ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೬)

ರವಿ ಅವತರಿಸಿದ ಪವಿತ್ರದಿನವನ್ನು ರಥಸಪ್ತಮಿ ಎನ್ನಲಾಗುತ್ತದೆ. ಏಳು ಕುದುರೆಗಳನ್ನು ಕಟ್ಟಿದ ಸ್ವರ್ಣರಥವೇರಿ ಬರುವನಿವನು. ಭಾನುವಿನಾದಿಯಾಗಿ ಆರಂಭವಾಗುವ ವಾರದ ದಿನಗಳಲ್ಲಿ ಇವನೇ ಪ್ರಥಮ. ರಥಸಪ್ತಮಿಯ ವಿಶೇಷತೆಯ ಕುರಿತು ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಬೆಳಗಾಗೆದ್ದು ಜಾನಪದರು’ ದಲ್ಲಿ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ… 

“ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳುಜೀರಿಗೆ ಬೆಳೆಯೋಳ /ಭೂಮ್ತಾಯ
ಎದ್ದೊಂದು ಗಳಿಗೆ ನೆನೆದೇನಾ”//

ಎಂದು ತಮಗೆ ಅನ್ನ, ಬದುಕು ಕೊಡುವ ಭೂಮಿ ತಾಯಿಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ‘ಬೆಳಗಾಗುವುದು’ ಎಂದರೆ ದೈನಂದಿನ ಎಲ್ಲಾ ಚಟುವಟಿಕೆಗಳಿಗೆ ‘ಶ್ರೀಕಾರ’ ಹಾಕುವುದು. ಜಗತ್ತು ಕತ್ತಲೆಯ ಮುಸುಕನ್ನು ಕಿತ್ತೆಸೆದು, ದೈನಂದಿನ ಚಟುವಟಿಕೆಗೆ‌ ತೊಡಗುವುದು. ಅಂದರೆ ಜಗದ ಜೀವಿಗಳನ್ನು ಜಾಗೃತಗೊಳಿಸುವುದು.

ಇಡೀ ಭೂಮಿಯ ಚಟುವಟಿಕೆಗಳಲ್ಲಿ ಸಂಚಲನ ಮೂಡಿಸುವ ಈ ಭಾಸ್ಕರ ‘ಬೆಳಕಿನ ಪ್ರಭು’. ಇವನೇ ನಮ್ಮ ಬದುಕನ್ನು ನಿಯಂತ್ರಿಸುವ ನವಗ್ರಹಗಳ ಶಕ್ತಿ ಕೇಂದ್ರ. ಮಳೆಗಾಲದಲ್ಲಿ ಸುದೀರ್ಘ ಕಾಲ‌ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಇವನ ಕಿರಣ ಭೂಮಿಗೆ ತಾಗದೆ ಸಸ್ಯಗಳು ಹೇಗೆ ಕೊಳೆತು ನಾರುತ್ತವೆ ಎಂಬುದು‌ ಇವನ ಶಕ್ತಿಗೆ ಉದಾಹರಣೆ. ನೆನೆದ ಕಾಳು ಇವನ ಕಿರಣದ ಬಿಸುಪು ಸೋಕದೆ ಮೊಳಕೆಯೊಡೆಯಲಾರದೆಂಬುದೂ ಅಷ್ಟೇ ಸತ್ಯ. ಬೆಳಕಿಲ್ಲದ ಈ ಕಾಲದ ಬವಣೆಯ ಬದುಕು ಹೇಗಿರುತ್ತದೆಂಬುದನ್ನು ಮಲೆನಾಡಿಗರನ್ನು ಕೇಳಿಯೇ ತಿಳಿಯಬೇಕು.

