ಹೂಲಿಶೇಖರ್ ಅವರ ಹೊಸ ನಾಟಕ- ‘ಕರಿಯು ಕನ್ನಡಿಯೊಳಗೆ’



ಹೂಲಿಶೇಖರ ಅವರ ಹೊಸ ನಾಟಕ ‘ಕರಿಯು ಕನ್ನಡಿಯೊಳಗೆ’ ಸದ್ಯದಲ್ಲಿ ಮಾರುಕಟ್ಟೆಗೆ ಬರಲಿದ್ದು, ಈ ನಾಟಕವು ರಾಜ್ಯಮಟ್ಟದ ನಾಟಕ ರಚನಾ ಸ್ಬರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಪುಸ್ತಕ ಮುನ್ನುಡಿಯನ್ನುಡಾ.ಎಚ್.ಎಸ್.ಗೋಪಾಲ ರಾವ್ ಅವರು ಬರೆದಿದ್ದು, ಇದರಲ್ಲಿ ಎಂಎಂ ಕಲಬುರ್ಗಿಯವರ ಪಾತ್ರವೇನು ? ಬಸವಣ್ಣನ, ಶರಣರ ಪಾತ್ರವೇನು? ಎನ್ನುವ ಕುತೂಹಲಕ್ಕೆ ಪುಸ್ತಕದ ಮುನ್ನುಡಿ ಇಲ್ಲಿದೆ ಓದಿ …  

ಕರಿಯು ಕನ್ನಡಿಯೊಳಗೆ’ ಎಂಬ ರೂಪಕ ಹಾಗೂ ಧ್ವನಿಪ್ರದಾನ ಶೀರ್ಷಿಕೆಯು ಈ ನಾಟಕ, ಕಥೆ ಅಥವಾ ಕಾದಂಬರಿ … ಇತ್ಯಾದಿ ಯಾವ ಪ್ರಕಾರವೇ ಆದರೂ ಚಿಕ್ಕ ಅಳತೆಯ ಕನ್ನಡಿಯೊಳಗೆ ಕಾಣಬಹುದಾದ ಅಥವಾ ಕಾಣುವ ಬೃಹತ್ ಗಾತ್ರದ ಒಂದು ವಸ್ತುವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತದೆ. ನಾವು ಈ ನಾಟಕ ಪ್ರಕಾರದಲ್ಲಿ ದೊಡ್ಡ ವಸ್ತುವೊಂದನ್ನು ಕಾಣುವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಓದುಗ ಮತ್ತು ನೋಡುಗ ಇಬ್ಬರೂ ಅಣಿಯಾಗಬೇಕಾದ್ದು ಅನಿವಾರ್ಯ. ಈ ನಾಟಕದ ಕಥನ ಮತ್ತು ರಂಗರೂಪವು ಕನ್ನಡಿಯಲ್ಲಿ ಕಂಡಷ್ಟೇ; ಅದಕ್ಕಿಂತ ಹೆಚ್ಚಿಗೆ ನಿರೀಕ್ಷಿಸಲು ಸಾಧ್ಯವಿಲ್ಲ.

(‘ಕರಿಯು ಕನ್ನಡಿಯೊಳಗೆ’ ನಾಟಕದ ಒಂದು ದೃಶ್ಯ)

ಇದು ಇತಿಹಾಸದ ಸಂಘರ್ಷದ ಒಂದು ಸನ್ನಿವೇಶವನ್ನು ರಂಗದ ಮೇಲೆ ತೋರುತ್ತಲೇ, ಇಂದಿಗೂ ಸಂಘರ್ಷವನ್ನೇ ಉಳಿಸಿಕೊಂಡು ಬಂದಿರುವ ವಸ್ತುವಾಗಿದೆ. ಇವೆಲ್ಲವೂ ಐತಿಹಾಸಿಕ ಸಂಘರ್ಷಗಳು ಮಾತ್ರವಲ್ಲದೆ ಸಮಕಾಲೀನ ಸಂಘರ್ಷಗಳೂ ಆಗಿವೆ. ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ, ನೆನ್ನೆಯಿಂದ ನಾಳೆಗೆ ಚಲಿಸುವ ವೇಳೆ ಸಂಘರ್ಷವಿರುವುದು ಸಾಮಾನ್ಯ. ಇದು ನಿಯತ. ಭೂತದಿಂದ ವರ್ತಮಾನಕ್ಕೆ, ವರ್ತಮಾನದಿಂದ ಭವಿಷ್ಯಕ್ಕೆ ಚಲನೆ ನಡೆಯುವಾಗಲೂ ಘರ್ಷಣೆಯ ಜೊತೆಗೆ ನಿರಂತರತೆಯ ನಂಟು ಇರುತ್ತದೆ. ಇಲ್ಲಿ ಯಾವುದೂ ನಿಲ್ಲುವುದಿಲ್ಲ. ನಿಂತರೆ ಅಂತ್ಯ. ಮುಂದುವರಿದರೆ ಚಲನೆ;

