ಮಂಜುಳಾ ಮೂರ್ತಿ ಅವರ ‘ಕಾವ್ಯ ಸಿಂಚನ’ ಕವನ ಸಂಕಲನದ ಕುರಿತು ಹೆಚ್ ವಿ ಮೀನಾ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಕಾವ್ಯ ಸಿಂಚನ
ಕವಿಯತ್ರಿ : ಮಂಜುಳಾ ಮೂರ್ತಿ
ಪ್ರಕಾರ : ಕವನ ಸಂಕಲನ
ಪ್ರಕಾಶನ: ಹೆಚ್ ಎಸ್ ಆರ್ ಎ ಪ್ರಕಾಶನ
ಖರೀದಿಗಾಗಿ : 9164411536
ತನುವನು ತಬ್ಬುತ ಮನದೊಳು ಕುಳಿತಿಹೆ
ಬನದಲಿ ನಲಿಯುವ ಬಾ ಬೇಗ
ವನಿತೆಯರರಸನೆ ಸನಿಹಕೆ ಬರುವೆಯ
ದನಿಯನು ಕೇಳುವೆ ಬಾ ಬೇಗ.
ಜಗತ್ತಿನಲ್ಲಿ ರಾಧಾ ಕೃಷ್ಣನ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇಇಲ್ಲ. ಕೃಷ್ಣಪರಮಾತ್ಮನ ಪ್ರೀತಿಗೆ ಸರಿಸಮನಾದ ಪ್ರೀತಿ ಮತ್ತೊಂದಿಲ್ಲ. ಬಂಧನದಲ್ಲಿ ವಿಶ್ವಾಸ ಮತ್ತು ನಂಬಿಕೆಯ ಶಕ್ತಿಎಂದರೆ ಅದು ರಾಧಾ ಕೃಷ್ಣನದ್ದು. ಕೃಷ್ಣನ ಭಕ್ತೆಯಾಗಿ ಕೃಷ್ಣನ ಪ್ರೀತಿಗೆ ಶರಣಾಗಿ ಕೃಷ್ಣನ ಸಂಗಡವನ್ನು ಬಯಸಿ ಅವನೊಂದಿಗೆ ನಲಿಯುವ ಶೃಂಗಾರ ಭಾವವನ್ನು ಮಂಜುಳಾ ಮೂರ್ತಿ ಅವರು ತಮ್ಮ ಕವಿತೆಯಲ್ಲಿ ಅದ್ಭುತವಾಗಿ ಶೃಂಗರಿಸಿದ್ದಾರೆ.

ಶಿಕ್ಷಕಿಯಾಗಿ ಸೇವೆಸಲ್ಲಿಸಿ ಆಧ್ಯಾತ್ಮದ ಆದರ್ಶಗಳಿಗೆ ಮನ ಸೋತು ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದು ಕವನ ಕಾವ್ಯಗಳ ರಚನೆಯಲ್ಲಿ ಪಾಂಡಿತ್ಯವನ್ನು ಪಡೆದಿರುವ ಶ್ರೀಮತಿ ಮಂಜುಳಾ ಮೂರ್ತಿ ಅವರ ಚೊಚ್ಚಲ ಕವನ ಸಂಕಲನವಾದ “ಕಾವ್ಯ ಸಿಂಚನ” ದಲ್ಲಿ ಮೂಡಿಬಂದಿರುವ ಕವಿತೆಗಳಲ್ಲಿ ಕನ್ನಡಾಂಬೆಯ ವರ್ಣನೆ, ಭುವಿಯ ಸೇವೆ ಮತ್ತು ಋಣ ಹಾಗೂ ಕೃಷ್ಣ ಪರಮಾತ್ಮನ ಭಕ್ತಳ ಮನದೊಳಗಿನ ಪ್ರೇಮ ಭಕ್ತಿಯನ್ನು ಬಹಳ ಸುಂದರವಾಗಿ ವರ್ಣಿಸಿದ್ದಾರೆ.
ಹರಸುವೆ ಬಾಳನು
ಭರಿಸುವೆ ಮನವನು
ತರಿಸುತ ಕಾಂತಿಯ ಚಿಂತನೆಯಾ
ಹರಿಸುವೆ ಅಭಯವ
ಸರಿಸುತ ಕೊಳಕನು
ಭರಿಸುತ ಸಿರಿಯಲಿ ಸವಿಯಾಗೇ.

ನಮ್ಮ ಏಕೈಕ ಬಂಧುವೆಂದರೆ ಅದು ದೇವರೆಂದರೆ ತಪ್ಪಾಗಲಾರದು. ನಮಗೆ ದಾರಿದೀಪವಾಗಿ ನಮ್ಮ ಮನದ ಕತ್ತಲನ್ನು ತೊಳೆದು ಮನವೆಂಬ ಮಂದಿರದಲ್ಲಿ ನೆಲೆಸಿ ಹರಸುವ ದೇವನೇ ಎಲ್ಲರ ನಿಜವಾದ ಬಂಧು ಎಂಬ ಸತ್ಯವನ್ನು ತಮ್ಮ ಕವಿತೆಯಲ್ಲಿ ನುಡಿದಿದ್ದಾರೆ.
ಆಸೆಯೆಂದಿಗೂ ದೂರ ಗಗನವು
ಮೋಸವೆಂದಿಗೂ ಭಾರ ಮಿಲನವು
ದಾಸನಾದರೆ ಆಸೆಯೊಳಗಡೆ
ಪಾಶವೆಂದಿಗೂ ಸಾರೆ ಕದನವು.
ಆಸೆಯೇ ದುಃಖಕ್ಕೆ ಕಾರಣ ಎನ್ನುವಂತೆ ಸುಂದರವಾದ ಜೀವನದ ನಾಶಕ್ಕೆ ಕಾರಣಗಳೇನು ಎಂದು ಅತೀ ಸೂಕ್ಷ್ಮವಾಗಿ ತಿಳಿಸಿದ್ದಾರೆ.
ಶ್ರೀಮತಿ ಮಂಜುಳಾ ಮೂರ್ತಿ ಅವರು ತಮ್ಮ ಚೊಚ್ಚಲ ಕವನ ಸಂಕಲನದಲ್ಲಿ ಭಕ್ತಿಯಿಂದ ಕೂಡಿರುವ ಕವನಗಳು, ಪ್ರಕೃತಿಯ ಸೊಬಗನ್ನು ವರ್ಣಿಸುವ ಕವನಗಳು, ದೇಶವನ್ನು ಕಾಯುವ ಯೋಧರ ಬಗ್ಗೆ, ತಾಯಿಯ ಪ್ರೀತಿ, ಜೀವನದ ಮಿಥ್ಯ ಸತ್ಯಗಳ ಅರಿವನ್ನು ಅರ್ಥವಾಗುವಂತೆ ವರ್ಣಿಸಿದ್ದಾರೆ.
ಶ್ರೀಮತಿ ಮಂಜುಳಾ ಮೂರ್ತಿ ಅವರಿಂದ ಮತ್ತಷ್ಟು ಇಂತಹ ಉತ್ತಮ ಕೃತಿಗಳು ಲೋಕಾರ್ಪಣೆಗೊಳ್ಳಲಿ ಎಂದು ಹೇಳುತ್ತಾ ಮಂಜುಳಾ ಮೂರ್ತಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
- ಹೆಚ್ ವಿ ಮೀನಾ
