ಯಾವ ಆಟವೂ ದಾರಿ ತಪ್ಪಿಸುವುದಿಲ್ಲ, ದಾರಿಯನ್ನು ದೃಢಮಾಡುತ್ತದೆ, ವಿಶ್ವಾಸ ತುಂಬುತ್ತದೆ. ಆಟದ ಬಗ್ಗೆ ತಪ್ಪು ಕಲ್ಪನೆಗಳು ಬೇಡ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಎನ್ನುತ್ತಾರೆ ರಾಜಾಜಿನಗರ ಕ್ಲಬ್ ಮುಖ್ಯ ತರಬೇತಿದಾರರಾದ ವಿನಯ ಅವರು ಹೇಳುತ್ತಾರೆ. ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ರಾಜಾಜಿನಗರ್ ಕ್ಲಬ್ ನ ಹೆಮ್ಮೆಯ ಆಟಗಾರರ ಕಿರು ಪರಿಚಯ, ತಪ್ಪದೆ ಮುಂದೆ ಓದಿ…
ಪಾಲಕರಿಗೂ ಕ್ರಿಕೆಟ್ ಗೂ ಎಣ್ಣೆ ಸೀಗೆಕಾಯಿ ಸಂಬಂಧ. ಕಾರಣವಿಷ್ಟೇ ಕ್ರಿಕೆಟ್ ಮೇಲೆ ಮೋಹ ಬೆಳೆಸಿಕೊಂಡವನು ಹಳ್ಳ ಹಿಡಿಯುತ್ತಾನೆ ಎನ್ನುವ ಕಲ್ಪನೆ ಇದೆ.
ಹಿಂದಿಯಲ್ಲಿ ಒಂದು ಆಡು ಭಾಷೆಯೇ ಇದೆ “ಪಡೋಗೆ ಲಿಖೋಗೆ ಬನೋಗೆ ನವಾಬ್… ಖೇಲೋಗೆ ಕೂದೋಗೆ ಹೋಗೇ ಖರಾಬ್”… ಇದರರ್ಥ ಸರಳವಾಗಿ ಹೇಳುವುದಾದರೆ ಓದಿದವನು ರಾಜನಂತೆ ಬಾಳುತ್ತಾನೆ, ಆಡೋನು ಹಾಳಾಗ್ತಾನೆ. ಈ ಮಾತು ಧೋನಿ ಸಿನಿಮಾದಲ್ಲಿ ಹೆಚ್ಚು ಪ್ರಸಿದ್ದಿ ಪಡಿಯಿತು. ಆದರೆ ಈ ಮಾತನ್ನು ಸುಳ್ಳು ಮಾಡಿದ್ದು ಖ್ಯಾತ ಕ್ರಿಕೆಟ್ ತಾರೆ ಮಹೇಂದ್ರಸಿಂಗ ಧೋನಿ.
ಕ್ರಿಕೆಟ್ ಆಟ ಎಂದರೆ ಅದೊಂದು ಮಾಯಲೋಕ. ಆ ಸುಳಿಯಲ್ಲಿ ಸಿಲುಕಿದವರು ಮೇಲೆ ಬರಲಾರರು ಎನ್ನುವ ತಪ್ಪು ಕಲ್ಪನೆಯಿದೆ. ಪ್ರತಿಯೊಬ್ಬ ಪಾಲಕರು ಹೀಗೆಯೇ ಯೋಚಿಸಿದ್ದರೇ ನಮ್ಮಲ್ಲಿ ಅನಿಲ್ ಕುಬ್ಳೆ, ವೆಂಕಟೇಶ್ ಪ್ರಸಾದ್, ಕೆ ಎಲ್ ರಾಹುಲ್, ಧೋನಿ, ಕೊಯ್ಲಿಯಂತಹ ಪ್ರತಿಭೆಗಳು ಕ್ರಿಕೆಟ್ ನಲ್ಲಿ ಮಿಂಚುತ್ತಿರಲಿಲ್ಲ.
