ಬಸ್ಸಿನಲ್ಲಿ ಕೂತಾಗ ಪಕ್ಕದಲ್ಲಿ ಹೋಗುತ್ತಿದ್ದ ಸೈಕಲ್ ಸವಾರನ ನೋಡಿ ನಾನು ಸೈಕಲ್ ಕಲಿತ ಬ್ರಹ್ಮ ವಿದ್ಯೆ ನೆನಪಿಗೆ ಬಂದಿತು. ಹರಿಹರ ಬಿ ಆರ್ ಅವರ ನೆನಪಿನಂಗಳದಲ್ಲಿ ಹಳೆಯ ನೆನಪುಗಳು. ತಪ್ಪದೆ ಮುಂದೆ ಓದಿ…
೧೯೭೭ರಲ್ಲಿ ನಾನು ಚಿಕ್ಕ ಹುಡುಗನಿದ್ದಾಗ ಅಪ್ಪ ಹೇಳಿದ ಮಾತುಗಳನ್ಮು ಕೇಳ್ತಿದ್ದೆ. ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಅವರ ಬಳಿ ಸೈಕಲ್ ಇತ್ತು ಅದನ್ನು ತಳ್ಳಿಕೊಂಡು ಓಡಾಡುತ್ತಿದ್ದೆ. ಇದನ್ನು ಕಂಡ ಅಪ್ಪ ಎಲ್ಲಿ ಸೈಕಲ್ ಹಾಳಾಗುವುದೋ ಎಂದು ಯೋಚಿಸುತ್ತಾ ನನಗೆ ಬೈದರು. ಆದರೆ ಅವರ ಬೈಗುಳದಿಂದ ನನಗೇನೂ ಅರ್ಥ ಆಗಲಿಲ್ಲ ಮತ್ತು ನನಗೆ ಸೈಕಲ್ ಕಲಿಯುವ ಆಸೆ ಬಹಳಷ್ಟಿತ್ತು.
ಸ್ವಲ್ಪ ಹೊತ್ತಿನ ನಂತರ ಅಪ್ಪ ಬೈದರಲ್ಲಾ ಏನಾದರಾಗಲಿ ಎಂದು ಮತ್ತೆ ಅವರ ಬಳಿ ಹೋಗಿ ಧೈನ್ಯದಿಂದ “ನಿಮ್ಮ ಸೈಕಲ್ ತೆಗೆದುಕೊಂಡು ಹೋಗಲಾ?” ಎಂದು ಕೇಳಿದೆ.
“ನಿನಗೆ ಸೈಕಲ್ ತುಳಿಯಕ್ಕೆ ಬರತ್ತಾ? ತಗೊಂಡು ಹೋಗು ಇಲ್ಲಾಂದರೆ ಸುಮ್ಮನಿರು” ಎಂದು ಹೇಳಿದರು.
ಇರುವ ವಿಷಯ ತಿಳಿಸಿ “ಹೇಳ್ಕೊಡಿ ಅಪ್ಪ. ನಾನು ಕಲ್ತು ಓಡಿಸ್ತೀನಿ” ಎಂದೆ. “ಹೇ ಹೋಗೋ ನನಗೆ ವಿಶ್ರಾಂತಿ ಬೇಕು” ಎಂದು ಹೇಳಿ ಗದರಿದರು. ಅಪ್ಪನಿಗೆ ಗುರುವಾರ ಅರ್ಧ ದಿನ ರಜೆ ಹಾಗೂ ಭಾನುವಾರ ರಜಾ ಇದ್ದುದರಿಂದ ವಿಶ್ರಾಂತಿಗಾಗಿ ಮೀಸಲಿಡುತ್ತಿದ್ದರು. ನನಗೋ ಸೈಕಲ್ ಕಲಿಯುವ ಇಚ್ಚೆ. ಮತ್ತೆ ಮತ್ತೆ ಅಪ್ಪನನ್ನು ಕೇಳಿ ತಲೆ ತಿನ್ನತೊಡಗಿದೆ. ನನ್ನ ಆಸಕ್ತಿಯನ್ನು ಗಮನಿಸಿ ಬಾಡಿಗೆ ಸೈಕಲ್ ಪಡೆದು ಕಲಿಯಲು ಹೇಳಿದರು. ಪ್ರತಿ ದಿನವೂ ಅಪ್ಪನಿಂದ ದುಡ್ಡು ಪಡೆದು ಅರ್ಧಗಂಟೆ ಸೈಕಲ್ ಕಲಿಯಲು ಹೋಗುತ್ತಿದ್ದೆ.