ಶಿವರಾತ್ರಿ ಎಂದರೆ ನನ್ನ ನೆನಪಿಗೆ ಬರುವುದು ಅಪ್ಪನಿಗೆ ಕವಳ ಜಾತ್ರೆಗಾಗಿ ಕರೆದುಕೊಂಡು ಹೋಗುವಂತೆ ಹಠ ಬೀಳುತ್ತಿದ್ದೆ. ಹಠಕ್ಕೆ ಮನೆಯಲ್ಲಿ ನನ್ನ ಹಾಗು ಅಪ್ಪನ ನಡುವೆ ವಾದ-ವಿವಾದವಾಗುತ್ತಿತ್ತು. ಕೊನೆಗೆ ಏನಾಗುತ್ತಿತ್ತು …ತಪ್ಪದೆ ಮುಂದೆ ಓದಿ…
ಬೆಂಗಳೂರು ನನ್ನ ವಾಸಸ್ಥಳವಾದರೂ ದಾಂಡೇಲಿ, ಅಂಬಿಕಾನಗರ ಎಂದರೆ ನನ್ನ ಪಾಲಿಗೆ ಸ್ವರ್ಗ. ಯಾರೇ…ಯಾವ ಸಮಯದಲ್ಲಾದರೂ ‘ದಾಂಡೇಲಿಗೆ ಹೋಗೋಣ’… ಎಂದರೆ ನಾನು ಸಿದ್ದ ಎಂದು ನನ್ನ ಸ್ನೇಹಿತರ ಮುಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದೇನೆ. ಅಷ್ಟೊಂದು ಭಾವನಾತ್ಮಕ ಜೀವನವನ್ನು ನಾನು ದಾಂಡೇಲಿ, ಅಂಬಿಕಾನಗರದಲ್ಲಿ ಕಳೆದಿದ್ದೇನೆ. ಅಲ್ಲಿ ಕಳೆದ ಎಲ್ಲ ಹಬ್ಬಗಳು ನನ್ನ ಪಾಲಿಗೆ ಸುಮಧುರ ಕ್ಷಣಗಳನ್ನು ಕಟ್ಟಿಕೊಟ್ಟಿದೆ.
ಅದರಲ್ಲೂ ನನಗೆ ಶಿವರಾತ್ರಿ ಹಬ್ಬದ ದಿನ ತಪ್ಪದೆ ಕಾಡುವ ದೇವಸ್ಥಾನವೆಂದರೆ ನನ್ನ ಹುಟ್ಟೂರಿನ ಕವಳ. ದಾಂಡೇಲಿಯಿಂದ ೧೭ ಕಿಮೀ ದೂರದಲ್ಲಿರುವ ನನ್ನ ಹುಟ್ಟೂರು ಅಂಬಿಕಾನಗರದಿಂದ ಪವರ್ ಹೌಸ್ ಹೋಗುವ ದಾರಿಯ ಮಧ್ಯೆದಲ್ಲಿ ಕವಳ ಸಿಗುತ್ತದೆ.
ಶಿವರಾತ್ರಿ ದಿನ ಸ್ನೇಹಿತರೆಲ್ಲ ಸೇರಿ ‘ಕವಳ ಜಾತ್ರೆಗೆ ಬರ್ತಿಯಾ, ಶಾಲಿನಿ’… ಅಂತ ಕೇಳುತ್ತಿದ್ದಾಗ ನನ್ನ ಅಪ್ಪನತ್ತ ನೋಡುತ್ತಿದ್ದೆ. ನನ್ನ ಅಪ್ಪ ಮಿಲಿಟರಿಯಲ್ಲಿ ಕೆಲಸ ಮಾಡದಿದ್ದರೂ ಮಿಲಿಟರಿ ವ್ಯಕ್ತಿಯಂತೆ ನನ್ನನ್ನು ಸದಾ ಕಾಯುತ್ತಿದ್ದ. ಅಪ್ಪನ ಗುರುಗುಟ್ಟುವಿಕೆ ಕಣ್ಣುಗಳು ನೋ… ಎನ್ನುವುದನ್ನು ಅರಿತು ಸ್ನೇಹಿತರ ಜೊತೆ ಒಮ್ಮೆನೂ ಕವಳ ಜಾತ್ರೆ ನೋಡಲು ಹೋಗಲಿಲ್ಲ. ನನಗೆ ಕವನ ಜಾತ್ರೆ ಒಮ್ಮೆಯಾದರೂ ನೋಡಬೇಕು ಎನ್ನುವ ಹಠ. ಒಮ್ಮೆ ನಾನು ಚಂಡಿ ಹಠ ಹಿಡಿದೆ, ನನ್ನ ಕಣ್ಣೀರು, ಮೂಗಲ್ಲಿನ ಸು0ಬಳ, ನನ್ನ ರಂಪಾಟಕ್ಕೆ ಅಪ್ಪ ಮಣಿದು… ತನ್ನ ಬಜಾಜ್ ಸ್ಕೂಟರ್ ನಲ್ಲಿ ಒಮ್ಮೆ ಕವಳ ಜಾತ್ರೆಗೆ ಕರೆದುಕೊಂಡು ಹೋಗಿದ್ದ. ಆಗ ನನಗೆ 17 ವರ್ಷ ವಯಸ್ಸು ಇರಬಹುದು.

