ಬೇರೆಯವರು ಮನೆ ಮುಂದೆ ಹೂ ನೋಡಿ ಎಷ್ಟು ಚನ್ನಾಗಿದೆ ಅಲ್ಲ. ನಮಗೂ ಒಂದು ಸ್ವಂತ ಮನೆ ಇದ್ದಿದ್ರೆ ನಾವೂ ಈ ಥರ ಚನ್ನಾಗಿ ಕೈ ತೋಟ ಮಾಡಬಹುದಿತ್ತು. ನಾವಿರೋದು ಅಪಾರ್ಟಮೆಂಟ್ ಎನ್ನುವ ವಿಶಾಲಾಕ್ಷಿ. ಅಯ್ಯೋ, ಬಿಡಿ ನಮ್ಮದೇನೂ ಸ್ವಂತ ಮನೆನಾ. ಆದ್ರೆ ನೀರಿಗೆ ಕಷ್ಟ ಕಣ್ರೀ. ಬಡಾವಣೆಯಲ್ಲಿ ಒಂದಿನ ಬಿಟ್ಟು ಒಂದಿನ ನೀರು ಬಿಡುತ್ತಾರೆ. ಆ ನೀರು ಪ್ರತಿದಿನ ಮನೆಗೆಲಸಕ್ಕೇ ಸಾಕಾಗೋಲ್ಲ ಎನ್ನುವ ಮಾತು ಗಿರಿಜಮ್ಮನವರದು.
ಇದು ಬರೀ ಇವರಿಬ್ಬರ ಮಾತಲ್ಲ. ಬೆಂಗಳೂರನಲ್ಲಿರೋ ಎಷ್ಟೋ ಜನರ ಮಾತಾಗಿದೆ. ಒಂದು ಹೂ ಕುಂಡದಲ್ಲಿ ಗಿಡ ನೆಟ್ಟರೆ ಅದಕ್ಕೆ ಬೇಕಿರುವುದು ನಮ್ಮ ಸ್ನಾನಕ್ಕೆ ಉಪಯೋಗಿಸುವ ಒಂದು ಚಂಬು ನೀರು ಮಾತ್ರ. ಸ್ನಾನಕ್ಕಾಗಿ ದಿನಕ್ಕೆ ಎನ್ನಿಲ್ಲವೆಂದರೂ ೨೦ ಚಂಬುಗಳನ್ನಾದರೂ ಉಪಯೋಗಿಸುತ್ತೇವೆ. ಅದರಂತೆ ಪಾತ್ರೆ ತೊಳೆಯುವ ಮುಂಚೆ ಪಾತ್ರೆಯಲ್ಲಿನ ಜಿಡ್ಡು ಬಿಡಲು ನೀರು ಹಾಕಿ ನೆನೆಯಿಡುತ್ತೇವೆ. ನಾವು ಕುಡಿಯಲು ಫ್ಯೂರಿಫೈನಿಂದಲೇ ದಿನಕ್ಕೆ ಏನಿಲ್ಲಾಂದರೂ ೧೫ ಲೀಟರಿನಷ್ಟು ನೀರು ಹೊರಗೆ ಹೋಗುತ್ತದೆ. ತರಕಾರಿ, ಸೂಪ್ಪುಗಳನ್ನು ತೊಳೆದಾದ ಮೇಲೆ ನೀರನ್ನು ಹೊರಗೆ ಚಲ್ಲುತ್ತೇವೆ. ಈಗ ನೀವೇ ಹೇಳಿ. ಇಲ್ಲಿ ನೀರಿನ ಸಮಸ್ಯೆ ಇದೆಯೆ ಎಂದು ಅನಿಸುತ್ತದೆಯೇ?
ಇನ್ನು ಜಾಗದ ಸಮಸ್ಯೆಯ ಬಗ್ಗೆ ಮಾತನಾಡಿದರೆ ಇಲ್ಲಿದೆ ಅದಕ್ಕೂ ಉತ್ತರ. ಒಂದು ಟೊಮೇಟೊ ಗಿಡ, ಹಸಿಮೆಣಸಿನಕಾಯಿ, ಪಾಲಕ, ಮೂಲಂಗಿ, ರೋಜ್, ಸೇವಂತಿ ಗಿಡ ಎಷ್ಟು ಜಾಗ ತಗೆದುಕೊಳ್ಳುತ್ತದೆ? ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಒಂದು ಚಿಕ್ಕ ಕುಂಡದಲ್ಲಿಯೇ ಬೆಳೆಸಬಹುದು. ಹೂ ಕುಂಡಗಳನ್ನು ದುಡ್ಡು ಕೊಟ್ಟಿ ತರಬೇಕಾಗಿಲ್ಲ. ಮನೆಲ್ಲಿಯೇ ನೀರುಪಯೋಗಿ ವಸ್ತುಗಳಾದ ಎಣ್ಣೆ ಡಬ್ಬ, ಹಳೆಯ ಟಯರು ಇತ್ಯಾದಿ ವಸ್ತುಗಳನ್ನು ಹೊರಗೆ ಎಸೆಯುವ ಬದಲು ಅವುಗಳನ್ನೇ ಉಪಯೋಗಿಸಬಹುದು.