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಮೊದಲನೇ ದಿನ ಅಪ್ಪನಂತೆ ದೊಡ್ಡ ಸೈಕಲ್ ಪಡೆದು ತಳ್ಳುತ್ತಿರುವ ಅವಸ್ಥೆಯನ್ನು ಕಂಡು ಯಜಮಾನಪ್ಪ (ಒಳ್ಳೆಯವರಿದ್ದರು) “ಅಯವನ್ನು ನಿಯಂತ್ರಿಸುವ ಹಿಡಿತಗಳ ಮೇಲೆ ಎರಡೂ ಕೈಗಳಿಂದ ಹಿಡಿದುಕೋ ಈ ಆಸನದ ಕೆಳಗೆ ಇರುವ ತ್ರಿಕೋನಾಕಾರದ ಕಂಬಿಯ ಒಳಗಡೆಯಿಂದ ಬಲಗಾಲು ತೂರಿಸಿ ಓಡಿಸಲು ಪ್ರಯತ್ನಿಸು” ಎಂದು ಹೇಳಿ ಅವರ ಕೆಲಸ ಮಾಡುತ್ತಿದ್ದರು. ಸ್ನೇಹಿತರೆಲ್ಲ ಇದ್ದರೂ ಯಜಮಾನರನ್ನೇ ಕೇಳುತ್ತಿರುವುದು ಅವರಿಗೆಲ್ಲ ಮುಜುಗರವೆನಿಸಿ ಏನೂ ಹೇಳಿಕೊಡದೇ “ಹೋಗು ಯಜಮನರ ಹತ್ರಾನೇ ಕೇಳು. ಹೋಗಪ್ಪಾ ಹೋಗು.” ಎನ್ನುತ್ತಿದ್ದರು. ನನ್ನ ಮನಸ್ಸಿನಲ್ಲೇನಿತ್ತು ಎಂದರೆ ನನ್ನಂತೆ ಎಲ್ಲರೂ ಕಲಿಯುತ್ತಿದ್ದಾರೆ ಯಜಮಾನರು ಅನೇಕ ಗಾಡಿಗಳನ್ನು ಆಯುಧಗಳಿಂದ ಸರಿಪಡಿಸುತ್ತಿರುವವರೇ ನಿಜವಾದ ಗುರು ಎಂದು ಭಾವಿಸಿ ಅವರೊಬ್ಬರ ಸಲಹೆಯನ್ನೇ ಕೇಳುತ್ತಿದ್ದೆ.
ಓಡಿಸಲು ಪ್ರಾರಂಭಿಸುವಾಗ ಮತ್ತೊಮ್ಮೆ ಯಜಮಾನರೇ “ಆಕಡೆ ಮೈದಾನ ಇದೆಯಲ್ಲ ಅಲ್ಲಿ ಮಾತ್ರ ನೀನು ಕಲಿಯೋ ತನಕ ಓಡಿಸು” ಎಂದು ಹೇಳಿದ ಮೇಲೆ ಅಲ್ಲಿಯ ತನಕ ತಳ್ಳಿಕೊಂಡು ಹೋಗಿ ಮೈದಾನದಲ್ಲಿ ಅವರು ಹೇಳಿಕೊಟ್ಟಂತೆ ಬಲಗಾಲಿಟ್ಟು ಎಡಗಾಲಿನಿಂದ ತಳ್ಳುತ್ತಾ ತಳ್ಳುತ್ತಾ ಕಾಲೆಲ್ಲ ತಗುಲಿಸಿಕೊಂಡು ಗಾಯ ಮಾಡಿಕೊಳ್ಳುತ್ತಾ ಹೊಗುತ್ತಿದ್ದೆ. ಆನಂತರ ಒಂದು ವಾರದಲ್ಲೇ ಕಾಲು ತೂರಿಸಿಕೊಂಡೇ ಓಡಿಸಲು ಕಲಿತೆ. ಮತ್ತೆ ಹಾಗೆ ಮಾಡುವಾಗ ಯಜಮಾನರು ಬಂದು ಸೈಕಲ್ ಹಿಡಿದು ನನಗೆ ಹತ್ತಿ ಕೂಡಲು ಹೇಳಿ “ಈಗ ತುಳಿ” ಎಂದರು. ನನಗೆ ಭಯವಾಯಿತು. “ಈಗ ನೀವು ಸೈಕಲ್ ಹಿಡಿದುಕೊಂಡು ಹೋಗಲು ಹೇಳಿದಿರಿ. ಹೇಗೆ ಇಳೀಬೇಕು?” ಎಂದು ಕೇಳಿದೆ.