(‘ಕರಿಯು ಕನ್ನಡಿಯೊಳಗೆ’ ಕೃತಿ ಲೇಖಕರು ಹೂಲಿಶೇಖರ್ )

ಬಸವಪೂರ್ವ ಯುಗದಲ್ಲೂ ಬದುಕಿತ್ತು. ಅದರಲ್ಲಿ ಯಾವುದೋ ಹೆಸರಿನ ಒಬ್ಬ ರಾಜನಿದ್ದ. ಅವನನ್ನು ಹೊಗಳುವ ವಂದಿಮಾಗಧರಿದ್ದರು. ಒಬ್ಬ ಮಂತ್ರಿಯೂ ಇದ್ದ. ರಾಜನ ಮೆರವಣಿಗೆ ನಡೆಯುತ್ತಲೇ ಇತ್ತು. ಅದು ರಾಜಶಾಹಿಯ ವ್ಯವಸ್ಥೆ. ಅದರ ಸೂಚನೆಯೊಂದಿಗೆ ನಾಟಕ ಆರಂಭವಾದರೂ, ಮುಂದುವರಿಯುವುದು ಡಾ.ಎಂ.ಎಂ.ಕಲಬುರ್ಗಿ ಮತ್ತು ಹನಿಮ್ಯಾನ ಪ್ರವೇಶದೊಂದಿಗೆ; ಸಾಮಾನ್ಯವಾಗಿ ನಾಟಕಗಳ ಆರಂಭ ಮತ್ತು ಮುಂದುವರಿಕೆಗೆ ಸೇತುವೆಯಾಗುವವನು ಸೂತ್ರಧಾರ. ಈ ನಾಟಕದಲ್ಲಿ ಸೂತ್ರಧಾರನ ಕೆಲಸವನ್ನು ಡಾ.ಕಲಬುರ್ಗಿ ಮಾಡುತ್ತಾರೆ. ಇದು ಸೂಕ್ತವಾದ ಆಯ್ಕೆ; ಇದು ನಾಟಕಕಾರನಿಗಿರುವ ಇತಿಹಾಸ ಮತ್ತು ವರ್ತಮಾನದೊಂದಿಗಿನ ತಿಳಿವಳಿಕೆ. ವರ್ತಮಾನದೊಂದಿಗೆ ಇತಿಹಾಸವು ಸಂಪರ್ಕ ಪಡೆದಾಗಲೇ, ಕಥೆಯ ನಿರಂತರತೆಯನ್ನು ಸಾಧಿಸಲು ಸಾಧ್ಯ.

ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸೂತ್ರಧಾರನ ಬದಲಿಗೆ ಆಯ್ಕೆ ಮಾಡಿಕೊಂಡಿರುವುದರಿಂದ, ಹೆಚ್ಚಾಗಿ ಇತಿಹಾಸದ, ಅದರಲ್ಲೂ ಸಾಂಸ್ಕøತಿಕ ಇತಿಹಾಸದ ಸಂಶೋಧನೆಯಲ್ಲೇ ತೊಡಗಿಕೊಂಡಿದ್ದ ಮತ್ತು ಧರ್ಮ ಮತ್ತು ಜಾತಿಗಳ ವಿರಸಗಳು ಸಮಾಜದ ಶಾಂತಿಯನ್ನು ಹಾಳುಮಾಡುತ್ತವೆಂಬ ಭಾವದಿಂದ, ಹಿಂದೆ ಆಗಿಹೋಗಿರಬಹುದಾದ ತಪ್ಪುಗಳನ್ನು ಈಗಲಾದರೂ ಸರಿಪಡಿಸಿಕೊಳ್ಳಲು ಸಾಧ್ಯವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಕಲಬುರ್ಗಿ ಇತಿಹಾಸ ಮತ್ತು ವರ್ತಮಾನಗಳ ಸಮರ್ಥ ಸಮೀಕ್ಷೆ ಮಾಡಲು ಪ್ರಯತ್ನಿಸಿದವರು. ಸಾಮರಸ್ಯವನ್ನು ಸೃಷ್ಟಿಸಬೇಕಾಗಿದ್ದ ಧರ್ಮಗಳೇ ಬಿರುಕನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ, ಆ ಬಿರುಕು ಹೆಚ್ಚುತ್ತಾ, ಸಮಾಜವೇ ನಿರಂತರ ಸಂಘóರ್ಷದಲ್ಲಿ ತೊಡಗಿರುವುದನ್ನು ಬಸವೇಶ್ವgರು ಊಹಿಸಿರಲೂ ಸಾಧ್ಯವಿಲ್ಲ. ಬಸವಣ್ಣನ ಉದ್ದೇಶ ವಿಫಲವಾಯಿತು; ಮಾತ್ರವಲ್ಲದೆ, ರಾಜಕೀಯ, ಸಾಂಸ್ಕøತಿಕ ಸಂಘರ್ಷಗಳು ಸಾಮಾಜಿಕ ಸಂಘರ್ಷಕ್ಕೂ ಎಡೆ ಕೊಟ್ಟು, ಸಾಮಾಜಿಕ ಬದುಕೇ ಹೀಗೆಂಬ ನಿರ್ಧಾರಕ್ಕೆ ಬರಲು ಅವಕಾಶ ಕಲ್ಪಿಸಿವೆ. ಕಲಬುರ್ಗಿ ಅವರ ಪಾತ್ರವು ಬಸವಪೂರ್ವ ಕರ್ನಾಟಕದಲ್ಲಿ ಉಪಾಸನೆಗೊಳ್ಳುತ್ತಿದ್ದ ವಿವಿಧ ದೇವತೆಗಳು, ಅಸ್ತಿದಲ್ಲಿದ್ದ ಜಾತಿಗಳು ಇತ್ಯಾದಿಗಳ ವಿಚಾರವಾಗಿ ಪ್ರೇಕ್ಷಕರಿಗೆ ತಿಳಿಸಿ, ಈವರೆಗೆ ಬಸವಣ್ಣ ಮತ್ತು ಕಲಚೂರ್ಯ ಬಿಜ್ಜಳನ ಕುರಿತಾಗಿ ಪ್ರಕಟವಾಗಿರುವ ಸಂಶೋಧಕರ ಮತ್ತು ಸೃಜನಾತ್ಮಕ ಲೇಖಕರ ವಿಚಾರಗಳನ್ನೂ ಪ್ರಸ್ತಾಪಿಸಿದ್ದಾರೆ.



ಪುರೋಹಿತರು ರಾಜನನ್ನೇ ಪ್ರತ್ಯಕ್ಷದೇವತಾ ಎಂದು ಮತ್ತು ಸ್ತ್ರೀಯರನ್ನು ತೊತ್ತುಗಳು ಎಂದು ಭಾವಿಸಿದ್ದ ಕಾಲದ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ಕಲಬುರ್ಗಿ ಮತ್ತು ಹನಿಮ್ಯಾ, ಅಂದಿನಿಂದಲೂ ಮುಂದುವರಿದಿದ್ದ ಪುರೋಹಿತ ಶಾಹಿ ಮತ್ತು ರಾಜಪ್ರಭುತ್ವವಾದಿ ಸಮಾಜದಲ್ಲಿ ಅಧಿಕಾರಸ್ಥರು ವಿಧಿಸಿದ ಕರಗಳನ್ನು ತೆರುವ ಪರಿಸ್ಥಿತಿಯಲ್ಲಿ ಕಾಯಕಕ್ಕೆ ಮನ್ನಣೆ ದೊರೆತು, ಅದೇ ಜಾತಿಯ ರೂಪ ತಾಳಿ, ಆ ಪರಿಸ್ಥಿತಿಯನ್ನು ಪ್ರತಿಭಟಿಸುವ ಮನೋಭಾವದ ಜನರನ್ನು ಹತ್ತಿಕ್ಕಲು ಅಧಿಕಾರಸ್ಥರು, ಸೈನಿಕಬಲವನ್ನು ಬಳಸಿಕೊಂಡು, ಎಲ್ಲವನ್ನೂ ದೇವರ ಹೆಸರಿನಲ್ಲಿ ಮುಂದುವರಿಸಿದರು. ಶಿವ, ವಿಷ್ಣು ಇತ್ಯಾದಿ ದೇವತೆಗಳು ದ್ವೈತ, ಅದ್ವೈತ ಮತ್ತು ವಿಶಿಷ್ಠಾದ್ವೈತಗಳ ಬಲೆಯಲ್ಲಿ ಸಿಕ್ಕಿಕೊಂಡರು. ವಚನಗಳ ಮೂಲಕ ಅರಿವನ್ನು ನೀಡಲು ಪ್ರಯತ್ನಿಸಿದ ಶರಣರು/ವಚನಕಾರರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲ್ಯಾಣದಿಂದ ದೂರಕ್ಕೆ ಚದುರಿಹೋದರು. ವಚನಕಾರರ ಕಾಲದ ಮಹಾಮನೆಯನ್ನು ವರ್ತಮಾನದ ಸಂಸತ್ತಿಗೆ ಹೋಲಿಸುವ ನಾಟಕಕಾರರು, ಕಾಯಕದ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಜಾತಿಗಳಂತೆಯೇ ವರ್ತಮಾನದಲ್ಲಿ ರಾಜಕೀಯ ಪಕ್ಷಗಳು ಸೃಷ್ಟಿಯಾಗಿವೆ. ಒಟ್ಟಾರೆ ರಾಜ, ಮಂತ್ರಿ, ಪುರೋಹಿತ ಇತ್ಯಾದಿ ಸಂವಿಧಾನ ನಿರ್ಮಾತೃಗಳು ಈಗಲೂ ಬೇರೆಬೇರೆ ಹೆಸರುಗಳಿಂದ ಅಸ್ತಿತ್ವದಲ್ಲಿರುವುದನ್ನು ನಾಟಕಕಾರರು ಗುರುತಿಸುವ ಪ್ರಯತ್ನ ಮಾಡಿದ್ದಾರೆ.

