ಕವಣೆ ಕಲ್ಲು ಎಂದರೆ ಕ್ಯಾಟರ್ಬಿಲ್ಲೆ ,ಚಾಟಿ. ಇಂದಿನ ಮಕ್ಕಳಿಗೆ ಅದರ ಬಗ್ಗೆ ತಿಳಿದಿಲ್ಲ.ಕವಣೆ ಕಲ್ಲಿನ ಕುರಿತಾದ ಸ್ವಾರಸ್ಯಕರ ಕತೆಯೊಂದನ್ನು ಓದುಗರ ಮುಂದಿಡುತ್ತಿದ್ದಾರೆ ಕಥೆಗಾರರಾದ ಕೇಶವ ರೆಡ್ಡಿ ಹಂದ್ರಾಳ ಅವರು. ಮುಂದೆ ಓದಿ …
ಕಡಲೇ ಗಿಡಗಳು ಹೂಡು ಬಿಟ್ಟುಕೊಂಡು ಇನ್ನೇನು ಬಲಿಯಲು ಶುರುವಾಗುತ್ತಿದ್ದಂತೆ ಕಾಗೆಗಳು ಗುಂಪು ಗುಂಪುಗಳಾಗಿ ಕಡಲೆಗಿಡದ ಹೊಲಗಳ ಮೇಲೆ ದಾಳಿಯಿಡುತ್ತಿದ್ದವು . ಹಾಗೆಯೇ ರಾಗಿತೆನೆ, ಭತ್ತದ ತೆನೆ, ಜೋಳದ ತೆನೆ, ನವಣೆಯ ತೆನೆ ಮುಂತಾದುವುಗಳ ಮೇಲೆ ನಾನ ತರಹದ ಪಕ್ಷಿಗಳು ಅಮರಿಕೊಳ್ಳುತ್ತಿದ್ದವು .ಅವುಗಳನ್ನು ಓಡಿಸಲು ಮನೆಯವರೆಲ್ಲ ಸರದಿಯಂತೆ ಕಾವಲು ಕಾಯುತ್ತಿದ್ದರು. ಸ್ಕೂಲಿಗೋಗೋ ಹುಡುಗರಿಗೆ ಇಂಥ ಕೆಲಸಗಳು ತುಂಬಾ ಖುಷಿಕೊಡುತ್ತಿದ್ದವು. ಅಂಥ ಸುಗ್ಗಿ ಕಾಲಗಳಲ್ಲಿ ನಾವು ಸ್ಕೂಲ್ ಬಿಡುತ್ತಲೇ ಹೊಲಗಳ ಕಡೆ ದೌಡಾಯಿಸುತ್ತಿದ್ದೆವು. ಡಬ್ಬ ಬಡಿದರೂ ಕೆಲವು ಕಾಗೆ ಮತ್ತು ಪಕ್ಷಿಗಳು ತಿನ್ನುವುದನ್ನು ಬಿಟ್ಟು ಹಾರಿಹೋಗುತ್ತಿರಲಿಲ್ಲ. ಆಗ ಕವಣೆಗೆ ಕಲ್ಲಿಟ್ಟು ಮೂರ್ನಾಲ್ಕು ಬಾರಿ ತಿರುಗಿಸಿ ಬೀಸುತ್ತಿದ್ದೆವು . ಆಗ ಪುರ್ ಎಂದು ಹಾರಿ ಹೋಗುತ್ತಿದ್ದವು.

ಫೋಟೋ ಕೃಪೆ : old.karyarambhlive
ನಮಗೆ ಭತ್ತದ ಗದ್ದೆ ,ರಾಗಿ ಮತ್ತು ಜೋಳದ ಹೊಲಗಳನ್ನು ಕಾಯುವುದಕ್ಕಿಂತಲೂ ಕಡಲೇಗಿಡ ಕಾಯುವ ಕೆಲಸ ತುಂಬಾ ಮಜಾ ಕೊಡುತ್ತಿತ್ತು . ಕಾಗೆಗಳು ಎಬ್ಬಿ ತಿನ್ನುವುದಕ್ಕಿಂತಲೂ ನಾವು ಕಡಲೇಕಾಯಿ ಕಿತ್ತು ಸುಟ್ಟು ತಿನ್ನುವುದೇ ಜಾಸ್ತಿಯಿರುತ್ತಿತ್ತು. ಕವಣೆಗಳನ್ನು ಸೊಂಟಕ್ಕೆ ಸುತ್ತಿಕೊಂಡು ಯುದ್ದಕ್ಕೆ ಹೋಗುವವರಂತೆ ಕಡಲೆಗಿಡದ ಕಡೆ ಹೋಗುತ್ತಿದ್ದೆವು . ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಕವಣೆಗಳು ಇರುತ್ತಿದ್ದವು. ನಾನಂತೂ ಕವಣೆ ಬೀಸುವುದರಲ್ಲಿ ನಿಸ್ಸೀಮನಾಗಿದ್ದೆ. ಹುಡುಗರಿಗೆಂದು ಚಿಕ್ಕ ಕವಣೆಗಳೂ ಇರುತ್ತಿದ್ದವು .ಮಾದಿಗರ ಮುದ್ದಪ್ಪ ,ಮರಾಠಿಗರ ಚಂದ್ರಪ್ಪ ಕವಣೆ ಹೆಣೆಯುವುದರಲ್ಲಿ ಎಕ್ಸ್ಪರ್ಟ್ ಆಗಿದ್ದರು .ನಾನು ಬೀಸಿದರೆ ಕಲ್ಲು ಸುಮಾರು ಒಂದೂವರೆ ಎಕರೆ ದಾಟಿಕೊಂಡು ಹೋಗಿ ಬೀಳುತ್ತಿತ್ತು .
ಏಳನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಸಂಜೆ ಕಡಲೇ ಗಿಡಕ್ಕೆ ಕಾವಲು ಕಾಯುತ್ತಾ ಕವಣೆ ಕಲ್ಲುಗಳನ್ನು ಬೀಸುತ್ತಿದ್ದೆ . ಆಗ ಇದ್ದಕ್ಕಿದ್ದಂತೆ ಪಕ್ಕದ ಹೊಲದ ಸೀನಪ್ಪ ಕಿರುಚಿಕೊಂಡಿದ್ದ .ಕವಣೆಯಕಲ್ಲು ನಮ್ಮ ಮತ್ತು ಅವರ ಬದುವಿನ ಪಕ್ಕ ಯಲ್ಡಾಕೆ ಕುಳಿತಿದ್ದ ಸೀನಪ್ಪನ ಹಣೆಗೆ ಬಿದ್ದಿತ್ತು . ನಾನು ಹತ್ತಿರ ಓಡಿ ಹೋಗಿದ್ದೆ .ಸೀನಪ್ಪ ಒಂದು ಕೈಯನ್ನು ಹಣೆಯ ಮೇಲಿಟ್ಟು ಕೊಂಡು ಇನ್ನೊಂದು ಕೈಯಲ್ಲಿ ನಿಕ್ಕರ್ ಹಿಡಿದು ನಿಂತಿದ್ದ . ನನ್ನನ್ನು ನೋಡಿದವನೇ ” ಎಂಥೊನಲೇ ಕೇಶ್ವ ನೀನು . ನೋಡ್ಕಂಡ್ ಕವ್ಣೆ ಬೀಸೋದಲ್ವೆನಲೇ..” ಎಂದಿದ್ದ . ನಾನು ಕೂಡಲೇ ನನ್ನ ಟವೆಲ್ ಹರಿದು ಆಯಪ್ಪನ ಹಣೆಗೆ ಕಟ್ಟುತ್ತಾ ” ಗಳಗಂಟೆ ಕಾಣ್ತ ಐತೆ ನಿಕ್ಕರ್ ಎತ್ಕಳಪ್ಪ..” ಎಂದಿದ್ದೆ . ರಕ್ತ ನಿಂತಿತ್ತು .ಸೀನಪ್ಪ ನಿಕ್ಕರ್ ಸ್ವಲ್ಪ ಮೇಲಕ್ಕೆತ್ತಿ ಕೊಂಡು ಹತ್ತಿರವೇ ಇದ್ದ ಹೊಸಕೆರೆ ಕಡೆ ಹೆಜ್ಜೆ ಹಾಕಿದ್ದ . ನಾನೂ ಜೊತೆಯಲ್ಲಿ ಹೆಜ್ಜೆ ಹಾಕಿದ್ದೆ .ಆಯಪ್ಪನ ಸೊಂಟದಲ್ಲೂ ಕವಣೆ ನೇತಾಡುತ್ತಿತ್ತು.

ಫೋಟೋ ಕೃಪೆ : aljazeera
ವಾರದ ಹಿಂದೆ ಊರಿನಿಂದ ” ಯಾಕೋ ನಮ್ಕಡೆ ಮಳೆನೇ ಬಗ್ಲಿಲ್ವಲೇ . ಎಲ್ರೂ ಕಡ್ಲೆ ಬೀಜ ಸುಲ್ಕಂಡು ಕಾಯ್ತಾ ಅವ್ರೆ . ಇನ್ನಿಪ್ಪತ್ತು ದಿನದಲ್ಲಿ ಮಳೆ ಬರ್ದಿದ್ರೆ ಬೀಜ ಹುರ್ಕಂಡ್ ತಿನ್ಬೇಕಷ್ಟೆ..” ಎಂದು ನಮ್ಮಣ್ಣ ಪೋನು ಮಾಡಿದ್ದ . ಹಿಂದಿನ ಸಂಭ್ರಮದ ಕೃಷಿ ಕ್ಷಣಗಳೀಗ ಮಾಯವಾಗಿವೆ. ಈಗಿನ ಮಕ್ಕಳಿಗೆ ಕವಣೆ , ಕ್ಯಾಟರ್ಬಿಲ್ಲೆ ,ಚಾಟಿ ಎಂದರೇನೆಂದರೆ ಮಿಕಿಮಿಕಿ ಮುಖ ನೋಡುತ್ತಾರೆ..!
- ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)
