ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾದ ಡಿವಿಜಿಯವರು ತಮ್ಮ ಬರಹದ ಮೂಲಕ ಕನ್ನಡಿಗರ ಮನೆ ಮನದಲ್ಲಿ ಉಳಿದುಕೊಂಡಿದ್ದಾರೆ. ಭೌತಿಕವಾಗಿ ಅವರು ನಮ್ಮ ನಿಮ್ಮ ಜೊತೆಗಿಲ್ಲದಿದ್ದರು ಸಾಹಿತ್ಯದ ಮೂಲಕ ಎಲ್ಲರ ಜೊತೆಗಿದ್ದಾರೆ. ಡಿವಿಜಿಯವರ ಕುರಿತು ಶರಣಗೌಡ ಬಿ.ಪಾಟೀಲ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
“ಇರುವ ಭಾಗ್ಯವ ಬಿಟ್ಟು ಬಾರೆನೆಂಬುದು ಬಿಡು ಹರುಷಕ್ಕಿದೆ ದಾರಿ” ಅನ್ನುವ ಅವರ ಕಗ್ಗದ ವಾಕ್ಯ ಆಗಾಗ ಸ್ಪೂರ್ತಿ ನೀಡುತ್ತದೆ. ಅವರು ರಚಿಸಿದ ಅನೇಕ ಕೃತಿಗಳು ಜನಪ್ರೀಯವಾಗಿ ಜನರ ಚಿಂತನೆಗೂ ದಾರಿ ಮಾಡಿ ಕೊಡುತ್ತಿವೆ. “ಮಂಕುತಿಮ್ಮನ ಕಗ್ಗವಂತೂ ಎಲ್ಲರು ಮೆಚ್ಚುವ ಅಚ್ಚುಮೆಚ್ಚಿನ ಕೃತಿಯಂದೇ ಹೇಳಬಹುದು. ಕಗ್ಗದ ಪದ್ಯಗಳಲ್ಲಿ ಬಳಸಿದ ಭಾಷೆ ಕ್ಲಿಷ್ಟವೆನಿಸಿದರು ಓದುತ್ತಾ ಹೋದಂತೆ ಸುಲಭವಾಗಿ ಅರ್ಥವಾಗುತ್ತವೆ . ನಮ್ಮ ಚಿಂತೆ ಸಂತಾಪಗಳಿಗೆ ಸಾಂತ್ವನ ದೊರಕಿಸಿ ಕೊಡುತ್ತವೆ. ಕಗ್ಗದ ಅನೇಕ ಪದ್ಯಗಳು ಸಗ್ಗದ ಸುಖ ನೀಡುವದರಲ್ಲಿ ಅನುಮಾನವಿಲ್ಲ. ಅವುಗಳನ್ನು ಕನ್ನಡದ ಉಪನಿಷತ್ ಭಗವತಗೀತೆ ಅಂತಲೇ ಪರಿಗಣಿಸಲಾಗುತ್ತಿದೆ ಅವು ನೀತಿ ವಾಕ್ಯದಂತೆ ಗೋಚರಿಸಿ ನೈತಿಕ ಮೌಲ್ಯ ಪ್ರತಿಪಾದಿಸುತ್ತವೆ.
ಡಿವಿಜಿಯವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಅಂದಿನ ಕಾಲದಲ್ಲಿ ಇವರು ಓದಿದ್ದು ಕಡಿಮೆ ಉನ್ನತ ವ್ಯಾಸಂಗದ ಹಂಬಲವಿದ್ದರು ಮನೆಯ ಪರಿಸ್ಥಿತಿ ಅನುಕೂಲವಾಗಿರದ ಕಾರಣ ಕೇವಲ ಹೈಸ್ಕೂಲು ಮಟ್ಟದ ತನಕ ಓದಲು ಸಾಧ್ಯವಾಯಿತು ನಂತರ ಯಾವುದೇ ಕಾಲೇಜು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತದೆ ಸ್ವ ಪ್ರಯತ್ನದಿಂದ ಕನ್ನಡ ಸಂಸ್ಕೃತ ಮತ್ತು ಇಂಗ್ಲಿಷಿನಲ್ಲಿ ಪ್ರಾವೀಣ್ಯತೆ ಪಡೆದುಕೊಂಡರು. ಉನ್ನತ ಶಿಕ್ಷಣದ ಕೊರತೆ ಇದ್ದರೂ ಅನುಭವದ ಮೂಲಕ ಜ್ಞಾನ ಪಡೆದು ಯಾರಿಗೂ ಕಡಿಮೆ ಇಲ್ಲದಂತೆ ಅನೇಕ ಕೃತಿ ರಚಿಸಲು ಸಾಧ್ಯವಾಯಿತು. ಇವರ ಕೃತಿಗಳು ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ ಹೆಚ್ಚುವಂತೆ ಮಾಡಿವೆ.

ಡಿವಿಜಿಯವರ ತಂದೆ ಊರಿಗೆ ಹೋದಾಗ ಒಮ್ಮೆ ಮನೆ ಕಳ್ಳತನವಾಯಿತು. ಕಳ್ಳರು ಮನೆಯಲ್ಲಿನ ಸಾಮಾನು ಒಡವೆ ಹಣ ಮತ್ತಿತರ ವಸ್ತುಗಳನ್ನು ದೋಚಿಕೊಂಡು ಹೋದರು. ಮೊದಲೇ ಆರ್ಥಿಕ ತೊಂದರೆ ಅನುಭವಿಸುತ್ತಿದ್ದವರಿಗೆ ಏಕಾಏಕಿ ಅಘಾತ ತಂದಿತು ಕುಟುಂಬದ ನಿರ್ವಹಣೆ ಹೇಗೆ ಅನ್ನುವ ಚಿಂತೆ ಕಾಡಿತು. ಆ ಸಂದರ್ಭದಲ್ಲಿ ಡಿವಿಜಿಯವರು ಕೋಲಾರ ಹೈಸ್ಕೂಲಿನಲ್ಲಿ ಓದುತಿದ್ದರು ಓದಿಗೆ ಮನೆಯಿಂದ ಹಣ ಹೇಗೆ ಕೇಳುವದು ಅಂತ ಒಬ್ಬರ ಮನೆಯಲ್ಲಿ ಊಟ ಇನ್ನೊಬ್ಬರ ಮನೆಯಲ್ಲಿ ವಾಸಮಾಡಿ ಓದು ಮುಂದುವರೆಸಿದರು. ಓದಿನ ಖರ್ಚು ಸರಿದೂಗಿಸಿಕೊಳ್ಳಲು ಒಂದು ಕ್ರೈಸ್ತ ಸಂಸ್ಥೆಯ ಇಂಗ್ಲಿಷ ಪತ್ರಿಕೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಮಾಸಿಕ ಐದು ರೂಪಾಯಿ ಸಂಪಾದಿಸುತಿದ್ದರು. ” ನನ್ನ ಮಶಿಕುಡಿಕೆ ಜೀವನ ಹೀಗೆ ಆರಂಭವಾಯಿತು ಅಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಡಿವಿಜಿಯವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ ಭಾಗೀರಥಮ್ಮನೊಡನೆ ವಿವಾಹವಾದಾಗ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಾಯಿತು ಜೀವನ ಸಾಗಿಸಲು ಹಣ ಬೇಕು ಅದು ಇಲ್ಲದಿದ್ದರೆ ಯಾವದೂ ನಡೆಯೋದಿಲ್ಲ ಅಂತ ಹಾಜಿ ಇಸ್ಮಾಯಿಲ್ ಸೇಟ್ ಅಂಗಡಿಯಲ್ಲಿ ಸುಮಾರು ತಿಂಗಳು ಕೆಲಸ ಮಾಡಬೇಕಾಯಿತು. ನಂತರ ಕೆಲ ಕಾಲ ಬದಲೀ ಮೇಸ್ಟರ ಆಗಿಯೂ ಸೇರಿಕೊಂಡರು. ಅದರಿಂದ ಬರುವ ಹಣ ಸಂಸಾರ ಸರಿದೂಗಿಸಲು ಸಾಕಾಗುತ್ತಿರಲಿಲ್ಲ. ಬೇರೆ ಕೆಲಸ ಮಾಡಬೇಕು ಅಂತ ಕೆಲಸಕ್ಕಾಗಿ ಬೆಂಗಳೂರಿನ ಬೀದಿ ಬೀದಿ ಅಲೆದಾಡಿದರು. ಸಾಹಿತ್ಯ ವೇದಾಂತ ಮತ್ತಿತರ ವಿಷಯದಲ್ಲಿ ಜ್ಞಾನವಿದ್ದರೂ ಇವರಿಗೆ ಯೋಗ್ಯ ಕೆಲಸ ದೊರೆಯಲಿಲ್ಲ. ಆದರೂ ಕೈಕಟ್ಟಿ ಕೂಡದೇ ಛಲ ಬಿಡದ ತಮ್ಮ ಪ್ರಯತ್ನ ಮುಂದುವರೆಸಿದರು.