“ಎತ್ತರದ ಕಲ್ಲಿನ ಬದಿಗೆ ಹೋಗು. ಕಾಲಿಡು. ಹತ್ತು ಇಳಿ ಅಷ್ಟೇ” ಎಂದಾಗ ಅವರ ಉತ್ತರದಿಂದ ಖುಷಿಯಾಯಿತು. “ಈಗ ರಸ್ತೆಯಲ್ಲಿ ಓಡಿಸಲಾ?” ಎಂದು ಕೇಳಿದೆ.
“ನೀನು ಸೈಕಲ್ ಹೇಗೆ ಓಡಿಸ್ತೀಯಾ ಅಂತ ಗೊತ್ತಿಲ್ಲ. ಇನ್ನೂ ಒಂದು ವಾರ ಮೈದಾನದಲ್ಲೇ ಕಲಿ” ಎಂದರು. ಅವರು ಹೇಳಿದಂತೆಯೇ ಮಾಡಿ ಎದ್ದು ಬಿದ್ದು ಕಲಿತೆ. ಇನ್ನು ಆಯ ಮಾಡುವುದು ಸರಿಯಾಗಿ ಬಂದಿರಲಿಲ್ಲ. ಕಾರಣ ಯಜಮಾನ ಹೇಳಿದಂತೆ ನೇರವಾಗಿ ಓಡಿಸಲು ಹೇಳಿದ್ದರೂ ಇನ್ನೂ ಅಡ್ಡಾ ದಿಡ್ಡಿಯಾಗಿ ಓಡಿಸುತ್ತಿದ್ದೆ.
ವಾರದ ನಂತರ (ಆಗೆಲ್ಲ ಕಡಿಮೆ ಸಂಚಾರವಿತ್ತು) ರಸ್ತೆಯಲ್ಲಿ ಓಡಿಸಲು ಮತ್ತು ಎಡಬದಿಯಲ್ಲೇ ಸೈಕಲ್ ಓಡಿಸಲು ಹೇಳಿದರು. ಯಜಮಾನರು ಹೇಳಿದಂತೆ ರಸ್ತೆಯಲ್ಲಿ ತುಳಿಯಲು ಪ್ರಾರಂಭಿಸಿದೆ. ಎಡ ತಿರುವು ಬಂತು ತಗ್ಗಾದ ರಸ್ತೆ ನಾನು ತುಳಿಯದಿದ್ದರೂ ವೇಗವಾಗಿ ಓಡುತ್ತಿತ್ತು. ಎಡ ಮತ್ತು ಬಲಗೈಯಿಂದ ಎಷ್ಟು ತಡೆಹಿಡಿದರೂ ಅಗಲೇ ಇಲ್ಲ. ಬೇರೆ ವಿಧಾನವೆಂದರೆ ಕಾಲು ಕೊಟ್ಟು ಕೊಟ್ಟು ನಿಧಾನ ಮಾಡುವುದು ಗೊತ್ತಿರಲಿಲ್ಲ. ಸದ್ಯ ಎದುರು ಗೋಡೆಯೊಂದಿತ್ತು. ಪಾದಚಾರಿಯ ಕಟ್ಟೆ ಮೇಲೆ ಜಿಗಿದು ನನ್ನನ್ನು ಮುಂಚೆಯೇ ಬೀಳಿಸಿ ಎದುರಿದ್ದ ಗೋಡೆಗೆ ಸೈಕಲ್ ಬಡಿದು ಬಿತ್ತು. ನಂತರ ಯಜಮಾನರ ಹತ್ತಿರ ಹೋಗಿ ತನಗಾದ ವಿಷಯ ತಿಳಿಸಿದೆ. ಅವರು ಕೋಪದಿಂದ “ಇದರ ಬ್ರೇಕ್ ಸರಿಯಿರಲಿಲ್ಲ. ನನ್ನನ್ನು