ಸಾಹಿತಿ, ವಿಮರ್ಶಕ ಗಣಪತಿ ಹೆಗಡೆ ಅವರ ‘ಕಡಲಂಚಿನ ಅಲೆಗಳು’ ಕೃತಿಯ ಕುರಿತು ಲೇಖಕಿ ದೀಪಾಲಿ ಸಾಮಂತ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ‘ಕಡಲಂಚಿನ ಅಲೆಗಳು’
ಲೇಖಕರು : ಗಣಪತಿ ಹೆಗಡೆ
ಪ್ರಕಾರ : ಕವನ ಸಂಕಲನ
ಕರೋನಾ ಲಾಕ್ ಡೌನ್ ಸಮಯದಲ್ಲಿ ಹುಟ್ಟಿಕೊಂಡ ಹಲವು ಸಾಹಿತ್ಯಿಕ ಬಳಗಗಳಲ್ಲಿ ನಿರಂತರ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆಸಿರುವ ಸಮಾನ ಮನಸ್ಕರು ಒಂದೆಡೆ ಸೇರಿ ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದು ಇತಿಹಾಸ. ಅಂತರ್ಜಾಲ ಆಧಾರಿತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಹಲವಾರು ಹಿರಿಯ ಸಾಹಿತಿಗಳ , ಉದಯೋನ್ಮುಖ ಬರಹಗಾರರ ಪರಿಚಯವಾಗಿ ಆತ್ಮೀಯ ನಂಟೊಂದು ಬೆಸೆದುಕೊಂಡಿದ್ದು ಮರೆಯಲು ಅಸಾಧ್ಯ. ಅಂತಹವರಲ್ಲಿ ಒಬ್ಬರಾದ ಸಾಹಿತಿ, ವಿಮರ್ಶಕ ಗಣಪತಿ ಹೆಗಡೆ, ದಾಂಡೇಲಿಯವರು ಗದಗನ ಒಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭೇಟಿಯಾದಾಗ ತಮ್ಮ ಕವನ ಸಂಕಲನ ‘ಕಡಲಂಚಿನ ಅಲೆಗಳು’ ಕೈಗಿತ್ತರು. ಈ ಕವನ ಸಂಕಲನದಲ್ಲಿ ಸುಮಾರು ಎಪ್ಪತ್ತು ಕವನಗಳಿದ್ದು ಲೇಖಕರು ಯಾವ ಪ್ರಾಸ ಬಂಧಗಳಿಗೆ ಒಳಪಡದೇ ತಮ್ಮ ಭಾವವನ್ನು ಬಹು ಸರಳವಾಗಿ ವ್ಯಕ್ತಪಡಿಸುತ್ತ ಹಲವು ವಿಚಾರಗಳನ್ನು ಅಕ್ಷರದಲ್ಲಿ ಮೂಡಿಸಿದ್ದಾರೆ. ಇವರ ಕವನಗಳಲ್ಲಿ ಹೆಚ್ಚಿನವು ಪ್ರೇಮಭಾವ ಸ್ಪುರಿಸಿದರೆ ಕೆಲವು ವಿರಹ ವೇದನೆಯ ಹೊರ ಸೂಸುವವಾಗಿವೆ.

ಮೈಸೂರಿನ ಸಾಹಿತಿ ಕಾಳನಾಯಕ ವಿ ರವರು ಮುನ್ನುಡಿಯಲ್ಲಿ ಕವಿಯ ಆಶಯವನ್ನು ಸರಿಯಾಗಿ ಗ್ರಹಿಸಿ ಕವನಗಳನ್ನು ತುಂಬಾ ಚೆನ್ನಾಗಿ ವಿಮರ್ಶಿಸಿದ್ದಾರೆ. ಓದುತ್ತಾ ಹೋದಂತೆ ಓದುಗನಲ್ಲಿ ತನ್ಮಯತೆಯನ್ನು ಮೂಡಿಸಬಲ್ಲ ಶಕ್ತಿ ಇವರ ಬರಹಗಳಿಗೆ ಇವೆ ಎಂದರೆ ತಪ್ಪಾಗಲಾರದು.