ಹೆಪ್ಪುಗಟ್ಟಿದ ಚಳಿ, ಬೆಂಕಿಯ ಬಿಸಿಯಿಲ್ಲದೆ, ಬೆಚ್ಚನೆಯ ಉಡುಪುಗಳು, ಒಣಗದ ಬಟ್ಟೆಗಳು, ಎಲ್ಲೆಲ್ಲಿ ನೋಡಿದರೂ ಫಂಗಸ್, ಮನೆಯೊಳಗೆ ಗಬ್ಬುವಾಸನೆ, ಹೊರಗೇ ಹೋಗಬಿಡದೆ‌ ಮನೆಯೊಳಗೂ ಇರಲಾರದಂತೆ,  ‘ಸಮಯ’ವನ್ನೇ ಕಬಳಿಸಿ ಬಿಡುವ ಹಗಲು…ಬೆಚ್ಚನೆಯ ಉಡುಪುಗಳಿಲ್ಲದೆ ಹೊರಗೆ ಕಾಲಿಡಲಾರದ ಅಸಹಾಯಕತೆ…ಇಲ್ಲಿ ‘ಹಗಲು’ ಸೂರ್ಯನ ಅಂಕುಶದಲ್ಲಿ‌ ಪರಾಧೀನವಾಗಿ ಬಿಡುತ್ತದೆ.

ಆಗ ‘ಬಾನಲ್ಲಿ‌ ಮೊಗದೋರಿ ನಗೆಬೀರಿ ಬರುವ’ ಸೂರ್ಯನೇ‌ ಪ್ರತ್ಯಕ್ಷ ಭಗವಂತನಂತೆ‌‌ ಕಂಗೊಳಿಸುತ್ತಾನೆ. ಅಭಯ ಪ್ರದಾನ ಮಾಡುತ್ತಾನೆ.
*
ಬೆಳಿಗ್ಗೆ ಎದ್ದೊಡನೆ ಮುಖಮಾರ್ಜನೆ , ಸ್ನಾನ, ಶೌಚ ಮುಗಿಸಿ ಓಡಿ ಬರುವುದು ಅಂಗಳಕ್ಕೇ ತುಳಸೀ ಕಟ್ಟೆಯ ಮುಂದೆ ನಿಂತು, ಬೊಗಸೆಯಲ್ಲಿ ಅಥವಾ ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಮೂಡಣದೆಡೆಗೆ ಮುಖಮಾಡಿ

”ಉದಯೇ ಬ್ರಹ್ಮಸ್ವರೂಪಾಯ ಮಧ್ಯಾಹ್ನೇಷು ಮಹೇಶ್ವರ:
ಅಸ್ತಮಾನೇ ಸ್ವಯಂವಿಷ್ಣು,
ತ್ರಯೀಮೂರ್ತಿ ದಿವಾಕರ:”

ಎಂದು ಶ್ಲೋಕ ಪಠಣ ಮಾಡುತ್ತಾ ಆ ಪ್ರಭಾಕರನಿಗೆ ಅರ್ಘ್ಯವನ್ನು ಅರ್ಪಿಸುವ ಕಾಯಕದಿಂದ ನಮ್ಮ ಮನವೆಲ್ಲ, ಪ್ರಫುಲ್ಲವಾಗಿ ಜ್ಯೋತಿರ್ಮಯವಾಗಿ, ಬಗೆಯಲ್ಲಿ ಬೆಳಕು ತುಂಬಿ, ಭಾವವೆಲ್ಲ ತೇಜೋಮಯವಾಗಿ ಬಿಡುತ್ತದೆ. ಆ ಪ್ರಭಾತ ಸೂರ್ಯನ ಕಿರಣ ಶಕ್ತಿ ನಮ್ಮ ಮನೋಲೋಕದಲ್ಲಿ ಹೊಸ ಹುರುಪನ್ನು ತುಂಬಿ, ದೈನಂದಿನ ಚಟುವಟಿಕೆಗಳಿಗೆ ಸನ್ನದ್ಧಗೊಳಿಸುತ್ತದೆ. ಶಿವಾರಾಧನೆಯ ಧನ್ಯತೆಯನ್ನು ತುಂಬಿ ಬಿಡುತ್ತದೆ.

“ಇಂತಹ ಸುಂದರ ಪ್ರಾತಃಕಾಲದಿ ಜೀವಿಸುವುದಕಿಂತಲು
ಜೀವಕೆ ಸುಖ ಬೇರಿಲ್ಲ”

ಎಂದ ಕವಿ ಕುವೆಂಪುರವರು,

”ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೋ….
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೋ
ರವಿಯೆಂಬುದು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ….”

