ರಶ್ಮಿಪ್ರಸಾದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ಏಕೋ ಒಮ್ಮೊಮ್ಮೆ ಹೀಗೇ..
ಏನೂ ಹೇಳತೀರದ ಬೇಗೆ..
ಮನದಂಗಳದ ತುಂಬಾ
ಕವಿದ ಕತ್ತಲೆಯ ಕಾರ್ಮೋಡ
ಬಿಗಿತ ಬಿಚ್ಚಿಡದ ಅಯೋಮಯ.!
ಚಿತ್ತವ ಸುಡುವ ಚಿಂತೆಯ
ಮನ ಕಳವಳಗೊಂಡಂತೆ
ನಿರಾಸಕ್ತಿಯ ನಿರುತ್ಸಾಹದಿ
ಮನ ನಿರ್ಲಿಪ್ತವಾದಂತೆ
ಹುಡುಕಿದರೆಲ್ಲಾ ಶೂನ್ಯದತಿರುಳು.!
ಮಾತು,ಪ್ರೀತಿ,ಒಲುಮೆ
ಯಾವುದೇ ಅತಿಯಾದರೂ
ಅಮೃತವೂ ವಿಷವಾದಂತೆ
ಮೌನವೆಲ್ಲ ಮನಚುಚ್ಚಿದ
ನೀರವಬೇಗೆಯು ಆವರಿಸಿದಂತೆ.!
ಪಡೆದುಕೊಂಡೆವೆಂಬ ನಲಿವಿಗಿಂತ
ಕಳೆದುಕೊಂಡೆವೆಂಬ ನೋವೇ ಹಿತದಂತೆ
ಜೊತೆಗಿದ್ದು ಚಡಪಡಿಸುವುದಕಿಂತ
ಬಿಟ್ಟುಹೋದ ನೆನಪುಗಳೇ ಮಧುರಭಾವದಂತೆ.!!
ಬದುಕೆಂಬುದು ನಿತ್ಯವೂ ಹೀಗೆ
ಪ್ರಶ್ನೆಯಾಗಿ ಕಾಡುವ ನಡಿಗೆ
ಉತ್ತರಿಸಿದರೆ ನಿಗೂಢ ತಾಣ.!
ನಾವೇ ಉತ್ತರವಾಗಿ ನಡೆದರೆ
ಸವಾಲುಗಳ ಗೊಂದಲ ಯಾನ.!!
- ರಶ್ಮಿಪ್ರಸಾದ್.(ರಾಶಿ)