‘ಬದುಕು ಸಾರ್ಥಕ್ಯವಾಗಲಿ ‘ ಕವನದಲ್ಲಿ “ನಾನು ಘೋರಿ ಸೇರಿದ ಮೇಲೆ ನೀವು ಕಣ್ಣೀರಾಗಿ ಕೂರಬೇಡಿ, ಅಲ್ಲೊಂದು ಗಿಡ ನೆಟ್ಟು ಬಿಡಿ ಅದು ಹೂವಾಗಿ ಅರಳಿಬಿಡಲಿ” ಎಂದು ಹೇಳುವ ಸಾಲು ದಿನಕರ ದೇಸಾಯಿಯವರ ‘ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ’ ಕವಿತೆ ನೆನಪಿಸುವಂತಿದೆ. ಇತರರಿಗೆ ಯಾವ ತೊಂದರೆ ಆಗದಂತೆ, ತನ್ನಿಂದಾದ ಸಹಕಾರ ನೀಡುತ್ತಾ ಸಾಗುವುದೇ ಬದುಕಿನ ಸಾರ್ಥಕತೆ ಎಂಬ ಸಂದೇಶ ಈ ಕವಿತೆಯ ಮೂಲಕ ರವಾನಿಸಿದ್ದಾರೆ. ಹಾಗೆಯೇ ‘ಅವಳು’ ಕವನದಲ್ಲಿ ಮನವ ಕದ್ದ ಚೆಲುವೆಯ ಕುರಿತು ಮುಗಿಯದ ಕಡಲ ಅಲೆ ,ಆರದ ಬೆಳಕು ತುಂಬಿದ ಹುಣ್ಣಿಮೆಯ ಬೆಳದಿಂಗಳಿಗೆ ಹೋಲಿಸಿ ಹೊಗಳಿದ ಪರಿ ಅದ್ಭುತ ಹಾಗೂ ಪ್ರೇಮದ ಪರಿಪಕ್ವತೆಯನ್ನು ಹೊರಹೊಮ್ಮಿಸಿದೆ.
ಈ ಕವನ ಸಂಕಲನದಲ್ಲಿ ನನಗೆ ತುಂಬಾ ಹಿಡಿಸಿದ ಕವಿತೆ ಎಂದರೆ ‘ಅಂತರಂಗವ ಕಲುಕುವಿರೇಕೆ’ ನಿತ್ಯ ಸ್ವಾರ್ಥ , ದ್ವೇಷ ತುಂಬಿದ ಸಮಾಜದಲ್ಲಿ ಹೆತ್ತವರ ಕಾರುಣ್ಯ ಭಾವಕ್ಕೆ ಬೆಲೆ ನೀಡದೆ ಸಿಡುಕಿ ಸತ್ತರವ ಸಮಾಧಿಯ ಮೇಲೆ ಕಣ್ಣೀರು ಸುರಿಸಿದರೆ ಏನು ಫಲ ಎಂದು ಸಮಾಜದ ತಲ್ಲಣವನ್ನು ಎತ್ತಿ ತೋರುವ ಧಾರ್ಷ್ಟ ಕವಿ ಭಾವದಲ್ಲಿ ಮೂಡಿಬಂದಿದೆ.

ಜಾತಿ ಮತದ ಕಸವನ್ನು ಗುಡಿಸಿ ತೆಗೆದು ಪ್ರೀತಿ ಪ್ರೇಮದ ಭಾವ ಮೂಡಿಸುತ ಮನುಷ್ಯ ಧರ್ಮದ ಪಾಲನೆ ಮಾಡು ಎನ್ನುವ ಉತ್ತಮ ಸಂದೇಶ ‘ಮನುಜನಾಗು’ ಕವನದಲ್ಲಿ ಸಾರಿದ್ದಾರೆ.’ಕಾರಣ’ ಕವನದಲ್ಲಿ ಆಗಸದಲ್ಲಿ ಮಿನುಗುವ ನಕ್ಷತ್ರದಲ್ಲಿ ಹೊಳಪು, ಅರಳಿದ ಕುಸುಮದಲ್ಲಿ ಸುಗಂಧ, ಹರಿಯುವ ನದಿಯಲ್ಲಿ ಚಲನೆ,ಕಾಡುವ ನೆನಪುಗಳಲ್ಲಿ ಮನತಣಿಸುವ ಶಕ್ತಿಗೆ ಕಾರಣ ಹುಡುಕುವ ಪರಿ ಕಾವ್ಯಕ್ಕೆ ಮೆರುಗು ತಂದಿಟ್ಟಿದೆ. ಹೀಗೆ ಹತ್ತು ಹಲವು ವಿಚಾರಗಳನ್ನು ಭಾವಕ್ಕೆ ತಕ್ಕಂತೆ ಪದಕೋಶ ಬಳಸಿ ಬರೆದ ಗಣಪತಿ ಹೆಗಡೆಯವರ ಈ ಕೃತಿಯು ಸಾಹಿತ್ಯ ಲೋಕಕ್ಕೆ ನೀಡಿದ ಒಂದು ಉತ್ತಮ ಕೊಡುಗೆಯಾಗಿದೆ. ಇಂತಹ ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಕನ್ನಡ ಸಾರಸ್ವತ ಲೋಕ ಸೇರಲಿ ಎಂದು ಆಶಿಸುತ್ತೇನೆ.
- ದೀಪಾಲಿ ಸಾಮಂತ, ದಾಂಡೇಲಿ.
