ಇದು ಕೆಜಿಎಫ್ ಸಿನಿಮಾ ಬಿಡುಗಡೆ ಸಂಭ್ರಮವಷ್ಟೇ ಅಲ್ಲ, ಕನ್ನಡದ ಬೆಳೆವಣಿಗೆಯೂ ಕೂಡಾ, ಕನ್ನಡ ಬೆಳೆಯಬೇಕೆಂದರೆ ಕನ್ನಡ ಸಿನಿಮಾ, ಸಾಹಿತ್ಯ ಬೆಳೆಯಬೇಕು ಎನ್ನುತ್ತಾ ಕೆಜಿಫ್ ೨ ಸಿನಿಮಾಗೆ ಶುಭ ಹಾರೈಕೆಗಳು…
ಐದಾರು ವರ್ಷಗಳ ಹಿಂದೆ ನಾನು ನನ್ನ ದೆಹಲಿಯಲ್ಲಿದ್ದ ಅಕ್ಕನ ಮನೆಗೆಂದು ಒಂದು ವಾರ ಹೋಗಿದ್ದೆ, ಅಷ್ಟು ದೂರಾ ಹೋದರು, ಅಲ್ಲಿಯ ಧಗೆಗೆ ಮನೆಯಿಂದ ಹೊರಕ್ಕೆ ಕಾಲಿಟ್ಟಿರಲಿಲ್ಲ. ಬೆಳಗ್ಗೆಯೆಲ್ಲಾ A/C ಮುಂದೆ ಕೂರುತ್ತಿದ್ದೆ, ಸಾಯಂಕಾಲ ಮಾತ್ರ ಹೊರಕ್ಕೆ ಕಾಲಿಡುತ್ತಿದೆ. ಅದು ಕೂಡಾ ಅಪಾರ್ಟ್ಮೆಂಟ್ ಒಳಗೆ ಒಂದು ರೌಡ ಹೊಡೆದು ಮತ್ತೆ A/C ಮುಂದೆ ಕೂರುತ್ತಿದ್ದೆ. ಊಟಿಯಂತಿರುವ ನಮ್ಮ ಬೆಂಗಳೂರು ಯಾವತ್ತೂ ದೇಹಕ್ಕೆ ಆಯಾಸವನ್ನೇ ಕೊಟ್ಟಿರಲಿಲ್ಲ. ಅಲ್ಲಿಯ ಬಿಸಿಲು- ಚಳಿ ಮಧ್ಯೆ ಅಲ್ಲಿಯ ಜನರ ಧೈರ್ಯದ ಹೋರಾಟ ನಿಜಕ್ಕೂ ನನಗೆ ದಿಗ್ಬ್ರಾಂತಳನ್ನಾಗಿ ಮಾಡಿದ್ದೂ ನಿಜ.
ಅದೊಂದು ದಿನ ಸಾಯಂಕಾಲ ಅಪಾರ್ಟ್ಮೆಂಟ್ ಕೆಳಗಿದ್ದ ಪಾರ್ಕ್ ನಲ್ಲಿ ನಾನೊಬ್ಬಳೇ ಬೆಂಚ್ ಮೇಲೆ ಕೂತಿದ್ದೆ, ಮೊಮ್ಮಗಳನ್ನು ಆಡಿಸಲು ಬಂದ ಹಿಂದಿ ಅಜ್ಜಿ, ನನ್ನ ಪಕ್ಕದಲ್ಲಿ ಬಂದು ಕೂತರು. ಎರಡು ಹೆಣ್ಮಕ್ಳು ಸೇರಿದರೆ ಗೊತ್ತಲ್ಲಾ..! ನಮ್ಮ ಮಾತಿಗೆ ಬರವಿರಲಿಲ್ಲ, ನಮ್ಮ ಮಾತಿನ ಪಯಣ ಶುರುವಾಯಿತು. ನನ್ನ ಬಣ್ಣ, ನನ್ನ ಅವಾಂತರವನ್ನು ನೋಡಿ ‘ಆಪ್ ಸೌತ್ ಇಂಡಿಯನ್ ಹೋ…?’ ಎಂದಿತು ಅಜ್ಜಿ. ‘ಹಾ… ಜಿ…ಮೈ ಸೌತ್ ಇಂಡಿಯನ್ ಹು ಎಂದು ದೊಡ್ಡದಾಗಿ ಹಲ್ಲು ತಗೆದೆ. ‘ಸೌತ್ ಇಂಡಿಯಾದಲ್ಲಿ ಎಲ್ಲಿ?… ಅಂತ ಮತ್ತೆ ಅಜ್ಜಿ ಪ್ರಶ್ನೆ ಕೇಳಿತು. ನಾನು ‘ನಮ್ಮ ಬೆಂಗಳೂರು’ ಅಂತ ರೇಡಿಯೋ ಜಾಕಿ ಸ್ಟೈಲ್ ಲ್ಲೆ ಹೇಳಿದೆ. ಅಜ್ಜಿ ‘ಹಾ..ಹಾ…ಮುಜೆ ಪತಾ ಹೈ… ರಜನಿಕಾಂತ್’ ಹೀ..ಹೀ …ಅಂತ ಹಲ್ಲು ಕಿರಿಯಿತು. ‘ಅಲ್ಲ…’ಕರ್ನಾಟಕ ಸೇ ಆಯಿ ಹೂ ಜೀ’…ಅದಾಗ ಅಜ್ಜಿ ‘ಚೆನೈ ಎಕ್ಸ್ಪ್ರೆಸ್ …ಒಹ್ ಮೂವಿ ದೋ ಬಾರ್ ದೇಖಿ ಹೂ…ಮಸ್ತ್ ಹೈ…’ ಬಾಳ ಖುಷಿಯಲ್ಲಿಯೇ ಹೇಳಿಕೊಂಡಿತು, ‘ಅಲ್ಲಾ, ರೀ…ನಮ್ಮದು ಕರ್ನಾಟಕ, ಬೆಂಗಳೂರು…’ ಅಂದೇ. ಅಜ್ಜಿಗೆ ಅರ್ಥವಾಗಲಿಲ್ಲ.

