ಈ ಸಿನಿಮಾವನ್ನು 14 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ತೋರಿಸಲೇ ಬೇಕು. ಅದ್ರಲ್ಲೂ ಬೆಂಗಳೂರಿನಂತ ಮಹಾ ನಗರವಾಸಿಗಳು ಖಂಡಿತ ನೋಡಲೇಬೇಕಾಂದಂತಹ ಸಿನಿಮಾ. ಬೆಂಕಿ ಅಂದ್ರೆ ಅಡುಗೆ ಮನೆ ಒಲೆಯಲ್ಲಿಉರಿಯೋದಲ್ಲ, ರಕ್ತ ಅಂದ್ರೆ ಕೈ ಕುಯ್ಕೊಂಡಾಗ ಬರುತ್ತೆ ಅಲ್ಲ ಅದಲ್ಲ, ಸತ್ಯತೆಯನ್ನುಅರಿಯಲು ನೋಡಲೆಬೇಕು ಈ ಸಿನಿಮಾ. ತಮ್ಮ ಹುಟ್ಟೂರು ಬಿಟ್ಟು ಪರ ಊರಿನಲ್ಲಿ ನೆಲೆಸಿರುತ್ತಾರಲ್ಲ ಅವರೆಲ್ಲಾ ನೋಡಲೇ ಬೇಕಾದ ಸಿನಿಮಾ…
ಪುಷ್ಕರ್ ನಾಥ್ ಪಂಡಿತ್” ಕೊನೆಯುಸಿರೆಳೆಯುವ ಆ ದೃಶ್ಯ ಇದ್ಯಲ್ಲ, ಯಾಕೋ ಬಿಟ್ಟೂ ಬಿಡದೇ ಕಾಡ್ತಾ ಇದೆ. ಅಬ್ಬಾ ಅವರ ಆತ್ಮಾಕಾಂಕ್ಷೆಗೆ, ತಾಯ್ನಾಡಿನ ಪ್ರೀತಿಗೆ, ಅದಕ್ಕಾಗಿ ಅವರು ಹೋರಾಡಿದ ರೀತಿಗೆ ಮುದ್ದೆಯಾಗಿ ಹೋಯಿತು ಮನಸ್ಸು. “ದಿ ಕಾಶ್ಮೀರ್ ಫೈಲ್ಸ್ ” ಎರಡು ಬಾರಿ ನೋಡಿ ಬಂದೆ, ಥೀಯೇಟರ್ ನಲ್ಲೇ.. ಒಮ್ಮೆ ನೋಡ್ಲಿಕ್ಕೆ ಭಯ ಆಗ್ತಾ ಇದೆ. ಇನ್ನು ನೀನು ಎರಡು ಸಲ ನೋಡಿದ್ಯಾ ಅಂತ ಹುಬ್ಬೇರಿಸಿದ್ರು ಹಲವರು… ಹೌದು, ಎರಡು ಸಲ ನೋಡಿದೆ. ಮೊದಲ ಬಾರಿಗಿಂತ ಎರಡನೇ ಬಾರಿ ಜಾಸ್ತಿ ಅತ್ತೆ..ಈ ತಾತ, ಪುಷ್ಕರ್ ನಾಥ್ ಪಂಡಿತ್, ಕಾಶ್ಮೀರಿ ಶಾಲಿನಲ್ಲಿ ಕಲ್ಲಿಟ್ಟು ಹೊಡೆದನಲ್ಲಾ, ಎರಡನೇ ಬಾರಿ ಇನ್ನೂ ಜಾಸ್ತಿ ನೋವಾಯ್ತು…

ಫೋಟೋ ಕೃಪೆ : dnaindia
ಭಯಾನಾ!!?? ಕುಳಿತಿರುವ ಸೀಟ್ ಹರಿದು ಹಾಕುವಷ್ಟು ರೋಷ ಉಕ್ಕತಾ ಇತ್ತು.ಭಯ ಎಲ್ಲಿಂದ… No chance. ಈ ಹಿಂಸೆಗಳ ಒಂದು ಭಾಗ ನಾವೂ ಅನುಭವಿಸಿದ್ದೇವಲ್ಲ ಅಂತ ಚಡಪಡಿಸ್ತಾ ಇತ್ತು ಮನಸ್ಸು…ಇದರ ಬಗ್ಗೆ ಆಮೇಲೆ ಹೇಳ್ತೀನಿ..
