“ಕಲ್ಲು ಹೂವಿನ ನೆರಳು” ಅನಿಲಕುಮಾರ್ ಗುನ್ನಾಪೂರ್ ಅವರ ಮೊದಲ ಕಥಾ ಸಂಕಲನ. ಇದರಲ್ಲಿ 8 ಕಥೆಗಳಿವೆ. ಓದುಗನಿಗೆ ಯಾವುದೇ ಗೊಂದಲಗಳಾಗದೇ ಅರ್ಥಮಾಡಿಕೊಳ್ಳಲು ಸಹಕರಿಸುವ ಕಥೆಗಳ ವಿಷಯ ಶ್ಲಾಘನೀಯವಾಗಿದೆ- ಮಾಲಾ.ಮ.ಅಕ್ಕಿಶೆಟ್ಟಿ, ಮುಂದೆ ಓದಿ…
ಒಬ್ಬ ಸಾಮಾನ್ಯ ಓದುಗ ಅರಾಮಾಗಿ ಕಥೆಯ ಸಾರವನ್ನು ಗ್ರಹಿಸಬಹುದು. ಈ ಮಾತು ಯಾಕಂದ್ರೆ ಕೆಲ ಕಥೆಗಳು ಈ ರೀತಿ ಹೆಣೆಯಲ್ಪಟ್ಟಿರುತ್ತವೆಂದ್ರೆ, ಕಥೆ ಏನು, ವಿಷಯ ಎಲ್ಲಿಗೆ ಬಂತು, ಯಾಕೆ ಈ ತಿರುವು, ಕೊನೆಗೆ ಏನಾಯ್ತು ಅನ್ನೋದು ಗೊಂದಲವಾಗಿ ಅರ್ಥ ಬಹು ಕ್ಲಿಷ್ಟವಾಗಿ, ಹೀಗೆನಾ ಕಥೆ ಎಂದು ಸಾಹಿತ್ಯದ ಅಷ್ಟೊಂದು ಒಲವಿಲ್ಲದ ವೃಕ್ತಿ ಓದುವುದರಿಂದ ದೂರ ಸರಿಯಬಹುದು. ಕಥೆಯ ಹೆಣಿಕೆಯ ಯಂತ್ರ, ತಂತ್ರ (ಕುತಂತ್ರ) ಅದರ ಹೊಳಪಿಗೆ ಅವಶ್ಯವಾದರೂ ಅದು ಹೆಚ್ಚೇ ಆದರೆ ಅತೀ ಅತೀ ಸಾಮಾನ್ಯ ಓದುಗ ಅರ್ಥೈಸಿಕೊಳ್ಳಲಾರ. ಬರೆಯುವುದು ಅತೀ ಜ್ಞಾನಿಗಳಿಗಷ್ಟೇ ಅರ್ಥವಾಗೋಕಲ್ಲ. ಅದರಲ್ಲಿ ಸಾಮಾನ್ಯರದು ಪಾಲಿರುತ್ತದೆ. ಯಾವುದೇ ಬೆಸ್ಟ್ ಸೆಲ್ಲರ್ ಬುಕ್ ತಗೊಳ್ಳಿ, ಅದು ಸಾಮಾನ್ಯರನ್ನು ತಲುಪಿರುತ್ತೆ ಮತ್ತು ಅದರ ಪಾಪ್ಯುಲಾರಿಟಿಗೆ ಕಾರಣ. ಇಲ್ಲಾದರೆ ಕೆಲ ಕಥೆಗಳು ಓದುಗರನ್ನು ಉಲ್ಟಾ ನಿಲ್ಲಿಸಿ, ಸರ್ಕಸ್ ಮಾಡಿಸಿ, ಕೊನೆಗೂ ಅರ್ಥ ಆಗದ ಹಾಗೆ ಇರುತ್ತವೆ ಅಥವಾ ಅದು ಓದುಗನ ನಿರ್ಣಯಕ್ಕೆ ಬಿಟ್ಟ ವಿಷಯವಾಗಿರುತ್ತದೆ….. ತೀರಾ ದಣಿದು ಬಿಡುತ್ತಾನೆ ಓದುಗ. ಆದರೆ ಅನಿಲ್ ಅವರ ಯಾವ ಕಥೆಯೂ ದಣಿವಾಗುವಂತೆ ಮಾಡಲ್ಲ. ಗಂಭೀರ ವಿಷಯಗಳಿದ್ದರೂ ಸರಳ ಭಾಷೆ, ಕಥೆ, ನಿರೂಪಣೆ ಮತ್ತು ಅಲ್ಲಲ್ಲಿಯ ವರ್ಣನೆಗಳು ಓದುಗನನ್ನು ಆಕರ್ಷಿಸುತ್ತವೆ. ಎರಡು ಕಥೆಗಳನ್ನು ಬಿಟ್ಟು ಉಳಿದೆಲ್ಲಾ ಕಥೆಗಳಲ್ಲಿ ಮಕ್ಕಳೇ ಭೂಮಿಕೆಯಲ್ಲಿರುವುದು ವಿಶೇಷ.

