ವಾಸುದೇವ್ ನಾಡಿಗ್ ಅವರ ‘ಕಾಲಾಂತರಕ್ಕೊಂದು ಕನ್ನಡಿ’ ಕವನ ಸಂಕಲನದ ಕುರಿತು ಕವಿಯತ್ರಿ ಬಿ ವಸು (ಭಾಗ್ಯ) ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಕೃತಿ : ಕಾಲಾಂತರಕ್ಕೊಂದು ಕನ್ನಡಿ
ಕವಿ : ವಾಸುದೇವ್ ನಾಡಿಗ್
ಪ್ರಕಾಶಕರು : ಅವ್ಯಕ್ತ ಪ್ರಕಾಶನ
ಪುಟಗಳ ಸಂಖ್ಯೆ : ೧೭೮
ಪುಟ ತಿರುವುವುದು ಕಷ್ಟಸಾಧ್ಯ ವಾದಂತಿದೆ. ಆದರೆ ಇವರು ಮತ್ತು ಇವು ಗಂತವ್ಯದ ಕಡೆ ಎಳೆವ ಸೂಜಿಕಾಂತ. ನಿಂತಲ್ಲಿ ನಿಲಲ್ಲು ಬಿಡುವುದಿಲ್ಲ.
ಪ್ರತೀ ಸಂಕಲನಗಳನ್ನು ಓದುತ್ತಾ ಬಂದ ನನಗೆ ಇವರ ಕೃತಿಗಳ ಕುರಿತು ವಿವರಿಸುವಷ್ಟು ಜ್ಞಾನವಿಲ್ಲ ಎಂಬುದು ಸ್ಪಷ್ಟವಾಗಿದೆ. ಆಯ್ವ ವಿಚಾರಗಳ ಪರಿಶೀಲನೆ ; ಪರಿಶೋಧನೆ, ಭಾಷೆಯ ಪೋಷಣೆ ; ತಪಾಸಣೆ, ಲೋಕಶೋಧಿಸುವ ಮಾರ್ಗ, ಆತ್ಮವೀಕ್ಷಣೆ ಎಲ್ಲವೂ ಬೆರಗು ಮೂಡಿಸುವಂತಹದ್ದು.
ಕೂತಕೂತಲ್ಲೆ ವಸ್ತುಗಳ ಸಂಗ್ರಹಿಸುವ ಛಾತಿ, ವಿಷಯವಸ್ತುವಿಗೆ ಜೀವ ಊಡಿಸುವ ಬಗೆ, ಕವಿತೆಗೆ ಜೀವಾಳವಾಗುವ ರೂಪಕಗಳನು ಹೊಂದಿಸುವ ವಿಚಕ್ಷಣೆ, ಸಂಕೇತ, ಪ್ರತಿಮೆಯ ತೋಡುವ ಅನನ್ಯತೆಯೆ ಬೆರೆಗು.

ಕಾಲಾಂತರಕ್ಕೊಂದು ಕನ್ನಡಿ ಕೃತಿಯು ಕಾವ್ಯಾಭ್ಯಾಸಿಗಳಲ್ಲಿ ಒಂದು ಶೋಧನೆ ಮತ್ತು ಪರಿವೀಕ್ಷಣೆಯನ್ನು ಹುಟ್ಟುಹಾಕುತ್ತಾ ಹೋಗುತ್ತದೆ ಎನಿಸುವುದು. ನಿತ್ಯ ಬದುಕಿನ ವಿದ್ಯಮಾನಗಳು, ಜೀವ ಸಜೀವಗಳ ಬುದ್ಧಿ ಭಾವಗಳನ್ನೆಲ್ಲಾ ಶೋಧಿಸಿ ಸೋಸುತ್ತಾ ಪರಿವೀಕ್ಷಣೆಗೆ ಒಳಪಡಿಸುವ, ಬದುಕಿನ ಕನಸು ಕಾಣ್ಕೆಗಳನ್ನು ಹೃದ್ಯ ಅನುಭವವನ್ನಾಗಿಸುವ ಕಾವ್ಯ ಶಿಲ್ಪವಿದು. ಇದು ಆತ್ಮಶೋಧನೆಯ ಮಾರ್ಗ. ಇಲ್ಲಿ ಬದುಕು ಮತ್ತು ಲೋಕದ ಕುರಿತಾದ ಹಲವು ನಿಕ್ಷೇಪಗಳ ದಿಕ್ಕುದಿಸೆಯ ಜಾಲಾಡಿದ ಆಳ, ಅರಿವು, ಹರಿವು, ಹರವಿನ ಸತ್ವಗಳು ಢಾಳಾಗಿವೆ. ಕಾವ್ಯಾಸಕ್ತ ಚಿತ್ತಗಳು ಅಭ್ಯಸಿಸಬೇಕಾದ ಪಠ್ಯ ಇವರು ಎಂದರೆ ಅತಿಶಯೋಕ್ತಿಯಾಗುವುದಿಲ್ಲ.
ಮೊದಲೆರಡು ಪದ್ಯಗಳು :
ದೈವಿಕತೆಗೆ ಮಣಿವುದು ಎಂದರೆ
ಹೂ ಇಡುವುದಲ್ಲ ಹೂವಾಗುವುದು
ಹಗುರ ಹಗುರ ಎಲ್ಲದರಿಂದ ಬಹು ಹಗುರ
ಎಷ್ಟು ಹಾರಾಡಿದರೂ ನೆಲ ಸೇರುವುದು
ಇಲ್ಲಿ ಬಾಡಿಹೋದ ಅಂತಃಕರಣವನ್ನು ಪೋಷಿಸಲಾಗುತ್ತದೆ. ಕಿತ್ತು ತಂದ ಹೂಗಳು ಅಂಟಿಕೊಂಡು ಕೂತಾಗ ಎಲೆಯಸಳೂ ಬೇರುಗಂಟಿಯೂ ಪಡುವ ನೋವು, ಹತಾಶೆ, ನಿರಾಸೆಯ ಸಂಗ್ರಹಿಸುವ, ಸಂಕಲಿಸುವ ಸೂಕ್ಷ್ಮಜ್ನತೆ, ಸಂಘರ್ಷ; ಸಂಕೀರ್ಣತೆಯ ತೀವ್ರ ಸಂವೇದನೆಗಳಿವೆ, ದಾರ್ಶನಿಕ ನೋಟಗಳಿವೆ.

ಹಗುರಾಗಿ ಹಾರಾಡಿ ಮತ್ತೆ ನೆಲ ಸೇರುವುದೇ ದೈವಿಕತೆಗೆ ಮಣಿಯುವುದೆನ್ನುವ ತಾತ್ಪರ್ಯಗಳಿಗೆ ಉಡಿಸುವ ನುಡಿಗಟ್ಟುಗಳು ಬಳಿವ ಪ್ರತಿಮೆಗಳು ರೂಪಕಗಳು ಹೊಸವಿನ್ಯಾಸದ ಶಿಲ್ಪಕಡತಗಳೆನಿಸುವವು.
ಕರುಳು ಮತ್ತು ಕಾಲದ ಉರುಳು
ಮುಖಾಮುಖಿಯಾಗಿ ಕೂತಾಗಲೆಲ್ಲ
ಅದೆಷ್ಟು ಪ್ರಶ್ನೆಗಳು ಉತ್ತರವಿರದೆ ತಬ್ಬಲಿಗಳಾದವು
ತಾಯಿ ಮತ್ತು ಕಂದನೊಟ್ಟಿಗಿನ ಸಣ್ಣ ಕಾಲದ ಚಲನೆಯೊಂದನ್ನು ಕಾಲಾಂತರಕ್ಕೊಂದು ಕನ್ನಡಿ ಎಂಬ ಪದ್ಯದಲಿ ಹಿಡಿದಿಟ್ಟ ಬಗೆ ವಿಶೇಷವಾದುದು. ಸಹಜ ದುಗುಡಗಳಲ್ಲೆ ಕಂದನ ಪ್ರತಿ ಹೆಜ್ಜೆಗಳ ಎಣಿಸುವವಳನು ಮತ್ತು ಕಾಲದೊಟ್ಟಿಗೆ ಬೆಳೆದುಬಿಡುವ ಮಗುವನ್ನೂ, ಆಗುವ ಬದಲಾವಣೆಗಳನ್ನೂ ಪ್ರಶ್ನೊತ್ತರಗಳ ನಡುವಿಟ್ಟು ತೂಗುವುದು ಚೆಂದವೆನಿಸುವುದು. ಕಡೆಗೆ ಪ್ರಶ್ನೆಗಳು ಹಲವು ಉತ್ತರಗಳಿಲ್ಲದ ಅನಾಥವಾಗುವುದನು ಒಪ್ಪಿಕೊಳ್ಳಬೇಕಾಗುವುದು.
ಅರವತ್ತಾರು ಪದ್ಯಗಳುಳ್ಳ ಈ ಸಂಕಲನದ ಓದು ಕಾವ್ಯದಾಹಕೆ ಅರವಟಿಗೆಯಾಗುವುದು.
- ಬಿ ವಸು (ಭಾಗ್ಯ)
