ಎಲ್ಲರ ಕಣ್ಮನ ಸೆಳೆಯುವ ರಾಜ್ಯ ನಮ್ಮದು….ಸುಂದರ ನಯನ ಮನೋಹರ ತಾಣವಿದು…ಸರೋಜಾದೇವಿ ನಿನ್ನೆಕರ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಇತಿಹಾಸದ ಪುಟಗಳಲಿ ಇಣುಕಿ ನೋಡು
ನಮ್ಮ ಕನ್ನಡ ನಾಡು ವೈಭವದ ಗೂಡು
ವೀರ ಧೀರರು ಆಳಿದ ಹಿರಿಮೆಯ ನಾಡು
ಸಾಹಿತ್ಯ ಕಲೆ ಸಂಸ್ಕೃತಿಗಳ ನೆಲೆ ಬೀಡು..
ಹಸಿರಿನ ಹಂದರ ಸಹ್ಯಾದ್ರಿ ಘಟ್ಟದ ಸಾಲಿದೆ
ಮಲೆನಾಡಿನ ಐಸಿರಿಯ ಸುಂದರ ಸೊಬಗಿದೆ
ರಮಣೀಯ ರಮ್ಯ ದೃಶ್ಯ ಕೈಬೀಸಿ ಕರೆದಿದೆ
ಕೃಷ್ಣ ಕಾವೇರಿ ತುಂಗೆ ಗೋದಾವರಿ ಹರೆದಿದೆ..
ಎಲ್ಲರ ಕಣ್ಮನ ಸೆಳೆಯುವ ರಾಜ್ಯ ನಮ್ಮದು
ಸುಂದರ ನಯನ ಮನೋಹರ ತಾಣವಿದು
ಶಿಲ್ಪಕಲಾ ವೈಭವದ ಆಕರ್ಷಣೆಯ ಗೂಡಿದು
ವಿಶ್ವ ಪರಂಪರೆ ತಾಣಕೆ ಪ್ರಸಿದ್ಧಿಯಾಗಿಹುದು..
ವನ್ಯ ಜೀವಿ ಪಕ್ಷಿ ಧಾಮಗಳ ಆಗರ
ಧುಮ್ಮಿಕ್ಕುವ ಜಲಪಾತಗಳ ತವರೂರ
ಕಂಗಳ ತಣಿಸುವ ನಿಸರ್ಗದ ಕಡಲ ತೀರ
ಗಿರಿಧಾಮ ಗಿರಿಶ್ರೇಣಿಗಳ ಚೆಲುವಿನ ಚಿತ್ತಾರ..
- ಸರೋಜಾದೇವಿ ನಿನ್ನೆಕರ್