ಎಂದು ಆ ‘ದಿನಪ’ನ‌ ಅಪಾರ ಸಾಮರ್ಥ್ಯದ ಕಾಣ್ಕೆಯನ್ನು ಕಂಡು ಅನುಭಾವಿಸಿ ಅಭಿವ್ಯಕ್ತಿಸಿದರು.

‘ಹಗಲಿನಷ್ಟೇ ಸತ್ಯ’
‘ಬೆಳಕೇ ಸಾಕ್ಷಿ’
‘ಹಗಲಿನಷ್ಟು ನಿಚ್ಚಳ’
ಎಂಬ ಮಾತುಗಳು‌ ಸೂರ್ಯನ ದ್ಯುತಿಯ ಮಹತ್ತಿಗೆ ಕನ್ನಡಿಯಾಗಿವೆ. ಪಾರದರ್ಶಕ ಬದುಕಿನ ನೆಲೆಗೆ ತತ್ವಗಳಾಗಿವೆ.


ದಿತಿಯ ಮಗ ಆದಿತ್ಯ, ಇಂದು ರಥಸಪ್ತಮಿ. ರವಿ ಅವತರಿಸಿದ ಪವಿತ್ರದಿನವೆಂದು‌ ಭಾವಿಸಲಾದ ದಿನ. ಏಳು ಕುದುರೆಗಳನ್ನು ಕಟ್ಟಿದ ಸ್ವರ್ಣರಥವೇರಿ ಬರುವನಿವನು. ಭಾನುವಿನಾದಿಯಾಗಿ ಆರಂಭವಾಗುವ ವಾರದ ದಿನಗಳಲ್ಲಿ ಇವನೇ ಪ್ರಥಮ.  ನಂತರ ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿಗಳ ಹೆಸರಿನಿಂದ‌‌ ಏಳು ದಿನಗಳು. ಚಲನೆಯಿಲ್ಲದ ನಕ್ಷತ್ರ ಇವನು. ಉಳಿದೆಲ್ಲ ಕಾಯಗಳು ಗ್ರಹಗಳು,ಚಂದಿರನೊಬ್ಬ ಭೂಮಿಯನ್ನು ಸುತ್ತುವ ಉಪಗ್ರಹ,ನೇಸರನ ಬೆಳಕನ್ನೇ ಪ್ರತಿಫಲಿಸುತ್ತಾ,ಭೂಮಿಯ ಪರಿವೇಷದಲ್ಲಿ ಸುತ್ತುತ್ತಾ ಸೂರ್ಯನ ಸುತ್ತ ಪ್ರದಕ್ಷಿಣೆ‌ ಮಾಡುವವನು ಸೋಮ ಅಥವಾ ಚಂದ್ರ.ಭೂಮಿಯ ಈ ದೈನಂದಿನ ಹಾಗೂ ವಾರ್ಷಿಕ ಚಲನೆಗಳು ಭೂಮಿಯ ಋತುಮಾನಗಳನ್ನು‌ ನಿರ್ಧರಿಸುತ್ತಾ,ಚಂದ್ರನ‌ ಮಾಸಿಕ ಚಾಲನೆ ಹುಣ್ಣಿಮೆ ಅಮಾವಾಸ್ಯೆಗಳ ಪರಿಧಿಯಲ್ಲಿ‌ ಸುತ್ತುತ್ತಾ ಭೂಮಿಗೊಂದು ವಿಶಿಷ್ಟ ಕಳೆಯನ್ನೂ ಸಸ್ಯಗಳ ಸಂಪತ್ತನ್ನೂ ನೀಡಿ,ಲೆಕ್ಕವಿಲ್ಲದಷ್ಟು ಜೀವ ಪ್ರಭೇದಗಳನ್ನು ಸೃಜಿಸಿ, ಮಳೆ ಬಿಸಿಲುಗಳ ಚಕ್ರವನ್ನೂ ತಿರುಗಿಸುತ್ತಾ, ಈ‌ ಧಾರಿಣಿಯನ್ನು ರಸವಂತಿಯನ್ನಾಗಿಸಿದ್ದಾನೆ.
*
ಇಂತಹ ಈ ಇಳೆಯ ಬದುಕು ಇಲ್ಲಿ ಬಾಳುವ ಜನರಿಗೆ ಕರ್ಮಕ್ಷೇತ್ರವಾಗಿದೆ. ಸಾಧನಾ ಕ್ಷೇತ್ರವಾಗಿದೆ ‘ಯೋಗ ಭೋಗ ಸಮನ್ವಯ ಭೂಮಿ’ಯಾಗಿದೆ. ಕವಿಗಳ ರಸಾರ್ದ್ರ ಹೃದಯಕ್ಕೆ
ನಿತ್ಯಸಂಜೀವಿನಿಯಾಗಿದೆ. ಸಂಶೋಧಕರ‌ ಪಂಥಾಹ್ವಾನವಾಗಿದೆ. ಅಗಣಿತ ಜೀವಿಗಳ ಆಹಾರ ಕಣಜವಾಗಿದೆ. ಇದಕ್ಕೆಲ್ಲ ಕಾರಣ ಈ ‌ವಿಭಾಕರನೇ ತಾನೆ.
*
ನಮ್ಮ ಜನಪದರು, ತಮಗೆ ಅನ್ನ ಕೊಡುವ ನೆಲಕ್ಕೆ ಸದಾ ಕೃತಜ್ಞರು. ಪ್ರಾಣಕೊಡುವ ವಾಯು, ನೆರಳು ನೀಡುವ ವೃಕ್ಷ ಸಂಕುಲ, ನೀರು ಕೊಡುವ ನದಿಗಳು…ಶಕ್ತಿ ಕೊಡುವ ಅಗ್ನಿ…
ಹೀಗೆ ಪ್ರತಿ ಉಪಕಾರಿಗಳನ್ನೂ ಕೃತಜ್ಞತೆಯಿಂದ ಸ್ಮರಿಸುವವರು.

