ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ “ಹಣಗೆರೆ ಕಟ್ಟಿ” ಎಂಬ ಗ್ರಾಮದಲ್ಲಿ ಹಜರತ್ ಸಯದ್ ಸಾದತ್ ದರ್ಗಾ ಮತ್ತು ಭೂತರಾಯ ಹಾಗೂ ಚೌಡೇಶ್ವರಿ ಅಮ್ಮನವರ ದೇವಾಲಯ ಇರುವುದು ಒಂದೇ ಸೂರಿನಡಿಯಲ್ಲಿವೆ. ಹಿಂದೂ – ಮುಸ್ಲಿಂ ಭಾವೈಕ್ಯತೆಯ ತಾಣ “ಹಣಗೆರೆ ಕಟ್ಟಿ” ಕುರಿತು ಟಿ.ಶಿವಕುಮಾರ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ಹಿಂದೂ –ಮುಸ್ಲಿಂ ಎಂದರೆ ಎಣ್ಣೆ ಸಿಗೇಕಾಯಿ ಇದ್ದಂತೆ. ಅದರಲ್ಲೂ ದೇವಸ್ಥಾನವೂ ದರ್ಗಾ ಹತ್ತಿರ ಇದ್ದರೆ ಮುಗಿದೇ ಹೋಯಿತು. ದಿನನಿತ್ಯ ಈ ಹಿಂದೂ ಮುಸ್ಲಿಂ ಗಲಾಟೆ ತಪ್ಪಿದ್ದಲ್ಲ. ಆದರೆ ಇದಕ್ಕೆ ವಿರುದ್ದವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ “ಹಣಗೆರೆ ಕಟ್ಟಿ” ಎಂಬ ಗ್ರಾಮದಲ್ಲಿ ಹಜರತ್ ಸಯದ್ ಸಾದತ್ ದರ್ಗಾ ಮತ್ತು ಭೂತರಾಯ ಹಾಗೂ ಚೌಡೇಶ್ವರಿ ಅಮ್ಮನವರ ದೇವಾಲಯ ಇರುವುದು ಒಂದೇ ಸೂರಿನಡಿಯಲ್ಲಿ. ಇಲ್ಲಿಗೆ ಬರುವ ಎಲ್ಲಾ ಹಿಂದೂ –ಮುಸ್ಲಿಂ ಭಕ್ತಾದಿಗಳಲ್ಲಿ ಭೇದ-ಭಾವ ಕಾಣುವುದಿಲ್ಲ. ಕಷ್ಠ-ದುಃಖ ನೋವುಗಳನ್ನು ಹೊತ್ತು ಬರುವ ಭಕ್ತ ಸಮೂಹಕ್ಕೆ ಈ ದೇವಸ್ಥಾನ ನೆಮ್ಮದಿಯ ನಿಟ್ಟುಸಿರು ಬಿಡುವ ಬೀಡಾಗಿದ್ದು ಜೊತೆಗೆ ಭಾವೈಕ್ಯತೆಯ ಸಂಗಮ ಸ್ಥಾನವಾಗಿದೆ.
ಭಾವೈಕ್ಯತೆಯ ಸಂಗಮಸ್ಥಾನವಾಗಿರುವ ಈ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಬೇಕೆಂಬ ಬಯಕೆ ಸಹಜವಾಗಿಯೇ ಇಲ್ಲಿಗೆ ಬರುವ ಎಲ್ಲರಲ್ಲೂ ಮೂಡಿಬರುತ್ತದೆ. ಮೊದಲ ಬಾರಿಗೆ ಈ ದೇವಸ್ಥಾನಕ್ಕೆ ಬೇಟಿಕೊಟ್ಟ ಭಕ್ತರಿಗೆ ಇದು ಮುಸ್ಲಿಂರ ಮಸೀದಿ ಇರಬಹುದು ಅನ್ನಿಸುತ್ತದೆ.
ಹೌದು!? ಹೊರಗಿನಿಂದ ನೋಡಿದರೆ ಮಸೀದಿ ತರನೇ ಕಾಣುತ್ತದೆ. ಹಾಗೇ ಒಳ ನಡೆದರೆ ಮಾತ್ರ ಹಿಂದೂ ಮತ್ತು ಮುಸ್ಲಿಂ ದೇವರುಗಳ ದರ್ಶನ ಭಾಗ್ಯ ಲಭ್ಯವಾಗುತ್ತದೆ. ಎಡಕ್ಕೆ ನೋಡಿದರೆ ಭೂತರಾಯ ಹಾಗೂ ಬಲಕ್ಕೆ ಚೌಡೇಶ್ವರಿ ದೇವಿ ಕಾಣಸಿಗುತ್ತಾರೆ.
ಇಲ್ಲಿಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮುಕೂರು,ಬಳ್ಳಾರಿ, ಹಾವೇರಿ ಭಾಗಗಳಿಂದ ಹಾಗೂ ಇತರೇ ರಾಜ್ಯಗಳ ಪ್ರದೇಶಗಳಿಂದ ಭಕ್ತರು ಬರುತ್ತಾರೆ. ಅಮವಾಸ್ಯೆ,ಹುಣ್ಣಿಮೆ ದಿನಗಳಂದು ಭಕ್ತರ ಸಂಖ್ಯ ಹೆಚ್ಚಿರುತ್ತದೆ.
