45 ವಯಸ್ಸಿನಿಂದ ಪ್ರಾರಂಭವಾಗುವ ಮನಸ್ಸಿನ ತೊಳಲಾಟಗಳನ್ನು ಅರ್ಥ ಮಾಡಿಕೊಳ್ಳವ ಮನಸ್ಸುಗಳು ಬೇಕಿದೆ. ಈ ಕುರಿತು ಸ್ನೇಹಾ ಆನಂದ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಒಂದೊಂದು ಸಲ ಮನಸ್ಸು ಖಾಲಿಯಾಗಿ ಭಾವನೆಗಳೇ ಬರಡಾದವೆನೋ ಎಂದೆನಿಸುತ್ತದೆ. ವಯಸ್ಸಿದ್ದಾಗ ಹೀಗೆ ಆಗುವುದಿಲ್ಲ. ಜವಾಬ್ದಾರಿಗಳು ಜಾಸ್ತಿ ಇರುತ್ತವೆ. ಆದರೆ ಈಗ ಜವಾಬ್ದಾರಿ ನಿಭಾಯಿಸಿದರೂ ಮಧ್ಯೆ ಮಧ್ಯೆ ಈ ರೀತಿಯ ಅನಿಸಿಕೆ ಮನಸ್ಸಿಗೆ ಅದರಲ್ಲೂ ತಾಯಿಯಾದವಳಿಗೆ ಜಾಸ್ತಿ.
ಒಂದೊಂದು ಸಲ ಯಾರೂ ಬೇಡ, ಯಾವ ಜವಾಬ್ದಾರಿನೂ ನನಗೆ ಬೇಡ ಎನ್ನಿಸಿದರೆ, ಒಂದೊಂದು ಹೊತ್ತು ಒಂಟಿತನ ಕಾಡುತ್ತದೆ. ಒಂದೊಂದು ಸಲ ಮನಸ್ಸಿಗೆ ನೋವಾದರೆ ಮರುಕ್ಷಣವೇ ಯಾವುದೋ ರೀತಿ ಉಲ್ಲಸಿತವಾಗುತ್ತದೆ. ಎಕದಂ ಶೆಖೆಯಾದರೆ, ಸ್ವಲ್ಪ ಹೊತ್ತಿಗೆ ಛಳಿ ಛಳಿ ಎನಿಸುವುದು. ಹೀಗೆ ಮನಸ್ಸು, ದೇಹ, ಚಂಚಲತೆಯನ್ನು ಹೊಂದಿ ಮೆದಳು ಆಯಾಸಗೊಳ್ಳುತ್ತದೆ.
ಸಿಟ್ಟಂತೂ ಮೂಗಿನ ತುದಿಯಲ್ಲೇ ಬಂದು ಕೂಡುತ್ತದೆ. ಸಹನೆ ಚಲ್ಲಾಪಿಲ್ಲಿಯಾಗಿ ಹರಡಿ ಯಾವುದೇ ಸಣ್ಣ ಕಿರಿಕಿರಿಗೂ ತಲೆ ಚಿಟಿ ಚಿಟಿ ಏನ್ನುತ್ತಾ ಮನಸ್ಸು ಅಸಾಹಯಕತೆ ಕಡೆಗೆ ವಾಲುತ್ತದೆ. ನನ್ನ ಮಾತು ಯಾರು ಕೇಳುವವರಿಲ್ಲ ಎಂದು ಮನಸ್ಸು ಅಳುತ್ತದೆ. ಒಂದು ದಿನ ರುಚಿಯಾದ ಅಡುಗೆ ಮಾಡಿದರೆ ಇನ್ನೊಂದು ದಿನ ಇಷ್ಟೇ ಸಾಕು ಎನ್ನುವ ಆಯಾಸ. ಒಂದೊಂದು ಬಾರಿ ಮನೆಯನ್ನು ಪೂರ್ತಿ ತಿದ್ದಿ ತೀಡಿ ಇಟ್ಟರೆ ಮರುದಿನ ಏನೂ ಮಾಡಲು ಬೇಡವಾಗಿ ಹಾಸಿಗೆ ಬಿಟ್ಟು ಏಳಲು ಬೇಸರ. ಒಂದು ದಿನ ಜೀವನದಲ್ಲಿ ಆಸಕ್ತಿ ಬಂದರೆ ಮತ್ತೊಂದು ದಿನ ನಿರಾಸಕ್ತಿ ಹೀಗೆ ಮನಸ್ಸು ತನಗೆ ಬೇಕಾದಂತೆ ಆಟ ಆಡಿಸುತ್ತದೆ.
ಇವೆಲ್ಲ ಸೂಚನೆಗಳು 45 ವಯಸ್ಸಿನಿಂದ ಪ್ರಾರಂಭವಾದರೂ 50 ಕ್ಕೆ ಜಾಸ್ತಿ ಕಂಡು ಬರುತ್ತದೆ. ಮನೆಯಲ್ಲಿ ಹೀಗಿರುವ ಮಧ್ಯವಯಸ್ಕರನ್ನು ಅರ್ಥ ಮಾಡಿಕೊಳ್ಳುವವರು ಇದ್ದರೆ ಸರಿ ಇಲ್ಲದಿದ್ದರೆ ಮನೆ ಮಹಾಭಾರತವಾಗುತ್ತದೆ.
