ಅಂವ ಯಾವಾಗ ತೆರಳಿದನೋ ಕಾಣೆ ಮತ್ತೆ ಕಣ್ತುಂಬಿಕೊಳುವ ಉತ್ಕಟತೆಯ ಜ್ವಲಿಸಿ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಈ ಸುಂದರವನ್ನು ತಪ್ಪದೆ ಮುಂದೆ ಓದಿ…
ಬಂದವರಾರೋ ಕಾಣೆನಲ್ಲ
ಅಂದು ಮಿಂಚಿ ಮಾಯವಾದ
ತನ್ನ ಚಿತ್ತಚೋರನಿರಬಹುದೆ
ಕುದುರೆಯ ಖುರಪುಟಕೂ
ಅದೇ…. ಥೇಟ್ ಅದೇ ಲಯ
ನನಗೆ ಚೆನ್ನಾಗಿ ನೆನಪಿದೆ
ಏಕಾಂತದಲಿ ತಾನು ನೀರಾಟವಾಡಿರಲು
ನದೀ ತಟದಲ್ಲಿ ಪ್ರತಿಸೂರ್ಯ
ರನ್ನ ಮಕುಟವೂ ದರ್ಪಣದ ಹೊಳಪೂ…
ಸಮ್ಮಿಳಿತ ತೇಜ:ಪುಂಜ…
ಇವನ್ಯಾರೇ ..ಪ್ರಶ್ನಿಸಲು ಸಖಿಯೂ ಇಲ್ಲ
ದಂಗಾದೆ ಪ್ರತಿಷ್ಠಾಪಿತ ಶಿಲಾಮೂರ್ತಿಯಂತೆ
ಬಳಿ ಸಾರಿದವನ ತನುವಿನಿಂದ
ಪಾರಿಜಾತ ಗಂಧ ಹೊಮ್ಮಿ
ಮೋಹಕ ಪರವಶತೆಯಲ್ಲಿ ನನ್ನನೇ ಮರೆತೆ
ಅಂವ ಯಾವಾಗ ತೆರಳಿದನೋ ಕಾಣೆ
ಮತ್ತೆ ಕಣ್ತುಂಬಿಕೊಳುವ
ಉತ್ಕಟತೆಯ ಜ್ವಲಿಸಿ
ವಿರಹತಾಪದಲಿ ಕಾವಳವೂ
ಕಣೆಯಾಗಿ ಇರಿಯಿತು
ಉಪಶಮನದ ಬಗೆ ತಿಳಿಯದಾದೆ
ಇಂದಾರು ಬಂದರು ಅದೇ ಕುದುರೆಯನೇರಿ
ಹರಿಯದಿರು ಓ ಹೂಬಳ್ಳಿ ನನ್ನ ಭಾರಕೆ
ನಿಲುಕಬೇಕಿದೆ ದಿಟ್ಟಿ ಹರಿವ ದೂರಕೆ
ಕಾಣಲು
ಅದೇ ಮುಖವ ಮತ್ತೊಮ್ಮೆ….!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