ಕೇಳದೇ ನೀನೇ ತೆಗೆದುಕೊಂಡು ಹೋದೆಯಲ್ಲೋ. ಒಂದು ಮಾತು ಕೇಳುವುದು ಬೇಡವಾ? ನೋಡು ಆಕಡೆ ಇಟ್ಟಿರೋ ಸೈಕಲ್ ಎಲ್ಲ ಕೆಟ್ಟಿದೆ ರಿಪೇರಿ ಆಗ್ಬೇಕು. ಸದ್ಯ ನಿನಗೇನಾಗಲಿಲ್ಲವಾ? ಸ್ವಲ್ಪ ತರಚಿದ ಗಾಯ ಮುಟ್ಟಿ ನೋಡಿಕೊಂಡು ” ಏನಾಗಿಲ್ಲ” ಎಂದೆ. ಏಕೆಂದರೆ ಸೈಕಲ್ ಅಂದರೆ ನನಗೆ ಇಷ್ಟವಿತ್ತು. ಯಜಮಾನರು ಕೊಡದಿದ್ದರೆ ಕಷ್ಟ ಎಂದು ಯೋಚಿಸಿ ಸುಳ್ಳು ಹೇಳಿದ್ದೆ.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಅಂತೂ ಇಂತೂ ಸೈಕಲ್ ಕಲಿತ ಮೇಲೆ ಅಪ್ಪನಿಗೆ ಅವರ ಸೈಕಲ್ ಎತ್ತರಕ್ಕಿತ್ತು ಕಾಲು ತೂರಿಸಿ ತುಳಿದು ತೋರಿಸಿದೆ. ಇನ್ನೊಮ್ಮೆ ಆಸನದ ಮೇಲೂ ಪಕ್ಕದಲ್ಲಿದ್ದ ಎತ್ತರದ ಕಲ್ಲಿನ ಸಹಾಯದಿಂದ ಹತ್ತಿ ತುಳಿದು ಮತ್ತೆ ಎತ್ತರದ ಕಲ್ಲಿನ ಬಳಿಗೆ ಬಂದಿಳಿದು ಸೈಕಲ್ ಹಿಡಿದುಕೊಂಡೇ ಅಪ್ಪನ ಬಳಿ ಹೋದೆ. “ಒಳ್ಳೆಯ ಕೆಲಸ ಮಾಡಿದೆ ಇನ್ನೂ ಚೆನ್ನಾಗಿ ಓಡಿಸುವಂತಾಗಬೇಕು.” ಎಂದು ಹೇಳಿ ಇನ್ನು ಅವರ ಸೈಕಲ್ಲನ್ನು ಉಪಯೋಗಿಸಲು ಹೇಳಿದರು. ಅಂದಿನಿಂದ ಅಪ್ಪನ ಸೈಕಲ್ ತಗೊಂಡು ಹತ್ತಿರದ ಅಂಗಡಿಗಳಿಗೆ ಹೋಗಿ ಬರುತ್ತಿದ್ದೆ. ಒಮ್ಮೆ ಏನಾಯಿತು ಅಂದರೆ ನಾನು ಸೈಕಲ್ ಮೇಲೆ ಹೊಗುತ್ತಿರುವಾಗ ನನ್ನ ಸ್ನೇಹಿತ ಸಿಕ್ಕಿ ‘ಹಾಯ್’ ಎಂದು ಹೇಳಿದ. ಖುಷಿಯಾಗಿ ಒಂದು ಕೈ ಎತ್ತಿ ಪ್ರತಿಯಾಗಿ ಹೇಳುವಷ್ಟರಲ್ಲಿ ಹಿಡಿತ ಅಲ್ಲಾಡಿ ಮುಂದೆ ಹೋಗುತ್ತಿದ್ದವರ ಹಿಂದಿನಿಂದ ಎರಡು ಕಾಲಿನ ಮಧ್ಯೆ ಹೋದೆ. ಸೈಕಲ್ ಬಿತ್ತು. ನಾನೂ ಬಿದ್ದೆ. ಕೋಪದಿಂದ ತಿರುಗಿದವರು ಸನ್ನಿವೇಶ ನೋಡಿದರು. ನಾನು ಬಿದ್ದ ಹಾಗೇ ಇದ್ದು ಎಲ್ಲಿ ಬಯ್ಯುವರೋ ಎಂದು ಅವರ ಮುಖ ನೋಡುತ್ತಿದ್ದಾಗ, ನನ್ನ ಗಾಬರಿಯ ಮೂತಿ ನೋಡಿ ಕೈ ಹಿಡಿದೆಬ್ಬಿಸಿ ಬುದ್ಧಿ ಮಾತು ಹೇಳಿದರು. ದೇವರ ಹಾಗೆ ಅವರು ಬಂದು ಬಿದ್ದ ಸೈಕಲ್ಲನ್ನು ನಿಲ್ಲಿಸಿ ನನ್ನ ಕೈಯಲ್ಲಿ ಹಿಡಿದುಕೊಳ್ಳಲು ಹೇಳಿ “ಚಾಲಿಸುತ್ತಿರುವಾಗ ಅಲ್ಲಿ ಇಲ್ಲಿ ನೋಡಬೇಡ. ರಸ್ತೆಯ ಕಡೆಗೇ ಗಮನ ಇರಲಿ” ಎಂದು ಹೇಳಿಕೊಟ್ಟಾಗ ಇದೊಂದು ಪಾಠವೆಂದು ಅವರಿಗೆ ಕೈಗಳಿಂದಲೇ ‘ನಮಸ್ತೆ’ ಹೇಳಿ ಮತ್ತೆ ಸೈಕಲ್ ಹತ್ತಿ ಹೊರಟೆ.
ಸ್ವಲ್ಪ ದಿನಗಳ ನಂತರ ಬಸ್ಸಿನಲ್ಲಿ ಅಮ್ಮನ ಜೊತೆಯಲ್ಲಿ ಎಲ್ಲೋ ಹೋಗುತ್ತಿರುವಾಗ ನನ್ನ ಗಮನವೆಲ್ಲ ಸೈಕಲ್ ಮೇಲೇ ಇತ್ತು. ಕೆಲವರು ಹಿಡಿತಗಳ ಮೇಲೆಲ್ಲ ದೊಡ್ಡ ಚೀಲಗಳಲ್ಲಿ ಪದಾರ್ಥಗಳನ್ನು ಸಾಗಿಸುತ್ತಿದ್ದರು. ಇನ್ನು ಕೆಲವರು ಮನುಷ್ಯ ಸೈಕಲ್ ಮೇಲೆ ಕುಳಿತುಕೊಂಡರೆ ಮನುಷ್ಯನ ತಲೆಗೂ ಎತ್ತರಕ್ಕೆ ಹಿಂದುಗಡೆ ಏನೋ ಕಟ್ಟಿಕೊಂಡು ಓಡಿಸುತ್ತಿದ್ದರು. ಅವರೆಲ್ಲರೂ ಪಾದಚಾರಿ ಕಡೆಯೇ ಎಡಗಡೆಯಲ್ಲೇ ಓಡಿಸುತ್ತಿದ್ದರು. ಶಿಸ್ತಿಗೆ ಮಹತ್ವ ಕೊಡುತ್ತಿದ್ದ ಆ ದಿನಗಳ ನೆನೆದರೆ ಇಂದಿಗಿಂತ ಅಂದೇನೇ ಚೆಂದವು ಎಂದು ಹಲವಾರು ಬಾರಿ ಅನಿಸಿದ್ದುಂಟು.
- ಹರಿಹರ ಬಿ ಆರ್