ಕ್ರಿಕೆಟ್ ಆಟಕ್ಕೂ ಅದರದೇ ಆದ ಸೌಂದರ್ಯವಿದೆ. ಇದು ಒಂದು ದಿನದ, ಒಂದು ವರ್ಷದ ಆಟವಲ್ಲ. 20 ವರ್ಷದ ತಪ್ಪಸ್ಸಿನ ಆಟ. ಈ ಆಟದಲ್ಲಿ ಶ್ರದ್ದೆ, ಭಕ್ತಿಯಿದ್ದವರು ಗೆಲ್ಲುತ್ತಾರೆ. ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಎಲ್ಲ ಮಕ್ಕಳು ಕ್ರಿಕೆಟ್ ಆಡಬೇಕೆಂದಲ್ಲ, ಆದರೆ ಕ್ರಿಕೆಟ್ ಆಟವನ್ನು ಜೀವವಾಗಿಸಿ ಕೊಂಡವರ ಬದುಕಿನ ಒಂದು ಚಿತ್ರಣವಿದು. ಮನೆಯಲ್ಲಿಯೇ ಓದಿ ಪರೀಕ್ಷೆಯಲ್ಲಿ ಶೇಕಡಾ 70 ರಷ್ಟು ಅಂಕ ಗಳಿಸಿ, ಕ್ರಿಕೆಟ್ ಆಟದ ಮೈದಾನವನ್ನೇ ಮನೆಯಾಗಿಸಿಕೊಂಡ 2025 – 26 ರ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಯುವ ಕ್ರಿಕೆಟ್ ಆಟಗಾರರಾದ ನೀರಜ್, ಆರ್ಯನ್ ನಾಗೇಶ್ ಮತ್ತು ಪ್ರಭವ್ ಅವರ ಬದುಕುಕಿನ ಚಿತ್ರಣ.
14ರ ವಯಸ್ಸಿನವೊಳಗಿನ ಪಂದ್ಯಾವಳಿಯಲ್ಲಿ ಲೇಗ್ ಸ್ಪಿನ್ನರ್ ನೀರಜ್ ಎಂ ಅವರು ಕೆಎಸ್ ಸಿಎ ಅಂತರ ಕ್ಲಬ್ ಲೀಗ್ ಆಟದಲ್ಲಿ 21 ವಿಕೆಟ್, 150 ರನ್ ಮತ್ತು ಬಿಟಿಆರ್ ಶೀಲ್ಡ್ ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಪ್ರಭವ್ ಪೈದಾ ಅವರು ಅಂತರ ಕ್ಲಬ್ ಲೀಗ್ ಪಂದ್ಯಾವಳಿಯಲ್ಲಿ 540 ರನ್ ಮತ್ತು ಸೆಂಟ್ ಜೋಸಫ್ ಶಾಲೆಯ ಕೆಎಸ್ ಸಿಎ ಬಿಟಿಆರ್ ಮೊದಲ ವಿಭಾಗದ ಪಂದ್ಯಾವಳಿಯಲ್ಲಿ ೩೦೦ ರನ್ ಗಳಿಸಿದ್ದಾರೆ. ಆರ್ಯನ್ ನಾಗೇಶ್ ಅವರು 14 ರ ವಯಸ್ಸಿನವೊಳಗಿನ ಅಂತರ ಕ್ಲಬ್ ಲೀಗ್ ಪಂದ್ಯಾವಳಿಯಲ್ಲಿ 235 ರನ್ಸ್ ಮತ್ತು 16 ರ ವಯಸ್ಸಿನವೊಳಗಿನ ಮೊದಲ ವಿಭಾಗದ ಪಂದ್ಯಾವಳಿಯಲ್ಲಿ 28 ವಿಕೆಟ್ ಪಡೆದು ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಗಮನ ಸೆಳೆದಿದ್ದಾರೆ. ಈ ಪ್ರತಿಭೆಗಳು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದು ಸಂತೋಷ ಪಡುವ ವಿಷಯ. ಈ ಮಕ್ಕಳ ಸಾಧನೆಯ ಹಿಂದೆ ಶ್ರಮದ ಜೊತೆಗೆ ಒಂದಷ್ಟು ಕತೆಯೂ ಇದೆ.