ಈಗಲೂ ಆ ಕ್ಷಣಗಳು ಮಧುರವಾಗಿದೆ. ಕಾಡಿನ ಮಧ್ಯೆ ಕಾಳಿ ನದಿಯ ಜರಿಯನ್ನು ದಾಟಿ, ೧೦೦೦ ಅರ್ಧ೦ಬರ್ಧ ಮಣ್ಣಿನ ಮೆಟ್ಟಿಲು, ಅಕ್ಕ ಪಕ್ಕದಲ್ಲಿ ಯಾವುದೇ ಆಸರೆ ಇಲ್ಲದೆ ಮೆಟ್ಟಿಲು ಹತ್ತುವಾಗ ಭಯಕ್ಕೆ ಎದೆ ಬಡಿತ ಜೋರಾಗಿತ್ತು, ಆ ಬಡಿತದ ಶಬ್ದ ಪಕ್ಕದವರಿಗೂ ಮುಟ್ಟಿತೋ ಏನೋ. ಇದೆ ಕಾರಣಕ್ಕೆ ಅಪ್ಪಯ್ಯ ಸ್ನೇಹಿತರ ಜೊತೆ ಯಾಕೆ ಹೋಗಲು ಬಿಟ್ಟಿರಕ್ಕಿಲ್ಲ ಎಂದು ಆ ಸ್ಥಳಕ್ಕೆಹೋದ ಮೇಲೆ ಅರ್ಥವಾಯಿತು . ಮಕ್ಕಳು ಅಪ್ಪ ಅಮ್ಮನ ಮಾತು ಯಾವಾಗಲೂ ಕೇಳದಿದ್ದರೂ ಆಗೊಮ್ಮೆ ಈಗೊಮ್ಮೆ ನನ್ನ ತರ ಕೇಳಬೇಕು ಎನ್ನುವುದು ಅಂದು ನನಗೆ ಜ್ಞಾನೋದಯವಾಯಿತು. ಅದೇ ನನ್ನ ಮೊದಲ ಕವಳ ಜಾತ್ರೆ ಭೇಟಿ.

1000 ಮೆಟ್ಟಿಲು ಹತ್ತಿ ಕವಳ ಗುಹೆಯನ್ನು ತಲುಪುವಷ್ಟರಲ್ಲಿ ಹೃದಯ ಬಾಯಿಂದ ಹೊರಗೆ ಬರಲಿಲ್ಲ ಅಷ್ಟೇ…ಅಷ್ಟು ಏದುಸಿರು ಹಾಕಿದೆ. ನಾನಷ್ಟೆ ಅಲ್ಲ… ನನ್ನ ಹಿಂದೆ ಬರುತ್ತಿದ್ದ ನೂರಾರು ಭಕ್ತರ ಸ್ಥಿತಿಯೂ ನನಗಿಂತ ಚಿಂತಾಜನಕವಾಗಿತ್ತು. ಬೆಟ್ಟ ಹತ್ತುವಾಗ ಮೆಟ್ಟಿಲುಗಳ ಮೇಲೆ ದಪ್ಪಂತ ಕೂತು ಬಿಡುತ್ತಿದ್ದರು. ಅಲ್ಲಿಯೇ ಗೊತ್ತಾಗಿದ್ದು ಯಾರು ಸ್ಟ್ರಾಂಗ್ ಗುರು ಅಂತ.