ಭೂದೇವಿ, ಸೂರ್ಯ, ಆಕಾಶದೇವ, ವಾಯು (ಆಂಜನೇಯ), ಅಗ್ನಿ ದೇವ ಎಲ್ಲಾ ಪಂಚಭೂತಗಳನ್ನೂ ಭಕ್ತಿಯಿಂದ ಸ್ಮರಿಸುತ್ತಾ ಆರಾಧಿಸುತ್ತಾ ಬಂದರು. ಕಾಲಕಾಲದ ವಿಸ್ಮಯಗಳನ್ನು ತೆರೆದ ಕಣ್ಣಿನಿಂದ, ಮುಕ್ತ ಹೃದಯದಿಂದ ಗಮನಿಸುತ್ತಾ ಬಂದರು. ಇದೇ ಆಧಾರದ ಮೇಲೆ ಸೂರ್ಯ ಕರ್ಕವೃತ್ತವನ್ನು ಸಂಕ್ರಮಿಸಿ ದಕ್ಷಿಣದಿಂದ ಉತ್ತರಕ್ಕೆ ಮಕರವೃತ್ತವನ್ನು ಪ್ರವೇಶಿಸುವ‌ ಉತ್ತರಾಯಣ ಪುಣ್ಯಕಾಲದ ‘ಮಕರಸಂಕ್ರಾಂತಿ ಹಬ್ಬ’ವನ್ನು ನಿಗದಿಪಡಿಸಿದರು. ಪುರಾಣಕಾದಿಂದಲೂ ಆಗಸ, ಋಷಿಮುನಿಗಳ ಅಧ್ಯಯನಕ್ಷೇತ್ರವೇ ಆಗಿತ್ತು. ಖಗೋಳ ತಜ್ಞರು ಕೌತುಕವಾಗಿತ್ತು.ವಿಜ್ಞಾನಿಗಳ ಸಂಶೋಧನಾ ರಂಗವಾಗಿತ್ತು  ಹಾಗೂ ಇದೆ ಜನಸಾಮಾನ್ಯರ ಕೃಷಿ ಚಟುವಟಿಕೆಗಳಿಗೆ ಕಾಲಮಾನದ ಪ್ರಮಾಣವೂ ಆಗಿತ್ತು.

