ಹೂಲಿಯ ಅತಿ ಹಳೆಯ ಲಿಖಿತ ದಾಖಲೆ ಕುರಿತು ಗುರು ಕುಲಕರ್ಣಿ ಅವರು “ಹರನ ಕೊರಳ ಹೂಮಾಲೆ- ಹೂಲಿ” ಅಂಕಣದ ಮೂಲಕ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ತಪ್ಪದೆ ಮುಂದೆ ಓದಿ…
ಹೂಲಿಯಲ್ಲಿ ೧೯೬೯ನೇ ಇಸ್ವಿಯಲ್ಲಿ ದೊರೆತ ಚಾಲುಕ್ಯರ ಮಂಗಳೇಶನ ತಾಮ್ರಶಾಸನವೇ ಹೂಲಿಗೆ ಸಂಬಂಧಿಸಿದ ಹಳೆಯ ಲಿಖಿತ ದಾಖಲೆ. ಹೂಲಿಯಲ್ಲಿರುವ ಎಲ್ಲ ಕಲ್ಬರಹಗಳು ಹತ್ತನೆ ಶತಮಾನ ಅಥವಾ ನಂತರದವು. ಈ ತಾಮ್ರಶಾಸನ ಸುಮಾರು ಕ್ರಿ.ಶ ೬೦೦ನೇ ಇಸ್ವಿಯದು.. ಅಂದರೆ ಉಳಿದ ಬರಹಗಳಿಗಿಂತ ಮೂರು-ನಾಲ್ಕು ಶತಮಾನ ಹಳೆಯದು.
ಸಧ್ಯ ಈ ತಾಮ್ರಶಾಸನ ಧಾರವಾಡ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿವೆ. (ನಾನು ವಿಚಾರಿಸಿದಾಗ ಸಂಸ್ಥೆಯ ಮುಖ್ಯಸ್ಥರು ಅಲ್ಲಿಲ್ಲ ಎಂದಿದ್ದರು, ಇನ್ನೊಮ್ಮೆ ವಿಚಾರಿಸಬೇಕು- ಗುರು).
ಶಾಸನದಲ್ಲಿ ಚಾಲುಕ್ಯರ ಮಂಗಳೇಶನ (ಶಾಸನ ‘ಚಾಲಿಕ್ಯ’ ವಂಶದ ‘ಮಂಗಳರಾಜ’ ಎಂದಿದೆ) ಆಳ್ವಿಕೆಯಲ್ಲಿ, ಅವನ ಸಾಮಂತನಾಗಿದ್ದ ಸೇಂದ್ರಕ ವಂಶದ ರವಿಶಕ್ತಿಯು ಕಿರುವಟ್ಟಗೆರೆಯ ೫೦ ನಿವರ್ತನ ಭೂಮಿಯನ್ನು ಶಾಂತಿನಾಥ ಬಸದಿಗಾಗಿ ದಾನ ಮಾಡಿದ್ದನ್ನು ದಾಖಲಿಸಲಾಗಿದೆ. ದಾನವನ್ನು ಪರಲೂರು ಸಂಘದ ಜೈನಗುರುಗಳಾದ ಶ್ರೀ ನಂದಿಯ ಶಿಷ್ಯ ಅಭಯನಂದಿ ಸ್ವೀಕರಿಸಿದ್ದನು.
ಶಾಸನದಲ್ಲಿ ಉಲ್ಲೇಖಿಸಿದ ‘ಕಿರುವಟ್ಟಗೆರೆ’ಯು ಇಂದಿನ ಹೂಲಿಯ ಭಾಗವಾಗಿದೆ, ಪರಲೂರು ಎಂಬುದು ಇಂದಿನ ಬಾಗಲಕೋಟ ಜಿಲ್ಲೆಯ ಹಳ್ಳೂರು ಆಗಿದೆ.
ಶಾಸನವನ್ನು ಮೂರು ತಾಮ್ರದ ಹಾಳೆಗಳಲ್ಲಿ ಬರೆಯಲಾಗಿದೆ – ಮೊದಲ ಮತ್ತು ಮೂರನೆ ಹಾಳೆಗಳಲ್ಲಿ ಒಂದೇ ಬದಿಯಲ್ಲಿ , ಎರಡನೆ ಹಾಳೆಯ ಎರಡೂ ಬದಿಯಲ್ಲಿ ಬರೆಯಲಾಗಿದೆ. ಹಾಳೆಗಳನ್ನು ಒಂದು ಉಂಗುರಿನಲ್ಲಿ ಹಾಕಿ, ಸೇಂದ್ರಕರ ಮರಿಯೊಂದಿಗಿರುವ ಹುಲಿ (‘ಸ-ವತ್ಸ ವ್ಯಾಘ್ರ’) ಲಾಂಛನದಿಂದ ಮುಚ್ಚಲಾಗಿದೆ. ಶಾಸನವು ಸಂಸ್ಕೃತ ನುಡಿ, ಕನ್ನಡ ಲಿಪಿಯಲ್ಲಿದೆ.
ಚಿತ್ರ ಕೃಪೆ ಮತ್ತು ಹೆಚ್ಚಿನ ಮಾಹಿತಿಗೆ ಎಪಿಗ್ರಾಫಿಯಾ ಇಂಡಿಕಾ -ಸಂಪುಟ ೩೮, ಶಾಸನ ಸಂ: ೪೯/ಪುಟ ೨೮೬) -https://archive.org/details/in.ernet.dli.2015.532805/page/n423/mode/1up?q=%22Huli+Plates+of+Mangalaraja%22.
ಗುರು ಕುಲಕರ್ಣಿ – ಧಾರವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿದ ಲೇಖಕರು, ಓದಿದ್ದು ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಈಗ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಜೊತೆಗೆ ಹವ್ಯಾಸಿ ಬರಹಗಾರರಾಗಿದ್ದು, ಪತ್ರಿಕೆಗಳಲ್ಲಿ ಲಲಿತ ಪ್ರಬಂಧಗಳು, ಸಣ್ಣ ಕಥೆಗಳು ಪ್ರಕಟವಾಗಿವೆ. “ದನಿಪಯಣ” ಎಂಬ ಊರು-ನಾಡುಗಳ ಇತಿಹಾಸ ತಿಳಿಸುವ ಪಾಡ್‌ಕಾಸ್ಟ್‌ನ ಕರ್ತೃ ಕೂಡಾ ಆಗಿದ್ದಾರೆ.
ತಮ್ಮ ತಾಯಿಯ ತವರೂರು ಸವದತ್ತಿ ತಾಲೂಕಿನ ಹೂಲಿಯ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿ – ಪ್ರಕಟವಾಗಿರುವ ಪತ್ರಿಕಾ ವರದಿಗಳು, ಪಂಡಿತರ ಬರಹಗಳು, ಜೊತೆಗೆ ತಮ್ಮದೇ ಬರಹಗಳನ್ನು ಸೇರಿಸಿ, ಎಲ್ಲವನ್ನೂ ಒಂದೇ ಕಡೆಗೆ ಸಿಗುವಂತೆ ಮಾಡಲು ತಮ್ಮ ಬಂಧು ಶ್ರೀ ನಿತಿನ್ ಕುಲಕರ್ಣಿ ಜೊತೆಗೆ ಸೇರಿ https://poovalli.blogspot.com/ ಬ್ಲಾಗ್ ನಡೆಸುತ್ತಿದ್ದಾರೆ.
- ಗುರು ಕುಲಕರ್ಣಿ