ಅಷ್ಟೊಂದು ಮೆಟ್ಟಿಲು ಹತ್ತಿ ಗುಹೆ ತಲುಪಿದ ಮೇಲೆ ಶಿವನ ದರ್ಶನ ಪಡೆಯಲು ದೊಡ್ಡದಾದ ಪಾಳಿ ಇತ್ತು. ದಾಂಡೇಲಿ ಕಡೆಯಿಂದ ಬರುವವರಿಗೆ ಕಾಡಿನ ಮಧ್ಯೆ ಮತ್ತೊಂದು ದಾರಿ ಇತ್ತು, ದಾಂಡೇಲಿ – ಅಂಬಿಕಾನಗರ ಎರಡು ಕಡೆಯಿಂದ ಬರುವ ಭಕ್ತಾದಿಗಳು ಸೇರಿದ್ದರಿಂದ ಎಲ್ಲಿ ನೋಡುತ್ತೇವೋ ಅಲ್ಲಿಯವರೆಗೂ ಜನ ಸಾಗರವೇ ಇತ್ತು. ನಮ್ಮ ಪಾಳಿ ಬರುವಷ್ಟರಲ್ಲಿ ಮೈಮೇಲೆ ಕಾಳಿ ನದಿಯೇ ಹರಿಯಲಾರಂಭಿಸಿದಳು. ಒಬ್ಬರಮೇಲೊಬ್ಬರು ಬೀಳುತ್ತಾ… ತಳುತ್ತಾ… ಪಾಳಿ ಮುಂದೆ ಮುಂದೆ ಸಾಗಿತು. ನನಗೆ ಮಾತ್ರ ಗುಹೆಯೊಳಗೆ ಹೋದವರು ವಾಪಾಸ್ ಬಾರದೇ ಇದ್ದದ್ದನ್ನು ನೋಡಿ ಗಾಬರಿಯಾಯಿತು. ಕಾವಲು ಕಾಯುತ್ತ ನಿಂತಿದ್ದ ಪೊಲೀಸಪ್ಪನಿಗೆ ಕೇಳಿದೆ ‘ಅಂಕಲ್, ಈ ಗುಹೆ ಒಳಗೆ ಹೋದವರು ವಾಪಾಸ್ ಬರೋದು ಕಾಣ್ತಿಲ್ಲ. ಹೋದವರು ಶಿವನ ಪಾದ ಸೇರೋದಿಲ್ಲ, ತಾನೇ’… ಎಂದು ಭಯದಲ್ಲಿಯೇ ಯಾರಿಗೂ ಕೇಳದಂತೆ ಮೆಲ್ಲಗೆ ಕೇಳಿದೆ .

ಪೋಲಿಸಪ್ಪ ‘ಭಯ ಯಾಕಮ್ಮ…ಶಿವನ ಹತ್ರ ಹೋಗ್ತಿದ್ದೀಯಾ…ಧೈರ್ಯವಾಗಿ ಹೋಗು’… ಎಂದ. ಪೊಲೀಸಪ್ಪನ ಮಾತಿನಲ್ಲಿ ಎರಡು ಅರ್ಥ ಇತ್ತು, ಉಳಿದ್ರೆ ಬರ್ತಿಯಾ…ಇಲ್ಲಾದ್ರೆ ಮೇಲೆ ಹೋಗ್ತಿಯಾ… ಅನ್ನೋತರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಇತ್ತು.