ಘಟಿಕಾ, ಗಡಿಯಾರಗಳು ಅಸ್ತಿತ್ವಕ್ಕೆ ಬರುವ ಮೊದಲು ನೆರಳಿನ ಜಾಡನ್ನು ಹಿಡಿದು ಕಾಲಗಣನೆ‌ ಮಾಡುವ ಪದ್ಧತಿಯೂ ಇತ್ತು. ಕೋನಾರ್ಕದ ‘ಸೂರ್ಯ ದೇವಾಲಯ’, ನಮ್ಮ ಪೂರ್ವಿಕರ ಹಾಗೂ ಶಿಲ್ಪಿಗಳ ಕೌಶಲಕ್ಕೆ ಇಂದಿಗೂ ಸಾಕ್ಷೀರೂಪದಲ್ಲಿ ನಮ್ಮ ಮುಂದಿವೆ. ಹಂಪಿಯ ವಿರೂಪಾಕ್ಷ ದೇವಾಲಯದ ಗೋಡೆಯ ಮೇಲೆ ಬೀಳುವ ‘ಸೂಚೀಗ್ರಾಹಿ ಬಿಂಬದ’ ವಿರೂಪಾಕ್ಷದೇವಾಲಯದ ಗೋಪುರದ ಚಿತ್ರ. ಬೆಂಗಳೂರಿನ ‘ಗವಿ ಗಂಗಾಧರೇಶ್ವರನ ಲಿಂಗದ ಮೇಲೆ ಕರಾರುವಾಕ್ಕಾಗಿ ಬಿದ್ದು ‘ಮಕರ ಸಂಕ್ರಾಂತಿ’ ದಿನ ಶಿವಲಿಂಗವನ್ನು ಸ್ಪರ್ಶಿಸುವ ಸೂರ್ಯ ಕಿರಣಗಳ ರೋಮಾಂಚಕ ದೃಶ್ಯ ಎಲ್ಲವೂ‌ ಭಾರತೀಯರ ಸೌರ ಪ್ರೇಮಕ್ಕೆ , ಖಗೋಳ ಜ್ಞಾನಕ್ಕೆ ಹಾಗೂ ಪ್ರಕೃತಿಯ ಅವಲೋಕನ ಶಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ.ಆ ದಿನಗಳು ಅತ್ಯಂತ ಪವಿತ್ರ ದಿನಗಳು ಎಂದು ಭಾವಿಸಿ, ಪವಿತ್ರ ನದಿಗಳಲ್ಲಿ,ಸಂಗಮಗಳಲ್ಲಿ ಪುಣ್ಯಸ್ನಾನ ಮಾಡುವ ಭಕ್ತರ ನಂಬಿಕೆ ಹಾಗೂ ಶ್ರದ್ಧಾವಂತಿಕೆಗಳೂ ಇದಕ್ಕೆ ಇಂಬು ಕೊಡುತ್ತಿದೆ.

“ಕಾರ್ಯಕಾರಣಾತ್ಮಕ ಜಗತ್ಪ್ರ
ಕಾಶ ಸಿಂಹರಾಶ್ಯಾಧಿಪತೇ
ಆರ್ಯ ವಿನುತ ತೇಜ:ಸ್ಫೂರ್ತೇ
ಆರೋಗ್ಯಾದಿ ಫಲದ ಕೀರ್ತೇ”

