ಕುಟುಂಬಕ್ಕೆ ಹಿರಿ ಮಗಳಾದ ಮಾತ್ರಕ್ಕೆ ಮನೆಯೆಲ್ಲ ಜವಾಬ್ದಾರಿಗಳು ಬಿದ್ದವು. ತಮ್ಮ, ತಂಗಿ ಮುಂದೆ ನೋಡಿಕೊಳ್ಳುತ್ತಾರೆ ಎನ್ನುತ್ತಾ ಆಸೆಯಲ್ಲಿ ಬೆಂಕಿಯಲ್ಲಿ ಅರಳಿದ ಹೂವಿನ ಕತೆ. ವಾಣಿ ಕನ್ನಡತಿ ಅವರು ಬರೆದಿರುವ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ಅಪ್ಪನಿಗೆ ಬರುವ ಆದಾಯ ಅಮ್ಮನ ಔಷಧಿಗೆ ಸಾಕಾಗುತ್ತಿಲ್ಲ. ಇರುವುದೆಲ್ಲ ಮಾರಿದ್ದು ಆಯ್ತು ಕೊನೆಗೂ ಅಮ್ಮನನ್ನು ಉಳಿಸಿಕೊಳ್ಳಲಾಗದೆ ನಮ್ಮನ್ನೆಲ್ಲ ಬಿಟ್ಟು ಅಗಲಿದಳು ಹೆತ್ತವಳು. ಅಪ್ಪ, ಅಮ್ಮ ಹೋದ ಚಿಂತೆಯಲ್ಲಿ ಕೆಲಸ ಬಿಟ್ಟು ಮನೆಯಲ್ಲಿ ಕೂತರು. ಮನೆಯ ಮೊದಲ ಮಗಳು ಓದುವುದನ್ನು ಅರ್ಧಕ್ಕೆ ಬಿಟ್ಟು, ಇಬ್ಬರು ತಂಗಿ, ತಮ್ಮನಿಗಾಗಿ ದುಡಿಯಲು ಹೊರಟೆ.
ಒಂದು ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಸೇರಿಕೊಂಡೆ. ಹೆಣ್ಣನ್ನು ನೋಡೇ ಇಲ್ಲ ಬಿಟ್ಟಕಣ್ಣು ಬಿಟ್ಟಂತೆ ಕೆಕ್ಕರಸಿ ನೋಡುವ ಗಂಡಸರು, ಕಣ್ಣಲ್ಲೇ ಕಾಮುಕತೆಯ ವಿಕೃತ ಮನಸುಗಳು. ಸಣ್ಣ ಸಣ್ಣ ತಪ್ಪಿಗೂ ಸಿಡಿಮಿಡಿಗೊಳ್ಳುವ ಬಾಸ್.
ಮನೆಯಲ್ಲೂ ಕೆಲಸ. ತಂಗಿಯರು ಯಾವಾಗ್ಲೂ ಓದು ಓದು ಅಂತ ಪುಸ್ತಕ ಹಿಡಿದು ಕುಳಿತುಬಿಡುತ್ತಿದ್ದರು. ಬಟ್ಟೆ ಹೊಗೆಯುವುದು, ಪಾತ್ರೆ ತಿಕ್ಕುವುದು, ಅಡುಗೆ ಮಾಡಿ ಬಡಿಸುವುದು ಹೀಗೆ ಕೆಲವು ವರ್ಷಗಳು ಉರುಳಿತು. ನನಗಾಗಿ ಯಾವ ಹಣವನ್ನು ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಇಟ್ಟಿರಲಿಲ್ಲ. ನನ್ನ ತಂಗಿ ತಮ್ಮ ನನಗಾಗುವರು ಮುಂದಿನ ದಿನಗಳಲ್ಲಿ ಎಂದು ಅಚಲವಾಗಿ ನಂಬಿದ್ದೆ. ಈ ನಡುವೆ ಅಪ್ಪ ಕುಡಿಯಲು ಹಣ ಬೇಕು ಎಂದು ನನ್ನ ಹಿಂದೆ ದುಂಬಾಲು ಬೀಳುತ್ತಿದ್ದರು? ಸಾಕಾಗಿ ಹೋಗುತ್ತಿತ್ತು ಈ ಜೀವನ. ನನ್ನ ಆಸೆ, ಆಕಾಂಕ್ಷೆಗಳನ್ನು ಮರೆತೇ ನೋಡು ನೋಡುತ್ತಾ ನನಗೆ 35 ವರ್ಷ ತಂಗಿಗೆ ದೊಡ್ಡ ಹುದ್ದೆ ಸಿಕ್ಕಿತು ಎಂದೂ ಬೆಂಗಳೂರಿಗೆ ಹೋಗಿ ಅಲ್ಲೇ ಒಂದು ಹುಡುಗನನ್ನು ಪ್ರೀತಿಸಿ ನನಗು ಒಂದು ಮಾತು ಹೇಳದೆ ಮದುವೆಯು ಆಗಿ ಬಿಟ್ಟಳು.
ತಮ್ಮ ಚನ್ನಾಗಿ ಓದಿ ಸಾಕುವ ಎಂದು ನಿಟ್ಟುಸಿರು ಬಿಟ್ಟೆ.ಆದರೆ ಅವನು ತಂಗಿಯಂತೆ ಬೆಂಗಳೂರಿಗೆ ಸೇರಿಕೊಂಡ ಶ್ರೀಮಂತರ ಮನೆಯ ಅಳಿಯ ನನಗೆ ಅಕ್ಕ ಎಂದು ಹೇಳಿಕೊಳ್ಳಲು ಅವನು ಇಷ್ಟ ಪಡೆದಷ್ಟು ಬೇಡವಾಗಿದ್ದೆ. ಇನ್ನೊಬ್ಬಳು ತಂಗಿ ಪಕ್ಕದ ಊರಿನ ಹುಡುಗನ ಜೊತೆಗೆ ಪ್ರೀತಿ ಆಗಿ ಮದುವೆ ಆಗುವ ಮೊದಲೇ ಇವಳ ಕೈಗೆ ಮಗುವನ್ನು ಕೊಟ್ಟು ಹೊರಟಿದ್ದ. ತಾಯಿಯ ಸ್ಥಾನದಲ್ಲಿ ನಿಂತು ಹೋರಾಡಿ ಮದುವೆ ಮಾಡಿಸಿದೆ ಪ್ರೀತಿಸಿದವನ ಜೊತೆಯಲ್ಲಿ. ಇದ್ದಬದ್ದ ಹಣವನ್ನೆಲ್ಲಾ ಅವಳಿಗೆ ಕೊಟ್ಟು.
ಸ್ವಲ್ಪ ನಿಟ್ಟುಸಿರು ಬಿಟ್ಟೆ ತಂಗಿ ಸುಖವಾಗಿ ಬಾಳಲಿ ಎಂದು….
ಅಪ್ಪ ಕುಡಿದು ಕುಡಿದು ಆರೋಗ್ಯದಲ್ಲಿ ಏರುಪೇರಾಗಿ ಒಂದು ದಿನ ನಮ್ಮನ್ನೆಲ್ಲ ಬಿಟ್ಟು ಅಗಲಿದ.
ವಯಸ್ಸು 50 ಬಿಳಿ ಕೂದಲು ಅಣಕಿಸುತ್ತಿದೆ. ಒಂಟಿ ಬದುಕು ಮದುವೆ ಆಗುವ ವಯಸ್ಸು ಮೀರಿದೆ. ಆಸೆ ಭಾವಗಳು ಸತ್ತುಹೋಗಿದೆ. ಇಂದು ಒಡಹುಟ್ಟಿದವರಿಗೆ ಅವರ ಜೀವನ ಅವರಿಗೆ ಮುಖ್ಯ! ನಾನು ಹೀಗೆ ಯೋಚನೆ ಮಾಡಿದ್ದಿದ್ದರೆ…..? ಇವರು ಇಂದು ಓದಿ ಉತ್ತಮ ಬಾಳನ್ನು ಬಾಳಲು ಸಾಧ್ಯವಾಗುತ್ತಿರಲಿಲ್ಲವೇನೋ……? ದೀಪದಂತೆ ಊರಿದೆ ಈ ಮನೆಗೆ ಕೊನೆಗೆ ನಾನೇ ಕರಗಿ ಹೋದೆ. ನನ್ನ ವಯಸ್ಸಿನ ಸರಿಸಮಾನರನ್ನು ನೋಡಿ ನನಗೂ ಆಸೆ ಆಗುವುದು ನಾನು ಅವರಂತೆ ಗಂಡ ಮಕ್ಕಳ ಜೊತೆ ಬಾಳಬೇಕು ಎಂದು ಆದರೆ ಕಂಕಣ ಭಾಗ್ಯ ನನಗೆ ಕೂಡಿ ಬರಲೇ ಇಲ್ಲ? ಯಾರೂ ಮುಂದೆ ಬರಲಿಲ್ಲ ನನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು. ಕನ್ನಡಿಯ ಮುಂದೆ ನಿಂತು ನೋಡಿದೆ ಹರೆಯದಲ್ಲಿ ನಿನ್ನ ಬಗ್ಗೆ ನೀನು ಯೋಚಿಸಲಿಲ್ಲ ನಿನ್ನ ಒಳ್ಳೆಯತನ ತ್ಯಾಗ ಇಂದು ನಿನಗೆ ಮುಳ್ಳಿನ ಹೆಜ್ಜೆಯಾಗಿದೆ.
ನಾನು ದೊಡ್ಡವಳು ಒಪ್ಪಿಕೊಳ್ಳುತ್ತೇನೆ. ಆದರೆ, ನನ್ನ ತಂಗಿ ತಮ್ಮ ಬದುಕು ಕಟ್ಟಿಕೊಂಡಂತೆ ನನಗೂ ಬದುಕು ಕಟ್ಟಿಕೊಳ್ಳುವ ಆಸೆ ಇರುವುದಿಲ್ಲವೇ?… ಚಿಕ್ಕವರಾದ ನನ್ನ ತಮ್ಮ ತಂಗಿಯರಿಗೆ ಒಂದು ಬಾರಿಯೂ ಅನಿಸಲಿಲ್ಲವೇ……? ನನಗೂ ಒಂದು ಬದುಕನ್ನು ಕಟ್ಟಿ ಕೊಡಬೇಕೆಂದು ಒಂದು ಬಾರಿಯೂ ನನ್ನ ಕಷ್ಟ ಸುಖಗಳನ್ನು ಕೇಳಲಿಲ್ಲ ನನ್ನ ಜೀವನವನ್ನು ತ್ಯಾಗ ಮಾಡಿದ್ದು ನನ್ನವರಿಗಾಗಿ ನಿಜವಾಗಲೂ ಇವರು ನನ್ನವರೇ…..? ಸ್ವಾರ್ಥದ ಜಗತ್ತಿನಲ್ಲಿ ನಿಸ್ವಾರ್ಥ ಬೆತ್ತಲಾಗುವುದು ಇವರನ್ನು ನೋಡಿ ತಿಳಿದುಕೊಂಡೆ. ಬದುಕು ಕಲಿಸಿದ ಪಾಠ ಯಾವ ಶಾಲೆಯಲ್ಲೂ ಕಲಿಯಲು ಸಿಗುವುದಿಲ್ಲ ಇನ್ನು ಮದುವೆ ಆಗುವ ಆಸೆ ಇಲ್ಲ ಒಂದು ಅನಾಥಾಶ್ರಮವನ್ನು ಸೇರಿಕೊಂಡು ಅನಾಥರಿಗೆ ಸೇವೆ ಮಾಡಬೇಕೆಂದು ತೀರ್ಮಾನ ಮಾಡಿರುವೆ
ಸರಿ ಅಲ್ವಾ ನನ್ನ ನಿರ್ಧಾರ……?
ಇಂತಿ ನಾನು ಧರಿತ್ರಿ
- ವಾಣಿ ಕನ್ನಡತಿ