ಅದಕ್ಕೆ ತಲೆಯೂ ಕೆಡಿಸಿಕೊಳ್ಳಲೂ ಇಲ್ಲ ಅಜ್ಜಮ್ಮ. ಕತ್ತಲಾಯಿತು, ‘ಟೀಕ್ ಹೈ…ಫೀರ್ ಮಿಲೇಂಗೆ …ಎನ್ನುತ್ತಾ ಮೊಮ್ಮಗಳ ಕೈ ಹಿಡಿದು ಟಾಟಾ ಮಾಡುತ್ತಾ ಮನೆ ಕಡೆಗೆ ನಡೆಯಿತು. ಆದರೆ ಅಜ್ಜಿ ಹೋದ ಮೇಲೆ ನನಗೆ ನನ್ನ ಬೆಂಗಳೂರು, ನನ್ನ ಕರ್ನಾಟಕದ ಬಗ್ಗೆ ಉತ್ತರಭಾರತದ ಬಹುತೇಕ ಜನರಿಗೆ ತಿಳಿದಿಲ್ಲವಲ್ಲ ಎನ್ನುವ ತಳಮಳ ನನ್ನನ್ನು ತುಂಬಾನೇ ಕಾಡಿತು.
ಉತ್ತರ ಭಾರತದವರಿಗೆ ಬೆಂಗಳೂರು ಇರುವುದು ತಮಿಳನಾಡಿನಲ್ಲಿ ಅನ್ನುವ ತಪ್ಪು ಕಲ್ಪನೆ ಇದೆ. ಅದಕ್ಕೆ ಅವರ ತಪ್ಪಲ್ಲ. ಅಲ್ಲಿಯ ಮಕ್ಕಳ ಪಠ್ಯಪುಸ್ತಕಗಳಲ್ಲಿ ರಾಣಿ ಚನ್ನಮ್ಮನ ಬಗೆಯಾಗಲಿ, ಸಂಗೊಳ್ಳಿರಾಯಣನ ಬಗ್ಗೆ ಅಥವಾ ಕರ್ನಾಟಕದ ಹಿರಿಮೆಯ ಬಗ್ಗೆ ಎಲ್ಲಿಯೂ ಪರಿಚಯವಿಲ್ಲ. ಆದರೆ ದಕ್ಷಿಣ ಭಾರತದ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ರಜಪೂತರ ಬಗ್ಗೆ, ಉತ್ತರಭಾರತದ ರಾಜಮನೆತನದ ಬಗ್ಗೆ ಎಲ್ಲವನ್ನು ಸವಿಸ್ತಾರವಾಗಿ ಪ್ರಕಟವಾಗಿದೆ. ಹಾಗಾಗಿ ಅಲ್ಲಿಯ ಜಲ, ನೆಲದ ಬಗ್ಗೆ ನಾವುಗಳು ಅರಿತ್ತಿದ್ದೇವೆ.

ಸಿನಿಮಾಗಳ ಹವಾ ಎದ್ದಾಗ, ಸಿನಿಮಾದ ಮೂಲಕ ಅಲ್ಲಿಯ ಭಾಷೆ, ಸಂಸ್ಕೃತಿಯ ಬಗ್ಗೆ ಉತ್ತರ ಭಾರತದ ಜನ ಅರಿತ್ತಿದ್ದಾರೆ. ಉತ್ತಮ ಉದಾಹರಣೆಯೆಂದರೆ ರೋಬೋಟ್, ಬಾಹುಬಲಿ ಸಿನಿಮಾಗಳು ಎಲ್ಲರನ್ನು ದಕ್ಷಿಣ ಭಾರತದತ್ತ ತಿರುಗಿ ನೋಡುವಂತಾಯಿತು. ಆದರೆ ನಮ್ಮ ಕನ್ನಡ ಭಾಷೆ ಯಾರು ಗುರುತಿಸುತ್ತಿಲ್ಲ ಎನ್ನುವ ಚಡಪಡಿಕೆ ನನ್ನನ್ನು ನಿದ್ದೆಗೆಡಿಸಿದ್ದು ನಿಜ.