ನಾನು ಇಷ್ಟಪಟ್ಟಿದ್ದು “ಗುಲ್ ಮೊಹರ್ ಹುಡುಗ”, “ಕಮಲಜ್ಜಿ”, ಮತ್ತು “ಶ್ಯಾರಿಯ ಗಲ್ಲಾ ಡೆಬ್ಬಿ”. ಇವುಗಳಲ್ಲಿಯ ಮುಗ್ಧ ಕಥೆ ಮುಗ್ಧ ಮನಸ್ಸನ್ನು ತನ್ನೆಡೆಗೆ ಸೆಳೆಯುತ್ತದೆ. ಆರ್ಥಿಕ ಸಂಕಷ್ಟದಿಂದ ಇನ್ನೊಂದು ಮಗು ಈಗಲೇ ಬೇಡವೆಂದು ಗಂಡನಿಂದ ದೂರವಿರಲು ಪ್ರಯತ್ನಿಸುವ ಹೆಂಡತಿ, “ಅದನ್ನು” ಬಳಸಿ ಎಂದು ಗಂಡನಿಗೆ ಹೇಳಿದರೂ ಆತ ತರದಿದ್ದಾಗ, ಆಕೆಯೂ ಪ್ರಯತ್ನಿಸಿ ಸೋತಾಗ, ಕೊನೆಗೆ ಬೇಡಾದದ್ದೇ ದೇವರು ಅನುಗ್ರಹಿಸಿದ್ದು, “ಅದನ್ನು” ತಿಪ್ಪೆಗೆ ಎಸೆಯುವುದು ಮತ್ತು ಚಿಕ್ಕ ಹುಡುಗನ ಪ್ರಾಮಾಣಿಕತೆ ತುಂಬಾ ಮನ ಕಲುಕುತ್ತದೆ “ಗುಲ್ಮೋಹರ್ ಹುಡುಗ” ಕಥೆಯಲ್ಲಿ.
“ಕಮಲಜ್ಜಿ” ಕಥೆಯಲ್ಲಿ ನಗರದಲ್ಲಿ ದುಡಿಯುವ ಮಗ ಹಳ್ಳಿಗೆ ಬಂದು ಅವ್ವಳ ಆರೈಕೆಗಾಗಿ ದುಡ್ಡೆಲ್ಲಾ ಖರ್ಚಾಗಿ, ಕೊನೆಗೆ ನಗರಕ್ಕೆ ಮರಳಲು ದುಡ್ಡಿಲ್ಲದಾಗ ಅವ್ವಳಲ್ಲಿದ್ದ ತುಸು ಹಣ ಪ್ರಯಾಣಕ್ಕೆ ಉಪಯೋಗವಾಗುವುದು ಹೃದಯಕ್ಕೆ ನಿರಾಳತೆಯನ್ನು ಒದಗಿಸುತ್ತದೆ.