ಸದಾ ರಫ್ ಅಂಡ್ ಟಫ್ ಆಗಿ ಕಾಣುವ ನೀರಜ್ ಮೃದು ಮನಸ್ಸಿನ ಹುಡುಗ. ಮೈದಾನಕ್ಕೆ ಇಳಿದಾಗ ಎದುರಾಳಿ ತಂಡಕ್ಕೆ ಗುಳ್ಳಿಯಂತೆ ಕಾಣುತ್ತಾನೆ. ಅವನ ಶ್ರದ್ದೆಗೆ ಅವರ ತಂದೆ ಎಂ. ಮಹೇಶ್ವರಂ ಮತ್ತು ತಾಯಿ ಲಕ್ಷ್ಮಿದೇವಿ ಅವರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನೀರಜ್ ತಂದೆ ಹೇಳುತ್ತಾರೆ “ಅವನಿಗೆ ಬಾಲ್ಯದಲ್ಲಿ ಆರೋಗ್ಯ ಸಮಸ್ಯೆಯಿತ್ತು. ತೋರಿಸದ ಡಾಕ್ಟರ್ ಗಳಿಲ್ಲ, ಕೈ ಮುಗಿದ ದೇವರಿಲ್ಲ, ಆದರೆ ಅವನಿಗೆ ಆರೋಗ್ಯ ನೀಡಿದ್ದು ಇದೇ ಕ್ರಿಕೆಟ್ ಆಟ. 8 ನೆಯ ವಯಸ್ಸಿನಿಂದಲೇ ಕ್ರಿಕೆಟ್ ಆರಂಭಿಸಿದ, ಅಂದಿನಿಂದ ಇಂದಿನವರೆಗೂ ಕ್ರಿಕೆಟ್ ಅವನ ಅರೋಗ್ಯವನ್ನು ಕಾಪಾಡುತ್ತಾ ಬಂದಿದೆ ಮತ್ತು ಜೀವನದಲ್ಲಿ ಶಿಸ್ತನ್ನು ಕಲಿಸಿದೆ. ಒಮ್ಮೆ ಫೀಲ್ಡಿಂಗ್ ಮಾಡುವಾಗ ಬಿದ್ದು ಕಾಲಿಗೆ ಎಂಟು ಹೊಲಿಗೆಗಳಾಗಿದ್ದವು. ಆಗ ಅ ನೋವಿನಲ್ಲಿಯೂ ನೀರಜ್ ಕೇಳಿದ್ದು “ಅಪ್ಪ, ನಾನು ಕ್ರಿಕೆಟ್ ಆಡಬೇಕು, ಈ ನೋವಿನಿಂದ ನನ್ನ ಆಟ ನಿಲ್ಲಬಾರದು”… ಅಂದು ಅವನ ಮಾತು ಎಂದೂ ಮರೆಯಲು ಸಾಧ್ಯವಿಲ್ಲ ಎನ್ನುವಾಗ ಅವರ ಕಣ್ಣುಗಳಲ್ಲಿ ನೀರಿತ್ತು.
ಕುಟುಂಬದ ಜೊತೆಗೆ ನೀರಜ್
“ಮಗನ ಬೆಳವಣಿಗೆಗೆ ನಾನು, ನನ್ನ ಹೆಂಡತಿ ಮತ್ತು ಮಗಳು ಸಾಕಷ್ಟು ತ್ಯಾಗ ಮಾಡಿದ್ದೇವೆ. ಮಗಳು ಕೂಡಾ ಸ್ಕೇಟಿಂಗ್ ಆಟದಲ್ಲಿ ಮುಂದಿದ್ದಾಳೆ. ನಮಗೆ ಎಲ್ಲ ದಿನವೂ ಒಂದೇಯಾಗಿದೆ. ಕುಟುಂಬ ಸಮೇತರಾಗಿ ರಜೆ ದಿನ ಟ್ರಿಪ್ ಹೋಗದೆ ಎಷ್ಟೋ ವರ್ಷವಾಯಿತು. ಹೆಂಡತಿ ತವರು ಮನೆಗೆ, ಸಮಾರಂಭಗಳಿಗೆ ಹೋಗದೆ ವರ್ಷಗಳೇ ಕಳೆದಿದೆ. ಹೆಂಡತಿಗೆ ಇಲ್ಲಿವರೆಗೂ ಬಂಗಾರವನ್ನು ನಾನು ಕೊಡಿಸಿಲ್ಲ, ನನ್ನ ಮಕ್ಕಳನ್ನೇ ಬಂಗಾರವಾಗಿಸುವ ಆಸೆ ನನಗೆ. ಮಕ್ಕಳ ಏಳಿಗೆಗಾಗಿ ನಾನು ಮತ್ತು ನನ್ನ ಹೆಂಡತಿ ಏನು ಬೇಕಾದ್ರೂ ಮಾಡುತ್ತೇವೆ ಎಂದು ಹೇಳುವಾಗ ನೀರಜ್ ಬಗ್ಗೆ ತಂದೆಗೆ ಹೆಮ್ಮೆಯಿತ್ತು.
***
ಪ್ರಭವ್ ಪೈದಾ ಮತ್ತು ಅವರ ತಂದೆ ಪ್ರವೀಣ್ ಪೈದಾ
ಪ್ರಭವ್ ಪೈದಾ
ಕರ್ನಾಟಕ ತಂಡಕ್ಕೆ ಆಡುತ್ತಿರುವ ಮತ್ತೊಬ್ಬ ಆಟಗಾರ ಪ್ರಭವ್ ಪೈದಾ ಅವರ ಬಗ್ಗೆ ಅವರ ತಂದೆ ಪ್ರವೀಣ ಪೈದಾ ಹೇಳುತ್ತಾರೆ “ಬೆಳಗ್ಗೆ ನಾಲ್ಕು ಗಂಟೆಗೆ ಎದ್ದರೆ ರಾತ್ರಿಯವರೆಗೂ ನಿರಂತರವಾಗಿ ಫಿಟ್ನೆಸ್, ಮ್ಯಾಚ್, ತರಬೇತಿಯಲ್ಲಿ ಅವನ ದಿನ ಕಳೆದು ಹೋಗುತ್ತದೆ. ಅವನ ಸಮಯವನ್ನು ಯಾವತ್ತೂ ವ್ಯರ್ಥ ಮಾಡುವುದಿಲ್ಲ. ಕ್ರಿಕೆಟ್ ಮೇಲಿನ ಅವನ ಶ್ರದ್ದೆ ನೋಡಿದರೆ ತಂದೆಯಾಗಿ ಹೆಮ್ಮೆ ಪಡುತ್ತೇನೆ. ಪ್ರಭವ್ ಸ್ವಾವಲಂಭಿ, ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಾನೆ. ಅವನ ಶ್ರಮಕ್ಕೆ ತಂದೆಯಾಗಿ ಸಾಥ್ ಕೊಡುತ್ತಿದ್ದೇನೆ ಅಷ್ಟೇ ಎನ್ನುತ್ತಾರೆ ಅವರ ತಂದೆ. ಕರ್ನಾಟಕ ತಂಡಕ್ಕೆ ಆಡಬೇಕೆಂಬುದು ಅವನ ದೊಡ್ಡ ಕನಸ್ಸಾಗಿತ್ತು. ಕರ್ನಾಟಕ ತಂಡಕ್ಕೆ ಆಡಬೇಕೆಂಬುದು ಅವನ ಬಹುದೊಡ್ಡ ಕನಸ್ಸಾಗಿತ್ತು. ಅವನು 14 ರ ವಯೋಮಿತಿಯೊಳಗೆ ಕರ್ನಾಟಕ ತಂಡಕ್ಕೆ ಆಡುತ್ತಾನೆ ಎನ್ನುವ ನಂಬಿಕೆ ನನಗೆ ನೂರರಷ್ಟು ಇತ್ತು. ಇದು ಅಹಂಕಾರದ ಮಾತಲ್ಲ, ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎನ್ನುವ ಬಲವಾದ ನಂಬಿಕೆ’…ಎನ್ನುವುದು ಪ್ರಭಾವ್ ಅವರ ತಂದೆಯ ಆತ್ಮವಿಶ್ವಾಸದ ಮಾತು.
***
ಆರ್ಯನ್ ನಾಗೇಶ
ಆರ್ಯನ್ ನಾಗೇಶ
ಆರ್ಯನ್ ನಾಗೇಶ ಕುರಿತು ಅವರ ತಂದೆ ಹೇಳುತ್ತಾರೆ ‘ ಮಗನ ಸಾಧನೆಯನ್ನು ತಂದೆಯಾಗಿ ಹೆಮ್ಮೆ ಪಡುತ್ತೇನೆ. ಯಾವುದೇ ಆಟವಿರಲಿ, ಏನೆ ಮಾಡಲಿ ಶ್ರದ್ದೆ ಇದ್ದರೇ ಸಾಧಿಸಿಯೇ ಸಾಧಿಸುತ್ತಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಅವನು ಬಹುತೇಕ ಸಮಯವನ್ನು ಕ್ರಿಕೆಟ್ ನಲ್ಲಿ ಕಳೆದಿದ್ದಾನೆ. ನಾನು ಅವನ ಕನಸಿಗೆ ನೀರೆರಿದ್ದೇನಷ್ಟೆ. ಅದು ಹೆಮ್ಮರವಾಗಿ ಬೆಳೆಯುವುದನ್ನು ನೋಡಿ ಸಂಭ್ರಮಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ’… ಎನ್ನುತ್ತಾರೆ ಆರ್ಯನ್ ನಾಗೇಶ ಅವರ ತಂದೆ ನಾಗೇಶ ಅವರು .
***
ಒಬ್ಬರ ಸಾಧನೆಯ ಹಿಂದೆ ಸಾಕಷ್ಟು ಜನರ ಶ್ರಮ ಮತ್ತು ಬೆಂಬಲವಿರುತ್ತದೆ. ಕುಟುಂಬ ಮತ್ತು ಗುರುಗಳ ಮಾರ್ಗದರ್ಶನ ಇಲ್ಲದೆ ಯಾವ ವ್ಯಕ್ತಿಯೂ ಬೆಳೆಯಲಾರ. ಈ ಮೂರು ಜನ ಯುವ ಕ್ರಿಕೆಟ್ ಆಟಗಾರರ ಬೆಳವಣಿಗೆಗೆ ಅವರ ಕುಟುಂಬ ಮತ್ತು ರಾಜಾಜಿನಗರ ಕ್ಲಬ್ ನ ಪ್ರೋತ್ಸಾಹವಿದೆ. ರಾಜಾಜಿನಗರ ಕ್ಲಬ್ ನಲ್ಲಿ ಹದಿನೈದು ಜನ ತರಬೇತಿದಾರರಿದ್ದಾರೆ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎನ್ನುವಂತೆ ಈ ಕ್ಲಬ್ ನಲ್ಲಿ 80 ವರ್ಷದಿಂದ, 23 ವರ್ಷದ ವಯಸ್ಸಿನ ತರಬೇತಿದಾರರನ್ನು ನೋಡಬಹುದು. ಎರಡು ತಲೆಮಾರಿನ ಸಂಗಮದಿಂದ ಮಕ್ಕಳ ಉತ್ತಮ ಫಲಿತಾಂಶವನ್ನು ನೋಡಬಹುದು.
ವಿನಯ್ ಕುಮಾರ್ ಎನ್ ಪಿ , ಶ್ರೀವತ್ಸ್, ಪೆರ್ನಾಯ್ಕ್, ಯತೀಶ್ , ಹರ್ಷ ಮತ್ತು ಕೃಷ್ಣಮೂರ್ತಿ ಅವರು ಮಕ್ಕಳಿಗೆ ಬೇಕಾಗುವ ಹೆಚ್ಚಿನ ತರಬೇತಿಯನ್ನು ನೀಡುತ್ತಾರೆ. ಪ್ರತಿ ತರಬೇತಿದಾರರಿಗೂ ಅವರದೆಯಾದ ಪ್ರತಿಭೆಯಿದೆ. ಮಕ್ಕಳನ್ನು ಮುಂದೆ ತರುವಲ್ಲಿ ಇವರ ಶ್ರಮ ಅಪಾರ. ಅದರಲ್ಲಿಯೂ ರಾಜಾಜಿನಗರ ಕ್ಲಬ್ ನ್ನ ಮುಖ್ಯ ತರಬೇತಿದಾರರಾದ ವಿನಯ್ ಅವರನ್ನು ಈ ಮಕ್ಕಳು ಮತ್ತು ಅವರ ಪಾಲಕರು ನೆನೆಯುವುದನ್ನು ಮರೆಯುವುದಿಲ್ಲ.

ವಿನಯ್ ಅವರು ಸದಾ ಲವಲವಿಕೆಯಿಂದ ಆಟಗಾರರ ತಪ್ಪುಗಳನ್ನು ತಿದ್ದುತ್ತ, ಆಟಗಾರರು ಕುಗ್ಗಿದಾಗ ಆತ್ಮವಿಶ್ವಾಸವನ್ನು ತುಂಬುತ್ತಾರೆ. ಇವರು ಆಟಗಾರರ ಸ್ಫೂರ್ತಿಯ ಸೆಲೆ ಎಂದರೆ ತಪ್ಪಾಗಲಾರದು. ಕ್ರಿಕೆಟ್ ನಿಂದ ಬದುಕು ಹಾಳಾಗುತ್ತದೆ ಎನ್ನುವ ಪಾಲಕರಿಗೆ ವಿನಯ್ ಅವರು ಹೇಳುವುದಿಷ್ಟೇ “ಯಾವ ಮಕ್ಕಳು 24 ತಾಸು ಓದುವುದಿಲ್ಲ. ಅದರಲ್ಲಿನ ಒಂದಷ್ಟು ಸಮಯವನ್ನು ನಿಮ್ಮ ಮಕ್ಕಳಿಗೆ ಕ್ರಿಕೆಟ್ ಆಡಲು ಬಿಡಿ. ಇದರಿಂದ ಅವರು ಆರೋಗ್ಯವಾಗಿರುತ್ತಾರೆ, ಸಂತೋಷವಾಗಿರುತ್ತಾರೆ, ಜೀವನದಲ್ಲಿ ಶಿಸ್ತು ಕಲಿಯುತ್ತಾರೆ, ಏಳು ಬೀಳುಗಳನ್ನು ನೋಡುತ್ತಾರೆ. ಓದಿನ ಬಗ್ಗೆ ಹೆಚ್ಚು ಚಿಂತಿಸಬೇಡಿ. ಆಟದಲ್ಲಿ ಮುಂದಿದ್ದವನು ಓದಿನಲ್ಲಿ ಯಾವತ್ತೂ ಹಿಂದೆ ಇರಲಾರ. ಆಟದಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಯಾವ ವಯಸ್ಸಿನಲ್ಲಾದರೂ ಓದಬಹುದು, ಆದರೆ ಕ್ರಿಕೆಟ್ ಆಟದಲ್ಲಿ ಬದುಕು ಕಟ್ಟಿಕೊಳ್ಳಲು ಕೇವಲ 20 ವರ್ಷದೊಳಗೆ ಮಾತ್ರ ಸಾಧ್ಯ. ಯಾರಿಗೆ ಗೊತ್ತು, ನಾಳೆ ನಮ್ಮಲ್ಲಿಯೇ ಮತ್ತೊಬ್ಬ ಸಚಿನ್, ಕೊಯ್ಲಿ ಬೆಳೆಯಬಹುದು. ಕ್ರಿಕೆಟ್ ನಲ್ಲಿ ಬೆಳೆಯಲು ಮಕ್ಕಳಿಗೆ ಒಂದು ಅವಕಾಶವನ್ನು ಕೊಡಿ, “… ಎನ್ನುತ್ತಾರೆ. ಅವರ ಮಾತು ಕೇಳುವಾಗ ಸತ್ಯವೆನ್ನಿಸುತ್ತದೆ. ಯಾರು ಬೇಕಾದರೂ ಯಾವಾಗ ಬೇಕಾದರೂ ಓದಬಹುದು. ಆದರೆ ಕ್ರಿಕೆಟ್ ಅಥವಾ ಬೇರೆ ಆಟವಾಗಲಿ ನಿರ್ದಿಷ್ಟ ವಯಸ್ಸಿನಲ್ಲಿ ಸಾಧಿಸಬೇಕು. ಇಲ್ಲವಾದರೆ ರೈಲು ಹೋದ ಮೇಲೆ ಟಿಕೆಟ್ ಪಡೆಯುತ್ತೆನೆಂದರೆ ಸಾಧ್ಯವಿಲ್ಲ.ನಿಮ್ಮ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ… ಮುಂದೊಂದು ದಿನ ಈ ಸಾಧಕನ ತಂದೆ ತಾಯಿ ಎಂದು ಎದೆ ತಟ್ಟಿ ಹೇಳುವಂತಹ ಸಾಧನೆ ನಿಮ್ಮ ಮಕ್ಕಳು ಮಾಡಬಹುದಲ್ಲವೇ?.

ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಡುತ್ತಿರುವ ಈ ಮೂರು ಯುವ ಕ್ರಿಕೆಟ್ ಆಟಗಾರರು ಕೇರಳ ವಿರುದ್ದದ ಪದ್ಯದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಪ್ರಭಾವ್ ಪೈದಾ 98 ರನ್ ಹೊಡೆದರೆ, ಆರ್ಯನ್ ನಾಗೇಶ್ 78 ರನ್ ಮತ್ತು ಎಂ ನೀರಜ್ ಮೂರು ವಿಕೆಟ್ ನ್ನು ಗಳಿಸಿದ್ದಾರೆ.
ನೀರಜ್, ಪ್ರಭವ್ ಮತ್ತು ಆರ್ಯನ್ ನಾಗೇಶ್ ಈ ಮೂರು ಜನರ ಭವಿಷ್ಯ ಉಜ್ವಲವಾಗಿರಲಿ ಮತ್ತು ನಮ್ಮಲ್ಲಿ ಮತ್ತೊಬ್ಬ ಕ್ರಿಕೆಟ್ ಧೃವತಾರೆ ಬೆಳೆಯಲಿ ಎಂದು ಆಕೃತಿಕನ್ನಡ ಶುಭಕೋರುತ್ತದೆ..
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ (www.aakrutikannada.com)












