ಕಾಡು ಬೆಳೆದಂತೆ ಸುತ್ತಲ್ಲಿನ ಗದ್ದೆಗಳಿಗೆ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಜಾಸ್ತಿಯಾಗತೊಡಗಿತ್ತು. ಇದರಿಂದ ಬೇಸತ್ತಿದ್ದರು ರೈತರು, ಮುಂದೇನಾಯಿತು ಮೋಹನ್ ಹಾಲೆಮನೆ ಅವರ ‘ಕಾಡಿನ ಕವ್ವಾಲೇ’ ಕತೆಯನ್ನು ತಪ್ಪದೆ ಓದಿ…
ದಿನ ಕಳೆದಂತೆ ಊರಲ್ಲಿ ಊರು ಕಡಿಮೆಯಾಗಿ ಕಾಡು ದಟ್ಟವಾಗತೊಡಗಿತ್ತು. ಮನೆಯ ಹತ್ತಿರಕ್ಕೆ ಕಾಡು ಬಂದು ಅಡರಿಕೊಳ್ಳ ತೊಡಗಿತ್ತು. ಹಾಗಂತ ಅದನ್ನು ಕಡಿಯುವುದು ಇಲಾಖೆಯ ಪ್ರಕಾರ ಅಪರಾಧವಾಗಿತ್ತು. ಅಂತೂ ಅವರ ಕಾಲು ಹಿಡಿದು ಕೈ ಮುಗಿದು ಕೆಲಸ ಮಾಡಿಕೊಳ್ಳ ಬೇಕಿತ್ತು. ಮನುಷ್ಯ ಕಾಡಿಗೆ ಹೋದರೆ ‘ಇಲ್ಲಿ ಯಾಕೆ ಬಂದೆ’ ಅಂತಾ ಕೇಳುವ ಇಲಾಖೆಯವರು ಅದೇ ಕಾಡಿನ ಪ್ರಾಣಿಗಳು ಊರೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದರು. ಕಮಕ್ ಕಿಮಕ್ ಅನ್ನದೇ ನೋಡಿಯು ನೋಡದಂತೆ ಸುಮ್ಮನೆ ಇದ್ದು ಬಿಡುತ್ತಿದ್ದರು.
ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಜಾಸ್ತಿಯಾಗತೊಡಗಿತ್ತು. ಹಂದಿಗಳು, ಕಡ, ಮಿಕಗಳು, ಮುಳ್ಳಕ್ಕಿ, ನವಿಲು, ಮೊಲ, ಬರ್ಕ, ಮುಂತಾದವುಗಳು ರೈತರ ಹೊಲ ಗದ್ದೆಗಳ ಮೇಲೆ ನಿರಂತರ ದಾಳಿ ಮಾಡತೊಡಗಿದ್ದವು, ಅದಲ್ಲದೇ ಈಗೀಗ ಈ ಊರ ಕಡೆಗೇ ತುಂಬಾ ಅಪರೂಪ ಎನ್ನಿಸುವಂತಿದ್ದ ಬಿಳಿ ಮೂತಿಯ ಬಿಳುಚಿ ಮಂಗಗಳ ಕಾಟ ತುಂಬಾ ಹೆಚ್ಚಾಗಿ ಹೋಗಿತ್ತು. ಅವುಗಳನ್ನು ಹೊರ ಊರುಗಳಿಂದ ಇಲಾಖೆಯವರೆ ತಂದು ಬಿಡುತ್ತಿದ್ದಾರೆ ಅನ್ನುವ ಗುಸು ಗುಸು ಅಲ್ಲಲ್ಲಿ ಕೇಳಿ ಬರತೊಡಗಿತ್ತು.
ಚಂದಪ್ಪನ ಮಗ ಈರಾಜ ಕಷ್ಟಪಟ್ಟು ಒಂದು ಎಕರೆ ಹೊಸ ತೋಟ ಮಾಡಿದ್ದ. ಅಡಿಕೆ ಸಸಿಗಳು ತುಂಬಾ ಚೆನ್ನಾಗಿ ಬೆಳೆದು ನಿಂತಿದ್ದವು. ಅದರ ಜೊತೆಗೆ ಬಾಳೆ ಗಿಡಗಳು ಸೊಂಪಾಗಿ ಬೆಳೆದು ಉತ್ತಮ ಗೊನೆ ಬಿಟ್ಟಿದ್ದವು.