ಕವಳ ಹೋಗಲೇಬೇಕು ಎಂದು ಅಪ್ಪನ ಹಿಂದೆ ಬಿದ್ದು ಕವಳ ನೋಡೋಕೆ ಬಂದಿದ್ದೆ. ಈಗ ಶಿವನ ಪಾದನೋ…ಅಪ್ಪನ ಪಾದನೋ…ಆಗಿದ್ದಾಗಲಿ ನೋಡಿಯೇ ಬಿಡೋಣ ಅಂತ ಗಟ್ಟಿಯಾಗಿ ನಿಂತೆ. ಬೃಹತಕಾರದ ಬಂಡೆ, ಆ ಬಂಡೆಯೊಳಗೆ ಗುಹೆ, ಗುಹೆಯೊಳಗೆ ಶಿವ ಒಂದು ವಿಷ್ಮಯವೇ ಸರಿ. ಆ ಗುಹೆಯೊಳಗೆ ಹೋಗಲು ಒಂದು ಕಡೆ ದಾರಿ ಇದ್ದರೇ, ಹೊರಗೆ ಬರಲು ಮತ್ತೊಂದು ದಾರಿ ಇತ್ತು. ಜಾತ್ರೆ ಸಮಯ ಬಿಟ್ಟರೆ ಅಲ್ಲಿ ನರಮನುಷ್ಯರು ಯಾರು ಹಾಯುತ್ತಿರಲಿಲ್ಲ. ಬೇರೆ ಸಮಯದಲ್ಲಿ ಕರಡಿ, ಹುಲಿ, ಚಿರತೆ ವಾಸಸ್ಥಾನವಾಗಿತ್ತು ಎಂದು ತಿಳಿದವರು ಹೇಳುತ್ತಾರೆ, ಅದನ್ನೇ ನಾವು ನಂಬಿದ್ದೆವು. ಆದರೆ ಗುಹೆ ನೋಡಲು ಭಯಾನಕವೆನಿಸಿತು. ಹಾಗೂ ಹೀಗೂ ಮುಂದಿನವರನ್ನು ತಳ್ಳುತ್ತಾ ಗುಹೆಯೊಳಗೆ ಹೋದೆವು. ಜಗತ್ತಿನ ಅದ್ಬುತ ಎಲ್ಲ ಅಲ್ಲೇ ಇದೆ ಅನ್ನುವಷ್ಟು ರೋಚಕ ಅನುಭವ ಅಲ್ಲಿ ನನಗೆ ಸಿಕ್ಕಿತು. ತಲೆ ಬಗ್ಗಿಸಿ ಗುಹೆಯೊಳಗೆ ಹೋದೆ. ಸ್ವಲ್ಪ ದೂರ ಕತ್ತಲಿತ್ತು, ಹಾಗೆ ಹತ್ತು ಹೆಜ್ಜೆ ನಡೆದು ಮುಂದೆ ಹೋದಾಗ ಮಧ್ಯೆದಲ್ಲಿ ದೊಡ್ಡದಾದ ಶಿವಲಿಂಗು ಕಣ್ಣಿಗೆ ಬಿತ್ತು.
ಆ ಲಿಂಗು ಸಾಮಾನ್ಯ ಲಿಂಗುವಿನಂತೆ ನನ್ನ ಕಣ್ಣಿಗೆ ಕಾಣಲಿಲ್ಲ. ಕಪ್ಪದಾದ, ರುದ್ರಾಕ್ಷಿಯಂತೆ ಮೇಲ ಮೈಯನ್ನು ಲಿಂಗು ಹೊಂದಿತ್ತು , ಲಿಂಗುವಿನ ಶಿರದ ಮೇಲೆ ಬಂಡೆಯಿಂದ ನೀರು ತೊಟ್ಟಿಕ್ಕುತ್ತಿತ್ತು. ಅದನ್ನು ನೋಡುವಾಗ ಸಾಕಷ್ಟು ಆಶ್ಚರ್ಯವಾಯಿತು. ಎಲ್ಲ ಶಕ್ತಿಗಳು ಲಿಂಗುವಿನಲ್ಲಿಯೇ ಇದೆ ಎನ್ನುವಷ್ಟು ಭಕ್ತಿ ಮೂಡಿತು. ದೇವರಿಗೆ ಭಕ್ತಿಯಿಂದ ನಮಸ್ಕರಿಸಿ. ಹೊರಗೆ ಬರುವ ದಾರಿ ನೋಡಿದರೆ ತಲೆಯ ಮೇಲೆ ಸುತ್ತಲೂ ಚೂಪು ಚೂಪಾದ ಬಂಡೆಗಲ್ಲುಗಳಿದ್ದವು. ಅಪ್ಪಿ ತಪ್ಪಿ ತಲೆ ಬುರುಡೆಗೆ ಆ ಬಂಡೆಗಲ್ಲು ತಗುಲಿದರೆ ಬುರಡೆಯಲ್ಲಿ ತೂತುಗಳಾಗುವುದಂತೂ ಗ್ಯಾರಂಟಿ ಎನ್ನುವ ಭಯದಲ್ಲಿಯೇ ತಲೆ ತಗ್ಗಿಸಿಯೇ ನಡೆದೆ. ಗುಹೆಯಲ್ಲಿ ನೀರು ಬಿದ್ದು ಬಿದ್ದು ಪಾಚಿ ಕಟ್ಟಿದ್ದರಿಂದ ಕಾಲುಗಳು ಬೇರೆ ಜಾರುತ್ತಿತ್ತು. ಸಿನಿಮಾದಲ್ಲಿನ ಕಾಮಿಡಿ ಉಮೇಶ ಅವರ ‘ಆ ಒಂದು…ಆ ಎರಡು’…ಸಿನಿಮಾದ ಸೀನ್ ಆ ಸಮಯದಲ್ಲಿ ನೆನಪಿಸಿಕೊಂಡು ಅದೇ ರೀತಿ ನಿಧಾನಕ್ಕೆ ಲೆಕ್ಕ ಇಟ್ಟು ಹೆಜ್ಜೆ ಹಾಕಿ ಹೊರಕ್ಕೆ ಬಂದೆ. ಹೊರಗೆ ಬರುವಷ್ಟರಲ್ಲಿ ದೊಡ್ಡ ಸಾಹಸ ಮಾಡಿ ಗೆದ್ದ ಸಮಾಧಾನ ನನ್ನ ಮುಖದಲ್ಲಿತ್ತು.