ಯಾವಾಗ ಯಶ್ ಅವರ ಕೆ.ಜಿ.ಎಫ್ ಸಿನಿಮಾ ಬಂತೋ, ಯಶ್ ಅವರಷ್ಟೇ ಅಲ್ಲ, ಕೆ.ಜಿ.ಎಫ್ ತಂಡವಷ್ಟೇ ಅಲ್ಲ, ನಮ್ಮ ಭಾಷೆ ಕನ್ನಡ ಧೂಳೆಬ್ಬಿಸಿತು ಎನ್ನುವ ಸಂತೋಷ, ಸಂಭ್ರಮ ಸಿಕ್ಕಿತು. ಅದರಲ್ಲೂ ಬಾಲಿವುಡ್ ರಿಯಾಲಿಟಿ ಶೋ ಗಳಲ್ಲಿ ಕೆಜಿಎಫ್ ಹಾಡು ಹಿನ್ನೆಲೆಯಲ್ಲಿ ಕೇಳುವಾಗ ಇದು…ಇದು…ನನ್ನ ಭಾಷೆ ಕನ್ನಡ. ಈ ರೀತಿ ಸಂಭ್ರಮದ ದಿನವನ್ನು ನೋಡಲು ಎಷ್ಟೋ ದಿನಂದಿಂದ ಹಾತೊರೆದಿದ್ದು ಕೆಜಿಫ್ ನಿಂದ ಸಿಕ್ಕಿತು. ಭಾಷೆ ಬೆಳೆಯಬೇಕೆಂದರೆ ಸಿನಿಮಾ ಬೆಳೆಯಬೇಕು, ಸಾಹಿತ್ಯ ಬೆಳೆಯಬೇಕು.
ಸದ್ಯದ ಪರಿಸ್ಥಿತಿಯಲ್ಲಿ ಈಗ ಉತ್ತರ ಭಾರತದವರ ಬಾಯಲ್ಲಿ ‘ಕನ್ನಡ್’ ಎಂದು ರಾರಾಜಿಸುತ್ತಿದೆ. ಕೆಜಿಎಫ್ ೨ ಸಿನಿಮಾ ನೋಡಿದ ಮೇಲೆ ‘ಕನ್ನಡ’ ಅಂತ ಸರಿಯಾಗುವುದಂತೂ ಗ್ಯಾರಂಟಿ ಎನ್ನುವ ಆತ್ಮವಿಶ್ವಾಸವೂ ಮೂಡಿದೆ.
ಆದರೆ ಒಂದು ಉತ್ತಮ ಸಿನಿಮಾ ಗೆಲ್ಲಬೇಕೆಂದರೆ ದೊಡ್ಡ ಬಂಡವಾಳ ಹಾಕಬೇಕೆಂದೆನ್ನು ಇಲ್ಲ. ಸಿನಿಮಾದ ಕೊನೆಯಲ್ಲಿ ಸಮಾಜಕ್ಕೆ , ಯುವಪೀಳಿಗೆಗೆ ಒಳ್ಳೆ ಸಂದೇಶವಿದ್ದಾಗ ಸಿನಿಮಾ ಖಂಡಿತವಾಗಿಯೂ ಗೆಲ್ಲುತ್ತದೆ. ಮಚ್ಚು, ಗನ್ ಬಿಟ್ಟು ಸಿನಿಮಾವನ್ನು ಕುಟುಂಬ ಸಮೇತ ನೋಡುವಂತ ಕಥಾ ಹಂದರವಿರುವ ಸಿನಿಮಾಗಳು ಇನ್ನಷ್ಟು ಬರಬೇಕಿದೆ. ಮುಂದಿನ ದಿನಗಳಲ್ಲಿ ಯಶ್ ಅವರು ಮತ್ತು ಅವರ ತಂಡ ಕತೆಯ ಬಗ್ಗೆ ಗಮನಹರಿಸುತ್ತಾರೆ ಎನ್ನುವ ನಂಬಿಕೆಯಿದೆ .
ಕೆಜಿಎಫ್ ೨ ಸಿನಿಮಾ ಯಶಸ್ಸಿನ ಜೊತೆ ‘ಕನ್ನಡ’ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ.
- ಶಾಲಿನಿ ಹೂಲಿ ಪ್ರದೀಪ್