ಈರಾಜ ಇನ್ನು ನಾಲ್ಕಾರು ವರ್ಷ ಕಷ್ಟ ಪಟ್ಟು ಅಡಿಕೆ ಸಸಿಗಳನ್ನು ಸಾಕಿದರೆ ಮುಂದೆ ಅವನ ಜೀವನಕ್ಕೆ ಏನೂ ಕೊರತೆ ಇಲ್ಲ ಎಂದು ಊರವರು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಅವನ ತೋಟ ಚನ್ನಾಗಿತ್ತು. ಅವನೂ ಸಹ ಅದೇ ಭರವಸೆಯ ಮೇಲೆ ಹೊಸ ಕನಸಿನೊಂದಿಗೆ ಅಲ್ಲಿ, ಇಲ್ಲಿ, ಕೂಲಿ, ನಾಲಿ ಮಾಡಿ ದುಡಿದ ಹಣವನ್ನು ಹೊಟ್ಟೆ, ಬಟ್ಟೆ, ಕಟ್ಟಿ ಉಳಿಸಿ. ತಂದು ತನ್ನ ತೋಟದ ಅಭಿವೃದ್ಧಿಗೆ ಹಾಕುತ್ತಿದ್ದ. ಆದರೆ ತೋಟಕ್ಕೆ ಸಮರ್ಪಕ ಬೇಲಿ ವ್ಯವಸ್ಥೆ ಇಲ್ಲದ ಕಾರಣ ಆಗಾಗ ದನ, ಕರುಗಳು, ಪ್ರಾಣಿಗಳು ನುಗ್ಗಿ ಸ್ವಲ್ಪ ಹಾಳು ಮಾಡುತ್ತಿರುವುದನ್ನು ಮನಗಂಡ ಈರಾಜ. ಕೊನೆಗೆ ಅಲ್ಲೇ ಒಂದು ಹಕ್ಕೆ ಮಾಡಿಕೊಂಡು ಪ್ರತಿ ರಾತ್ರಿ ಬೆಳಗಿನ ವರೆಗೆ ಕಾವಲು ಕಾಯತೊಡಗಿದ. ಈ ವರ್ಷ ಹೇಗಾದರೂ ಮಾಡಿ ಒಂದು ಬಂದೋಬಸ್ತು ಬೇಲಿ ಮಾಡಿಕೊಳ್ಳಲು ಯೋಚನೆ ಮಾಡತೊಡಗಿದ್ದ. ಆದರೆ ದುಡ್ಡಿಗೇನೂ ಮಾಡುವುದು.
ಅನ್ನುವ ಚಿಂತೆಯಲ್ಲಿದ್ದ. ಏನೇ ಕಷ್ಟಪಟ್ಟು ದುಡಿದು, ಅಚ್ಚುಕಟ್ಟಾಗಿ ಜೀವನ ಮಾಡಿ, ಒಂದೆರಡು ಸಾವಿರ ಇದೆ ತನ್ನ ಕೈಯಲ್ಲಿ ಅನ್ನುವ ಧೈರ್ಯ ಬರುವುದರೊಳಗೆ ಮನೆಯಲ್ಲಿ ಏನಾದರೂ ಒಂದು ಗಂಡಾಂತರ ಎದುರಾಗಿ ಎಲ್ಲವೂ ಖರ್ಚು ಆಗಿ ಹೋಗುತ್ತಿತ್ತು. ಹೀಗಾಗಿ ಈರಾಜ ಇದೇ ಚಿಂತೆಯಲ್ಲಿ ದಿನ ಕಳೆಯತೊಡಗಿದ್ದ. ಇವನನ್ನು ಸೂಕ್ಶ್ಮವಾಗಿ ಗಮನಿಸಿದ ಪೆಂಗಣ್ಣ
“ಏನಾ ವಯಾ.. ಎಂತಕೆ ನೀ ಹೀ ಮಾಡ್ಕ ಐದಿಯಾ…. ಮದ್ವಿ ಗಿದ್ವಿ ಆಗ ಗ್ಯಾನ ಎಂತಾ ಮತ್ತೇ… ಹಾಂಗ್ಏನಾರು ಇದ್ರೆ ಹೇಳು. ನಿನ್ನ ಅಪ್ಪಂಗೆ ನಾ ಹೇಳ್ತೀನಿ” ಅಂದ. ಅದಕ್ಕೆ ಈರಾಜ. ‘ಇಲ್ಲ ಸಣಪ… ನಂಗೇ ಈಗ ಆ ಗ್ಯಾನೆಲ್ಲ ಇಲ್ಲ. ನಾನು ನನ್ನ ತ್ವಾಟ ಫಸಲು ಬರ ತಂಕ ಮದ್ವೆ ಆಗಲ್ಲ ತಗಳ. ನಂಗೆ ಮತೆ ಎಂತು ಅಲ್ಲ ಮರಯ”.