” ಶ್ಯಾರಿಯ ಗಲ್ಲಾ ಡೆಬ್ಬಿ”ಯಲ್ಲಿ ಶ್ಯಾರಿ ತನ್ನ ವಿದ್ಯಾಭ್ಯಾಸಕ್ಕೆ ಕಬ್ಬಿನ ಹೊಲದಲ್ಲಿ ದುಡಿದ ಹಣವನ್ನು ಡಬ್ಬಿಯಲ್ಲಿ ಕೂಡಿಟ್ಟಿದ್ದನ್ನು ಇನ್ನೇನು ಕುಡುಕ ಅಪ್ಪ ಉಪಯೋಗಿಸಬಹುದು ಮತ್ತು ತಾಯಿ ದೈಹಿಕ ವಾಂಛೆ ತೀರಿಸಿಕೊಳ್ಳಲು ದಾರಿತಪ್ಪುವಳೋ ಎಂದು ಓದುಗ ಯೋಚಿಸುತ್ತಿರುವಾಗ ಕಥೆ ಅನಿರೀಕ್ಷಿತ ತಿರುವು ಪಡೆದು ಶ್ಯಾರಿಯ ಮಾನಭಂಗವಾಗಿ ಡೆಬ್ಬಿ ಸುರಕ್ಷಿತವಾಗಿ ಉಳಿಯುವುದು ನೋವನ್ನುಂಟು ಮಾಡುತ್ತದೆ.
ಚಿನ್ಮಯ್ ಮಾನಸಿಕ ರೋಗಿಯಾಗಿ ಪಾಲಕರಿಗೆ ತಲೆನೋವಾಗಿದ್ದು, ವಯಸ್ಸಿಗೆ ತಕ್ಕ ದೇಹದ ಬೆಳವಣಿಗೆಯಿಂದ ದೈಹಿಕ ತೃಪ್ತಿಯನ್ನು ವಿಧವೆ ಆಳಿನಿಂದ ಗೊತ್ತಿಲ್ಲದ ಮನಸ್ಥಿತಿಯಲ್ಲಿ ಪಡೆದದ್ದು, ಪಾಲಕರಿಗೆ ಮಗ ಇನ್ನೂ ಹೊರೆಯಾಗುವುದು ಗೋಚರಿಸುತ್ತದೆ “ಚಿನ್ಮಯ ನಿಲಯ”ಕಥೆಯಲ್ಲಿ.

“ಕಲ್ಲು ಹೂವಿನ ನೆರಳು” ಪುಸ್ತಕ ಲೇಖಕರು ಅನಿಲಕುಮಾರ್ ಗುನ್ನಾಪೂರ್
“ಅವನಿ” ಕಾಡು ಮತ್ತು ಕಾಫಿ ಎಸ್ಟೇಟ್ ಸುತ್ತ ಹೆಣೆದ ಕಥೆ. ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಹಿಡಿಯಲು ಪ್ರಯತ್ನಿಸುತ್ತಿರುವಾಗ ಹುಲಿಯ ಫೋಟೋ ತೆಗೆದು ಕೊಳ್ಳಬೇಕೆಂದು ಕಥೆಗಾರನ ಗೆಳೆಯನ ಹುಚ್ಚು. ಕೊನೆಗೂ ಅದರಲ್ಲಿ ಸಫಲ ಆಗೋದೇ ಇಲ್ಲ. ಅಜ್ಜಿ ಎಲ್ಲಾ ಚಿಂತೆ ಬಿಟ್ಟು ಅವನಿ ಧಾರಾವಾಹಿ ಬಗ್ಗೆ ಯೋಚಿಸುವುದು, ಕಥೆಗಾರ ಹೆದರಿ ಮರದ ಮೇಲೆ ಕುಳಿತಿರುವಾಗ, ಗೆಳೆಯ “ಫೋಟೋ ತೆಗೆದೆಯಾ” ಎನ್ನುವುದು ಮತ್ತು ಎಷ್ಟು ಕಷ್ಟಪಟ್ಟು ಹೆದರಿಕೊಂಡು ಫೋಟೋ ತೆಗೆಯಲು ಪ್ರಯತ್ನಿಸಿದಾಗ ಬರೀ ಹುಲಿಯ ಬಾಲವಷ್ಟೇ ಫೋಟೋದಲ್ಲಿರುವುದು ತುಂಬಾ ನಗಿಸುವಂತೆ ಮಾಡಿದವು.