ಈ “ಪುಷ್ಕರ್ ನಾಥ್ ಪಂಡಿತ್” ನನ್ನ ಅಪ್ಪನಲ್ಲಿ, ಆಯಿಯಲ್ಲಿ, ಅತ್ತೆ ಮಾವಂದಿರಲ್ಲಿ, ಎಲ್ಲಾ ನಮಗಿಂತ ಹಿರಿಯ ಪೀಳಿಗೆಯವರಲ್ಲಿ ಕಂಡ…ಕಾಡಿದ….

ಫೋಟೋ ಕೃಪೆ : gqindia
ಊರಿಂದ ಅಪರೂಪಕ್ಕೆ ಬೆಂಗಳೂರಿಗೋ, ಇನ್ನೆಲ್ಲೋ ಇರುವ ಮಕ್ಕಳ ಮನೆಗೆ ಬರ್ತಾರೆ ನಮ್ಮ ಹೆತ್ತವರು. ಅಥವಾ ಅವರ ಹಿರಿಯರು ಅಂತಾನೇ ಅಂದ್ಕೊಳ್ಳಿ.. ನಾಲ್ಕೈದು ದಿನ, ಹೋಗ್ಲಿ ಒಂದು ವಾರ ಕಳೀತಾ ಇದ್ದ ಹಾಗೇ ಶುರು ಮಾಡ್ತಾರೆ ” ಅಯ್ಯೋ ಮನೆ ಬಿಟ್ಟು ಜಾಸ್ತಿ ದಿನ ಆಗೋಯ್ತು, ಮನೆಗೆ ಹೋಗ್ಬೇಕು… ತೋಟಕ್ಕೆ ನೀರು ಹಾಕೋವ್ರಿಲ್ಲ, ಅಲ್ಲೊಂದು ಚೂರು ರಿಪೇರಿ ಇದೆ, ಇಲ್ಲೊಂದು ಚೂರು ಕಟ್ಟೆ ಕಟ್ಟಿಸಬೇಕು””.. ಹಾಗೇ ಹೀಗೇ… ಇನ್ನು ಕೊಟ್ಟಿಗೆ, ದನ ಕರು ಇದ್ರೋ ಮುಗಿದೇ ಹೋಯ್ತು. ಅವರು ಬರೋದೇ ಹನ್ನೊಂದನೇ ಅಧ್ಭುತ, ಇನ್ನು ಬಂದ್ರೆ ಎರಡು ದಿನ ಇರೋದು!!.. ಅದರ ಮುಂದಿನ ಮರೀಚಿಕೆಗಳಲ್ಲೊಂದು…ಇದಕ್ಕೆಲ್ಲ ನಾವುಗಳೋ, so called ಪಟ್ಟಣಗಳಲ್ಲಿ ತಣ್ಣಗೆ ಸೆಟ್ಲ್ ಆದ ನಾವುಗಳೋ ಅವರ ಭಾವನೆಗಳಿಗೆ ಸ್ಪಂದಿಸುವದಂತೂ ಇರಲಿ, “ಅದೆಲ್ಲ ಹೇಗೂ ನಡಿಯುತ್ತೆ, ಇನ್ನೊಂದು ವಾರ ಇಲ್ಲಿ ಇರೋದೇ, ಟಿಕೆಟ್ ಮಾಡಿ ಆಗಿದೆ ಮುಂದಿನ ವಾರಕ್ಕೆ, ಒಂದು ವಾರದಲ್ಲಿ ಏನೂ ಜಗತ್ತು ಮುಳುಗಿ ಹೋಗೋದಿಲ್ಲ.. ಮೊಮ್ಮಕ್ಕಳ ಜೊತೆ ಆರಾಮಾಗಿ ಟಿವಿ ನೋಡ್ಕೊಂಡು ಇರಿ.. ಇನ್ನೊಂದು ವರ್ಷ, ತಗೊಂಡಿರೋ ಜಾಗದಲ್ಲಿ ಮನೆ ಕಟ್ಟಿದ ಮೇಲೆ ಅಲ್ಲಿದೆಲ್ಲ ಮಾರಾಟ ಮಾಡಿ ಒಟ್ಟಿಗೇ ಇಲ್ಲೇ ಇದ್ರೆ ಆಯ್ತು. ನಮಗೂ ಊರಿಗೆ ಬರೋದು ಈಗ್ಲೇ ಕಷ್ಟ. ಇನ್ನು ಮುಂದೆ, ನೀವೂ ಇಲ್ಲಿಗೇ ಬಂದ ಮೇಲೆ ಅದರ ಅವಶ್ಯಕತೆನಾದ್ರೂ ಏನಿದೆ. ಮಾರಾಟ ಆದ್ರೆ ಆಗ್ಲಿ, ಇಲ್ಲದೇ ಇದ್ರೆ ಹಾಗೇ ಇರುತ್ತೆ. ಆಮೇಲೆ ನೋಡೋಣ”” ಅಂತ…… ಖಂಡತುಂಡವಾಗಿ ಹೇಳಿ ಅವರ ಮುಖನೂ ನೋಡದೇ ಆಫೀಸ್ ಕಡೆ ಹೆಜ್ಜೆ ಹಾಕ್ತೇವೆ.
ಮಗನ/ಮಗಳ ಮಾತಿಗೆ ಇದಿರಾಡದ ಅಸಹಾಯಕತೆ ಹೆತ್ತವರಲ್ಲಿ. ಕೊನೆಗೆ ಒಂದರ್ಥದಲ್ಲಿ ಮಕ್ಕಳ ನಿರ್ಧಾರವೇ ಸರಿ ಅಂತ ಒಪ್ಪಿಕೊಂಡು ಸಿದ್ದರಾಗಿರ್ತಾರೆ ನಮ್ಮ ಹೆತ್ತವರು ಕೊಂಡಿ ಕಳಚಿಕೊಂಡು ಬರಲು..ಆದರೆ ಅವರ ತಳಮಳ??? ಕೇಳಲಿಕ್ಕೆ ಪುರುಸೊತ್ತು ಯಾರಿಗಿದೆ?

ಒಮ್ಮೆ ಆ ಕಡೆ ತಲೆಬಿಸಿ ಮುಗಿಸ್ಕೊಂಡ್ರೆ ಸಾಕಪ್ಪಾ ಅಂತ ಮಕ್ಕಳು. ಸುಮ್ನೇ ಯಾಕೆ ಮಕ್ಕಳಿಗೆ ತೊಂದ್ರೆ ಕೊಡೋದು, ಇದೂ ಊರೇ ಅಲ್ವೇ, ನಾವು ಎಲ್ಲಾದ್ರೂ ಹೊಂದಿಕೊಂಡು ಇರ್ತೇವೆ ಅಂತ ವಯೋಸಹಜ ಅಸಹಾಯಕತೆಯಿಂದ ಹೆತ್ತವರು. ಅಂತೂ “ಆನಂದದ ತವರೂರು ನಾನು ನೆಲೆಸಿದ ಊರು” ಅಂತ ಹಾಯಾಗಿರ್ತೇವೆ… ಹೌದಾ!!? ಹಾಯಾಗಿರ್ತೀವಾ??!!.. ಮೊನ್ನೆ ಒಂದು ಸಂಗೀತ ಕಾರ್ಯಕ್ರಮಕ್ಕೆ ಹೋದಾಗ ಒಬ್ರು ಪರಿಚಯ ಮಾಡ್ಕೊಂಡು, ಮಾತಿಗೆ ಶುರು ಮಾಡಿದ್ರು.. “ಓಹ್, ಹೌದಾ… Basically you are from??”””… ಓಹ್… ಅಲ್ವಾ,,, basically I am from??? ನನ್ನ native place? ನನ್ನ ಹುಟ್ಟೂರು? ನಾನು ಇಲ್ಲಿಯವನಲ್ಲ. ನಾನು ಇಲ್ಲಿ ದುಡಿಯುತ್ತೇನೆ, ಇಲ್ಲಿ ನೀರಿಗೆ, ಗಾಳಿಗೆ, ಜಾಗಕ್ಕೆ ಟ್ಯಾಕ್ಸ್ ಕಟ್ತೇನೇ, ಸ್ವಂತ (ಹ್ಹ ಹ್ಹ.. ) ಮನೆ ಮಾಡ್ಕೊಂಡಿದ್ದೇನೆ. ಆದ್ರೂ…….. ಈ ಊರೇ ನನ್ನ ಸ್ವಂತದ್ದಲ್ಲವಲ್ಲ… ಅಲ್ವಾ?? ಈ ಪುಷ್ಕರ್ ನಾಥ್ ಕಾಡೋದು ಇಲ್ಲೇ.. ಅವನು ತನ್ನ ಊರನ್ನು ಬಿಟ್ಟು ಬಂದ ಪರಿಸ್ಥಿತಿಯಲ್ಲಿ ಅವನು ಮತ್ತೆ ಜನ್ಮದಲ್ಲಿ, ಕನಸು ಮನಸ್ಸಿನಲ್ಲಿಯೂ ಆ ಊರು ನೆನಪಿಸಿಕೊಳ್ಳಬಾರದು… ಆದರೆ ಈ ಮನುಷ್ಯ ತನ್ನ ಜೀವನದ ಪ್ರತೀ ಉಸಿರಲ್ಲೂ ತನ್ನೂರನ್ನೇ ತುಂಬಿಸಿಟ್ಟುಕೊಂಡಿರುತ್ತಾನಲ್ಲಾ. ಇವನ ಮನೆ ಧ್ವಂಸವಾಗಿದೆ. ಮಗ ಸೊಸೆ ಮೊಮ್ಮಗ ಬರ್ಭರವಾಗಿ ಹತ್ಯೆಯಾಗಿದ್ದಾರೆ. ಇದ್ದ ಇನ್ನೊಬ್ಬ ಮೊಮ್ಮಗನಿಗೆ ಸತ್ಯದ ಪರಿಚಯ ಮಾಡಿಸದೇ ಬೆಳೆಸಿ ಒಳ್ಳೇ ಶಿಕ್ಷಣ ಕೊಡಿಸುವಲ್ಲಿ ಸಫಲನಾದರೂ, ಅವನ ಉಸಿರುಸಿರಿನ ತುಡಿತ ಕೇವಲ ಕಾಶ್ಮೀರ… ಕಾಶ್ಮೀರ… ಕಾಶ್ಮೀರ…

ಫೋಟೋ ಕೃಪೆ : gqindia
ಸಾಯುವ ಕ್ಷಣದಲ್ಲೂ ತನ್ನ ಮನೆಯ ಒಡೆದ ಗಾಜು, ತನ್ನ ಪ್ರೀತಿಯ ಸ್ಕೂಟರ್ ಇನ್ನೂ ಚೆನ್ನಾಗೇ ಇರುತ್ತೆ, ಪೈಂಟ್ ಒಂದು ಮಾಡ್ಸಿದ್ರಾಯ್ತು ಅನ್ನುವ ಪರಿ, ಪ್ರಧಾನ ಮಂತ್ರಿಗಳಿಗೆ ತಾನು ಬರೆದ 6000 ಪತ್ರಗಳ ಲೆಕ್ಕ, ಅದರಿಂದ ಅವರು ತನ್ನನ್ನು ಆಹ್ವಾನಿಸುತ್ತಾರೆ ಎನ್ನುವ ಮಹತ್ವಾಕಾಂಕ್ಷೆ…. ಓಹ್,.. ಕೊನೆಯುಸಿರಲ್ಲೂ ತನ್ನ ಮಾತೃಭಾಷೆಯಲ್ಲಿ ತನ್ನ ನೆಲವನ್ನು ನೆನೆದು ಪ್ರಾಣ ಬಿಡ್ತಾನಲ್ಲ… ಅಯ್ಯೋ… ತಲೆ ತಗ್ಗಿಸಿ ಕಣ್ಣೀರು ಸುರಿಸಿದ್ದೇ… ಅವನಿಗ್ಯಾಕೆ ಈ ಪರಿ ತನ್ನ ಊರಿನ ಬಗ್ಗೆ ಮೋಹ? ನಮಗ್ಯಾಕೆ ಆ ಪರಿ ನಮ್ಮೂರಿನ ಬಗ್ಗೆ ವೈರಾಗ್ಯ!? ನಮ್ಮ ಪರದೇಸಿ ವ್ಯಾಮೋಹವೇ ಅಲ್ಲವೇ ನಮ್ಮ ನಮ್ಮ ಊರುಗಳನ್ನು ಬಂಜರು ಮಾಡಿದ್ದು? ಊರಿಗೆ ಊರೇ ವೃದ್ಧಾಶ್ರಮಗಳಾಗಿದ್ದು? ನಾವ್ಯಾಕೆ ಹೀಗೆ? ಎಷ್ಟು ಹೊತ್ತಿಗೂ ನಮಗ್ಯಾಕೆ ಊರು ಖಾಲಿ ಮಾಡುವ ಚಿಂತೆ? ನಮಗ್ಯಾಕೆ ನಮ್ಮ ನೆಲ,ಭಾಷೆ ಬಗ್ಗೆ ಅಭಿಮಾನನೇ ಇಲ್ಲಾ? ನಮ್ಮ ಹಿರಿಯ ಪೀಳಿಗೆಯವರ್ಯಾಕೆ ನಮಗೆ ಬೈದು ಬುದ್ಧಿ ಹೇಳುವುದಿಲ್ಲ? ನಾನು ಸಾಯುವುದೂ ಇಲ್ಲೇ, ಬದುಕುವುದೂ ಇಲ್ಲೇ …ನೀನೇ ಬರಬೇಕು ನನ್ನ ನೋಡಲು ನಾ ಬರಲಾರೆ ಅನ್ನುವ ತಾಕತ್ತು ಯಾಕೆ ಯಾವ ಹಿರಿಯರೂ ಮಾಡಲಾರರು? ನಮಗೆ ನಮ್ಮ ಊರಿಗೆ ಹೋಗಲು ಯಾರಾದ್ರೂ ಅಡ್ಡಿಪಡಿಸಿದ್ದಾರೆಯೇ? ಯಾಕೆ ನಮಗ್ಯಾರಿಗೂ ಬೇಡವಾದ ಊರು, ನನ್ನೂರು ಪುಷ್ಕರ್ ನಾಥ್ ಪಂಡಿತ್ ಗೆ ಮಾತ್ರ ಬೇಕು? ನಾವೆಲ್ಲ ಊರು ಬಿಟ್ಟಿರುವುದರಿಂದನೆ ಅಲ್ವೇ ನಮ್ಮೂರಲ್ಲಿ ಪರಕೀಯರು ತಳವೂರ್ತ ಇರೋದು? ಇದನ್ಯಾಕೆ ನಾವು ತಿಳ್ಕೊಳ್ತಾ ಇಲ್ಲ? ನಮಗೆ ಅಲ್ಲಿನ ಜಮೀನು ಮಾರಾಟವಾದರೆ ಸಾಕು ಅಂತ ಯಾರೋ ಕುಲ ಗೋತ್ರ ಗೊತ್ತಿರದವರಿಗೆ ಮಾರಾಟ ಮಾಡ್ತಾ ಇದ್ದೇವಲ್ಲ,, ಇದು ಜಿನೋಸೈಡೋ? ಎಕ್ಸೋಡಸ್ಸೋ? ಅಥವಾ ಸುಯಿಸೈಡೋ?? ಇದರಲ್ಲಿ ಹಿರಿ ಕಿರಿಯರ ಇಬ್ಬರ ಜವಾಬ್ದಾರಿನೂ ಇದೆ. ಈ ಕಾಶ್ಮೀರಿ ಪಂಡಿತರು ಜಗತ್ತಿನ ಮೂಲೆ ಮೂಲೆಯಲ್ಲಿ ಇದ್ರೂ ಇವತ್ತಿಗೂ ತಮ್ಮ ತಾಯ್ನಾಡಿಗೆ ಮರಳಲು ಕಾಯ್ತಾ ಇದ್ದಾರೆ ಅನ್ನುವುದು ಈ ಪಿಕ್ಚರ್ ಬಂದಾಗ ಮತ್ತು ಅದರ ನಂತರದ ಬೆಳವಣಿಗೆಗಳಲ್ಲೇ ತಿಳಿಯುತ್ತೆ… ಆದರೆ ನಮಗೆ?? ಊರಿಗೆ ಹೋಗಲು ಯಾವ ಅಡ್ಡಿ ಆತಂಕಗಳು ಇಲ್ಲವಲ್ಲ ಅನ್ನೋದೇ ನಮ್ಮ ದೊಡ್ಡ ಸಮಸ್ಯೆಯಗಿದ್ದರೆ, ಆ ಆತಂಕಗಳು ಎದುರಾಗುವ ದಿನ ದೂರದಲ್ಲಿಲ್ಲ.. ಇಷ್ಟು ಹೇಳ್ಕೊಂಡ್ರು ಈ ಪುಷ್ಕರ್ ನಾಥ್ ಪಂಡಿತ್ ಮತ್ತೆ ಮತ್ತೆ ಕಾಡ್ತಾನೇ ಇರ್ತಾನೆ… ಕಣ್ಮುಚ್ಚಿದರೆ ಅವನ ‘ಲೋರಿ’ ಗುಯ್ ಗುಡ್ತಾನೆ ಇರುತ್ತೆ… ಅವನು ಗುನುಗ್ತಾ ಇರ್ತಾನಲ್ಲ ಆ ಲೋರಿ ಅದ್ನ ಕೇಳಲಿಕ್ಕೆ, ಮತ್ತೆ ಮತ್ತೆ ಅತ್ತು ಕರಗಲಿಕ್ಕೆ ಈ ಪಿಕ್ಚರ್ ನ ಮತ್ತೆ ಮತ್ತೆ ನೋಡ್ಲಿಕ್ಕೆ ready ನಾನು… ಭಯವಂತೂ ಸುತಾರಾಂ ಇಲ್ಲ.. ಇವೆಲ್ಲದರ ಒಂದಂಶವನ್ನು ಪ್ರತ್ಯಕ್ಷ ಅನುಭವಿಸಿದವರು ನಾವು.

ಫೋಟೋ ಕೃಪೆ : gqindia
Yes… ಭಟ್ಕಳದಲ್ಲಿ ಮೂವತ್ತು ವರ್ಷಗಳ ಕೆಳಗೆ ನಡೆದ ಕೋಮುಗಲಭೆಯ ಪ್ರತ್ಯಕ್ಷದರ್ಶಿಗಳು ನಾವು..ಆ ಕರ್ಫ್ವ್ಯೂ ನಲ್ಲಿ 15ದಿನಗಳಿಗೂ ಹೆಚ್ಚು ಕಾಲ ಸಿಲುಕಿ ಒದ್ದಾಡಿದವರು ನಾವು. ಊಟಕ್ಕೆ ಎರಡು ತುತ್ತು ಅನ್ನ, ಹುಳಸೆಹಣ್ಣಿನ ಸಾರು. ರಾತ್ರಿ ಧೈರ್ಯಕ್ಕೆ ತೆಂಗಿನಕಾಯಿ ಒಡೆಯುವ ಕತ್ತಿ. ನಾವು ಮೂರು ಅಕ್ಕ ತಂಗಿಯರು, ಆಯೀ, ಪಕ್ಕದ ಮನೆ ಎರಡು ಅಕ್ಕಂದಿರು ಎಲ್ಲರಿಗೂ ಗಂಡು ಧೈರ್ಯ ಒಬ್ಬನೇ ಒಬ್ಬ ನಮ್ಮ ಅಪ್ಪಯ್ಯ.. ಅಪ್ಪನ ಆವತ್ತಿನ ಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯ… ಇನ್ನು ಎರಡೇ ದಿನ ಅಲ್ಲಿದ್ದಿದ್ರೆ ಇವತ್ತಿಗೆ 30 ಶ್ರಾದ್ಧ ಆಗಿರ್ತಿತ್ತು. ಅದೇನೋ ಅಂದು ನಮ್ಮ ಪಕ್ಕದ ಮನೆಯವರು ಒಳ್ಳೆಯವರಾಗಿದ್ರು. ನಮ್ಮ ಊರಲ್ಲ ಭಟ್ಕಳ. ಅಪ್ಪನ ನೌಕರಿಯ ಸ್ಥಳ. ಪಕ್ಕದ ಮನೆಯ ತಾತ ನಮಗೂ ಮೃತ್ಯುದೇವತೆಗೂ ಮಧ್ಯದ ಎಳೆ. ಅಂತೂ ಪೊಲೀಸ್ ವಾಹನದಲ್ಲಿ ನಮ್ಮೂರು ತಲುಪಿದ ಮಾರನೇ ದಿನವೇ ಭಟ್ಕಳ ಅಕ್ಷರಶಃ ರಕ್ತದಲ್ಲಿ ತೊಯ್ದಿತ್ತು… ಅಮಾಯಕರ ಬಲಿದಾನ ನಡೆದೇ ಹೋಗಿತ್ತು.. ಇದು ಹೀಗೇ ತಾನೇ ಆಗೋದು? ಯುದ್ಧ ಭೂಮಿ ಯಲ್ಲಿ ಯುದ್ಧ ನಡೆದರೆ ‘ಶಹೀದ್’ ಆಗ್ಲಿಕ್ಕೆ ತಯಾರಾಗಿರುವವರೇ ಇರ್ತಾರೆ.. ಆದರೆ ಇಂತಹ ಧೊಂಬಿಗಳು, ಗಲಭೆಗಳು ಅಮಾಯಕರ ಬಲಿ ತೆಗೆದುಕೊಂಡು ಮಾನವೀಯತೆಗೆ ಶಾಪವಾಗಿ ಕಾಡುತ್ತದೆ.

ಫೋಟೋ ಕೃಪೆ : gqindia
ಈ ಪಿಕ್ಚರ್ ನ 14 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ತೋರಿಸಬೇಕು. ಅದ್ರಲ್ಲೂ ಬೆಂಗಳೂರಿನಂತ ಮಹಾನಗರವಾಸಿಗಳು ಖಂಡಿತ ನೋಡಬೇಕು. ಬೆಂಕಿ ಅಂದ್ರೆ ಅಡುಗೆ ಮನೆ ಒಲೆಯಲ್ಲಿ ಮಾತ್ರ ನೋಡಿದವರು,ರಕ್ತ ಅಂದ್ರೆ ಕೈ ಕುಯ್ಕೊಂಡಾಗ ಮಾತ್ರ ಬರುತ್ತೆ ಅಂದುಕೊಂಡವರು ನೋಡ್ಲೇಬೇಕು. ತಮ್ಮ ಹುಟ್ಟೂರು ಬಿಟ್ಟು ಪರ ಊರಿನಲ್ಲಿ ಸ್ವಂತ ಮನೆ ಕಟ್ಕೊಂಡವರು ತಿಳ್ಕೊಳ್ಳಲೇಬೇಕು.. ಕಾಶ್ಮೀರದಲ್ಲಿ ಹಿಂದೂಗಳು ಮಾನ ಪ್ರಾಣ ಭಯದಿಂದ ಊರು ಬಿಟ್ಟು ಅವರಿಗೆ ಕೊಟ್ರು . ನಾವು ನಮ್ಮ ಊರನ್ನು ನಮ್ಮ ನಮ್ಮ ವ್ಯಾಮೋಹದಿಂದ ಉಳಿದವರಿಗೆ ಬಿಟ್ಟು ಕೊಡ್ತಾ ಇದ್ದೇವೆ.
ಕಾಶ್ಮೀರದ ಸತ್ಯ ದೇಶದ ಸತ್ಯವಾಗಬಾರದು.. ಅದು ನೆಲ, ಜಲ, ಮಾನ, ಪ್ರಾಣ ಯಾವ ತರಹದ್ದೇ ಇರಲಿ, ಆತ್ಮಾಭಿಮಾನ ನಮ್ಮದಾಗಿರಲಿ. ಬೆಂಗಳೂರಿನ ಯಾವ ಮೂಲೆಯಲ್ಲಿ ಅಡಗಿ ಕುಳಿತರೂ ಈ “ಪುಷ್ಕರ್ ನಾಥ್ ” ನನ್ನನ್ನು ಯಾವತ್ತೂ ಎಚ್ಚರಿಸುತ್ತಾ ಇರಲಿ.
- ಮಾಲತಿ ಗಣೇಶ್ ಭಟ್ (ಉಪನ್ಯಾಸಕಿ, ಯುವ ಬರಹಗಾರ್ತಿ), ಬೆಂಗಳೂರು