ಹಜರತ್ ಸಯದ್ ಸಾದತ್‍ರವರ ದರ್ಶನಕ್ಕೆ ಎಷ್ಟು ಜನ ಭಕ್ತರು ಬರುತ್ತಾರೋ ಅದರ 10 ಪಟ್ಟು ಹಿಂದೂ ಭಕ್ತಾಧಿಗಳು ಭೂತರಾಯ ಹಾಗೂ ಚೌಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಬರುತ್ತಾರೆ. ಇಲ್ಲಿಗೆ ಬರುವ ಭಕ್ತಾಧಿಗಳು ದೇವರ ಮುಂದೆ ತಮ್ಮ ಕಷ್ಠಗಳನ್ನು ಬಗೆಹರಿಸಲೆಂದು ಮೊರೆ ಹೋಗುತ್ತಾರೆ. ಇಷ್ಟಾರ್ಥ ಬಗೆಹರಿದರೆ ದೇವರಿಗೆ ತಮ್ಮ ಹರಕೆಗಳನ್ನು ಒಪ್ಪಿಸುತ್ತಾರೆ. ಅಲ್ಲದೇ ಹೆಚ್ಚಿನ ಭಕ್ತಾಧಿಗಳು ಕುರಿ-ಕೋಳಿಗಳನ್ನು ಮತ್ತೆ ಕೆಲವರು ದವಸ-ಧಾನ್ಯಗಳನ್ನು ಹರಕೆಯಾಗಿ ಒಪ್ಪಿಸಿದರೆ, ಇನ್ನು ಕೆಲವರು ತಮ್ಮ ಹರಕೆ ಈಡೇರಲಿ ಎಂದು ದೇವಸ್ಥಾನದ ಒಳಗಡೆ ಇರುವ ಮರಕ್ಕೆ ಮೊಳೆ ಮತ್ತು ಚೇಟಿಯನ್ನು ಕಟ್ಟಿ ಹಾಕಿ ಹರಕೆ ಮಾಡಿಕೊಳ್ಳುತ್ತಾರೆ. ಇಲ್ಲಿಗೆ ಬರುವ ಭಕ್ತಾಧಿಗಳು ಹೆಚ್ಚಾಗಿ ಮಾಂಸಹಾರಿ ಭಕ್ತಾಧಿಗಳು ಎಂದರೇ ತಪ್ಪಾಗಲಾರದು. ಅಂದರೇ ಕೋಳಿ ಕುರಿಗಳನ್ನು ಹರಕೆಯಾಗಿ ಒಪ್ಪಿಸುವ ಭಕ್ತರು ಎಂದರ್ಥ.
ಅಲ್ಲಿಯೇ ಅಡುಗೆ ಮಾಡಿ ದೇವಸ್ಥಾನಕ್ಕೆ ಬಂದವರಿಗೆ ಉಣಬಡಿಸುತ್ತಾರೆ. ಇದು ಹಿಂದೂ ಮುಸ್ಲಿಂರ ನಡಿವಿನ ಭಾವೈಕ್ಯತೆಯ ಸಂಕೇತ.
ಈ ರೀತಿಯ ಅನೇಕ ದೇವಾಲಯಗಳು ಇವೆ ಆದರೆ ಅವುಗಳ ಸುತ್ತಾ-ಮುತ್ತ ಕೋಮುಭಾವನೆ ಸುಳಿದಾಡತೊಡಗಿವೆ. ಆದರೆ ಹಿಂದೂ-ಮುಸ್ಲಿಂರನ್ನು ಒಂದು ಮಾಡುವ “ಹಣಗೆರೆಕಟ್ಟಿ” ನಿಜಕ್ಕೂ ಅಪರೂಪದ ಧಾರ್ಮಿಕ ಕೇಂದ್ರವೆಂದರೆ ತಪ್ಪಾಗಲಾರದು.
ಇಲ್ಲಿ ತಂಗಲು ರೂಮ್‍ಗಳ ಹೋಟೆಲ್‍ಗಳ ವ್ಯವಸ್ಥೆ ಇದೆ ಈ ಭಾವೈಕ್ಯತೆ ಕೇಂದ್ರವೆoನಿಸಿಕೊಂಡಿರುವ ಹಣಗೆರೆಕಟ್ಟೆ ನಿಜಕ್ಕೂ ಒಂದು ಪ್ರವಾಸಿ ತಾಣವಾಗಿದೆ ಬನ್ನಿ ನೀವು ಒಮ್ಮೆ ಭೇಟಿ ನೀಡಿ ಈ ಭಾವೈಕ್ಯತೆಯ ತಾಣಕ್ಕೆ.
- ಟಿ.ಶಿವಕುಮಾರ್ – ಶಿಕ್ಷಕರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಳೇಶ್ವರ, ತಾ. ಹಾನಗಲ್ಲ ಜಿ. ಹಾವೇರಿ.