‘ಪಮ್ಮಿ’ ಅಪ್ಪನ ಪ್ರೀತಿಯಿಂದ ವಂಚಿತಳಾಗಿ ತಾಯಿಯ ಸುಪರ್ದಿಯಲ್ಲಿ ಬೆಳೆದ ಮಗು. ಗಂಡ ಬಿಟ್ಟವಳನ್ನು ಸಮಾಜ ಹೇಗೆ ಟೀಕಿಸುತ್ತದೆ ಎನ್ನುವುದು ಮತ್ತು ಆಕೆಯನ್ನು ಪರ ಗಂಡಸು ಉಪಯೋಗಿಸಲು ಯತ್ನಿಸುವುದು “ಪರಿಮಳ” ಕಥೆಯಲ್ಲಿ ಸ್ಪಷ್ಟವಾಗುತ್ತದೆ. ತಾಯಿಗೆ ತೊಂದರೆ ಕೊಡುವ ಗಂಡಸಿನ ದುಡ್ಡಿನ ಚಾಕ್ಲೇಟನ್ನು ಪಮ್ಮಿ ಎಸೆಯುವುದು ಆಕೆಯ ಪ್ರತಿಭಟನೆಯನ್ನು ತೋರಿಸುತ್ತದೆ. “ಹುಚ್ಚಯ್ಯನ ಲೀಲೆ” ಕಥೆ, ಚನ್ನಪ್ಪ ನಲ್ಲಿಯ ಬದಲಾವಣೆ ಲೌಕಿಕದಿಂದ ಅಲೌಕಿಕಕ್ಕೆ ಎಳೆದೊಯ್ಯುತ್ತದೆ. ಬುದ್ಧ ಮಹಾವೀರರಲ್ಲಿದ್ದ ರಿನೋಲ್ಸಮೆಂಟನ್ನು ಚನ್ನಪ್ಪನಲ್ಲಿ ಕಾಣಬಹುದು.
ಚುಕ್ಕಿ ತನ್ನ ತಂಗಿ ಹುಟ್ಟಿದ್ದರಿಂದ ಪಾಲಕರ ಪ್ರೀತಿ ಕಡಿಮೆಯಾಗಿದೆ ಎಂದು ತಿಳಿದು ತಂಗಿಯನ್ನು ದೂಷಿಸುತ್ತಿರುವಾಗ ಅದರಿಂದ ಹೊರಬರಲು ತಾಯಿ, ಯುವರಾಣಿಗೆ ಹೋಲಿಸಿ ಕಥೆ ಹೇಳುತ್ತಾಳೆ. ಕಥೆ ಮುಂದುವರಿಯುತ್ತಾ ಹೋದಂತೆ ತಾಯಿ ತನ್ನದೇ ಕಥೆಯನ್ನು ಹೇಳುವುದು, ತನ್ನಲ್ಲಿಯೇ ಹುದುಗಿದ್ದ ಭೂತಕಾಲದ ದಿನಗಳ ಸತ್ಯ ಹೊರಹಾಕುವುದು “ಚುಕ್ಕಿ ಕೇಳಿದ ಕಥೆ”. ವಯಸ್ಕರಷ್ಟೇ ಅರ್ಥಮಾಡಿಕೊಳ್ಳುವ ವಿವರಣೆಯನ್ನು ಚುಕ್ಕಿ ನಿಜವಾಗಲೂ ಅರ್ಥಮಾಡಿಕೊಳ್ಳುತ್ತಾಳಾ ಅನ್ನೋದು ಸಂಶಯ. ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಕೆಲವು ವಿಷಯಗಳು ನಿಷಿದ್ಧ ಅನ್ನೋದು ನನ್ನ ಅಭಿಪ್ರಾಯ.
ಒಟ್ಟಿನಲ್ಲಿ ಎಲ್ಲ ಕಥೆಗಳನ್ನು ನಿರಾಳವಾಗಿ ಆನಂದಿಸಬಹುದು. ಒಳ್ಳೆಯ ಕಥಾಸಂಕಲನ ಹೊರತಂದ Mudiraja Banad ಸರ್ಗೆ ಮತ್ತು ಕಥೆಗಾರ ಅನಿಲ್ ಗುನ್ನಾಪೂರ ಅವರಿಗೆ ಅಭಿನಂದನೆಗಳು.
- ಮಾಲಾ.ಮ.ಅಕ್ಕಿಶೆಟ್ಟಿ (ವಿಮರ್ಶಕರು, ಲೇಖಕರು) ಬೆಳಗಾವಿ.