ಇಷ್ಟು ದಿನಗಳ ತನಕ ತಾಯಿ ಮಕ್ಕಳ ಬೇಕು ಬೇಡಗಳನ್ನು ನೋಡುತ್ತಾ ಜೀವನ ಕಳೆದಿರುತ್ತಾಳೆ. ಮೂರ್ನಾಲ್ಕು ಊಟದ ಬಾಕ್ಸ್ ಸಿದ್ಧಗೊಳಿಸಿ ಅದರಲ್ಲಿ ಯಾವ ಆಹಾರ ಮಿಗುತ್ತೋ ಅದನ್ನು ಮಾತ್ರ ಜಾಸ್ತಿ ತಿಂದು ಮತ್ತೇ ಮರುದಿನಕ್ಕೆ ತಿಂಡಿಗೆ, ಊಟಕ್ಕೆ ಸಿದ್ಧಪಡಿಸುವತ್ತ ಗಮನ ಕೊಡುತ್ತಾಳೆ. ಆದರೆ ಒಂದು ವಯಸ್ಸು ಮೀರಿದ ನಂತರ ನಾನಾ ಅಷ್ಟೆಲ್ಲಾ ಮಾಡಿರೋದು ಎಂದು ಆಶ್ಚರ್ಯಪಡುತ್ತಾಳೆ.
ಹರೆಯದಲ್ಲಿ ತಂದೆ ಇಡಿ ದಿನ ದುಡಿದು ಮನೆಯ, ಮಕ್ಕಳ ಭವಿಷ್ಯ ರೂಪಿಸಿ ನಂತರ ನಾನು ಏನೂ ಮಾಡೇ ಇಲ್ಲ ಎನ್ನುವ ಹಾಗೆ ನಿರ್ಲಿಪ್ತನಾಗುತ್ತಾನೆ. ಹೀಗಾಗಿ ತಂದೆ ತಾಯಿಯರನ್ನು ಸ್ವಲ್ಪವಾದರೂ ಅರ್ಥಮಾಡಿಕೊಳ್ಳುವ ಮನೆಯ ಸದಸ್ಯರು ಬೇಕೇಬೇಕು. ಆಗ ತಾಯಿಗೆ ಮನಸ್ಸು ಅತಿಯಾಗಿ ವಿಲಚಿತಗೊಳ್ಳದೆ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಅದರಲ್ಲಿ ಈ ಸಮಯದಲ್ಲಿ ಮಕ್ಕಳ ಅನುಕಂಪ, ಸಹಾಯ ಬೇಕು. ಕೆಲಸ ಕಾರ್ಯಗಳು ಹಾಗೆಯೇ ಬಿದ್ದರೆ, ಮನೆಯೂ ಅಶಿಸ್ತಿನಿಂದ ಕೂಡಿದರೆ ತಾಯಿಯಾದವಳು ನಾನು ಎಷ್ಟು ದಿನಗಳ ಕಾಲ ಇವರ ಸೇವೆಯಲ್ಲೇ ಕಾಲ ಕಳೆಯಬೇಕು ಎನ್ನುವ ಪ್ರಶ್ನೆ? ಮಕ್ಕಳು ಅಶಿಸ್ತಿನ ಜೀವನ ಪಡೆದಿದ್ದರೆ ಮುಗದೇ ಹೋಯಿತು ತಂದೆ,ತಾಯಿಯ ಬವಣೆಯೇ ತೀರದು! ಆಗ ನಮ್ಮನ್ನುನ್ನು ಕೇಳುವವರು ಯಾರು? ಎನ್ನುವ ಪ್ರಶ್ನೆ ಮನದಲ್ಲೇ ಉದ್ಭವಗೊಂಡು ಮನಸ್ಸು ಆತಂಕಕ್ಕಿಡಾಗುತ್ತದೆ.
ಹೀಗೆ ಇವೆಲ್ಲ ಪ್ರತಿಯೊಂದು ಸಂಸಾರ ಸಾಗರದಲ್ಲಿ ನಡೆಯುವ ಘಟನೆ. ಹಿಂದಿನ ದಿನಗಳ ನೆನಪಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಆ ಮಕ್ಕಳು ತಾಯಿ, ತಂದೆಯ ವಿಚಾರದಲ್ಲಿ ಸಹಕರಿಸುತ್ತಾರೆ. ಇಲ್ಲದಿದ್ದರೆ ಅದು ತಂದೆ ತಾಯಿಯ ಕರ್ತವ್ಯ ಎಂದು ಮಾತ್ರ ತಿಳಿಯುತ್ತಾರೆ.
ಈ ರೀತಿಯ ಎಷ್ಟೋ ಭಾವನೆಗಳಿಂದ ತುಂಬಿದ ಅದರಲ್ಲೂ ಹೆಣ್ಣಿನ ಮನಸ್ಥಿತಿಯ ಬಗ್ಗೆ ಜಾಸ್ತಿ ಒತ್ತುಕೊಟ್ಟ ಹಾಗು ತಾತ್ಪರ್ಯಗಳನ್ನು ಹೊಂದಿದ ಕಥೆಗಳು ನನ್ನ ಈ “ಪ್ರತಿರೂಪ” ಕಥಾ ಸಂಕಲನದ ಬುಟ್ಟಿಯಲ್ಲಿ ತುಂಬಿವೆ.
- ಸ್ನೇಹಾ ಆನಂದ್