“ತ್ವಾಟಕ್ಕೆ ಒಂದ್ ಬಂದೋಬಸ್ತ್ ಬೇಲಿ ಮಾಡ್ಬಕ ಮರಯ…ಈಗ ಎಲ್ಲಿ ನೋಡುದ್ರು ಜೀವಾದಿ ಕಾಟ ಮರಯ… ಹಾಂಗ್ಯಾಗಿ ಒಂದೇ ಹರ ಎಲ್ಲಿ ಕಾಯಕೆ ಅತಾತ…. ಎಲ್ಲೂ ಹೋಗ ಹಂಗು ಇಲ್ಲ ಬರ ಹಂಗು ಇಲ್ಲ…. ಒಟ್ಟು ಈ ಯಾಪಾರ್ದಾಗೆ ಸಿಕ್ಯಾಬಿದ್ದಿನ ಮರಯ… ಸುತ್ತು ಹಾಕಿ ಕರೆಂಟ್ ಬೇಲಿನೆ ಮಾಡ್ಬಕು ಅಂತ ಮಾಡಿನ. ಆದ್ರೇ ಪೈಸಾ ದುಡ್ಡು ಕೈಯಾಗೆ ಇಲ್ಲ ಹ್ಯಾಮಾಡದ.ಎಲ್ಲಾರು ಸಾವ್ರ ಎರಡು ಸಾವ್ರು ದುಡುದೆ ಅಂತ ಇಟ್ಕಾ…. ಹಾಂಗೆ ಮರುದಿನ ಈ ಸಂಸಾರದಾಗೆ ಎಂತಾರು ಖರ್ಚು ಬಂದು ಖಾಲಿ ಆಗಿ ಹೋತತೆ ಮರಯ’….ಅಂದ.
“ಅಲ್ಲಾ ಮಾರಾಯ… ನಾವು ರೈತರು ಯಾವತ್ತಾದ್ರೂ ನಮ್ ದುಡ್ಡು ಅಂತಾ ಕೈಯಾಗೆ ಇಟಗಂಡು ಯಾದಾರು ಯವಾರಾ ಮಾಡುದ್ದು ಐತನಾ ವಯಾ….ನಮ್ ಹಣೆಬರ… ಯಾವತ್ತೂ ಯಾರಾರು ಸಾಲ ಕೊಡಬಕು… ನಾವ್ ಎಂತಾರು ಮಾಡ್ಬಕು ಆಸ್ಥೆಯಾ… ನೀನು ಹಾಂಗೆ ಮಾಡು ಅತ್ಲಾಗೆ…. ಸೀದಾ ಹೆಗ್ಡೆರ ಮನಿಗೆ ಹೋಗು… ಎಲ್ಲಾ ಹೀ ಹೀಂಗೆ ಈ ನಮುನಿ ಮಾಡ್ಬಕು ಅಂತಾ ಮಾಡಿನಿ ..ಅಂತಾ ಗನ ಮಾಡಿ ಹೇಳು.. ಒಂದ್ ಹತ್ತು ಸಾವ್ರ ಬೇಕು ಓಡಿಯಾ.. ಅಂತಾ ಕೇಳು
ತ್ವಾಟ ಇಂಪ್ರು ಮಾಡಕೆ ಸೈ ಅಂತಾ ಹೇಳುರೆ ಅವ್ರು ಇಲ್ಲ ಅಂತಾ ಹೇಳದಲಾ …ಹ್ಯಾ ಮಾಡಿ ತೀರಿಸ್ತಿಯ.. ಅಂತಾ ಹ್ಯಾಂಗೂ ಕೇಳ್ತಾರೆ..
ಹೀಂಗೆ ಕೂಲಿ ನಾಲಿ ಮಾಡಿ ನಿಮ್ಮ ಹಣದ್ ಋಣ ಇಟಗನಲಒಂದ್ ಒಪ್ಪತ್ತು ಅಲ್ದೆ ಇದ್ರೂ ಇನ್ನೊಂದ್ ಒಪ್ಪತ್ತು ತೀರಿಸ್ತೀನಿ ಅಂತಾ ಹೇಳು…. ಕೊಟ್ಟೇ ಕೊಡ್ತಾರೆ.
ಈಗ ನಾನು ನಾಕಾರು ವರ್ಸಾ ಆತು ಅಲ್ಲೇ ಯವಾರ ಮಾಡ್ತಾ ಐದೀನಿ…ಯಾ ರಗಳೇ ರಿಸುಗು ಎಂತಾದು ಇಲ್ಲ.. ಗನಾ ಮನಸಯ್ಯ.. ಸಲ್ಪ ಇದುರು ಸಿಟ್ಟು ಜಾಸ್ತಿ… ಆಸ್ಥೆಯಾ ನೀ ಎಂತೂ ಹೆಚ್ಚಿಗೆ ಮಾತು ಅಡಕೆ ಹೋಬಡ ಆಸ್ಥೆಯಾ”ಅಂದ.