“ಯಾವ ತಿಳುವಳಿಕೆ ನಮ್ಮ ಜನಕ್ಕಿದ್ದರೆ ದೇಶಕ್ಕೆ ಪ್ರಯೋಜನವಾದೀತೋ ಅಂಥ ತಿಳುವಳಿಕೆ ನಾನು ಮೊದಲು ಸಂಪಾದಿಸಿಕೊಂಡು ನಂತರ ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಅನ್ನುವ ಒಳತುಡಿತದಿಂದ ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡಿದರು. ಬರಹದ ರೂಪದಲ್ಲಿ ತಮ್ಮ ವಿಚಾರಗಳನ್ನು ನಿರಂತರವಾಗಿ ಪ್ರಕಟಿಸತೊಡಗಿದರು. ಇವರ ಬದುಕು ಕಪ್ಟದಲ್ಲೇ ಸಾಗಿತು ಇವರಿಗೆ ಮೂರು ಜನ ಮಕ್ಕಳು ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡುಮಗ ಅವರೇ ಬಿ.ಜಿ ಎಲ್ ಸ್ವಾಮಿ ಅನ್ನುವದು ವಿಶೇಷ.
ಡಿವಿಜಿಯವರ ಪತ್ನಿ ಭಾಗೀರಥಮ್ಮ ಬಾಣಂತಿಯಿದ್ದಾಗ ತಲೆ ಕಾಯಿಸಿಕೊಳ್ಳಲು ಹೋಗಿ ಬೆಂಕಿ ಅಪಘಾತದಿಂದ ಸಾವನ್ನಪ್ಪಿದ್ದು ಇವರಿಗೆ ವಿಪರೀತ ನೋವು ತರಿಸಿತು. ತಮ್ಮ ಒಡಲಾಳದ ನೋವು ” ನಿವೇದನೆ ” ಅನ್ನುವ ಕವನ ಸಂಕಲನ ಮೂಲಕ ಹೊರ ಹಾಕಿದ್ದಾರೆ.
ಎನ್ನ ಮನೆಯೊಳೆಸದ ಬೆಳಕೆ,
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ ಬರೆದ ಬರಹವ
ಇನ್ನದೆಂತು ನೋಡಿ ನಗುತಲೊರೆವೆ ಸರಸವ! ಅಂತ ನೆನಪಿಸಿಕೊಂಡು ಬರೆಯುತ್ತಾರೆ.
ಪತ್ನಿಯ ಅಗಲಿಕೆಯ ನೋವು ಸುಮಾರು ದಿನಗಳ ವರೆಗೂ ಕಾಡಿ ಆ ದುಃಖದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಮತ್ತೊಂದು ಮದುವೆಯಾಗುವಂತೆ ಅನೇಕರಿಂದ ಒತ್ತಾಯವೂ ಕೇಳಿ ಬಂದಿತು ಆದರೆ ಮದುವೆಗೆ ಮನಸ್ಸು ಒಪ್ಪಲಿಲ್ಲ ಆಗ ಇವರಿಗೆ ಕೇವಲ ಮುವತ್ತೇಳು ವರ್ಷ ವಯಸ್ಸು ಇಂತಹ ಹತ್ತು ಹಲವು ಕೌಟುಂಬಿಕ ಸಮಸ್ಯೆಗಳ ಜೊತೆಗೆ ಹಣದ ಮುಗ್ಗಟ್ಟು ಕೂಡ ಹಾಗೇ ಮುಂದುವರೆಯಿತು. ಸರ್ಕಾರ ಇವರನ್ನು ಗುರುತಿಸಿ ಮಾಶಾಸನ ನೀಡಲು ಮುಂದಾಯಿತು ಆದರೆ ಡಿವಿಜಿಯವರು ಅದನ್ನು ನಿರಾಕರಿಸಿ ” ಮಾಶಾಸನ ತಮಗೆ ಬೇಕಾಗಿಲ್ಲ ಸಾರ್ವಜನಿಕ ಸೇವೆಗೆ ಪ್ರತಿಫಲ ಆಪೇಕ್ಷಿಸಬಾರದು ಅಂಥಹ ವೆಚ್ಚಗಳಿಗೆ ಸರ್ಕಾರದ ಹಣ ಉಪಯೋಗಿಸತಕ್ಕದ್ದಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದು ದೊಡ್ಡತನ ಮೆರೆದರು.
ಡಿವಿಜಿಯವರ ಜೀವನ ಹೇಗೆ ನಡೆಯುತಿತ್ತು ಅನ್ನುವ ವಿಷಯ ಯಾರಿಗೂ ತಿಳಿಯುತ್ತಿರಲಿಲ್ಲ ತಮ್ಮ ತಾಪತ್ರಯ ಇನ್ನೊಬ್ಬರ ಮುಂದೆ ತೋಡಿಕೊಳ್ಳುವ ಪ್ರವೃತ್ತಿಯೂ ಇವರಿಗಿರಲಿಲ್ಲ.
“ನಿನ್ನಳಲು ದುಗುಡುಗಳ ನಿನ್ನೊಳಗೆ ಬಯ್ತಿಡದೆ
ಇಳೆಗೆ ಹರಡುವದೇಕೋ ಮಂಕುತಿಮ್ಮ. “ ಅಂತ ತಮ್ಮ ಬದುಕಿನ ಬಗ್ಗೆ ತಾವೇ ಬರೆದುಕೊಂಡಿದ್ದಾರೆ.
ಸಾಹಿತ್ಯದ ಜೊತೆಗೆ ಡಿವಿಜಿ ಸಂಗೀತ ಪ್ರೀಯರೂ ಆಗಿದ್ದರು. ಸಂಗೀತ ಕೇಳುವ ಸಿನಿಮಾ ನೋಡುವ ಹವ್ಯಾಸ ಮೊದಲಿನಿಂದಲೂ ಬೆಳೆಸಿಕೊಂಡಿದ್ದರು. ಗೆಳೆಯರ ಜೊತೆ ಆಗಾಗ ಸಿನಿಮಾ ನೋಡಿ ಅದರ ಬಗ್ಗೆ ಚರ್ಚಿಸುತಿದ್ದರು.
ಇವರು ಬರೆದ ಮಂಕುತಿಮ್ಮನ ಕಗ್ಗ ಸುಮಾರು 945 ಮುಕ್ತಕಗಳಿರುವ ಸ್ವಯಂ ಪೂರ್ಣವಾದ ಬಿಡಿ ಪದ್ಯಗಳ ಸಂಗ್ರಹ. ನಾಲ್ಕು ಸಾಲಿನಿಂದ ಕೂಡಿದ ಪದ್ಯಗಳಾಗಿದ್ದರಿಂದ ಚೌಪದಿಗಳೆಂದು ಕರೆಯಲಾಗುತ್ತದೆ. ಕೊನೆಗೆ ಮಂಕುತಿಮ್ಮ ಅನ್ನುವ ಹೆಸರಿನಿಂದ ಮುಕ್ತಾಯವಾಗುತ್ತದೆ ಈ ಮಂಕು ತಿಮ್ಮ ಅನ್ನುವ ಹೇಸರು ಆಶ್ಚರ್ಯ ತರಿಸುವದಲ್ಲದೆ ಯಾರು ಈ ಮಂಕುತಿಮ್ಮ ಅನ್ನುವ ಯೋಚನೆಯು ಕಾಡುತ್ತದೆ.
ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ
ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೊ
ಅಂಕಿತವ ಮಾಳ್ಕೆ ಜನರವರು ಓದಿದರೆ ಸಾಕು
ಶಂಕೆ ನಿನಗೇನಿಹದೊ ಮಂಕುತಿಮ್ಮ!
ಅಂತ ಸ್ವತಃ ತಾವೇ ಮಂಕುತಿಮ್ಮನ ಬಗ್ಗೆ ಇರುವ ಸಂಶಯ ಕುತುಹಲ ನಿವಾರಿಸಿದ್ದಾರೆ.
ಮಂಕುತಿಮ್ಮನ ಕಗ್ಗವನ್ನು ಕೆಲವು ಸಮಯದಲ್ಲಿ ಬರೆದು ಮುಗಿಸಿದ್ದಲ್ಲ ಹಲವಾರು ವರ್ಷಗಳ ಪರ್ಯಂತ ತಮ್ಮ ಮನಸ್ಸಿನಲ್ಲಿ ಹೊಳೆದ ವಿಚಾರಗಳನ್ನು ನಾಲ್ಕು ಸಾಲುಗಳ ಮುಕ್ತಕಗಳ ರೂಪದಲ್ಲಿ ಬರೆದು ಸಂಗ್ರಹಿಸಿದ್ದಾರೆ.
ಒಂದು ಜೀವನ ಧರ್ಮ ಎಂದರೆ ಜೀವನವನ್ನು ನಡೆಸಲು ಸರಿಯಾದ ಮಾರ್ಗದ ದರ್ಶನ, “ನನ್ನ ಮನಸ್ಸಿಗೆ ನಾನೇ ತಿಳಿದುಕೊಂಡು, ಸತ್ಯವನ್ನು ಹಲವಾರು ಗ್ರಂಥಗಳಿಂದ ಹಾಗೂ ಸ್ವಾನುಭಾವದಿಂದ ಆರಿಸಿ ಈ ಹಗ್ಗವನ್ನು ಹೊಸೆದಿದ್ದೇನೆ ಆ ಹಗ್ಗವೇ ಈ “ಕಗ್ಗ” ಅಂತ ಕಗ್ಗದ ತಾತ್ಪರ್ಯ ವಿವರಿಸಿದ್ದಾರೆ.
ಕಗ್ಗದಲ್ಲಿ ಯಾವುದೇ ವ್ಯಾಕರಣ ಕಾವ್ಯ ಲಕ್ಷಣಗಳನ್ನು ಹೆಚ್ಚಾಗಿ ಪರಿಗಣಿಸದೆ ಜೀವನದ ಕಷ್ಟ ಕಾರ್ಪಣ್ಯಗಳಿಂದ ಬೆಂದು ಸಮಾಧಾನ ಬಯಸಿದವರಿಗೆ ಒಂದು ರೀತಿಯ ಸಮಾಧಾನ ದೊರಕಿಸಿ ಕೊಡುತ್ತವೆ. ತಿಮ್ಮ ಗುರುವಿನ ಮೂಲಕ ಡಿವಿಜಿಯವರು ತಮ್ಮ ನಂಬಿಕೆಯನ್ನು ಮನ ಮುಟ್ಟುವಂತೆ ನೆಯ್ದಿದ್ದಾರೆ. ಬೇಕಾದವರು ಸ್ವೀಕರಿಸಿ ತಮ್ಮ ಮನಸ್ಸಿಗೆ ಸಮಾಧಾನ ತಂದುಕೊಳ್ಳಬಹುದಾಗಿದೆ.
ನೂರಾರು ಮತವಿಹದು ಲೋಕದುಗ್ರಾಣದಲಿ
ಆರಿಸಿಕೊ ನಿನ್ನ ರುಚಿಗೊಪ್ಪುವದನದರೊಳ್
ಸಾರದಡುಗೆಯನೊಳವಿಚಾರದೊಲಿಯಲಿ ಮಾಡು
ಬೇರೆ ಮತಿ ಬೇರೆ ಮತ ಮಂಕುತಿಮ್ಮ.
ಈ ಜಗತ್ತಿನ ಭಂಡಾರದಲ್ಲಿ ನೂರಾರು ಅಭಿಪ್ರಾಯಗಳಿವೆ ನಿನ್ನ ರುಚಿಗೆ ಮನೋಧರ್ಮಕ್ಕೆ ಒಪ್ಪಿಗೆಯಾಗುವದನ್ನು ಆರಿಸಿಕೊ ಸರ್ವಸಮ್ಮತ ಒಂದೇ ಅಭಿಪ್ರಾಯವಿರಲು ಸಾಧ್ಯವಿಲ್ಲ ಹೀಗೆ ಆರಿಸಿಕೊಂಡ ವಿಚಾರ ಒಲೆಯಲ್ಲಿ ಬೇಯಿಸಿ ಸಾರವತ್ತಾದ ಅಡುಗೆ ಮಾಡಿದರೆ ತತ್ವಗಳು ತಾನೇ ಸಿದ್ಧವಾಗುತ್ತವೆ ಅಂತ ಹೇಳುತ್ತಾರೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ !
ಇದರಲ್ಲಿ ಬದುಕಿಗೆ ಸ್ಪೂರ್ತಿ ನೀಡುವ ವಿಚಾರ ಅಡಕವಾಗಿವೆ. ನಾವು ಯಾವ ರೀತಿಯಾಗಿ ಬಾಳಿ ಬದುಕಬೇಕು ನಮ್ಮ ವರ್ತನೆ ಹೇಗಿರಬೇಕು ಅನ್ನುವದನ್ನು ತಿಳಿಸಿ ಕೊಡುತ್ತದೆ ನಾವು ಸಮಯ ಸಂದರ್ಭಕ್ಕನುಸಾರ ಇಂತಹ ಅನೇಕ ಕಗ್ಗಗಳನ್ನು ಬಳಸಿ ಮೆಲುಕು ಹಾಕುತ್ತೇವೆ.
ನಗುವದು ಸಹಜ ಧರ್ಮ ನಗಿಸುವದು ಪರಧರ್ಮ
ನಗುವ ಕೇಳುತ ನಗುವದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೋಳೋ ಮಂಕುತಿಮ್ಮ!
ನಗು ಒಂದು ನೈಸರ್ಗಿಕ ಧರ್ಮ ಸಂತೋಷವಾಗಿರುವದು ಮನುಷ್ಯನ ಮೂಲ ಸ್ವರೂಪ ಇತರರನ್ನು ನಗುವಂತೆ ಮಾಡುವದು ಪರಿಶುದ್ಧ ಧರ್ಮ ಯಾವಾಗಲೂ ನಗುತ್ತ ನಗಿಸುತ್ತಾ ಇರುವ ವರವನ್ನು ಪಡೆದುಕೊಂಡು ಸಂತೋಷವಾಗಿರಬೇಕು ಅಂತ ಹೇಳುತ್ತಾರೆ.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲಮಾಗುವಂದು ತುತ್ತೂರಿ ಧನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ!
ನಾವೆಲ್ಲ ಈ ಮಾತು ಸದಾ ನೆನಪಿಟ್ಟುಕೊಳ್ಳಲೇಬೇಕು
- ಶರಣಗೌಡ ಬಿ.ಪಾಟೀಲ