ಗಿಡಕ್ಕೆ ಬೇಕಾದ ಗೊಬ್ಬರದ ವಿಚಾರಕ್ಕೆ ಬಂದರೆ ನಮ್ಮ ತಟ್ಟೆಯಲ್ಲಿ ಕರಿಬೇವು, ಕೊತ್ತಂಬರಿ, ಈರುಳ್ಳಿಯನ್ನು ತಿನ್ನದೇ ತಟ್ಟೆಯ ಬದಿಯಲ್ಲಿ ತಗೆದಿಟ್ಟಿರುತ್ತೇವೆ. ಪ್ರತಿಯೊಬ್ಬರ ತಿಂದ ತಟ್ಟೆಯನ್ನು ಗಮನಿಸಿದಾಗ ಈ ಥರ ಒಂದಲ್ಲ ಒಂದು ಹಸಿ ತರಕಾರಿ ಬದಿಯಲ್ಲಿ ಇರುತ್ತದೆ. ಇದನ್ನು ಎತ್ತಿ ಬಿಸಾಕುವ ಮೊದಲು ಒಂದೆಡೆ ಎತ್ತಿಟ್ಟು ನಂತರ ಗಿಡದ ಬುಡದಲ್ಲಿ ಹಾಕಿ ಮಣ್ಣು ಮುಚ್ಚಿದರೆ ಗೊಬ್ಬರ ಸ್ವಲ್ಪ ದಿನದಲ್ಲಿ ರೆಡಿಯಾಗುತ್ತದೆ.
ಅಂಗೈಯಲ್ಲಿಯೇ ಎಲ್ಲಾ ಸೌಲಭ್ಯಗಳಿದ್ದು ಜಾಗದ ಕೊರತೆ, ನೀರಿನ ಕೊರತೆ ಎನ್ನುವ ಸಣ್ಣ -ಪುಟ್ಟ ಕೊರತೆಗಳನ್ನೂ ಎತ್ತಿ ಹಿಡಿಯುತ್ತೇವೆ. ದಿನದ ಉಪಯೋಗಕ್ಕೆ ಹೊರಗಿನಿಂದ ತರಕಾರಿಯನ್ನು ತರುತ್ತೇವೆ. ಬದಲಿಗೆ ಮನೆಯಲ್ಲಿಯೇ ಹೂವಿನ ಕುಂಡದಲ್ಲಿ ಉತೃಷ್ಟವಾಗಿ ತರಕಾರಿಯನ್ನು ಬೆಳೆಯಬಹುದು. ಜೊತೆಗೆ ಅಂದವಾದ ಉದ್ಯಾನವನ ಪ್ರತಿಯೊಬ್ಬರ ಮನೆಯಲ್ಲಿಯೇ ನೋಡಬಹುದು. ಕನಿಷ್ಠ ಪಕ್ಷ ಒಂದು ಮನೆಗೆ ಹತ್ತು ಕುಂಡದಲ್ಲಾದರೂ ಗಿಡವನ್ನು ಬೆಳೆಸಿದರೆ ಎಲ್ಲರ ಮನೆಯ ಮುಂದೆ ನಂದನವನ ಕಾಣುವುದರಲ್ಲಿ ಸಂದೇಹವಿಲ್ಲ.
ಇತ್ತೀಚಿನ ದಿನಗಳಲ್ಲಿ ದೊಡ್ಡ ಜಾತಿಯ ಗಿಡಗಳನ್ನು ಬೋನ್ಸಾಯಿ ಮಾದರಿಯಲ್ಲಿ ಸಿಗುವುದರಿಂದ ಸಣ್ಣ ಹೂ ಕುಂಡದಲ್ಲಿಯೇ ಅವುಗಳನ್ನು ಬೆಳೆಯಬಹುದು. ಇಲ್ಲಿ ಗಿಡ ಬೆಳೆಯಲು ಬೇಕಿರುವುದು ಸ್ವಲ್ಪ ನಿಮ್ಮ ಸಮಯ, ಜೊತೆಗೆ ಗಿಡ ಬೆಳೆಸಬೇಕೆನ್ನುವ ನಿಮ್ಮ ಮನಸ್ಥಿತಿಯಷ್ಟೇ.
- ಶಾಲಿನಿ ಹೂಲಿ ಪ್ರದೀಪ್