ಎಷ್ಟೋ ವರ್ಷದಿಂದ ಅಪ್ಪಯ್ಯನಿಗೆ ಗೋಗರೆದರು ತೋರಿಸದ ಆ ಕವಳ ಜಾತ್ರೆ ಅಂದು ಮೊದಲ ಬಾರಿಗೆ ಕಣ್ಣ ತುಂಬಾ ನೋಡಿ ಸಂತೋಷ ಪಟ್ಟೆ. ವಾಪಾಸ್ ಬರುವಾಗ ಪೊಲೀಸಪ್ಪನಿಗೆ ನಾನು ಗುಹೆಯಿಂದ ಹೊರಕ್ಕೆ ಬಂದೆ’… ಎಂದು ಹೇಳುವುದನ್ನು ಮಾತ್ರ ಮರೆಯಲಿಲ್ಲ…
ಜಾತ್ರೆ ನೋಡಿದ ಸಂತೋಷಕ್ಕೆ ಅಪ್ಪನ ಮೇಲೆ ಪ್ರೀತಿ ಇಮ್ಮಡಿಯಾಗಿ ‘ನಿನ್ನಂತ ಅಪ್ಪ ಇಲ್ಲ’…ಹಾಡು ಹೇಳಿ ನಾಲ್ಕು ಸ್ಟೆಪ್ ಅಲ್ಲೇ ಹಾಕೋಣ ಅಂದುಕೊಂಡೆ. ಆದರೆ ಅಪ್ಪ ಮಿಲಟರಿ ವ್ಯಕ್ತಿ. ಕೈಯಲ್ಲಿದ್ದ ನೀರಿನ ಬಾಟಲಿ ತಗೆದುಕೊಂಡು ನಾಲ್ಕು ಕೊಟ್ಟರೆ ಎನ್ನುವ ಭಯಕ್ಕೆ ಸುಮ್ಮನೆ ಅವರ ಹಿಂದಿಂದೆ ಗುಡ್ಡ ಇಳಿದೆ. ಆ ಸದ್ದು ಗದ್ದಲ್ಲ ಒಮ್ಮೊಮ್ಮೆ ಮನಸ್ಸಿಗೆ ಕಿರಿಕಿರಿ ಮಾಡುತ್ತದೆ ಆದರೆ ಜಾತ್ರೆಯಲ್ಲಿನ ಪೀಪಿ ಸದ್ದು, ಜನರ ಗಲಾಟೆ ಮನಸ್ಸಿಗೆ ಉಲ್ಲಾಸ ನೀಡಿತು. ಕವಳ ಜಾತ್ರೆ ನೋಡಿ ೨೦ ವರ್ಷಗಳೇ ಕಳೆದಿರಬಹುದು. ಆದರೆ ಶಿವರಾತ್ರಿ ಬಂದಾಗಲೆಲ್ಲ ಕವಳ ನೆನಪು, ಗುಹೆಯ ನೆನಪು, ಶಿವಲಿಂಗುವಿನ ನೆನಪು ಮಾತ್ರ ಇಂದಿಗೂ ಕಾಡುತ್ತಲೇ ಇರುತ್ತದೆ.
ಮುಂದೆವರೆಯುತ್ತದೆ..
- ಶಾಲಿನಿ ಹೂಲಿ ಪ್ರದೀಪ್