‘ನಮ್ಮ ಆರೋಗ್ಯವೂ ಸೂರ್ಯನನ್ನೇ ಅವಲಂಬಿಸಿದೆ’ಎಂದಾಯಿತು. ‘ಪತಂಜಲಿ ಯೋಗಶಾಸ್ತ್ರ’ದಲ್ಲಿ ಮೊದಲ ಆದ್ಯತೆ ಸೂರ್ಯನಮಸ್ಕಾರಕ್ಕೆ. ಸೂರ್ಯನ ಮಸ್ಕಾರ ಮಾಡುವ ಯೋಗ ಪದ್ಧತಿ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ವೃದ್ಧಿಗೊಳಿಸುತ್ತದೆ ಎಂಬುದು ಅದನ್ನು ಆಚರಿಸುವವರು ಕಂಡುಕೊಂಡಿರುವ‌ ಜ್ವಲಂತ ಸತ್ಯ. ಹೀಗೆ ಆರೋಗ್ಯದಾಯಕನೂ ಬದುಕಿಗೆ ಸ್ಫೂರ್ತಿದಾಯಕನೂ‌‌ ಆಗಿರುವ ಸೂರ್ಯ, ಶಾಸ್ತ್ರೀಯ ಸಂಗೀತದಲ್ಲಿ, ಮುತ್ತುಸ್ವಾಮಿ ದೀಕ್ಷಿತರ ನವಗ್ರಹ ಕೀರ್ತನೆಗಳಲ್ಲಿ ‘ಪ್ರಥಮ ಕೀರ್ತನೆ ‘ಇರುವುದೇ ನವಗ್ರಹದಲ್ಲಿ ಮೊದಲು ಸೂರ್ಯನ ಕುರಿತು.

ಸೂರ್ಯನಿಗೆ ,’ಸೌರಾಷ್ಟ್ರ ರಾಗ’, ದಾಸ ಶ್ರೇಷ್ಠ ಪುರಂದರದಾಸರು ರೂಪಿಸಿದ,ಸಪ್ತತಾಳಗಳಲ್ಲಿ ಮೊದಲನೆಯದಾದ ಧ್ರುವತಾಳದಲ್ಲಿ ಅಂದ ಮೇಲೆ ಅವನಿಗೆ ಇರುವ ಶ್ರೇಷ್ಠತೆಯ ಕಲ್ಪನೆ ಮೂಡಬಹುದಲ್ಲವೇ?

ಬರೆದಷ್ಟೂ‌ ಮುಗಿಯದ ಸೂರ್ಯ ಪ್ರವರ ಭಾರತೀಯತೆಯ ಆಸ್ತಿಕ ಜಗತ್ತನ್ನು ಆಳುತ್ತಾ,ನಂಬಿಕೆಯ ಇಂಬನ್ನು ದೃಢಗೊಳಿಸುತ್ತಾ. ಜನರ ಹೃದಯ ಸಿಂಹಾಸನಗಳಲ್ಲಿ ನಿತ್ಯವೂ ಆರಾಧನೆಗೊಳ್ಳುತ್ತಾ ಸದಾಕಾಲವೂ ಈ ಧಾರ್ಮಿಕ ಪರಂಪರೆಯ ಚೈತನ್ಯಶೀಲ‌‌ ದೇವರಾಗಿ ರಾರಾಜಿಸುತ್ತಿದ್ದಾನೆ.

ಸಪ್ತಾಶ್ವವನೇರಿ ತಪ್ಪದೆ ದರುಶನ ನೀಡುವ ಆರು ಚಕ್ರಗಳ ರಥವನ್ನು ನಿಯಂತ್ರಿಸುವ ಉಜ್ವಲ ಮಿತ್ರನಿಗೆ ಇಂದು ಜನ್ಮದಿನವಂತೆ. ‘ಆದಿತ್ಯಹೃದಯ’ ಪಠಣದಿಂದ ಚೈತನ್ಯವುಂಟಾಗುವುದಂತೆ. ನಿತ್ಯೋತ್ಸವವನ್ನುಂಟು ಮಾಡುವ ನಮ್ಮ ಅರುಣಸಾರಥಿ,ಛಾಯಾಪತಿ,ಆದಿತೇಯನಿಗೆ, ದಿನಮಣಿಗೆ ನಮ್ಮ ದೀರ್ಘದಂಡ ಪ್ರಣಾಮಗಳು.


  • ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW