ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ರಾಮ್ ಟೆಕ್ ಪಟ್ಟಣದ ಸಮೀಪದ ಅರಣ್ಯ ಪ್ರದೇಶದಲ್ಲಿದೆ, ಬಾವಿಯಲ್ಲಿನ ನೀರು ಕರ್ಪೂರದ ವಾಸನೆಯನ್ನು ಹೊಂದಿದ್ದು, ಕರ್ಪೂರ್ ಬಾವೊಲಿ ಎಂದೇ ಕರೆಯುತ್ತಾರೆ.ಕರ್ಪೂರ್ ಬಾವೊಲಿಯ ಕುರಿತು ವಸಂತ ಗಣೇಶ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
1200 ವರ್ಷಗಳಷ್ಟು ಹಳೆಯದಾದ ಈ ಮೆಟ್ಟಿಲು ಬಾವಿ ಇರುವುದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ರಾಮ್ ಟೆಕ್ ಪಟ್ಟಣದ ಸಮೀಪದ ಅರಣ್ಯ ಪ್ರದೇಶದಲ್ಲಿ. ದಟ್ಟವಾದ ಕಾಡಿನ ಮಧ್ಯೆ ಅಡಗಿರುವ ಈ ದೇವಾಲಯ ಸಮುಚ್ಚಯ ಹಾಗೂ ಮೆಟ್ಟಿಲು ಬಾವಿ ಯಾದವರ ಕಾಲದ್ದು ಎಂದು ಹೇಳಲಾಗುತ್ತದೆ.
ಕರ್ಪೂರ್ ಎಂದರೆ ಕರ್ಪೂರ, ಬಾವೊಲಿ ಎಂದರೆ ಬಾವಿ. ಬಾವಿಯಲ್ಲಿನ ನೀರು ಕರ್ಪೂರದ ವಾಸನೆಯನ್ನು ಹೊಂದಿದ್ದು, ಈ ನೀರನ್ನು ಔಷಧಿಯಾಗಿ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇದು ರಾಮ್‌ಟೆಕ್‌ನಲ್ಲಿರುವ ದೇವಾಲಯಗಳಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಪುರಾತನ ಬಾವೊಲಿಯಾಗಿದೆ.

10 ನೇ ಮತ್ತು 12 ನೇ ಶತಮಾನದ AD ನಡುವೆ ಯಾದವ ರಾಜವಂಶದ ಆಡಳಿತಗಾರರಿಂದ ನಿರ್ಮಿಸಲ್ಪಟ್ಟ ಈ ಹಳೆಯ ಬಾವೊಲಿಯ ಪಕ್ಕದಲ್ಲಿರುವ ದೇವಾಲಯ ಆರು ದೇವತೆಗಳಿಗೆ ಸಮರ್ಪಿತವಾಗಿದೆ. ಚಾಮುಂಡಾ, ಭೈರವಿ, ಇಂಗಳಜ್, ಕಾಳಿ, ರಾಂಚಂಡಿ ಮತ್ತು ಕಪುರ್ತಾ ಎಂಬ 6 ದೇವತೆಗಳಿಗೆ ಸಮರ್ಪಿತವಾದ ಈ ದೇವಾಲಯ ಸಮುಚ್ಚಯಕ್ಕೆ ಹೊಂದಿಕೊಂಡಂತೆ ಬಾವಿಯಿದೆ.

ಸ್ಥಳೀಯರಿಂದ ಕಾಳಿ ಮಾತಾ ದೇವಾಲಯ ಎಂದು ಕರೆಯಲ್ಪಡುವ ಪಾಳುಬಿದ್ದ ದೇವಾಲಯವು ಕರ್ಪುರ್ ಬಾವೊಲಿಯ ಒಂದು ತುದಿಯಲ್ಲಿದೆ. ಹಿಂದೆ ಬೇಸಿಗೆಯಲ್ಲಿ ಈ ಬಾವೊಲಿ ನೀರಿನ ಪ್ರಮುಖ ಮೂಲವಾಗಿತ್ತು ಎನ್ನುತ್ತಾರೆ. ಈ ನೀರಿನ ಮೂಲ ಅಂತರ್ಜಲವಾಗಿದ್ದು, ಇಲ್ಲಿ ನೀರು ಯಾವಾಗಲೂ ತುಂಬಿರುತ್ತದೆ, ನೀರು ಕಡಿಮೆಯಾಗಿದ್ದು ಇಲ್ಲವೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಇಲ್ಲಿರುವ ದೇವಾಲಯದ ಹಿಂದಿರುವ ಈ ಬಾವಿ ಮತ್ತು ಬೆಟ್ಟಗಳ ಸಾಲು ಕಣ್ಣಿಗೆ ಹಬ್ಬವನ್ನು ಉಂಟು ಮಾಡುವಂತಿದೆ. ಪ್ರವಾಸಿಗರು ದೇವಾಲಯದ ಸಂಕೀರ್ಣದ ಸುತ್ತಲೂ ಓಡಾಡುತ್ತಾ ಭವ್ಯವಾದ ವಾಸ್ತುಶಿಲ್ಪದ ಕಟ್ಟಡ ಮತ್ತು ಕೆತ್ತನೆಗಳನ್ನು ವೀಕ್ಷಿಸುತ್ತಾ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಬಹುದು. ಅಥವಾ ಬಾವೊಲಿಯ ಬಳಿ ಕುಳಿತುಕೊಳ್ಳಬಹುದು.
ದೇಗುಲವು ಸಾಲು ಸಾಲು ಕಂಬಗಳನ್ನು ಹೊಂದಿದೆ ಹಾಗೂ ಇಲ್ಲಿಯ ವಾಸ್ತುಶೈಲಿಯು ಹರಪ್ಪಾ ಸಂಸ್ಕೃತಿಯನ್ನು ನೆನಪಿಸುವಂತಿದೆ ಎನ್ನಲಾಗಿದೆ.
ಕೊಳದಲ್ಲಿ ದೇಗುಲದ ಪ್ರತಿಬಿಂಬವು ಕಲಾತ್ಮಕವಾಗಿ ಕಾಣುತ್ತದೆ. ಪ್ರಸ್ತುತ ಈ ಕ್ಷೇತ್ರದ ಕುರಿತು ನಿಖರವಾದ ಮಾಹಿತಿಯ ಕೊರತೆಯಿದೆ. ಆದರೂ ಸಹ ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮಾಲೀಕತ್ವವನ್ನು ವಹಿಸಿಕೊಂಡಿರುವುದರಿಂದ, ಕೊಳ ಮತ್ತು ಕಟ್ಟಡವನ್ನು ಸ್ವಚ್ಛವಾಗಿ ಮತ್ತು ಉತ್ತಮವಾಗಿ ನಿರ್ವಹಿಸುವ ಪ್ರಯತ್ನದಲ್ಲಿದೆ.
- ವಸಂತ ಗಣೇಶ್