ಈರಾಜ ಯೋಚನೆ ಮಾಡಿದ. ಪೆಂಗ ಸಣಪ ಹೇಳದು ಸರಿ ಐತೆ.
ನಾನು ಈಗ ಎರಡು ವರ್ಸಾದಿಂದ ಬೇಲಿ ಮಾಡ್ಬಕು ಅಂತ ಸಾಧನೆ ಮಾಡ್ತಾನೆ ಐದೀನಿ…ಅದು ಆಗ್ಲೇ ಇಲ್ಲ… ಆಗದು ಇಲ್ಲ ಅಂತಾ ಕಾಣ್ತಾ ತೆ… ಒಂದ್ ಕೈ ನೋಡೇ ಬಿಡದು ಅಂದುಕೊಂಡು ಪೆಂಗಣ್ಣನಿಗೆ ಬೆನ್ನು ಬಿದ್ದ.”ಅಲ್ಲ ಸಣಪ.. ಆ ಹೆಗ್ಡೆರು ಮಖಾನೇ ನಾ ಇನ್ನು ನೋಡಲ ಮರಯ.. ನಾ ಒಬ್ಬನೇ ಹೋದ್ರೆ ಅವ್ರು ಹ್ಯಾಂಗೂ ದುಡ್ಡು ಕೊಡದಲ.. ನೀ ಒಂದ್ ಉಪಕಾರ ಮಾಡ ಮರಯ ನಾಳೆ ಬೆಳಗ ಮನ್ನೆ ಒಂದ್ ಹಾದಿ ಹೋಗಿ ಬರನೇ ಬಾರ ಮರಯ”..ಅಂದ.
ಪೆಂಗಣ್ಣ ಅದಕ್ಕೆ ಒಪ್ಪಿಕೊಂಡ “ಅಡ್ಡಿಲ ತಗಳ ಮರನೆ….ಆದ್ರೆ ಅಲ್ಲಿ ನಾವು ಹೋಗದು ಆದ್ರೆ ಉದೇಮನ್ನೆ ಹೊತ್ಲೆ ಅಲ್ಲಿ ಇರಬಕ ಮರಯ… ಕಡಿಗೆ ಹೆಗ್ಡೆರು ಎಲ್ಲಾರು ಸಾಗ್ರಾ ಪಾಗ್ರಾ ಹೊಬುಟ್ರೆ ಹ್ಯಾಮಾಡದ.
ಒಂದ್ ಕೆಲ್ಸ ಮಾಡನೆ ತಗಳ ಇಂದು ಬೈಕೇ ಅಲ್ಲಿಗೆ ಹೊಬುಡನೆ ತಗ. ಅಲ್ಲಿ ನಮನೆ ಯಂಕ ಮನಿಯಾಳ ತನಕೆ ಮದೇ ಮಾಡಿಕಂಡು ಅಲ್ಲೇ ಐದಾನೆ ಸೈಯಾಲ. ಅವ್ನ್ ಮನೇಲಿ ಬಿದ್ದಕಂಡು ಹೊತ್ಲೆ ಎದ್ದು ಹೆಗ್ಡೆರ ಮನಿಗೆ ಹೋಗಕೆ ಆತತೆ ತಗ ಅಂದ”. “ಅಲ್ಲ ಸಣಪ ಇಂದೇ ಹೋದ್ರೆ ನಾ ಹಕ್ಕೆ ಬದಿ ಹ್ಯಾಮಾಡದ”… ಅಂತ ಈರಾಜ ರಾಗ ಎಳೆಯುತ್ತಿದ್ದಂತೆ ಪೆಂಗಣ್ಣ ಹೇಳಿದ.
“ಸುಮ್ಮನಿರ ಮರಯ ಇವತ್ತು ಒಂದಿನ ನೀನು ಹಕ್ಕೆಗೆ ಹೋಗದೆ ಇದ್ರೆ… ಊರು ಮುಳುಗಿ ಹೋಗದಲ. ಅಲ್ಲ …. ನೀ ಹಕ್ಕೆಗೆ ಬರ್ಲಾ ಅಂತಾ ಜೀವಾದಿಗೆ ಯಾರಾರು ಕರದು ಹೇಳ್ತಾರನ ಮರಯ.. ನಿನ್ ಹುಲಿ ಹೀಡೀತು”…ಅಂದ.
ಇಬ್ಬರೂ ಇಂದೇ ಹೋಗುವ ತೀರ್ಮಾನ ಮಾಡಿಕೊಂಡು ಅಲ್ಲಿಂದ ಹೊರಟರು. ಆದರೇ ವಿಧಿಯ ತೀರ್ಮಾನವೇ ಬೇರೆಯಾಗಿತ್ತು.!!!!
ಮುಂದುವರೆಯುತ್ತದೆ.
- ಮೋಹನ್ ಹಾಲೆಮನೆ
