಖಕರು, ಕತೆಗಾರರು) ಚಿಕ್ಕಮಂಗಳೂರು