ಇಡೀ ನಾಟಕದ ಹೂರಣವನ್ನು ಏಳನೆಯ ದೃಶ್ಯದಲ್ಲಿ ಗುರುತಿಸಬಹುದು. ಅಲ್ಲಿ ವರ್ತಮಾನದ ಸಂಶೋಧಕ ಕಲಬುರ್ಗಿ ‘ಜಾತಿಗಳು ಸುಳ್ಳು, ಧರ್ಮ ಸತ್ಯ ಅನ್ನುವುದನ್ನು ವಚನಗಳ ಮೂಲಕ ಜಗತ್ತಿಗೇ ನೀಡಿದ . . ! ಲಿಂಗವೇ ಸತ್ಯ. ಕಾಯಕವೇ ಪೂಜೆ, ಅರ್ಪಣೆಯೇ ಪ್ರಸಾದ. ಸಮಾನತೆಯೇ ಆಚಾರ’ ಎಂದ ಸಕಲ ಶರಣ ಸಮೂಹಕ್ಕೆ ನಮಸ್ಕಾರ ಮಾಡುತ್ತಾರೆ. ಇನ್ನೂ ಶರಣರ ಕ್ರಾಂತಿ ನಿಂತಿಲ್ಲ ಎನ್ನುವುದು ಕಲಬುರ್ಗಿ ಅವರ ಮಾತುಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಮುಂದುವರಿದ ಅದೇ ದೃಶ್ಯದಲ್ಲಿ ಶರಣರೆಲ್ಲರೂ ‘ನಾವು ಹೊಸ ಸಮಾಜ ಕಟ್ಟಬೇಕೆಂದೆವು. . ! ನಾವು ಹೊಸ ಧರ್ಮ ಹುಟ್ಟುಹಾಕಬೇಕೆಂದೆವು . . ! ಮನುಷ್ಯರಾಗಿ ಹುಟ್ಟಿದ ಎಲ್ಲರೂ ಸಮಾನ ಜೀವಿಗಳು. ಎಲ್ಲರಿಗೂ ಗೌರವದಿಂದ ಬದುಕುವ ಹಕ್ಕಿದೆ. ಯಾರೂ ಯಾರ ಗುಲಾಮರಲ್ಲ. ಸ್ತೀಯರಿಗೆ ಸಮಾನ ಹಕ್ಕಿದೆ. ನಾವು ಜಾತಿ ಸಂಕೋಲೆಯಿಂದ ಹೊರಬರಬೇಕೆಂದವರು ’ ಎನ್ನುತ್ತಿರುವಾಗಲೇ

(‘ಕರಿಯು ಕನ್ನಡಿಯೊಳಗೆ’ ನಾಟಕದ ಒಂದು ದೃಶ್ಯ)

ಆಡುವ ಬಸವಣ್ಣನ ‘ ಆದರೆ. . ! ಆದರೆ . . ! ಅವರು ನಮ್ಮನ್ನು ಉಳಿಯಗೊಡಲಿಲ್ಲ ಅಣ್ಣಂದಿರಾ. ಸಾವಿನ ಮನೆಗೆ ಕಳುಹಿಸಿಯೇ ಬಿಟ್ಟರು.’ ಎಂಬ ಮಾತು ಅತ್ಯಂತ ಧ್ವನಿಪೂರ್ಣವಾಗಿದೆ.

ಶರಣರು ತಾವು ಅಂತರ್ ಪಿಶಾಚಿಗಳಾಗಿದ್ದೇವೆ ಎಂದು ಅಲವತ್ತುಕೊಳ್ಳುತ್ತಾರೆ. ಶರಣರು ಆ ಸ್ಥಿತಿಯಿಂದ ಬಿಡುಗಡೆ ಮಾಡಿ, ಮುಕ್ತ್ತಗೊಳಿಸಲು ಬೇಡಿಕೊಳ್ಳುತ್ತಾರೆ. ಇದು ನಾಟಕದಲ್ಲಿನ ಪ್ರಮುಖ ಸಂದೇಶವೆನಿಸುತ್ತದೆ.

ಬಿಜ್ಜಳನ ಸಾವನ್ನು ಕುರಿತು ತನಿಖೆ ಮಾಡುವ ಕಲಬುರ್ಗಿ ಸಾಕ್ಷಿಗಾಗಿ ವರ್ತಮಾನದ ಯಾರನ್ನೂ ಕರೆಸಲು ಹಿಂಜರಿಯುವುದು ಸ್ವಾಬಾವಿಕವೆನಿಸುತ್ತದೆ. ವಿಚಾರಣೆಯ ಸನ್ನಿವೇಶವೂ ಧ್ವನಿಪೂರ್ಣವಾಗಿದೆ. ನಾಟಕದ ಕೊನೆಯ ದೃಶ್ಯವು ಸಾಂಕೇತಿಕವಾಗಿ ಇಡೀ ವಸ್ತುವನ್ನು ವಿಶ್ಲೇಷಿಸುತ್ತದೆ. ಹಣೆಯ ಮೇಲೆ ತೂತಾಗಿ ರಕ್ತ ಹರಿಯುತ್ತಿರುವ ಕಲಬುರ್ಗಿ ಕಾವೀಧಾರಿ ಮತ್ತು ವಚನಗಳನ್ನು ಮಂತ್ರದಂತೆ ಹೇಳುವ ಶರಣರ ಸಮೂಹದೊಂದಿಗೆ ದೃಶ್ಯ ಮುಗಿಯುತ್ತದೆ.

ನಾಟಕಕಾರರು ಡಾ.ಎಂ.ಎಂ.ಕಲಬುರ್ಗಿ ಅವರ ಸಾವಿನ ಹಿನ್ನೆಲೆಯಲ್ಲಿ ಶರಣರ ಕನಸು ಭಗ್ನವಾಗುತ್ತಿರುವುದನ್ನು ಮಾರ್ಮಿಕವಾಗಿ ಅನಾವರಣಗೊಳಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ನಾಟಕಕಾರರು ಒಬ್ಬ ಯಶಸ್ವೀ ನಿರ್ದೇಶಕರೂ ಆಗಿರುವ ಕಾರಣ ರಂಗರೂಪವನ್ನೂ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿ ಸೂಚನೆಗಳ ಮೂಲಕ ಮುಂದಿನ ಪ್ರದರ್ಶನಗಳ ಯಶಸ್ಸಿಗೂ ಕಾರಣರಾಗಿದ್ದಾರೆ. ನಾಟಕದ ವಸ್ತು, ಅದರ ನಿರ್ವಹಣೆಯ ಬಿಗಿ, ಪಾತ್ರಗಳ ಸಮರ್ಥ ವಿನ್ಯಾಸ, ಅರ್ಥಪೂರ್ಣ ಮತ್ತು ಹರಿತವಾದ ಮಾತುಗಳು ಒಟ್ಟಾರೆ ನಾಟಕವನ್ನು ಮರೆಯಲಾಗದಂತೆ ಮಾಡುತ್ತವೆ.


  • ಡಾ.ಎಚ್.ಎಸ್.ಗೋಪಾಲ ರಾವ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW