ಸವಿತಾ ಮುದ್ಗಲ್ ಅವರ “ಕಥಾ ಸರೋವರ” ಕಥಾ ಸಂಕಲನದಲ್ಲಿನ ‘ನೀನಂದ್ರೆ ನನಗಿಷ್ಟ ಅಮ್ಮ’ ಎನ್ನುವ ಕಥೆಯಲ್ಲಿ ತಾಯಿಯ ಅಂತಃಕರಣ, ತ್ಯಾಗಮಯ, ಸಹಕಾರ ಭಾವನೆಗಳಿಂದ ತುಂಬಿದೆ, ವಾಯ್.ಎಂ.ಕೋಲಕಾರ ಅವರು ಸವಿತಾ ಮುದ್ಗಲ್ “ಕಥಾ ಸರೋವರ” ಕಥಾ ಸಂಕಲನದ ಕುರಿತು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಕಥಾ ಸಂಕಲನ : ಕಥಾ ಸರೋವರ
ಲೇಖಕರು : ಸವಿತಾ ಮುದ್ಗಲ್
ಪ್ರಕಾಶನ : ಹೆಚ್.ಎಸ್.ಆರ್.ಎ.ಬೆಂಗಳೂರು
ಪುಟಗಳು : ೧೧೨. ಬೆಲೆ : ೧೨೦
ಖರೀದಿಗಾಗಲಿ : ೭೭೬೦೭೯೭೬೭೮.
ಸಮಾಜ ಮತ್ತು ಸಾಹಿತ್ಯ ಸಮ್ಮಿಲನವಾದಗಲೇ ನಮ್ಮ ಸಂಸ್ಕೃತಿ ಮತ್ತಷ್ಟು ಶ್ರೀಮಂತಿಕೆಯಾಗುತ್ತದೆ. ಏಕೆಂದರೆ ಸಾಹಿತ್ಯ ಸಮಾಜವನ್ನು ತಿದ್ದಿ ತೀಡಿ ವದ್ಧಿಪಡಿಸುವ ಕೈಗನ್ನಡಿ ಇದ್ದಂತೆ. ಸಾಹಿತ್ಯಕ್ಕೆ ತನ್ನದೆಯಾದ ಮನೋಬಲವಿದೆ. ಇಂತಹ ಇಚ್ಛಾಸಕ್ತಿ, ಮನೋಬಲವನ್ನು ರೂಢಿಸಿಕೊಂಡ ಉದಯೋನ್ಮುಕ ಕವಯತ್ರಿ, ಕೃತಿಕರ್ತೃ ಸವಿತಾ ಮುದ್ಗಲ್ ಅವರು ಓರ್ವರು. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದುಗಲ್ ಎಂಬ ಪಟ್ಟಣದಲ್ಲಿ ಜನಿಸಿದ ಇವರು, ಬಿ.ಕಾಮ್ ಮತ್ತು ಎಂಬಿಎ ವಿದ್ಯಾಭ್ಯಾಸ ಮಾಡಿದ್ದಾರೆ. ಹವ್ಯಾಸದ ಸದಾಭಿರುಚಿಗೆ ಬರೆಹವನ್ನು ಕಂಡುಕೊಂಡು, ವಿವಿಧ ಆಯಾಮಗಳಲ್ಲಿ ವೈಚಾರಿಕ ಚಿಂತನೆಗೆ ಪೂರಕವಾದ ಮತ್ತು ಸಾಮಾಜಿಕ ಕಳಕಳಿಗೆ ಹತ್ತಿರವಾದ ಅನೇಕ ಲೇಖನ ಬರೆಹಗಳು ಸೇರಿದಂತೆ ಇತರೆ ಕಥೆ, ಕವನ, ಕವಿತೆಗಳನ್ನು ಸಾಮಾನ್ಯರಿಗೂ ಅರ್ಥವಾಗುವಾಗೇ ನಿರ್ಭಯವಾಗಿ ಬರೆದಿದ್ದಾರೆ. ಗೃಹಿಣಿಯಾಗಿಯೂ ಶ್ರೀಮತಿ ಸವಿತಾ ಮುದ್ಗಲ್ ಅವರು ಕವಿತ್ವದ ಗುಣವನ್ನು ಹೊಂದಿರುವದು ನಿಜಕ್ಕೂ ಸಂತಸದ ಸಂಗತಿ. ಇವರ ಬರೆಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರಿಂದ ಪ್ರಶಂಸೆಗೊಳಗಾಗಿವೆ. ಈಚಗೆ ಲೋಕಾರ್ಪಣೆಗೊಂಡ ಚೊಚ್ಚಲ ಕವನ ಸಂಕಲನ “ನೆರಳಿಗಂಟಿದ ಭಾವ” ಮತ್ತು ಕಥಾ ಸಂಕಲನ “ಕಥಾ ಸರೋವರ” ಎಂಬ ಈ ಎರಡೂ ಕೃತಿಗಳು ಒಟ್ಟಿಗೇ ಹೊರಹೊಮ್ಮಿವೆ.
ನಾನಿಲ್ಲಿ “ಕಥಾ ಸರೋವರ” ಪುಸ್ತಕವನ್ನು ಆಯ್ದುಕೊಂಡು ಪರಿಚಯ ಮಾಡುತ್ತಿದ್ದೇನೆ. ಮೊದಲನೇ ಪರಿವಿಡಿಯಲ್ಲಿ ‘ನೀನಂದ್ರೆ ನನಗಿಷ್ಟ ಅಮ್ಮ’ ಎನ್ನುವ ಕಥಾ ನಿರೂಪಣೆಯಲ್ಲಿ ತಾಯಿಯ ಅಂತಃಕರಣ, ತ್ಯಾಗಮಯ, ಸಹಕಾರ ಭಾವನೆ, ಮಕ್ಕಳ ಮೇಲಿನ ಅಗಾಧ ಮಮ್ಮಲು ಮರುಗುವ ಪ್ರೀತಿ ತನ್ನ ಹೆಣ್ಣು ಮಗಳ ಮದುವೆಯ ನಂತರವು ಅವಳ ಸುಖ ದುಃಖದಲ್ಲಿ ಭಾಗವಾಗಬೇಕು ಎನ್ನುವ ತುಡಿತ, ಈ ಕಥೆಯಲ್ಲಿ ನಂತರ ಅಳಿಯನ ಅಸಾಹಯಕತೆಗೆ ಅತ್ತೆ ತಿರುಗ ತನ್ನ ತವರು ಮನೆಗೆ ಹೋಗುವ ಪರಿ ನಮ್ಮನ್ನು ಮರುಗುವಂತೆ ಮಾಡುತ್ತದೆ. ಇಂದಿನ ಆಧುನಿಕ ಪದ್ದತಿಗೆ ಅನುಗುಣವಾದ ಅಪನಂಬಿಕೆಗಳು ಈ ಕಥೆಯಲ್ಲಿ ಗೋಚರಿಸುತ್ತವೆ. ಮನುಷ್ಯನ ನಿಲುಕದ ಆಸೆ ಆಮಿಷ ಅಂಕುಶವಿಲ್ಲದ ‘ಮಾನವೀಯತೆ’ ಮರೆಮಾಚಿದೆ ಎಂಬುದು ಸ್ಪಷ್ಟವಾಗಿ ಲೇಖಕಿ ತಿಳಿಸಿದ್ದಾರೆ. ‘ಮಾತನಾಡಿದರೆಯಾಯಿತು ಮುತ್ತು ಹೊಡೆದರೆ ಹೋಯಿತು’ ಎನ್ನುವ ಗಾದೆಗೆ ಇಂದಿನ ಮನುಕುಲ ತದ್ವಿರುದ್ಧವಾಗಿದೆ ಎಂದು ಹೇಳಲಾಗುತ್ತದೆ.

ಇನ್ನೊಂದು೨೦,ರಲ್ಲಿನ ಪರಿವಿಡಿಯಲ್ಲಿ “ಹಳ್ಳಿಯಲ್ಲಿ ಅರಳಿದ ಸುಮಾ” ಶೀರ್ಷಿಕೆಗೆ ತಕ್ಕಂತೇ ಇಲ್ಲಿ ‘ಸುಮಾ’ಳ ಘಮ ಸೂಸಿತ್ತಲೇ ಬಾಳ ಬದುಕಿನ ಪುಟ ತಿರುಗವಂತೇ ಆಗುತ್ತದೆ ಎಂದೇಳಬಹುದು. ತಂದೆಯಾದ ರಾಮಪ್ಪನಿಗೆ ಎರಡು ಜನ ಹೆಣ್ಣು ಮಕ್ಕಳು, ಅದರಲ್ಲಿ (ಮಲತಾಯಿ) ಮೊದಲನೆ ತಾಯಿಯ ಮಗಳೇ ‘ಸುಮಾ’. ಎರಡನೇ ಹೆಂಡತಿ ಸುಂದ್ರಮ್ಮಳ ಸ್ವಂತ ಮಗಳು ‘ಪಂಕಜ’. ಆಕೆಗೆ ಪೋಲಿಯೋ ತಗುಲಿರುತ್ತದೆ. ಇವರ ಕುಟುಂಬ ರೈತಾಪಿ ವರ್ಗವಾದರೂ ಸಹ ಸುಮಾಳ ತಂದೆ ರಾಮಪ್ಪನು ಸಾಲ ಸೂಲದ ಬಾಧೆಯಲ್ಲಿಯೇ ಮನೆಯನ್ನು ಮುನ್ನಡೆಸುವ ಆಸಾಮಿಯಾಗಿರುತ್ತಾನೆ. ಸುಮಾಳು ತಾಯಿಯ ಮಾತಿನ ಸೂಚನೆಯಂತೆ ಒಂದು ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಾಳೆ. ಅಲ್ಲಿ ಪಟ್ಟಣದಲ್ಲಿ ವಾಸವಾಗಿರುವ ಆಗರ್ಭ ಶ್ರೀಮಂತಿಕೆಯ ಸೋಪಾನದಲ್ಲಿರುವ ‘ರತ್ನಮ್ಮ’ ಎಂಬುವರು ಪರಿಚಯವಾಗಿ ಸುಮಾಳ ಭವಿಷ್ಯದ ದಿಕ್ಕನ್ನೇ ಬದಲಾಯಿಸಿ ಬಿಡುತ್ತಾರೆ.
ಮನೆಯವರ ಸಮ್ಮತಿಯ ಮೇರೆಗೆ ತಮ್ಮ ಪಟ್ಟಣಕ್ಕೆ ಕರೆದುಕೊಂಡು ಹೋಗಿ, ಕೆಎಎಸ್ ತನಕವೂ ಓದಿಸಿ ಸರ್ಕಾರಿ ನೌಕರಿ ಪಡೆದು ಅದೇ ಹಳ್ಳಿಗೆ ಅಧಿಕಾಯಾಗಿ ಬಂದು, ಊರ ಜನಗಳ ಸಮಸ್ಯೆಗಳನ್ನು ಆಲಿಸುತ್ತಲೇ ಮಾದರಿ ಮಹಿಳೆಯಾಗಿ ಅನೇಕ ಸಮ್ಮಾನ, ಪುರಸ್ಕಾರ, ಪ್ರಶಸ್ತಿಗಳಿಗೆ ಪಾತ್ರರಾಗುತ್ತಾಳೆ. ತದನಂತರದಲ್ಲಿ ವೈದ್ಯನನ್ನು ಮದುವೆಯಾಗಿ ತವರಿನ ಬಡತನದ ಬವಣೆ ನೀಗಿಸುತ್ತಲೇ ವೈವಿಧ್ಯಮಯ ಜೀವನಕ್ಕೆ ನಾಂದಿ ಹಾಡುತ್ತಾರೆ. ಒಬ್ಬ ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ಲೇಖಕಿಯರಾದ ಸವಿತಾ ಮುದ್ಗಲ್ ಅವರು ಸ್ಷಷ್ಟ ಚಿತ್ರಣಗಳೊಂದಿಗೆ ಇಂತಹ ಅನೇಕ ಕಥೆಗಳ ಮುಖೇನ ತೋರಿಸಿಕೊಟ್ಟಿದ್ದಾರೆ. ಅಂತಹ ಮನಸ್ಥಿತಿಗಳು ಈ ಸಮಾಜ ಕಟ್ಟುವಲ್ಲಿ ಮುಂದೆ ಬರಬೇಕು ಎಂಬುದು ಈ ಕಥೆಗಳಲ್ಲಿನ ಸಾರ. ಒಟ್ಟಾರೆ ಕಥೆಗಳನ್ನು ಹೇಳುವುದಾದರೆ..!? ಸಾಮಾಜಿಕ ಅಡಿಪಾಯಗಳಿಗೆ ತಕ್ಕುದಾದ ಭದ್ರ ಬುನಾದಿಗಳಿವೆ. ಕಥೆಗಾರ್ತಿ ನಟನಾ ರೂಪ ನೀಡಿದ್ದಾರೆಯಾದರೂ ಅವುಗಳಿಗೆ ಜೀವ ಸತ್ವವಿದೆ ಎಂಬ ಭಾವನಾತ್ಮಕ ಸ್ಪಂದನೆ ಇಲ್ಲಿ ಸ್ಮರಣನೀಯ.

ನಿರೂಪಿಸುವ ಭಾಷೆಯ ಹರವು ವಿಶಾಲತೆಯಲ್ಲಿದೆ. ಕೌಟುಂಬಿಕ ತಳಮಳ, ಬದಲಾವಣೆಯ ಪರ್ವ, ಸಾಧಿಸುವ ಹಗೆತನ, ಕರುಳ ಬಳ್ಳಿಗಳ ಒಡನಾಟ ಸೇರಿದಂತೆ ಹಲವು ಬಗೆಯ ಕಥೆಗಳನ್ನು ಹೆಣದಿರುವದು ಅವರ ನಿಸ್ಸೀಮತನದ ನಿರೂಪಣೆಯೇ ಸಾಕ್ಷಿ. ಪ್ರತಿಯೊಬ್ಬರಲ್ಲಿ ಪ್ರತಿಭೆಗಳು ಅಡಕವಾಗಿರುತ್ತವೆ, ಆದರೆ ಅವುಗಳು ಹೊರ ಬರುವುದಕ್ಕೆ ಹಲವರ ಸಹಕಾರ, ಸಹಭಾಗಿತ್ವ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮನಸ್ಸಿನ ಅಂತಃಕರಣ ಉಕ್ಕಿಬರುವ ಸಂವೇದನಾಶೀಲತೆಯ ಸಂಭಾಷಣೆ, ಓದುಗರ ಕೂದಲು ಸಹ ನಿಮಿರುವ ಪರಿಯಂತಹ ರೋಮಾಂಚನವಾಗಿ ಇಲ್ಲಿ ಬಿಂಬಿಸುತ್ತವೆ. ಓದುಗರಿಗೆ ಬೇಸರ ತರಿಸದೇ ಕುತೂಹಲ ಭರಿತವಾಗಿಯೇ ಮಿತ, ಹಿತ, ಪರಿಮಿತ ಪದಗಳಲ್ಲಿ ಆಯಾ ಕಥೆಗೆ ಅನುಸಾರವಾಗಿ ಬಳಕೆ ಮಾಡಿಕೊಂಡಿರುವದು ವಿಭಿನ್ನ. ಇಲ್ಲಿ ಸಂಗಮವಾದ ಕಥೆಗಳು ದೃಶ್ಯ ಮಾಧ್ಯಮದ ತೆರೆಯಲ್ಲಿ ನೋಡಿದಂತಾಗುತ್ತದೆ. ಗ್ರಾಮೀಣ ಭಾಗದ ಘಮ್ಯ ಭಾವದ ಸೊಗಡಿನ ಹೋಲಿಕೆಗಳು ಅತ್ಯುದ್ಭುತ ಧ್ವನಿಯನ್ನು ನೀಡಿವೆ. ಓದುಗರ ಮನವನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸಿಕೊಳ್ಳಬಲ್ಲ ಕಥೆಗಳು ಜೀವ ಸಂಕುಲನವನ್ನು ಪಡೆದು, ಸಾರ್ಥಕತೆ ಮೆರದಿವೆ. ‘ಕಥಾ ಸರೋವರ’ಕ್ಕೆ ಹಿರಿಯ ಸಾಹಿತಿಗಳಾದ ಪದ್ಮನಾಭ ಡಿ, ಅವರು ಬರೆದಿದ್ದಾರೆ. ರಾಯಚೂರ ಜಿಲ್ಲೆಯ ಲಿಂಗಸಗೂರು ತಾಲೂಕಿನ ಪತ್ರಕರ್ತ ಮಿತ್ರ, ಲೇಖಕರಾದ ಲಕ್ಷ್ಮಣ ಬಾರಿಕೇರ್ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ನಾಡಿನ ಸಾರಸ್ವತ ಲೋಕಕ್ಕೆ ಹೆಚ್ಚಿನ ಕೃಷಿ ಮಾಡಲು ಶ್ರೀಮತಿ ಸವಿತಾ ಮುದ್ಗಲ್ ಅವರು ಅಣಿಯಾಗಲಿ, ಇನ್ನಷ್ಟು ಕೃತಿಗಳು ಕನ್ನಡಮ್ಮನ ಸೇವೆಗೆ ಸನ್ನದ್ಧವಾಗಿ ಹೊರ ಜಗತ್ತಿಗೆ ಧಾವಿಸಲಿ ಎಂದು ಶುಭ ಹಾರೈಸುತ್ತೇನೆ.
- ವಾಯ್.ಎಂ.ಕೋಲಕಾರ – ಯುವ ಪತ್ರಕರ್ತರು ಕೊಪ್ಪಳ ಜಿಲ್ಲೆ.
